Advertisement

ಮೋದಿಯದ್ದೇ ಮಾತು;ಅಭ್ಯರ್ಥಿ ಚರ್ಚೆಗೌಣ

12:54 PM Apr 16, 2019 | Team Udayavani |
ಬೀದರ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬೀದರ್‌ ದಕ್ಷಿಣ ಕ್ಷೇತ್ರದ ಜನರಲ್ಲಿ ಮೋದಿ ಪರ- ವಿರೋಧ ಚರ್ಚೆಗಳು ಜೋರಾಗಿವೆ. ಆದರೆ, ಸ್ಥಳೀಯ ಅಭ್ಯರ್ಥಿಗಳ ಕುರಿತು ಚರ್ಚೆ ಗೌಣವಾಗಿರುವುದು ಕ್ಷೇತ್ರದ ವಿಶೇಷ.
ವಿಧಾನ ಸಭೆ ಚುನಾವಣೆಯಲ್ಲಿ ಇದ್ದ ಮತ ಹಾಕುವ ಹುಮ್ಮಸ್ಸು, ಉತ್ಸಾಹ ಇದೀಗ ಲೋಕಸಭೆ ಚುನಾವಣೆಯಲ್ಲಿ
ಕಂಡು ಬರುತ್ತಿಲ್ಲ. ಎರಡೂ ಪಕ್ಷಗಳ ಪ್ರಚಾರ ಹೇಳಿಕೊಳ್ಳುವಂತೆ ದಕ್ಷಿಣ ಕ್ಷೇತ್ರದಲ್ಲಿ ಕಂಡು ಬರುತ್ತಿಲ್ಲ. ಆದರೆ, ಆಯಾ ಪ್ರದೇಶದಲ್ಲಿ ಪಕ್ಷದ ಕಾರ್ಯಕರ್ತರ ಸಭೆಗಳಿಗೆ ಮಾತ್ರ ಎರಡೂ ಪಕ್ಷಗಳು ಸೀಮಿತವಾಗಿವೆ.
ಕುಡಿಯುವ ನೀರು, ರೈತರ ಸಮಸ್ಯೆ, ನಿರುದ್ಯೋಗ ಸಮಸ್ಯೆ, ನೀರಾವರಿ ಸೇರಿದಂತೆ ಹತ್ತಾರು ಸಮಸ್ಯೆಗಳನ್ನು ಬೀದರ್‌ ದಕ್ಷಿಣ ಕ್ಷೇತ್ರದ ಜನರು ಅನುಭವಿಸುತ್ತಿದ್ದಾರೆ. ಅಲ್ಲದೆ, ಗ್ರಾಮೀಣ ಕ್ಷೇತ್ರವೆಂದೇ ಗುರುತಿಸಿಕೊಂಡ ಬೀದರ್‌ ದಕ್ಷಿಣ ಕ್ಷೇತ್ರದ ಹತ್ತಾರು ಗ್ರಾಮಸ್ಥರು ಕಾರಂಜಾ ಯೋಜನೆಯಲ್ಲಿ ಭೂಮಿ, ಮನೆ ಕಳೆದುಕೊಂಡಿದ್ದಾರೆ. ಕಳೆದ ಅನೇಕ ವರ್ಷಗಳಿಂದ ಸಂತ್ರಸ್ತರು ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿ ಅನೇಕ ಬಾರಿ ಧರಣಿ, ಪ್ರತಿಭಟನೆಗಳನ್ನು ನಡೆಸಿದ್ದಾರೆ. ಇದೀಗ ಕೂಡ ಜಿಲ್ಲಾಧಿಕಾರಿ ಕಚೇರಿ ಎದುರಿಗೆ ಅಹೋರಾತ್ರಿ ಧರಣಿ ನಡೆಸುತ್ತಿದ್ದು, ಜಿಲ್ಲೆಯ ಯಾವ ಜನಪ್ರತಿನಿ ಗಳೂ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ಈ ಬಾರಿ ಲೋಕ ಸಭೆ ಚುನಾವಣೆ ಬಹಿಷ್ಕರಿಸುವುದಾಗಿ ಘೋಷಣೆ ಮಾಡಿದ್ದಾರೆ. ಆದರೂ, ಕೂಡ ಯಾವ ರಾಜಕೀಯ ಪಕ್ಷದವರೂ ರೈತನ್ನು ಭೇಟಿ ಮಾಡಿ ಮನ ಒಲಿಸುವ ಕೆಲಸ ಮಾಡಿಲ್ಲ ಎಂಬುದು ರೈತರ ಆಕ್ರೋಷವಾಗಿದೆ.
ಚುನಾಯಿತ ಜನಪ್ರತಿನಿಧಿಗಳು ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎಂಬ ಗೋಳು ಇಲ್ಲಿನ ಜನರದಾಗಿದೆ. ಈ ಮಧ್ಯೆ ಲೋಕಸಭೆ ಚುನಾವಣೆ ಎದುರಾಗಿದ್ದು, ಯಾರಿಗೆ ಮತ ಹಾಕಿದರೆ ಲಾಭ ಎಂಬ ಬಗ್ಗೆಯೂ ಅಲಲ್ಲಿ ಭಾರಿ ಚರ್ಚೆಗಳು ಆರಂಭವಾಗಿವೆ.
