Advertisement
ಪ್ರಾಣಿಗಳು ಮತ್ತು ಮಾನವನ ನಡುವೆ ಸಂಘರ್ಷ ಇತ್ತೀಚಿನ ವರ್ಷಗಳಲ್ಲಿ ಕೇಳಿ ಬರುವಂಥ ಸಂಗತಿ. ಮಾಧ್ಯಮಗಳಲ್ಲಿ ನಿರಂತರವಾಗಿ ವರದಿಯಾಗುತ್ತಿರುವ ಅಂಶವೂ ಹೌದು. ಅದಕ್ಕೆ ಹಲವು ವಾದಗಳು, ಕಾರಣಗಳೂ ಇವೆ. ಸಾಮಾನ್ಯವಾಗಿ ಆಹಾರ ಅರಸಿ ಆನೆಗಳು, ಹುಲಿಗಳು, ಚಿರತೆಗಳು ಜನವಸತಿ ಪ್ರದೇಶಕ್ಕೆ ಬರುತ್ತವೆ. ಕೆಲವೊಮ್ಮೆ ಮಾನವರನ್ನು ಕೊಂದು ಹಾಕುತ್ತವೆ. ಆದರೆ ಉತ್ತರ ಪ್ರದೇಶದ ಬಹರೈಚ್, ಹರ್ದಿ ಹಾಗೂ ಮಧ್ಯಪ್ರದೇಶದ ಕೆಲವು ಭಾಗಗಳಲ್ಲಿ ಮೇ ತಿಂಗಳಿನಿಂದ ಈಚೆಗೆ ತೋಳಗಳು ಮಾನವರ ಮೇಲೆ, ಅದರಲ್ಲೂ ಮಕ್ಕಳ ಮೇಲೆ ಹೆಚ್ಚಿನ ಸಂದರ್ಭಗಳಲ್ಲಿ ದಾಳಿ ಮಾಡುತ್ತಿರುವುದು, ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ತೋಳಗಳ ದಾಳಿಯಲ್ಲಿ ಮಕ್ಕಳೂ ಸೇರಿ ಈ ವರೆಗೆ 10 ಮಂದಿ ಬಲಿಯಾಗಿದ್ದಾರೆ.
ತೋಳಗಳ ದಾಳಿ ಹಿನ್ನೆಲೆಯಲ್ಲಿ ಬಹರೈಚ್ ಜಿಲ್ಲೆಯ ಸರಕಾರಿ ಶಾಲೆಯ ಶಿಕ್ಷಕರಿಗೆ ಹೆಚ್ಚುವರಿ ಹೊಣೆಯೂ ಉಂಟಾಗಿದೆ. ಮಕ್ಕಳು ಶಾಲೆಗೆ ಬರುತ್ತಿಲ್ಲ. ಹೀಗಾಗಿ ಶಾಲೆಯಲ್ಲಿ ಪಾಠ ಮಾಡುವುದರ ಜತೆಗೆ ಅವರ ಮನೆಗೆ ತೆರಳಿ ಹೆತ್ತವರನ್ನು ಮನವೊಲಿಸಿ ಮಕ್ಕಳನ್ನು ಶಾಲೆಗೆ ಕರೆತಂದು ಪುನಃ ಅವರನ್ನು ಮನೆಗೆ ಸುರಕ್ಷಿತವಾಗಿ ಕರೆತರುವ ಹೊಣೆಯೂ ಸೇರಿಕೊಂಡಿದೆ. ಶಿಕ್ಷಕರಿಗೆ ಹೊರೆ ಎನಿಸಿದರೂ, ಒಂದು ಹಂತದಲ್ಲಿ ಮಕ್ಕಳ ಹಾಜರಾತಿಯಲ್ಲಿ ಕುಸಿತ ಕಂಡದ್ದು ಏರಿಕೆಯ ಹಾದಿಯಲ್ಲಿ ಇದೆ ಎನ್ನುತ್ತಾರೆ.
