Advertisement

ಅನುದಾನ ಮಂಜೂರಾದರೂ ಆರಂಭವಾಗದ ಕಾಮಗಾರಿ

11:16 PM Nov 11, 2019 | Sriram |

ವಿಶೇಷ ವರದಿ ಕಾಂತಾವರ: ಕಾಂತಾವರ ಹೈಸ್ಕೂಲಿನಿಂದ ಕೆಪ್ಲಾಜೆ ಮಾರಿಗುಡಿಯಾಗಿ ಕಡಂದಲೆ ಹಾಗೂ ಪಾಲಡ್ಕ ಸಂಪರ್ಕಿಸುವ ಸುಮಾರು ನಾಲ್ಕೂವರೆ ಕಿ.ಮೀ. ಉದ್ದದ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಸಂಚಾರ ದುಸ್ತರವಾಗಿದೆ. ರಸ್ತೆಯುದ್ದಕ್ಕೂ ಅಲ್ಲಲ್ಲಿ ಬೃಹತ್‌ ಗಾತ್ರಗಳ ಹೊಂಡ ನಿರ್ಮಾಣಗೊಂಡಿದ್ದು ಸಣ್ಣಪುಟ್ಟ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಈ ರಸ್ತೆ ದುರಸ್ತಿಯ ಬಗ್ಗೆ ಕಳೆದ ಎರಡು ದಶಕದಿಂದ ಈ ಭಾಗದ ಗ್ರಾಮಸ್ಥರು ಸ್ಥಳೀಯಾಡಳಿತ, ಹಾಗೂ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ

Advertisement

ಡಾಮರುಗೊಂಡು 20 ವರ್ಷ
ಕೆಪ್ಲಾಜೆ ಮಾರಿಗುಡಿ ರಸ್ತೆ ಡಾಮರುಗೊಂಡು 20 ವರ್ಷ ವಾದರೂ ಮರು ಡಾಮರಿನ ಯೋಗ ಮಾತ್ರ ಇನ್ನೂ ಬಂದಿಲ್ಲ. ಈ ರಸ್ತೆಗೆ ಎರಡು ಮೂರು ಬಾರಿ ಬರೀ ತೇಪೆ ಹಾಕುವ ಕೆಲಸ ನಡೆಸಲಾಗಿದ್ದು ಇದೀಗ ಕಳೆದ ಹಲವು ವರ್ಷಗಳಿಂದ ಈ ಕೆಲಸವೂ ನಡೆಯದೆ ನಾಲ್ಕುವರೆ ಕಿಲೋಮೀಟರ್‌ ಉದ್ದದ ರಸ್ತೆ ಸಂಪೂರ್ಣ ಹದಗೆಟ್ಟು ವಾಹನ ಸಂಚಾರಕ್ಕೆ ಅಯೋಗ್ಯವಾಗಿದೆ.

ಅತ್ಯಂತ ಗ್ರಾಮೀಣ ಭಾಗವಾದ ಕಾಂತಾವರದಿಂದ ಕೆಪ್ಲಾಜೆ ಮಾರಿಗುಡಿ ಯಿಂದ ಮುಂದಕ್ಕೆ ಪಾಲಡ್ಕವಾಗಿ ಮೂಡಬಿದಿರೆಗೆ ಸಾಗಲು ಹಾಗೂ ಕಡಂದಲೆಯಾಗಿ ಸಚ್ಚೇರಿಪೇಟೆ, ಕಿನ್ನಿಗೋಳಿ ಮತ್ತು ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸಲು ಹತ್ತಿರದ ರಸ್ತೆಯಾದ ಕಾರಣ ಈ ಭಾಗದಲ್ಲಿ ಬಹುತೇಕ ವಾಹನಗಳು ನಿತ್ಯ ಇಲ್ಲಿಯೇ ಸಂಚರಿಸುತ್ತವೆ. ಹೊಂಡಗಳಿಂದ ತುಂಬಿದ ಈ ರಸ್ತೆಯಲ್ಲಿ ಹಲವು ಬಾರಿ ವಾಹನ ಅಪಘಾತವೂ ನಡೆದಿದೆ.

