Advertisement

ಸಕಲ ಕ್ಷೇತ್ರದಲ್ಲೂ ಮಹಿಳೆ‌ ಛಾಪು

06:24 AM Mar 09, 2019 | Team Udayavani |

ಕಲಬುರಗಿ: ಪ್ರತಿಯೊಂದು ಕ್ಷೇತ್ರದಲ್ಲಿ ಮಹಿಳೆಯರು ಪುರುಷರಿಗೆ ಸರಿಸಮಾನವಾಗಿ ಬೆಳೆದು ಎಲ್ಲರೂ ಹೆಮ್ಮೆ ಪಡುವಂತ ಕೆಲಸ ಮಾಡುತ್ತಿದ್ದಾರೆ ಎಂದು ಜಿಪಂ ಅಧ್ಯಕ್ಷೆ ಸುವರ್ಣಾ ಹನುಮಂತ ಮಲಾಜಿ ಹೇಳಿದರು. ನಗರದ ಡಾ| ಎಸ್‌.ಎಂ. ಪಂಡಿತ ರಂಗಮಂದಿರದಲ್ಲಿ ಶುಕ್ರವಾರ ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಿದ್ದ ಮಹಿಳಾ ಸಾಂಸ್ಕೃತಿಕ ಉತ್ಸವ-2019 ಕಾರ್ಯಕ್ರಮ
ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಪುರುಷರಿಗೆ ಸರಿಸಮಾನವಾಗಿ ಬೆಳೆದು ಹೆಚ್ಚು ಸಮರ್ಥವಾಗಿ ಮಹಿಳೆಯರು ಕಾರ್ಯ ನಿರ್ವಹಿಸಬಲ್ಲರು. ಇದಕ್ಕೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ, ಮದರ್‌ ತೆರಸಾ ಮುಂತಾದ ಮಹಿಳೆಯರೇ ಸಾಕ್ಷಿ. ಮಹಿಳೆಯರು ತಮಗೆ ಸಿಕ್ಕ ಅವಕಾಶ, ಸೌಲಭ್ಯ ಬಳಸಿಕೊಂಡು ಮತ್ತಷ್ಟು ಮುಂದೆ ಬರಬೇಕೆಂದರು.
 
ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಆಶಯದಂತೆ ಮಹಿಳೆಯರಿಗೆ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿ ಕಲ್ಪಿಸಿದೆ. ಹೀಗಾಗಿಯೇ ಕಲಬುರಗಿ ಜಿಪಂ ಅಧ್ಯಕ್ಷ, ಉಪಾಧ್ಯಕ್ಷ, ಮಹಾನಗರ ಪಾಲಿಕೆ ಮೇಯರ್‌, ಉಪಮೇಯರ್‌ ಸ್ಥಾನಗಳಲ್ಲಿ ಮಹಿಳೆಯರು ಕುಳಿತುಕೊಳ್ಳುವಂತಾಗಿದೆ. ಸಂವಿಧಾನ ಮತ್ತು ಸರ್ಕಾರವನ್ನು ಅಭಿನಂದಿಸುತ್ತೇನೆ ಎಂದು ಹೇಳಿದರು.

ಜಿಪಂ ಸಿಇಒ ಡಾ| ಪಿ. ರಾಜಾ ಮಾತನಾಡಿ, 1917ರ ಮಾ. 8ರಂದು ರಷ್ಯಾದಲ್ಲಿ ಮಹಿಳೆಯರಿಗೆ ಮತ ಹಕ್ಕು ನೀಡಲಾಯಿತು. ಈ ಕಾರಣಕ್ಕಾಗಿಯೇ ಮಾ.8ರಂದು ವಿಶ್ವದಾದ್ಯಂತ ಅಂತಾರಾಷ್ಟ್ರೀಯ ಮಹಿಳಾ ದಿನ ಆಚರಿಸಲಾಗುತ್ತಿದೆ. ದೇಶದಲ್ಲಿ ಪ್ರಸಕ್ತ ಚುನಾವಣೆ ವರ್ಷವಾಗಿರುವುದರಿಂದ ಮಹಿಳೆಯರು ಕಡ್ಡಾಯವಾಗಿ ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕೆಂದು ಸಲಹೆ ನೀಡಿದರು.

