Advertisement

ಭೀಕರ ಬರ-ಬಿರು ಬಿಸಿಲಿಗೆ ತತ್ತರಿಸಿವೆ ವನ್ಯಜೀವಿ

01:54 PM May 19, 2019 | Suhan S |

ಸಿರುಗುಪ್ಪ: ಭೀಕರ ಬರ ಮತ್ತು ಬಿರುಬಿಸಿಲಿಗೆ ತಾಲೂಕಿನಲ್ಲಿರುವ ಜಿಂಕೆಗಳು ತತ್ತರಿಸಿ ಹೋಗಿವೆ.

Advertisement

ತಾಲೂಕಿನಲ್ಲಿ ಜೀವನಾಡಿಯಾದ ತುಂಗಭದ್ರಾ ಮತ್ತು ವೇದಾವತಿ ಹಗರಿ ನದಿ, ಗರ್ಜಿಹಳ್ಳದಲ್ಲಿ ಸದಾ ನೀರು ಹರಿಯುತ್ತಿದ್ದರಿಂದ ರೈತರ ಜಿಮೀನುಗಳಲ್ಲಿ ಹಸಿರು ಕಂಗೊಳಿಸುತ್ತಿದ್ದ ಕಾರಣ ಜಿಂಕೆಗಳಿಗೆ ತಿನ್ನಲು ಹುಲ್ಲು ಮತ್ತು ಕುಡಿಯಲು ನೀರು ಯಥೇಚ್ಚವಾಗಿ ಸಿಗುತ್ತಿತ್ತು. ಆದರೆ ಕಳೆದ 4 ವರ್ಷಗಳಿಂದ ಸಮರ್ಪಕವಾಗಿ ಮಳೆಯಾಗದೆ ತುಂಗಭದ್ರಾ ಮತ್ತು ವೇದಾವತಿ ಹಗರಿ ನದಿಗಳು ಬೇಸಿಗೆ ಬರುವ ಮುನ್ನವೇ ಬತ್ತಿ ಹೋಗುತ್ತಿರುವುದರಿಂದ ರೈತರು ತಮ್ಮ ಜಮೀನುಗಳಲ್ಲಿ ಯಾವುದೇ ಬೆಳೆ ಬೆಳೆಯಲಾಗದೆ ಕೈಚೆಲ್ಲಿ ಕುಳಿತಿದ್ದರಿಂದ ಜಿಂಕೆಗಳಿಗೆ ಮೇವು ಮತ್ತು ನೀರಿನ ಕೊರತೆ ಉಂಟಾಗಿದೆ.

ತಾಲೂಕಿನ ಹಚ್ಚೊಳ್ಳಿ ಹೋಬಳಿಯಲ್ಲಿರುವ ನಾಡಂಗ ಅಲಗನೂರು, ಬೀರಳ್ಳಿ, ವತ್ತುಮುರುಣಿ, ಭೈರಗಾಮದಿನ್ನಿ, ಬಿ.ಎಂ.ಸೂಗೂರು, ಕುರುವಳ್ಳಿ, ಅಗಸನೂರು, ಬಸರಳ್ಳಿ, ರಾವಿಹಾಳ್‌, ಮಿಟ್ಟೆಸೂಗೂರು, ಬೊಮ್ಮಲಾಪುರ, ಹಾಳುಮುರುಣಿ, ವೆಂಕಟಾಪುರ, ನಾಗರಹಾಳು, ಕುಡುದರಹಾಳು, ನಾಗಲಾಪುರ, ಚಿಕ್ಕಬಳ್ಳಾರಿ ಮುಂತಾದ ಗ್ರಾಮಗಳ ವ್ಯಾಪ್ತಿಯಲ್ಲಿ ಕಂಡು ಬರುತ್ತಿರುವ ಸಾವಿರಾರು ಜಿಂಕೆಗಳು ಬರದ ಭೀಕರಕ್ಕೆ ತತ್ತರಿಸಿ ಹೋಗಿವೆ.

ಈ ಭಾಗದಲ್ಲಿ ರೈತರು ನಿರ್ಮಿಸಿರುವ ಏಳು ನೂರಕ್ಕೂ ಹೆಚ್ಚು ಕೃಷಿ ಹೊಂಡಗಳೇ ಜಿಂಕೆಗಳಿಗೆ ಕುಡಿಯುವ ನೀರೊದಗಿಸುತ್ತಿದ್ದವು. ಆದರೆ ಈ ಬಾರಿ ಮಳೆ ಸಮರ್ಪಕವಾಗಿ ಬಾರದ ಕಾರಣ ಅಂತರ್ಜಲ ಮಟ್ಟ ಕುಸಿದಿದೆ. ಕುಡಿಯುವ ನೀರಿಗಾಗಿ ಕೃಷಿ ಹೊಂಡಗಳ ಬಳಿ ಬರುತ್ತಿದ್ದ ಸಾವಿರಾರು ಜಿಂಕೆಗಳು ಈಗ ಸೀಮಾಂಧ್ರದ ತುಂಗಭದ್ರಾ ಎಲ್.ಎಲ್.ಸಿ ಕಾಲುವೆಯತ್ತ ನೀರು ಕುಡಿಯಲು ತೆರಳುತ್ತಿವೆ.

ಮಾ. 30ರ ನಂತರ ಎಲ್ಎಲ್ಸಿ ಕಾಲುವೆಯಲ್ಲಿಯೂ ನೀರು ಸ್ಥಗಿತಗೊಳ್ಳುವುದರಿಂದ ಜಿಂಕೆಗಳು ನೀರಿಗಾಗಿ ಮತ್ತಷ್ಟು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಇನ್ನಾದರೂ ಅರಣ್ಯಾಧಿಕಾರಿಗಳು ಜಿಂಕೆಗಳಿಗೆ ಮೇವು ಮತ್ತು ನೀರೊದಗಿಸುವ ಕೆಲಸ ಮಾಡಬೇಕಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next