ರಿಕ್ಷಾ ಚಾಲಕರು ಇಲ್ಲಿ ಸಂಚರಿಸಲು ಹಿಂದೇಟು ಹಾಕುತ್ತಿದ್ದು, ಶಾಲಾ ಮಕ್ಕಳು ಈ ಮಾರ್ಗವನ್ನು ಅವಲಂಬಿಸಿದ್ದಾರೆ.

ಅನುದಾನ ಮಂಜೂರು
ಕೆಪ್ಲಾಜೆ ಮಾರಿಗುಡಿ ರಸ್ತೆಗೆ ಸುಮಾರು 50 ಲಕ್ಷ ರೂ. ಅನುದಾನ ಮಂಜೂರಾಗಿದೆ ಎಂದು ಕಳೆದ ಎರಡು ವರ್ಷದಿಂದ ಜನಪ್ರತಿನಿಧಿಗಳು ಭರವಸೆ ನೀಡಿದ್ದರೂ ಇದುವರೆಗೂ ಕಾಮಗಾರಿಗೆ ಮಾತ್ರ ಚಾಲನೆ ದೊರೆತಿಲ್ಲ. ಪ್ರತೀ ಬಾರಿ ಮನವಿ ನೀಡುವ ಸಂದರ್ಭ 50 ಲ.ರೂ. ಅನುದಾನ ಮಂಜೂರಾಗಿದೆ. ಕೂಡಲೇ ಕಾಮಗಾರಿ ನಡೆಸುತ್ತೇವೆ ಎನ್ನುವ ಅಧಿಕಾರಿಗಳ ಆಶ್ವಾಸನೆ ಮಾತ್ರ ಕೇಳಿಬರುತ್ತದೆ ಎನ್ನುವುದು ಗ್ರಾಮಸ್ಥರ ಆರೋಪ.

Advertisement

ಶೀಘ್ರ ಕಾಮಗಾರಿ ಆರಂಭ
ಕಾಂತಾವರ- ಕೆಪ್ಲಾಜೆ ರಸ್ತೆಗೆ 50 ಲಕ್ಷ ರೂ. ಅನುದಾನವನ್ನು ಶಾಸಕರು ವಿಶೇಷ ಮುತುವರ್ಜಿ ವಹಿಸಿ ಮಂಜೂರುಗೊಳಿಸಿದ್ದು, ಇದು ಟೆಂಡರ್‌ ಹಂತದಲ್ಲಿದ್ದು, ಕಾಮಗಾರಿ ಶೀಘ್ರ ಆರಂಭವಾಗುವುದು.
-ಜಯ ಎಸ್‌. ಕೋಟ್ಯಾನ್‌,
ನಿಕಟಪೂರ್ವ ಅಧ್ಯಕ್ಷರು, ಗ್ರಾ.ಪಂ. ಸದಸ್ಯರು,ಕಾಂತಾವರ

ತಾಂತ್ರಿಕ ತೊಂದರೆಯಿಂದ ವಿಳಂಬ
50 ಲಕ್ಷ ರೂ. ಅನುದಾನ ಮಂಜೂರಾದರೂ ತಾಂತ್ರಿಕ ತೊಂದರೆ ಯಿಂದಾಗಿ ವಿಳಂಬವಾಗಿದೆ. ಆದಷ್ಟು ಬೇಗ ಕಾಮಗಾರಿಗೆ ಚಾಲನೆ ನೀಡುತ್ತೇವೆ.
-ಮಿಥುನ್‌ ಕುಮಾರ್‌, ಇಂಜಿನಿಯರ್‌

Advertisement

Udayavani is now on Telegram. Click here to join our channel and stay updated with the latest news.

Next