Related Articles
ಉತ್ತರ ಭಾರತದ ದೊಡ್ಡ ರಾಜ್ಯಗಳಾದ ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಲದ ಕೆಲವು ಸ್ಥಳಗಳಲ್ಲಿ ತೋಳಗಳು ಮಾನವ ಪ್ರದೇಶದ ಮೇಲೆ ನುಗ್ಗಿ ದಾಳಿ ನಡೆಸುವ ಘಟನೆಗಳು ವರದಿಯಾಗುತ್ತವೆ.
Advertisement
ತೋಳಗಳ ದಾಳಿ ಇದೇ ಮೊದಲಲ್ಲ!ಮಾನವರ ಮೇಲೆ ತೋಳ ಮಾಡುತ್ತಿರುವುದು ಹೊಸದಲ್ಲ. ಬ್ರಿಟಿಷ್ ಆಡಳಿತದ ಅವಧಿಯಲ್ಲಿ ತೋಳಗಳು, ಹುಲಿಗಳು ದಾಳಿ ಮಾಡಿದ ಮಾನವರ ಮೇಲೆ ದಾಳಿ ನಡೆಸಿದ್ದ ಬಗ್ಗೆ ದಾಖಲೆಗಳು ಇವೆ. ಬ್ರಿಟಿಷ್ ಆಳ್ವಿಕೆಯ ಬಂಗಾಲ ಸಾಮ್ರಾಜ್ಯದಲ್ಲಿ ಇದ್ದ ಸೇನಾಧಿಕಾರಿ ಕ್ಯಾ|ಬಿ.ರೋಜರ್ಸ್ ದಾಖಲಿಸಿದ್ದ ಪ್ರಕಾರ 1886ರಲ್ಲಿ ತೋಳಗಳು 4,287 ಮಂದಿಯನ್ನು, ಹುಲಿಗಳು 4,218 ಮಂದಿಯನ್ನು ಕೊಂದಿದ್ದವು. ಉತ್ತರ ಭಾರತಕ್ಕೆ ಸಂಬಂಧಿಸಿದಂತೆ ಮತ್ತೂಬ್ಬ ಬ್ರಿಟಿಷ್ ಅಧಿಕಾರಿ ಸರ್ಜನ್ ಜನರಲ್ ಜೋಸೆಫ್ ಫೇಯರ್ ಎಂಬುವರು ತೋಳಗಳು 1,018 ಮಂದಿಯನ್ನು, ಹುಲಿಗಳು 828 ಮಂದಿಯನ್ನು ಕೊಂದಿದ್ದವು ಎಂಬ ಬಗ್ಗೆ 1875ರಲ್ಲಿ ಬರೆದಿದ್ದರು. ಪಂಜಾಬ್, ರಾಜಸ್ಥಾನ, ಗುಜರಾತ್‌ಗಳಲ್ಲಿಯೂ ಬ್ರಿಟಿಷ್ ಆಳ್ವಿಕೆಯ ಕಾಲದಲ್ಲಿ ದಾಳಿ ಸಾಮಾನ್ಯವಾಗಿತ್ತು ಎಂದು ಇತಿಹಾಸದಲ್ಲಿ ಉಲ್ಲೇಖಗೊಂಡಿವೆ. ಮಕ್ಕಳ ಮೇಲೆಯೇ ಹೆಚ್ಚು ದಾಳಿ ಏಕೆ?
ವಯಸ್ಕರ ಮೇಲೆ ತೋಳಗಳು ದಾಳಿ ಮಾಡುವುದು ಹೌದಾದರೂ, 16 ವರ್ಷ ವರೆಗಿನ ಮಕ್ಕಳ ಮೇಲೆಯೇ ಹೆಚ್ಚಿನ ಸಂದರ್ಭದಲ್ಲಿ ದಾಳಿ ನಡೆಸುತ್ತವೆ. ಉತ್ತರ ಪ್ರದೇಶದ ಬಹರೈಚ್, ಹಲ್ದಿ ಎಂಬಲ್ಲಿ ನಡೆದಿದ್ದ ದಾಳಿಗಳನ್ನು ಗಮನಿಸಿದಾಗ ಈ ಅಂಶ ವೇದ್ಯವಾಗುತ್ತದೆ. ಸಾಮಾನ್ಯವಾಗಿ ಮಕ್ಕಳಿಗೆ ಪ್ರಾಣಿಗಳು ಎಂದರೆ ಹೆದರಿಕೆ ಇರುತ್ತದೆ. ಅವರು ತಮ್ಮನ್ನು ರಕ್ಷಣೆ ಮಾಡುವ ಸಾಮರ್ಥ್ಯ ಹೊಂದಿರುವುದಿಲ್ಲ. ಸುಲಭವಾಗಿ ದಾಳಿಗೆ ತುತ್ತಾಗುತ್ತಾರೆ. ಹೀಗಾಗಿ ಮಕ್ಕಳ ಮೇಲೆ ಹೆಚ್ಚಿನ ದಾಳಿಗಳು ಸಂಭವಿಸುತ್ತವೆ ಎನ್ನುವುದು ಸ್ಥಳೀಯರ ವಾದ. 40 ವರ್ಷದ ಹಿಂದೆ ಪಾವಗಡದಲ್ಲೂ ದಾಳಿ?
ಸುಮಾರು 40 ವರ್ಷಗಳ ಹಿಂದೆ ಅಂದರೆ 1983ರಲ್ಲಿ ತುಮಕೂರು ಜಿಲ್ಲೆಯ ಪಾವಗಡದಲ್ಲೂ ಇದೇ ರೀತಿಯಲ್ಲಿ ಚಿಕ್ಕ ಹೆಣ್ಣು ಮಕ್ಕಳು ಕಣ್ಮರೆಯಾಗಿ, ಹೆಣವಾಗಿ ಪತ್ತೆಯಾಗುತ್ತಿದ್ದರು. ಶವ ಅಥವಾ ಮಕ್ಕಳ ದೇಹ ಸಿಕ್ಕ ಜಾಗದಲ್ಲಿ ತೋಳಗಳ ಹೆಜ್ಜೆ ಗುರುತುಗಳಿರುತ್ತಿದ್ದವು. ಬಳಿಕ ಪೊಲೀಸರು ಆ ಪ್ರದೇಶದಲ್ಲಿ ತೋಳಗಳನ್ನು ಬೇಟೆಯಾಡಲಾರಂಭಿಸಿದರು. ಆದರೂ ಮಕ್ಕಳು ಕಣ್ಮರೆಯಾಗುವುದು ನಿಲ್ಲಲಿಲ್ಲ. ಕೆಲವರು ತೋಳಗಳ ದಾಳಿ ಎಂದರೆ, ಮತ್ತೆ ಕೆಲವರು ಮಾಂತ್ರಿಕರು ಕೊಲೆ ಮಾಡುತ್ತಿದ್ದರು ಎನ್ನುತ್ತಾರೆ. ಆದರೆ ಈವರೆಗೂ ನಿಗೂಢತೆಯನ್ನು ಭೇದಿಸಲು ಸಾಧ್ಯವಾಗಿಲ್ಲ. ಭಾರತದಲ್ಲಿ ಕೇವಲ
3,100 ತೋಳಗಳು!
ನಮ್ಮ ದೇಶದಲ್ಲಿ ಇರುವ ತೋಳಗಳನ್ನು ಪರ್ಯಾಯ ದ್ವೀಪದಲ್ಲಿರುವ ತೋಳಗಳು ಮತ್ತು ಹಿಮಾಲಯ ಪರ್ವತದಲ್ಲಿರುವ ತೋಳಗಳು ಎಂದು ವರ್ಗೀಕರಿಸಲಾಗಿದೆ. 2022ರಲ್ಲಿನ ಅಧ್ಯಯನದ ಪ್ರಕಾರ ನಮ್ಮ ದೇಶದಲ್ಲಿ ಕೇವಲ 3,100 ಭಾರತೀಯ ಪರ್ಯಾಯ ದ್ವೀಪದ ತೋಳಗಳು ಇವೆ. 1975ರ ವನ್ಯಜೀವಿ ಸಂರಕ್ಷಣ ಕಾಯ್ದೆಯ ಅನ್ವಯ ಅವುಗಳನ್ನು ಅಳಿವಿನ ಅಂಚಿನಲ್ಲಿರುವ ಜೀವಿಗಳೆಂದು ಪ್ರಕಟಿಸಲಾ ಗಿದೆ. ಅವುಗಳು ಸಾಮಾನ್ಯವಾಗಿ ಮುಸ್ಸಂಜೆ ಯಿಂದ ಮುಂಜಾನೆಯ ವರೆಗೆ ಬೇಟೆಯಾ ಡುತ್ತವೆ. ಅವುಗಳು ಸಾಮಾನ್ಯವಾಗಿ ಅಸುನೀಗಿದ ಕಡವೆ, ಕಾಡುಕೋಣ, ಜಿಂಕೆಗಳ ಮಾಂಸಗಳನ್ನೇ ತಿನ್ನುತ್ತವೆ. ನಿಜವಾಗಲೂ ತೋಳಗಳು
ಮಾನವರನ್ನು ಕೊಲ್ಲುತ್ತವೆಯೇ?
