ಬೆಂಗಳೂರು: ಮಾಜಿ ಸಚಿವ ಬಾಬುರಾವ್ ಚಿಂಚನಸೂರು ವಿರುದ್ಧ ವಂಚನೆ ಆರೋಪದಡಿ ಪ್ರಕರಣ ದಾಖಲಿಸಿದ್ದ ಮಹಿಳಾ ಉದ್ಯಮಿಯೊಬ್ಬರು ಡೆತ್‌ನೋಟ್ ಬರೆದಿಟ್ಟು ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಂದ್ರ ಲೇಔಟ್‌ನ ಆದರ್ಶ ನಗರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಅಂಜನಾ (35) ಮೃತ ಮಹಿಳೆ. ಈ ಸಂಬಂಧ ಅಸಹಜ ಸಾವು ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಚಂದ್ರಲೇಔಟ್ ಪೊಲೀಸರು ಹೇಳಿದರು. ಉದ್ಯಮದ ಜತೆ ರಾಜಕೀಯದಲ್ಲೂ ಅಂಜನಾ ಗುರುತಿಸಿಕೊಂಡಿದ್ದು, ಪತಿ ವಿಜಯಕುಮಾರ್ ಅವರಿಂದ ವಿಚ್ಛೇದನ ಪಡೆದಿದ್ದಾರೆ. ಖಾಸಗಿ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿರುವ ಪುತ್ರನ ಜತೆ ಚಂದ್ರ ಲೇಔಟ್‌ನ ಆದರ್ಶನಗರದಲ್ಲಿ ವಾಸವಾಗಿದ್ದರು.
ಅ.30ರಂದು ರಾತ್ರಿ 10 ಗಂಟೆ ಸುಮಾರಿಗೆ ಕಾರ್ಯನಿಮಿತ್ತ ಜ್ಞಾನಭಾರತಿಗೆ ಹೋಗಿದ್ದ ಪುತ್ರನಿಗೆ ಕರೆ ಮಾಡಿದ ಅಂಜನಾ, “ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಅಂತ್ಯಸಂಸ್ಕಾರವನ್ನು ನೀನೇ ಮಾಡಬೇಕು’ ಎಂದು ಹೇಳಿ ಕರೆ ಸ್ಥಗಿತಗೊಳಿಸಿದ್ದಾರೆ. ಗಾಬರಿಗೊಂಡ ಆತ, ಕೂಡಲೇ ತನ್ನ ಸಂಬಂಧಿಕರು, ಸ್ನೇಹಿತರಿಗೆ ಕರೆ ಮಾಡಿ ಮನೆ ಬಳಿ ಹೋಗುವಂತೆ ಕೋರಿದ್ದಾನೆ.
ತಡರಾತ್ರಿ 10.30 ಸುಮಾರಿಗೆ ಪುತ್ರ, ಸಂಬಂಧಿಕರು ಮನೆ ಬಳಿ ಬರುವಷ್ಟರಲ್ಲಿ ಡೆತ್‌ನೋಟ್ ಬರೆದಿಟ್ಟು, ಅಂಜನಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡೆತ್‌ನೋಟ್ , ಮೊಬೈಲ್ ನ್ನು ವಶಕ್ಕೆ ಪಡೆದುಕೊಂಡು ವಿಧಿ ವಿಜ್ಞಾನ ಪ್ರಯೋಗಾಲ ಯಕ್ಕೆ ಕಳುಹಿಸಲಾಗಿದೆ. “ಬಹಳ ನೋವಾಗಿದೆ. ನನ್ನನ್ನು ಕ್ಷಮಿಸಿ. ಪುತ್ರನಿಂದಲೇ ನನ್ನ ಅಂತ್ಯ ಸಂಸ್ಕಾರ ನೆರವೇರಿಸಬೇಕು’ ಎಂದು ಡೆತ್‌ನೋಟ್ ಬರೆದಿದ್ದಾರೆ ಎಂದು ಪೊಲೀಸರು ಹೇಳಿದರು.
ಚಿಂಚನಸೂರು ವಿರುದ್ಧ ದೂರು: ಮಾಜಿ ಸಚಿವರೂ ಆದ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ್ ಚಿಂಚನಸೂರು ಅವರು 11 ಕೋಟಿ ಸಾಲ ಪಡೆದು ಹಿಂತಿರು ಗಿಸದೆ ವಂಚನೆ ಮಾಡಿದ್ದಾರೆಂದು ಆರೋಪಿಸಿ ಅಂಜನಾ ಅವರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಕೋರ್ಟ್ ಮೆಟ್ಟಿಲೇರಿದ್ದರು. ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದೆ. ಈ ಮಧ್ಯೆ ಅಂಜನಾ ಹಾಗೂ ವಿಚ್ಛೇದಿತ ಪತಿ ವಿಜಯ್‌ಕುಮಾರ್ ವಿರುದ್ಧ ವಂಚನೆ ಆರೋಪದಡಿ ನಾಲ್ಕು ವರ್ಷಗಳ ಹಿಂದೆ ಕೆಲ ಬ್ಯಾಂಕ್‌ಗಳು ಕಬ್ಬನ್‌ಪಾರ್ಕ್ ಹಾಗೂ ಚಂದ್ರಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದವು.