Advertisement

ಸಮಾನತೆಯ ಸಮಾಜ ಕಟ್ಟುವ ಕೆಲಸ ಸುತ್ತೂರು ಮಠದಿಂದ ಮುಂದುವರಿಯಬೇಕು: ಸಿಎಂ BSY

01:45 PM Aug 29, 2020 | Mithun PG |

ಮೈಸೂರು: ಅನ್ನ, ಅರಿವು, ಆರೋಗ್ಯ, ಸಮಾಜ ಸುಧಾರಣೆ, ಧರ್ಮಜಾಗೃತಿ, ಆಧ್ಯಾತ್ಮ ಕ್ಷೇತ್ರದಲ್ಲಿ ಸುತ್ತೂರು ಮಠದ   ಜಗದ್ಗುರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳು  ಭದ್ರ ಬುನಾದಿ ಹಾಕಿದ್ದಾರೆ. ಇದನ್ನು ಸುತ್ತೂರು ಮಠ ಸಮಾನತೆಯ ಸಮಾಜ ಕಟ್ಟುವ ನಿಟ್ಟಿನಲ್ಲಿ ಮುಂದುವರಿಸಿಕೊಂಡು ಹೋಗಬೇಕಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

Advertisement

ಶನಿವಾರ ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠದಲ್ಲಿ ಆಯೋಜಿಸಲಾಗಿದ್ದ ಶ್ರೀಶಿವರಾತ್ರಿ ರಾಜೇಂದ್ರ ಸ್ವಾಮಿಯವರ 105ನೇ ಜಯಂತಿ ಕಾರ್ಯಕ್ರಮದಲ್ಲಿ ಆನ್ ಲೈನ್ ಮೂಲಕ ಶ್ರೀಗಳ ಜೀವನ ಮೌಲ್ಯಗಳು ಹಾಗೂ ಶ್ರೀಮಠದ ಸಾಧನೆಗಳನ್ನು ಬಿಂಬಿಸುವ ಕೃತಿಗಳು ಹಾಗೂ ಆನಿಮೇಷನ್ ಚಿತ್ರಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ಮಹಾನ್ ಸಂತರು, ಮಹರ್ಷಿಗಳು, ತತ್ವಜ್ಞಾನಿಗಳು, ಶರಣರು ದಾಸವೇರಣ್ಯರು ತಮ್ಮ ಬದುಕನ್ನು ಮಾನವನ ಉದ್ಧಾರಕ್ಕಾಗಿ ಮುಡಿಪಾಗಿಸಿ ಮಹಾಬೆಳಕಾದರು. ಇಂತಹ ಮಹಾನ್ ಸಂತರಲ್ಲಿ ಒಬ್ಬರಾದ ನಮ್ಮ ಪರಮಪೂಜ್ಯ ಜಗದ್ಗುರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರು ಲೋಕಕಲ್ಯಾಣಕ್ಕಾಗಿ ಅವಿಸ್ಮರಣೀಯ ಸೇವೆ ಸಲ್ಲಿಸಿದ್ದಾರೆ ಎಂದು ತಿಳಿಸಿದರು.

ಜೆ.ಎಸ್.ಎಸ್ ಮಹಾವಿದ್ಯಾಪೀಠವನ್ನು ಸ್ಥಾಪಿಸುವ ಮೂಲಕ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ   ವಸತಿ ಸಹಿತ ಶಿಕ್ಷಣ ನೀಡುವ ಮಹತ್ಕಾರ್ಯವನ್ನು ಮಠದ ವತಿಯಿಂದ ಮಾಡಲಾಗುತ್ತಿದೆ.

ಶ್ರೀಗಳು ಶಾಂತಿ ಹಾಗೂ ಧಾರ್ಮಿಕ ಸಾಮರಸ್ಯದ ರೂವಾರಿಗಳಾಗಿದ್ದು, ಈ ಭಾಗದ ಜನರು ಸೌಹಾರ್ದಯುತವಾಗಿ ಬದುಕಲು ಸ್ಪೂರ್ತಿಯಾಗಿದ್ದಾರೆ. ಮಠದ ಅನ್ನ ದಾಸೋಹ, ಜ್ಞಾನ ದಾಸೋಹದಂತಹ ಸಮಾಜಮುಖಿ ಕಾರ್ಯಕ್ರಮಗಳು ಶ್ರೀಗಳ ಮಾರ್ಗದರ್ಶನದಲ್ಲಿ ನಿರಂತರವಾಗಿ ನಡೆದುಕೊಂಡು ಬಂದಿರುವುದು ಶ್ಲಾಘನೀಯ ಎಂದರು.

Advertisement

ಶತಮಾನಗಳಿಂದ ದೀನ ದಲಿತರು ಎಂಬ ಬೇಧಭಾವವಿಲ್ಲದೆ ದಾಸೋಹ ನಡೆಸಿ ಸಮ-ಸಮಾಜದ ನಿರ್ಮಾಣಕ್ಕೆ ಶ್ರೀ ಮಠ ಶ್ರಮಿಸಿದೆ.ಪರಮಪೂಜ್ಯ ರಾಜೇಂದ್ರ ಶ್ರೀಗಳವರ ಜಯಂತಿ ಮಹೋತ್ಸವದ ಈ ಸಂದರ್ಭದಲ್ಲಿ ವೈವಿಧ್ಯಮಯ ಜನೋಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಶ್ರೀಮಠದ ಜನಪರ ಕಾಳಜಿಯ ಪ್ರತೀಕವಾಗಿದೆ.

ಇಂತಹ ಸಮಾಜಮುಖಿ ಕಾರ್ಯಕ್ರಮಗಳು ಇನ್ನೂ ಹೆಚ್ಚು ಹೆಚ್ಚಾಗಿ ನಡೆಯಬೇಕು ಎನ್ನುವುದು   ನನ್ನ ಆಶಯ. ಶ್ರೀಮಠದ ಸಮಾಜ ಕಟ್ಟುವ ಕಾರ್ಯ ನಿರಂತರವಾಗಿ ಮುಂದುವರಿಯಲಿ ಎಂದು ಆಶಿಸಿದರಲ್ಲದೆ, ಶ್ರೀಗಳ ಜೀವನ ಮೌಲ್ಯಗಳು ಹಾಗೂ ಶ್ರೀಮಠದ ಸಾಧನೆಗಳನ್ನು ಬಿಂಬಿಸುವ ಕೃತಿಗಳು ಹಾಗೂ ಆನಿಮೇಷನ್ ಚಿತ್ರಗಳನ್ನು ಬಿಡುಗಡೆಗೊಳಿಸುತ್ತಿರುವುದು ಅತ್ಯಂತ ಔಚಿತ್ಯಪೂರ್ಣವಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next