Advertisement

ಕೈ ಟಿಕೆಟ್‌ಗಾಗಿ ನಾಯಕರ ಪತ್ನಿ,ಪುತ್ರಿಯರ ದುಂಬಾಲು

12:30 AM Feb 26, 2019 | Team Udayavani |

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌- ಜೆಡಿಎಸ್‌ ಮೈತ್ರಿ ಪಕ್ಷಗಳ ಸೀಟು ಹೊಂದಾಣಿಕೆ ಮಾತುಕತೆ ನಡೆಯುತ್ತಿರುವ ವೇಳೆಯಲ್ಲೇ ಕೆಲ ಕಾಂಗ್ರೆಸ್‌ ನಾಯಕರ ಪತ್ನಿ ಹಾಗೂ ಪುತ್ರಿಯರು ಟಿಕೆಟ್‌ಗಾಗಿ ಲಾಬಿ ನಡೆಸುತ್ತಿದ್ದಾರೆ.

Advertisement

ಟಿಕೆಟ್‌ ಆಕಾಂಕ್ಷಿಗಳು ಸೋಮವಾರದವರೆಗೂ ಅರ್ಜಿ ಸಲ್ಲಿಸಲು ರಾಜ್ಯ ಕಾಂಗ್ರೆಸ್‌ನ ಮಹಿಳಾ ಘಟಕ ಅವಕಾಶ ಕಲ್ಪಿಸಿದೆ. ಈಗಾಗಲೇ ಆರು ಕ್ಷೇತ್ರಗಳಲ್ಲಿ ಮಹಿಳೆಯರು ಟಿಕೆಟ್‌ಗೆ ಬೇಡಿಕೆ ಇಟ್ಟಿದ್ದಾರೆ. ಈ ಬಾರಿಯೂ  ಪಕ್ಷದ ನಾಯಕರ ಪತ್ನಿ,  ಮಗಳು, ಮೊಮ್ಮಗಳು ಆಗಿರುವವರೇ ಟಿಕೆಟ್‌ಗೆ ಬೇಡಿಕೆ ಇಟ್ಟಿರುವುದು ಕಂಡು ಬಂದಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ ಪತ್ನಿ ಗೀತಾ ಈಶ್ವರ್‌ ಖಂಡ್ರೆ ಅವರು ಬೀದರ್‌ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿದ್ದು, ಪಕ್ಷದ ನಾಯಕರು ಎದುರು ಟಿಕೆಟ್‌ಗೆ ಬೇಡಿಕೆ ಇಟ್ಟಿದ್ದಾರೆ.
 
ಬಾಗಲಕೋಟೆಯಿಂದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಪತ್ನಿ ಜಿ.ಪಂ. ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕಾಗಿಯೇ ಜಿ.ಪಂ.ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ, ಟಿಕೆಟ್‌ಗೆ ಬೇಡಿಕೆ ಇಟ್ಟಿದ್ದಾರೆ. ಅದೇ ಕ್ಷೇತ್ರದಲ್ಲಿ ಮಾಜಿ ಸಚಿವ ಎಚ್‌.ವೈ ಮೇಟಿ ಪುತ್ರಿ ಬಾಯಕ್ಕ ಮೇಟಿ ಅವರೂ ಟಿಕೆಟ್‌ ಆಕಾಂಕ್ಷಿ.  ಮಾಜಿ ಸಚಿವ ಬೇಗಾನೆ ರಾಮಯ್ಯ ಮಗಳು ಆರತಿ ಕೃಷ್ಣ  ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಟಿಕೆಟ್‌ ಆಕಾಂಕ್ಷಿ. ಮಾಜಿ ಸಿಎಂ ದಿ.ಕೆ.ಸಿ.ರೆಡ್ಡಿ ಮೊಮ್ಮಗಳು ವಸಂತ ಕವಿತಾ ರೆಡ್ಡಿ ಹಾಗೂ ಕೆಪಿಸಿಸಿ ಕಾರ್ಯದರ್ಶಿ ರೂಪಾ ಬೆಂಗಳೂರು ಉತ್ತರ ಕ್ಷೇತ್ರದಿಂದ, ಮಂಗಳೂರಿನಿಂದ ಮಮತಾ ಗಟ್ಟಿ, ವಿಜಯಪುರದಿಂದ ಕೆಪಿಸಿಸಿ ಕಾರ್ಯದರ್ಶಿ ಕಾಂತಾ ನಾಯ್ಕ ಟಿಕೆಟ್‌ಗಾಗಿ ಬೇಡಿಕೆ ಇಟ್ಟಿದ್ದಾರೆ. 