ವಿಚಾರ ಗೋಷ್ಠಿ ಅಧ್ಯಕ್ಷತೆ ವಹಿಸಿದ್ದ ಡಾ| ಮೀನಾಕ್ಷಿ ಬಾಳಿ ಮಾತನಾಡಿ, ಆಧುನಿಕ ಯುಗದಲ್ಲೂ ಮಹಿಳೆಯರನ್ನು ಮೈಲಿಗೆ, ಮುಟ್ಟು ಹೆಸರಲ್ಲಿ ಧಾರ್ಮಿಕವಾಗಿ ದೂರವಿಡಲಾಗುತ್ತಿದೆ. 30 ವರ್ಷಗಳಿಂದ ಮಹಿಳಾ ಮೀಸಲಾತಿ ಮಸೂದೆ ಮಾಡುವಲ್ಲಿ ಸರ್ಕಾರಗಳು ವಿಫಲವಾಗಿವೆ ಎಂದು ಕಿಡಿಕಾರಿದರು. 

ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಕುಂಭ ಮೇಳದಲ್ಲಿ ಸಕಲ ವ್ಯವಸ್ಥೆಗಳನ್ನು ಕಲ್ಪಿಸಲು ಸರ್ಕಾರಗಳಿಗೆ ಸಾಧ್ಯವಾಗುತ್ತಿದೆ. ಆದರೆ, ಮಹಿಳೆಯರ ಚುನಾವಣೆ ಕರ್ತವ್ಯ ಸ್ಥಳದಲ್ಲಿ ಮೂಲ ವ್ಯವಸ್ಥೆಗಳು ಇರುವುದಿಲ್ಲ. ಕನಿಷ್ಠ ಪಕ್ಷ ಮಹಿಳೆಯರಿಗೆ ರಕ್ಷಣೆ, ನೀರು, ಶೌಚಾಲಯ ವ್ಯವಸ್ಥೆಯನ್ನಾದರೂ ಸರ್ಕಾರ, ಜಿಲ್ಲಾಡಳಿತ ಮಾಡಬೇಕೆಂದು ಒತ್ತಾಯಿಸಿದರು.

Advertisement

ರಂಗಭೂಮಿ ಮತ್ತು ಮಹಿಳೆ ವಿಷಯ ಕುರಿತು ವಿಚಾರ ಮಂಡಿಸಿದ ಡಾ| ಸುಜಾತಾ ಜಂಗಮಶೆಟ್ಟಿ, ವೃತ್ತಿ ರಂಗಭೂಮಿ ಕಲಾವಿದರು ರಂಗಮಂದಿರದಲ್ಲೇ ಜೀವನ ಸಾಗಿಸುತ್ತಿದ್ದರಿಂದ ಹಲವು ಸಂಕಟ ಪಡುತ್ತಿದ್ದರು. ಅಂದಿಗೂ ರಂಗಭೂಮಿ ಕಲಾವಿದೆಯರು ಮೀಟೂನಲ್ಲಿ ತಮ್ಮ ಕಹಿ ಅನುಭವಗಳನ್ನು ಬಿಡಿಸಿಟ್ಟರೆ ಹಲವು ಗಂಡಸರ ಬಣ್ಣ ಬಯಲಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಡಾ| ಮೀರಾ ಪಂಡಿತ್‌ ಅವರು ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ಮತ್ತು ಡಾ| ಶಾಂತಾ ಮಠ ಮಹಿಳಾ ಸಬಲೀಕರಣದ ಬಗ್ಗೆ ವಿಚಾರ ಮಂಡಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ ಮರಬನಳ್ಳಿ, ರಂಗಾಯಣ ನಿರ್ದೇಶಕ ಮಹೇಶ ಪಾಟೀಲ, ಶಶಿಕಲಾ ಜಡೆ ಮುಂತಾದವರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next