ಬೆಂಗಳೂರು: “ಬೆಂಗಳೂರು ಸಾಹಿತ್ಯ ಉತ್ಸವದಲ್ಲಿ ಭಾಗವಹಿಸುವ ಶೇ. 95ರಷ್ಟು ಸಾಹಿತ್ಯಾಸಕ್ತರಿಗೆ ಕನ್ನಡ ಬಂದರೂ ಮಾತನಾಡುತ್ತಿಲ್ಲ’ ಎಂದು ಬೊಳುವಾರು ಮಹಮ್ಮದ್ ಕುಂಞ ಬೇಸರ ವ್ಯಕ್ತಪಡಿಸಿದರು.
ಲಲಿತ್ ಅಶೋಕ್ ಹೋಟೆಲ್‌ನಲ್ಲಿ ಹಮ್ಮಿಕೊಂಡ ಎರಡು ದಿನಗಳ ಬೆಂಗಳೂರು ಸಾಹಿತ್ಯ ಉತ್ಸವದಲ್ಲಿ ಭಾನುವಾರ ನಗರದ ಪುಸ್ತಕ ಅಂಗಡಿಯೊಂದು ನೀಡುವ “ಆಟಾ ಗಲಾಟಾ-ಬೆಂಗಳೂರು ಸಾಹಿತ್ಯ ಉತ್ಸವ ಪುಸ್ತಕ ಪ್ರಶಸ್ತಿ’ ಸ್ವೀಕರಿಸಿ ಅವರು ಮಾತನಾಡಿದರು.
ಸಾಹಿತ್ಯ ಉತ್ಸವದಲ್ಲಿ ಭಾಗವಹಿಸುವ ಶೇ. 95ರಷ್ಟು ಸಾಹಿತ್ಯಾಸಕ್ತರಿಗೆ ಕನ್ನಡ ಬರುತ್ತದೆ. ಆದರೆ, ಯಾರೂ ಮಾತನಾಡುವುದಿಲ್ಲ. ಇದು ನನ್ನ ಆರೋಪ ಮಾಡುತ್ತಿಲ್ಲ. ನನ್ನ ಮೊಮ್ಮಗನೂ ಸೇರಿದಂತೆ ಕನ್ನಡ ಮಾತನಾಡಬೇಕು ಎಂದು ಹೇಳುತ್ತಿದ್ದೇನೆ. ಕನ್ನಡವನ್ನು ಮತ್ತಷ್ಟು ಚೆಂದಗೊಳಿಸಬೇಕು ಎಂದು ಮನವಿ ಮಾಡಿದರು.
ಅದೇ ರೀತಿ, ಸಾಹಿತ್ಯ ಉತ್ಸವ ಅತ್ಯುತ್ತಮವಾಗಿ ಆಯೋಜನೆ ಮಾಡಲಾಗಿದೆ. ಆದರೆ, ಪಂಚತಾರಾ ಹೋಟೆಲ್‌ನಲ್ಲಿ ಇದನ್ನು ಆಯೋಜಿಸಿರುವುದರಿಂದ ಬಡ ಕನ್ನಡಿಗರಿಗೆ ಇಲ್ಲಿ ಭಾಗವಹಿಸಲು ಕಷ್ಟವಾಗುತ್ತದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಪಂಚತಾರಾ ಹೋಟೆಲ್ ಹೊರತುಪಡಿಸಿ, ಸಾಮಾನ್ಯರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬಹುದಾದ ಸ್ಥಳಗಳಲ್ಲಿ ಏರ್ಪಡಿಸಬೇಕು ಎಂದು ಕೋರಿದರು.
ಇನ್ನು ಕನ್ನಡ ಪತ್ರಿಕೆಗಳಲ್ಲಿ ಕನ್ನಡ ಕಾರ್ಯಕ್ರಮಗಳಿಗೆ ಸಾಕಷ್ಟು ಪ್ರಚಾರ ಸಿಗುತ್ತಿದೆ. ಆದರೆ, ವಿಮರ್ಶೆಗೆ ಜಾಗ ಇಲ್ಲವಾಗಿದೆ. ಮೊದಲು ಪ್ರತಿ ವಾರ ವಿಮರ್ಶೆಗೆ ಜಾಗ ಮೀಸಲಿರುತ್ತಿತ್ತು. ಅದೇ ರೀತಿ, ಮುಂದಿನ ದಿನಗಳಲ್ಲೂ ವಾರಕ್ಕೊಮ್ಮೆ ಅರ್ಧಪುಟವಾದರೂ ಕತೆ, ಕವನ ಮತ್ತಿತರ ವಿಮರ್ಶೆಗೆ ಜಾಗ ಮೀಸಲಿಡಬೇಕು ಎಂದು ಮನವಿ ಮಾಡಿದರು.
ಇದೇ ವೇಳೆ ಬಾಲಿವುಡ್ ನಟಿ ಟ್ವಿಂಕಲ್ ಖನ್ನಾ, ಅನೀಸ್ ಸಲೀಂ ಅವರಿಗೂ ಪ್ರಶಸಿ ಪ್ರದಾನ ಮಾಡಲಾಯಿತು.
ಜಿರಳೆಯಷ್ಟೂ ಸುದ್ದಿ ಮಾಡ್ತಿಲ್ಲ; ಬೇಸರ
ಇಂದಿರಾ ಕ್ಯಾಂಟೀನ್‌ನಲ್ಲಿಯ ಪ್ಲೇಟ್‌ನಲ್ಲಿ ಬಿದ್ದ ಜಿರಳೆ ಮಾಡುವಷ್ಟು ಸುದ್ದಿಯನ್ನೂ ಕನ್ನಡ ಸಾಹಿತ್ಯ ಮಾಡುತ್ತಿಲ್ಲ ಎಂದು ಬೊಳುವಾರು ಮಹಮ್ಮದ್ ಕುಂಞ ಬೇಸರ ವ್ಯಕ್ತಪಡಿಸಿದರು. ಕನ್ನಡಕ್ಕೆ ಅತಿ ಹೆಚ್ಚು ಜ್ಞಾನಪೀಠಗಳು, ಹೆಚ್ಚು ಸಾಹಿತ್ಯದ ಕಾರ್ಯಕ್ರಮಗಳು, ಅತಿ ಹೆಚ್ಚು ಕನ್ನಡ ಪುಸ್ತಕಗಳು ಪ್ರಕಟವಾಗಲು ಕನ್ನಡ ಪತ್ರಿಕೆಗಳ ಸಹಕಾರವೇ ಕಾರಣ. ಇತ್ತೀಚಿನ ದಿನಗಳಲ್ಲಿ ಇದು ಕಡಿಮೆಯಾಗಿದೆ. ಆದ್ದರಿಂದ ಕನ್ನಡ ಸಾಹಿತ್ಯಕ್ಕೆ ಹೆಚ್ಚು ಪ್ರಚಾರ ಅವಶ್ಯಕತೆಯಿದೆ ಎಂದರು.