ಹಾನಗಲ್ಲ: ತಾಲೂಕಿಗೆ ಬೇರೆ ಜಿಲ್ಲೆಗಳಿಂದ ಬಂದ 104 ಕಾರ್ಮಿಕರಿಗೆ ವಸತಿ ಮತ್ತು ಊಟದ ವ್ಯವಸ್ಥೆ ಕಲ್ಪಿಸಲಾಗಿದ್ದು, ಅವರ ಆರೋಗ್ಯ ತಪಾಸಣೆ ಹಾಗೂ ಗಂಟಲು ದ್ರವ ಪರೀಕ್ಷೆ ವರದಿ ಬಂದ ನಂತರ ಸುರಕ್ಷಿತವಾಗಿ ಮನೆಗೆ ಕಳುಹಿಸಲಾಗುವುದು. ಕಾರ್ಮಿಕರು ಆತಂಕಕ್ಕೊಳಗಾಗದೆ ಸರಕಾರದ ಕ್ರಮಕ್ಕೆ ಸಹಕರಿಸಬೇಕು ಎಂದು ಶಾಸಕ ಸಿ.ಎಂ. ಉದಾಸಿ ಮನವಿ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ 19 ಹಿನ್ನೆಲೆಯಲ್ಲಿ ಉದ್ಯೋಗವಿಲ್ಲದೆ ಕಂಗಾಲಾದ ಕೂಲಿ ಕಾರ್ಮಿಕರಿಗೆ ಈಗ ನರೇಗಾ ಯೋಜನೆಯಡಿ ಕೆಲಸ ಆರಂಭಿಸುವ ಮೂಲಕ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಈ ವರ್ಷಕ್ಕೆ ಅನ್ವಯವಾಗುವಂತೆ ಕೇಂದ್ರ ಸರಕಾರ ನರೇಗಾ ಯೋಜನೆಯ ಹಣ ಬಿಡುಗಡೆ ಮಾಡಿದೆ ಎಂದರು.
ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಹೆಚ್ಚು ಕೂಲಿ ಆಧಾರಿತ ಕಾಮಗಾರಿಗಳನ್ನು ಗುರುತಿಸಿ 5 ಜನರಿಗಿಂತ ಹೆಚ್ಚು ಕೂಲಿಕಾರರು ಗುಂಪಾಗಿ ಕೆಲಸ ನಿರ್ವಹಿಸದಂತೆ ಎಚ್ಚರ ವಹಿಸಿ, ಪ್ರತಿದಿನ ಕೆಲಸ ಆರಂಭಕ್ಕೂ ಮುನ್ನ ಶಪಥ ಮಾಡಲು ಸೂಚಿಸಲಾಗಿದೆ ಎಂದರು. ಹಾನಗಲ್ಲ ತಾಲೂಕಿಗೆ ಬೇರೆ ಬೇರೆ ರಾಜ್ಯ ಜಿಲ್ಲೆಗಳಿಂದ ಬಂದ ಕೂಲಿ ಕಾರ್ಮಿಕರು ಜಾಬ್ ಕಾರ್ಡ್ ಹೊಂದಿದಲ್ಲಿ ಪಂಚಾಯತಿಗೆ ಭೇಟಿ ಮಾಡಿ ಕೂಲಿ ಕೆಲಸಕ್ಕೆ ಬೇಡಿಕೆ ಸಲ್ಲಿಸಬಹುದು.
ಜಾಬ್‌ಕಾರ್ಡ್ ಇಲ್ಲದವರು ಗ್ರಾಪಂಗೆ ಅರ್ಜಿ ಸಲ್ಲಿಸಿ 15 ದಿನಗಳೊಳಗೆ ಜಾಬ್ ಕಾರ್ಡ್ ಪಡೆದು ತಕ್ಷಣ ಕೂಲಿ ಕೆಲಸಕ್ಕೆ ಅರ್ಜಿ ಸಲ್ಲಿಸಬಹುದು. ಒಂದು ಜಾಬ್ ಕಾರ್ಡ್‌ಗೆ 100 ಮಾನವ ದಿನಗಳ ಉದ್ಯೋಗ ಕಲ್ಪಿಸಲಾಗಿದ್ದು, ಒಬ್ಬರಿಗೆ ಪ್ರತಿದಿನ 275 ರೂ ಕೂಲಿ ನೀಡಲಾಗುವುದು ಎಂದು ತಿಳಿಸಿದರು.
ನೀರಾವರಿ ಸೌಲಭ್ಯ ಇರುವ ರೈತರು ತೋಟಗಾರಿಕಾ ಇಲಾಖೆ ವತಿಯಿಂದ ಮಹಾತ್ಮಾಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಅಡಕೆ, ಬಾಳೆ, ಗೋಡಂಬಿ, ಮಾವು, ಕಾಳುಮೆಣಸು ಹಾಗೂ ಚಿಕ್ಕು ಪ್ರದೇಶ ವಿಸ್ತರಣೆ ಕೈಗೊಳ್ಳಲು ಅವಕಾಶವಿರುತ್ತದೆ. ಆಸಕ್ತ ರೈತರು ಗ್ರಾಪಂ ಕ್ರಿಯಾ ಯೋಜನೆಯಡಿ ಅಳವಡಿಸಿಕೊಂಡು ಅನುಷ್ಠಾನಗೊಳಿಸಿಕೊಳ್ಳಬಹುದು ಎಂದು ತಿಳಿಸಿದ್ದಾರೆ.