ಕಳೆದ ಲೋಕಸಭೆ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ 46,150 ಮತ, ಬಿಜೆಪಿ 36,308 ಮತಗಳು ಬಂದಿದ್ದವು.
ಅಲ್ಲದೆ ಆ ಚುನಾವಣೆಯಲ್ಲಿ ಸಚಿವ ಬಂಡೆಪ್ಪ ಖಾಶೆಂಪೂರ್‌ ಜೆಡಿಎಸ್‌ ಪಕ್ಷದಿಂದ ಸ್ಪರ್ಧೆ ನಡೆಸಿದ್ದು, ಅವರಿಗೆ 21,302 ಮತಗಳು ಬಂದಿದ್ದವು. ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಬಂಡೆಪ್ಪ ಖಾಶೆಂಪೂರ್‌ 53,347, ಬಿಜೆಪಿ ಅಭ್ಯರ್ಥಿ ಡಾ|ಶೈಲೇಂದ್ರ ಬೆಲ್ದಾಳೆ 41,239 ಮತಗಳನ್ನು ಪಡೆದುಕೊಂಡಿದ್ದರು. ಈ ಕ್ಷೇತ್ರದ ಜನರು ಸತತ ಒಂದೇ ಪಕ್ಷಕ್ಕೆ ಅಧಿಕಾರ ನೀಡುವುದು ವಿರಳ. ಇದೀಗ ಲೋಕಸಭೆ ಚುನಾವಣೆಯಲ್ಲಿ ಯಾರಿಗೆ ಮಣೆ ಹಾಕುತ್ತಾರೆ ಕಾದು ನೋಡಬೇಕಾಗಿದೆ.
ಬೀದರ್‌ ದಕ್ಷಿಣ ಕ್ಷೇತ್ರದಲ್ಲಿ ಈವರೆಗೆ ರಾಜ್ಯ, ರಾಷ್ಟ್ರೀಯ ನಾಯಕರು ಯಾರೂ ಭೇಟಿ ನಿಡಿಲ್ಲ. ಆದರೆ, ಮಾಜಿ ಶಾಸಕ ಅಶೋಕ ಖೇಣಿ, ಚಂದ್ರಸಿಂಗ್‌ ಕ್ಷೇತ್ರದಲ್ಲಿ ಸಂಚಾರ ನಡೆಸಿ ಈಶ್ವರ ಖಂಡ್ರೆ ಪರ ಮತ ಯಾಚನೆ ಮಾಡುತ್ತಿದ್ದಾರೆ. ಬಿಜಿಪಿ ಜಿಲ್ಲಾಧ್ಯಕ್ಷ ಡಾ|ಶೈಲೇಂದ್ರ ಬೆಲ್ದಾಳೆ ಬಿಜೆಪಿ ಪರ ಪ್ರಚಾರ ನಡೆಸುತ್ತಿದ್ದಾರೆ. ಸದ್ಯ ಈ ಕ್ಷೇತ್ರದಲ್ಲಿ ಜೆಡಿಎಸ್‌ ಶಾಸಕರಿದ್ದು, ಏ.13ರ ವರೆಗೆ ಕ್ಷೇತ್ರಕ್ಕೆ ಭೇಟಿ ನೀಡಿ ಮೈತ್ರಿ ಅಭ್ಯರ್ಥಿ ಪರ ಮತಯಾಚನೆ ನಡೆಸಿಲ್ಲ.  ಬಾಲಾಕೋಟ್‌ನಲ್ಲಿ ಸೈನಿಕರು ನಡೆಸಿದ ಸರ್ಜಿಕಲ್‌ ಸ್ಟ್ರೈಕ್‌ ಕುರಿತು ಇಲ್ಲಿನ ಯುವಕರ ಮಧ್ಯೆ ಚರ್ಚೆಗಳು ನಡೆಯುತ್ತಿವೆ.
ಬಿಜೆಪಿಯವರು ಮತ್ತೂಮ್ಮೆ ಮೋದಿ ಎಂಬ ಸಂದೇಶ ಎಲ್ಲೆಡೆ ಸಾರುತ್ತಿದ್ದಾರೆ. ಇತರೆ ಪಕ್ಷದವರು ಕೂಡ ದೇಶಕ್ಕೆ ಮೋದಿ ಇರಲಿ ಆದರೆ, ಜಿಲ್ಲೆಗೆ ಖಂಡ್ರೆ ಬರಲಿ ಎಂಬ ಅಭಿಪ್ರಾಯಗಳು ವ್ಯಕ್ತಪಡಿಸುತ್ತಿದ್ದಾರೆ.
ಬೀದರ್‌ ದಕ್ಷಿಣ ಕ್ಷೇತ್ರದಲ್ಲಿ 2,00,867 ಮತದಾರರು ಇದ್ದಾರೆ. 1,03,759 ಪುರುಷ, 97,108 ಮಹಿಳಾ ಮತದಾರರು ಇದ್ದಾರೆ. ಕ್ಷೇತ್ರದಲ್ಲಿ ಒಟ್ಟಾರೆ 229 ಮತಕೇಂದ್ರಗಳಿದ್ದು, ಲೋಕಸಭೆ ಚುನಾವಣೆಯಲ್ಲಿ ಕ್ಷೇತ್ರದ ಜನರು ಯಾರ ಭವಿಷ್ಯ
ಬರೆಯುತ್ತಾರೆ ಕಾದು ನೋಡಬೇಕಾಗಿದೆ.
Advertisement

Udayavani is now on Telegram. Click here to join our channel and stay updated with the latest news.

Next