ಈ ಪ್ರಶ್ನೆಗೆ ನಿಜಕ್ಕೂ ಉತ್ತರ ಇದುವರೆಗೆ ಸಿಕ್ಕಿಲ್ಲ. ತೋಳಗಳು ದಾಳಿ ಮಾಡಿ ಮಕ್ಕಳನ್ನು ಅಥವಾ ವಯಸ್ಕರನ್ನು ಗಾಯಗೊಳಿಸುವ ಘಟನೆಗಳು ನಡೆದಿವೆ. ಕೆಲವು ಪ್ರಕರಣಗಳಲ್ಲಿ ಜೀವ ಹಾನಿ ಉಂಟಾಗಿದೆ. ಅದಕ್ಕೆ ಹಲವು ಕಾರಣಗಳನ್ನು ಮುಂದಿಡಲಾಗುತ್ತದೆ. ಹೈಬ್ರಿಡ್ ತೋಳಗಳು ಅಂದರೆ, ಹೆಣ್ಣು ತೋಳಗಳು ಜನರು ಸಾಕುವ ನಾಯಿಗಳು ಜತೆಗೂಡಿ ಜನಿಸಿದ ತೋಳಗಳಿಗೆ ಮಾನವ ಹೆದರಿಕೆ ಇರುವುದಿಲ್ಲ. ಅವುಗಳು ನೇರವಾಗಿ ಜನವಸತಿ ಪ್ರದೇಶಕ್ಕೆ ನುಗ್ಗಿ, ದಾಂಧಲೆ ಎಬ್ಬಿಸುತ್ತವೆ ಎನ್ನುತ್ತಾರೆ ತೋಳಗಳ ಜೀವನ ಕ್ರಮ ಅಧ್ಯಯನ ಮಾಡಿದ ಯಾದವೇಂದ್ರದೇವ ವಿಕ್ರಮಸಿಂಗ್ ಝಾಲ. ಜತೆಗೆ ಈ ಪ್ರದೇಶದಲ್ಲಿ ಹರಿಯುವ ಘಾಗ್ರಾ ನದಿಯ ಪ್ರವಾಹ ತೋಳಗಳು ವಾಸಿಸುವ ಸ್ಥಳಗಳು ಜಲಾವೃತಗೊಂಡಾದ ಅವುಗಳು ಕಡವೆ, ಕಾಡುಕೋಣ, ಜಿಂಕೆಗಳ ಮಾಂಸ ಸಿಗದೇ ಇದ್ದಾಗ ಜನವಸತಿ ಪ್ರದೇಶಗಳ ಮೇಲೆ ದಾಳಿ ಮಾಡುತ್ತವೆ. ವನ್ಯಜೀವಿ ತಜ್ಞ ಮಾಯಂಕ್ ಶ್ರೀವಾಸ್ತವ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿ, ತೋಳಗಳ ಆಹಾರ ವೃದ್ಧಿಯಾಗುವ ವರೆಗೆ ಅವುಗಳು ಜನವಸತಿ ಪ್ರದೇಶದ ಮೇಲೆ ನುಗ್ಗುತ್ತಲೇ ಇರುತ್ತವೆ ಎನ್ನುತ್ತಾರೆ. 