Advertisement

WHO: ಆರೋಗ್ಯ ತುರ್ತು ಪರಿಸ್ಥಿತಿ- ಆತಂಕ ಗಾಜಾ ವಿಚಾರವಾಗಿ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ

10:53 PM Oct 31, 2023 | Team Udayavani |

ಜೆರುಸಲೇಂ/ಟೆಲ್‌ ಅವೀವ್‌: ಗಾಜಾಪಟ್ಟಿಯ ಮೇಲೆ ಇಸ್ರೇಲ್‌ನ ಭೂದಾಳಿ ಬಿರುಸುಗೊಂಡಿರುವ ನಡುವೆಯೇ ವಿಶ್ವ ಆರೋಗ್ಯ ಸಂಸ್ಥೆಯು (ಡಬ್ಲ್ಯುಎಚ್‌ಒ) ಅಲ್ಲಿ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿ ಸನ್ನಿಹಿತವಾಗಿರುವುದರ ಬಗ್ಗೆ ಎಚ್ಚರಿಕೆ ನೀಡಿದೆ. ದಾಳಿ ಮುಂದುವರಿದರೆ ಸಾಮಾನ್ಯರ ಪರಿಸ್ಥಿತಿ ಕೈ ಮೀರಲಿದೆ ಎಂಬುದಾಗಿಯೂ ತಿಳಿಸಿದೆ.

Advertisement

ಡಬ್ಲ್ಯುಎಚ್‌ಒ ವಕ್ತಾರ ಕ್ರಿಶ್ಚಿಯನ್‌ ಲಿಂಡ್ಮಿಯರ್‌ ಈ ಕುರಿತು ಮಾಹಿತಿ ನೀಡಿದ್ದು, ಗಾಜಾದಲ್ಲಿ ಜನಜೀವನ ಈಗಾಗಲೇ ಅಪಾಯದ ಅಂಚಿಗೆ ತಲುಪಿದೆ. ಇಸ್ರೇಲಿನ ಬಾಂಬ್‌ ದಾಳಿಯ ಪರಿಣಾಮ ಮಾತ್ರವಲ್ಲ, ಜನರ ಸಾಮೂಹಿಕ ಸ್ಥಳಾಂತರ, ಜನದಟ್ಟಣೆ, ನೀರು ಮತ್ತು ನೈರ್ಮಲ್ಯ ಮೂಲಸೌಕರ್ಯಗಳಿಗೆ ಆಗಿರುವ ಹಾನಿ ತುರ್ತು ಪರಿಸ್ಥಿತಿಯನ್ನು ನಿರ್ಮಿಸಿಬಿಟ್ಟಿದೆ. ಇದರೊಂದಿಗೆ ನಿರ್ಜಲತೆಯಿಂದ ನವಜಾತ ಶಿಶುಗಳು ಸಾಯುವ ಪ್ರಮಾಣವು ಹೆಚ್ಚಾಗುವ ಸೂಚನೆ ಇದ್ದು, ಗಾಜಾ ಮತ್ತಷ್ಟು ಸಾವು-ನೋವುಗಳಿಗೆ ಸಾಕ್ಷಿಯಾಗಲಿದೆ. ಈಗಾಗಲೇ 940 ಮಕ್ಕಳು ಗಾಜಾದಿಂದ ನಾಪತ್ತೆಯಾಗಿದ್ದಾರೆ ಎಂದಿದ್ದಾರೆ.

8 ಲಕ್ಷ ಮಂದಿ ಪಲಾಯನ
ಇಸ್ರೇಲ್‌ ಪ್ರತಿದಾಳಿ ಆರಂಭವಾದಾಗಿನಿಂದ 8 ಲಕ್ಷ ಪ್ತಾಲೆಸ್ತೀನಿಯರು ಗಾಜಾ ತೊರೆದಿದ್ದಾರೆ. ಅವರು ವಿಶ್ವಸಂಸ್ಥೆಯ ನಿರಾಶ್ರಿತ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ. ಪ್ಯಾಲೆಸ್ತೀನ್‌ ನಿರಾಶ್ರಿತರಿಗಾಗಿಯೇ ಇರುವ ಯುಎನ್‌ಆರ್‌ಡಬ್ಲ್ಯುಎ ನಿರಾಶ್ರಿತ ಏಜೆನ್ಸಿ ಕನಿಷ್ಠ 6.72 ಲಕ್ಷ ಮಂದಿಗೆ ಆಶ್ರಯ ನೀಡಿರುವುದಾಗಿ ಹೇಳಿಕೊಂಡಿದೆ.

ಉದ್ಧಟತನ ಮುಂದುವರಿಸಿದ ಹಮಾಸ್‌!
ಗಾಜಾದಿಂದ ಇಸ್ರೇಲ್‌ನ ಆ್ಯಶ್‌ದೂದ್‌ ನಗರದ ಮೇಲೆ ರಾಕೆಟ್‌ ದಾಳಿ ನಡೆಸಲಾಗಿದೆ. ಹಲವಾರು ಕಾರುಗಳು ಮತ್ತು ಕಟ್ಟಡಗಳು ಹೊತ್ತಿ ಉರಿಯುತ್ತಿರುವುದು ವರದಿಯಾಗಿದ್ದು, ಇಸ್ರೇಲ್‌ ಪಡೆಗಳನ್ನು ಈ ಕೃತ್ಯ ಮತ್ತಷ್ಟು ಕೆಂಡಾಮಂಡಲವಾಗಿಸಿದೆ. ಮತ್ತೂಂದೆಡೆ ಹಮಾಸ್‌ಗೆ ಬೆಂಬಲವಾಗಿ ಇರಾನ್‌ನ ಹೌತಿಗಳು ಇಸ್ರೇಲ್‌ ವಿರುದ್ಧ ಕ್ಷಿಪಣಿ ದಾಳಿ ನಡೆಸಿದ್ದಾರೆ. ಇಸ್ರೇಲ್‌ನ ಅತ್ಯಾಧುನಿಕ ರಕ್ಷಣ ವ್ಯವಸ್ಥೆ ಇವುಗಳನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಗಿದೆ.

ಹಮಾಸ್‌ ಕಮಾಂಡರ್‌ ಹತ್ಯೆ
ಅ. 7ರ ಇಸ್ರೇಲ್‌ ದಾಳಿಯ ರೂವಾರಿ ಎನ್ನಲಾಗಿದ್ದ ಹಮಾಸ್‌ನ ಕಮಾಂಡರ್‌ ನಸೀಮ್‌ ಅಬು ಅಜಿನಾ ಎಂಬವನನ್ನು ಇಸ್ರೇಲ್‌ ಪಡೆಗಳು ಹೊಡೆದುರುಳಿಸಿವೆ. ಬೇತ್‌ ಲಾಹಿಯಾ ಬೆಟಾಲಿಯನ್‌ನ ಕಮಾಂಡರ್‌ ಆಗಿದ್ದ ಈತನ ನಿವಾಸವನ್ನೂ ಉಡಾಯಿಸಲಾಗಿದ್ದು, ಇಸ್ರೇಲ್‌ ಮಿಲಿಟರಿ ಕಾರ್ಯಾಚರಣೆಯಲ್ಲಿ ಇದೊಂದು ಪ್ರಮುಖ ಗೆಲವು ಎಂದು ಇಸ್ರೇಲಿ ಅಧಿಕಾರಿಗಳು ಹೇಳಿಕೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next