ಜೆಡಿಎಸ್‌ ಜತೆಗಿನ ಸೀಟು ಹೊಂದಾಣಿಕೆ ಹಾಗೂ ಗೆಲ್ಲುವ ಸಾಮರ್ಥ್ಯ ಗಮನದಲ್ಲಿಟ್ಟುಕೊಂಡು ಒಂದೆರಡು ಕಡೆ ಮಹಿಳೆಯರಿಗೆ ಟಿಕೆಟ್‌ ನೀಡುವ ಸಾಧ್ಯತೆ ಇದೆ. ಅಂಬರೀಶ್‌ ಪತ್ನಿ ಸುಮಲತಾ ಕೂಡ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿರುವುದರಿಂದ ಒಂದು ವೇಳೆ ಸೀಟು ಹೊಂದಾಣಿಕೆ ಸಂದರ್ಭದಲ್ಲಿ ಮಂಡ್ಯ ಕ್ಷೇತ್ರ ಕಾಂಗ್ರೆಸ್‌ಗೆ ದೊರೆತರೆ ಅವರ ಹೊರತಾಗಿ ಇನ್ನೊಂದು ಮಹಿಳಾ ಅಭ್ಯರ್ಥಿಗೆ ಟಿಕೆಟ್‌ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. 

ಕಾರ್ಯದರ್ಶಿಗಳ ಪಟ್ಟಿಯಲ್ಲಿ ಮಹಿಳೆಯರಿಲ್ಲ?: ಈಗಾಗಲೇ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕಾರ್ಯದರ್ಶಿಗಳು ಹೈಕಮಾಂಡ್‌ಗೆ ನೀಡಿರುವ ಪಟ್ಟಿಯಲ್ಲಿ ಮಹಿಳಾ ಆಕಾಂಕ್ಷಿಗಳ ಹೆಸರು ಪ್ರಸ್ತಾಪವಾಗಿಲ್ಲ ಎನ್ನಲಾಗಿದೆ. ಆ ಕಾರಣಕ್ಕಾಗಿಯೇ ಮಹಿಳಾ ಆಕಾಂಕ್ಷಿಗಳ ಪಟ್ಟಿಯನ್ನು ಪ್ರತ್ಯೇಕವಾಗಿ ನೀಡುವಂತೆ ಮಹಿಳಾ ಘಟಕದ ಅಧ್ಯಕ್ಷೆ ಡಾ. ಪುಷ್ಪಾ ಅಮರನಾಥ್‌ ಅವರಿಗೆ ವಹಿಸಲಾಗಿದೆ ಎಂದು ತಿಳಿದು ಬಂದಿದೆ.  

ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಪತ್ನಿ ಟಬು ದಿನೇಶ್‌ ಗುಂಡೂರಾವ್‌ ಹಾಗೂ ಗೃಹ ಸಚಿವ ಎಂ.ಬಿ. ಪಾಟೀಲ್‌ ಪತ್ನಿ ಆಶಾ ಪಾಟೀಲ್‌  ಹೆಸರುಗಳೂ ಕೇಳಿ ಬಂದಿದ್ದವು. ಆದರೆ, ಅವರಿಬ್ಬರೂ ಸದ್ಯಕ್ಕೆ ಸಕ್ರಿಯ ರಾಜಕಾರಣದಿಂದ ಅಂತರ ಕಾಯ್ದುಕೊಳ್ಳಲು ನಿರ್ಧರಿಸಿದ್ದಾರೆಂದು ಹೇಳಲಾಗುತ್ತಿದೆ.  

Advertisement
Advertisement

Udayavani is now on Telegram. Click here to join our channel and stay updated with the latest news.

Next