1993 ಎಪ್ರಿಲ್‌ನಿಂದ 1995ರ ಎಪ್ರಿಲ್ ನಡುವೆ ಅವಿಭಜಿತ ಬಿಹಾರದ ಪಶ್ಚಿಮ ಹಜಾರಿಭಾಗ್, ಕೊಡೆರ್ಮಾ, ಲಾಟೆಹಾರ್ ಎಂಬಲ್ಲಿ 60 ಮಕ್ಕಳ ಸಾವಿಗೆ ಸಾಕುವ ನಾಯಿ ಮತ್ತು ತೋಳಗಳ ಸಂಯೋಜನೆಯಿಂದ ಜನಿಸಿದ ತೋಳಗಳು ಕಾರ ಎಂದು ಸಂಶೋಧಕ ಕೆ.ಎಸ್.ರಾಜಪುರೋಹಿತ್ ಅವರ “ಚೈಲ್ಡ್ ಲಿಫ್ಟಿಂಗ್: ವೂಲ್ವ್ಸ್ ಇನ್ ಹಜಾರಿಭಾಗ್’ ಎಂದು 1999ರಲ್ಲಿ ಮಂಡಿಸಿದ ಅಧ್ಯಯನದಿಂದ ಗೊತ್ತಾಗಿತ್ತು. ತೋಳ ಆವಾಸಸ್ಥಾನಕ್ಕೆ ಮಾನವ
ಪ್ರವೇಶವೇ ದಾಳಿಗೆ ಕಾರಣ: ತಜ್ಞ
ಉತ್ತರ ಪ್ರದೇಶದ ಬಹರೈಚ್, ಹಲ್ದಿ ಪ್ರದೇಶದಲ್ಲಿ ತೋಳಗಳು ದಾಳಿ ನಡೆಸುವ ವಿಚಾರ ಅತ್ಯಂತ ಕಳವಳಕಾರಿಯಾಗಿದೆ. ತೋಳಗಳು ವಾಸಿಸುವ ಸ್ಥಳಗಳಿಗೆ ಮಾನವರು ಪ್ರವೇಶ ಆಗಿರುವುದೇ ಇದಕ್ಕೆ ಕಾರಣ. ಅರಣ್ಯ ಪ್ರದೇಶಕ್ಕೆ ಮತ್ತು ಜನವಸತಿ ಪ್ರದೇಶದ ನಡುವೆ ಅಂತರ ಇರಬೇಕು (ಬಫರ್ ಝೋನ್). ಹೀಗೆ ಇದ್ದಾಗ ವನ್ಯಜೀವಿಗಳು ಮತ್ತು ಮಾನವರ ನಡುವೆ ಸಂಘರ್ಷಗಳು ಉಂಟಾಗುವುದಿಲ್ಲ. ಇತ್ತೀಚಿನ ವರ್ಷಗಳಲ್ಲಿ ಇಂಥ ಬಫರ್ ಝೋನ್ ಕಡಿಮೆಯಾಗುತ್ತಿದೆ. ಇನ್ನು ತೋಳಗಳು ಮತ್ತು ಸಾಕುವ ನಾಯಿಗಳ ಮಿಲನದಿಂದ ಹುಟ್ಟುವ ಹೈಬ್ರಿಡ್ ತಳಿ ಜನವಸತಿ ಪ್ರದೇಶಕ್ಕೆ ನುಗ್ಗಿ ದಾಳಿ ಮಾಡುತ್ತದೆ ಎಂದರೆ ನಂಬಲು ಕಷ್ಟ. ಹಾಗಿರುತ್ತಿದ್ದರೆ, ದೇಶದಲ್ಲಿ ತೋಳಗಳ ಸಂಖ್ಯೆ ಹೆಚ್ಚಾಗುತ್ತಿತ್ತು ಎನ್ನುವುದು ತೋಳಗಳ ಜೀವನ ಕ್ರಮದ ಬಗ್ಗೆ ಅಧ್ಯಯನ ಮಾಡಿದ ತಜ್ಞ ಇಂದ್ರಜಿತ್ ಘೋರ್ಷಡೆ ಅಭಿಪ್ರಾಯವಾಗಿದೆ. -ಸದಾಶಿವ .ಕೆ.