Advertisement

ಮಗುವಿಗೆ ಹಾಲುಣಿಸಲ್ಲ ಎಂದ‌ ಪತ್ನಿಯನ್ನೇ ಕೊಂದ

06:41 AM Jan 15, 2019 | Team Udayavani |

ಬೆಂಗಳೂರು: ತಾಯಿಯನ್ನು ಕೊಂದ ತಂದೆಯ ಕ್ರೌರ್ಯವನ್ನು ಐದು ವರ್ಷದ ಮಗಳೇ ಬಹಿರಂಗ ಪಡಿಸಿರುವ ಘಟನೆ ರಾಮಮೂರ್ತಿನಗರದಲ್ಲಿ ನಡೆದಿದೆ. ಒಂದು ವರ್ಷದ ಮಗುವಿಗೆ ಹಾಲುಕುಡಿಸಲು ಮಹಿಳೆ ನಿರಾಕರಿಸಿದ್ದೇ ಕೊಲೆಗೆ ಕಾರಣ ಎಂಬುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ.

Advertisement

ಈ ಸಂಬಂಧ ಹೊರಮಾವು ನಿವಾಸಿ ವಿನಯ್‌ಕುಮಾರ್‌ (31) ಎಂಬಾತನನ್ನು ರಾಮಮೂರ್ತಿನಗರ ಪೊಲೀಸರು ಬಂಧಿಸಿದ್ದಾರೆ. ಆರೋಪಿಯು ಪತ್ನಿ ಗೀತಾದೇವಿಯನ್ನು ಜ.13ರಂದು ನಸುಕಿನ 3 ಗಂಟೆಯಲ್ಲಿ ಹತ್ಯೆಗೈದಿದ್ದಾನೆ. ನಂತರ, ಅಪರಿಚಿತರು ಕೊಲೆ ಮಾಡಿದ್ದಾರೆ ಎಂದು ತನ್ನ ಮಗಳು ಹಾಗೂ ಸ್ಥಳೀಯರ ಮುಂದೆ ಸುಳ್ಳು ಕಥೆ ಹೆಣೆದಿದ್ದಾನೆ.

ಅಷ್ಟೇ ಅಲ್ಲ, “ಯಾರೋ ಅಪರಿಚಿತ ಮುಸುಕುಧಾರಿಗಳು ಬಂದು ಅಮ್ಮನನ್ನು ಕೊಂದಿದ್ದಾರೆ. ನಾನು ಈಗ ಹೇಳಿಕೊಟ್ಟಂತೆಯೇ ಪೊಲೀಸರ ಮುಂದೆ ಹೇಳಬೇಕು,’ ಎಂದು ಮಗಳ ತಲೆಗೆ ತುಂಬಿದ್ದಾನೆ. ಆದರೆ, ಆತ ಮಗಳಿಗೆ ಹೇಳಿದ ಕಟ್ಟುಕಥೆಯೇ ಆತನಿಗೆ ಉರುಳಾಗಿ ಪರಿಣಮಿಸಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಈತನ ವರ್ತನೆ ಹಾಗೂ ಪುತ್ರಿಯ ಹೇಳಿಕೆಯಿಂದ ಅನುಮಾನಗೊಂಡು ಆರೋಪಿಯನ್ನು ವಶಕ್ಕೆ  ಪಡೆದು ವಿಚಾರಣೆ ನಡೆಸಿದಾಗ ಸತ್ಯಾಂಶ ಬೆಳಕಿಗೆ ಬಂದಿದೆ.

ವೃತ್ತಿಯಲ್ಲಿ ಭದ್ರತಾ ಸಿಬ್ಬಂದಿ: ಬಿಹಾರದ ಬಾಲಟೋಲ ಗ್ರಾಮದವನಾದ ಆರೋಪಿ ವಿನಯ್‌ಕುಮಾರ್‌, ಆರು ವರ್ಷಗಳ ಹಿಂದೆ ಮುಜಾಫ‌ರ್‌ಪುರ ಜಿಲ್ಲೆಯ ಕಲ್ಯಾಣಪುರ ಹರೋನಾ ಗ್ರಾಮದ ಗೀತಾದೇವಿಯನ್ನು ಮದುವೆಯಾಗಿದ್ದ. ದಂಪತಿಗೆ ಐದು ವರ್ಷ ಹೆಣ್ಣು ಮತ್ತು ಒಂದು ವರ್ಷದ ಗಂಡು ಮಗು ಇದೆ.

ಎಂಟು ತಿಂಗಳ ಹಿಂದಷ್ಟೇ ಆರೋಪಿ ಕುಟುಂಬ ಸಮೇತ ರಾಮಮೂರ್ತಿನಗರದ ಹೊರಮಾವು ಮುಖ್ಯರಸ್ತೆಯಲ್ಲಿರುವ ಪ್ರರಾಣ ಟ್ರಾ ಕ್ಯೂಲ್‌ ಅಪಾರ್ಟ್‌ಮೆಂಟ್‌ನಲ್ಲಿ ಭದ್ರತಾ ಸಿಬ್ಬಂದಿಯಾಗಿದ್ದ. ಪತ್ನಿ ಗೀತಾದೇವಿ, ಅಪಾರ್ಟ್‌ಮೆಂಟ್‌ನ ಫ್ಲಾಟ್‌ ಒಂದರಲ್ಲಿ ಮನೆಗೆಲಸ ಮಾಡುತ್ತಿದ್ದರು. ಹೀಗಾಗಿ ಅಪಾರ್ಟ್‌ಮೆಂಟ್‌ನ ನೆಲಮಹಡಿಯಲ್ಲೇ ದಂಪತಿ ವಾಸವಿದ್ದರು.

Advertisement

ಕೆಲ ತಿಂಗಳಿಂದ ವಿನಯ್‌ಕುಮಾರ್‌ ಮನೆಗೆ ದಿನಸಿ ವಸ್ತುಗಳನ್ನು ತರದೇ ನಿತ್ಯ ಪತ್ನಿ ಜತೆ ಗಲಾಟೆ ಮಾಡುತ್ತಿದ್ದ. ಅಲ್ಲದೆ, ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿದ್ದ. ಈ ವಿಚಾರವನ್ನು ಗೀತಾದೇವಿ ತನ್ನ ಸಹೋದರ, ವಿಜಯನಗರದಲ್ಲಿ ವಾಸವಿರುವ ಗುಡ್ಡುಭಾಗತ್‌ ಬಳಿ ಹೇಳಿಕೊಂಡಿದ್ದರು. ಬಳಿಕ ಹಿರಿಯರು ದಂಪತಿಗೆ ಬುದ್ಧಿವಾದ ಹೇಳಿ ರಾಜಿ ಮಾಡಿಸಿದ್ದರು ಎಂದು ಪೊಲೀಸರು ಹೇಳಿದರು.

ಹಾಲು ಕುಡಿಸಲ್ಲ ಅಂದಿದ್ದಕ್ಕೆ ಕೊಲೆ: ವಿನಯ್‌ಕುಮಾರ್‌ ಪ್ರತಿ ತಿಂಗಳು ಬಿಹಾರದಲ್ಲಿರುವ ತನ್ನ ಪೋಷಕರಿಗೆ ಹಣ ಕಳುಹಿಸುತ್ತಿದ್ದ. ಇದೇ ವಿಚಾರಕ್ಕೆ ದಂಪತಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಜ.12ರಂದು ರಾತ್ರಿ ಕೂಡ ಹಣ ಕಳಿಸುವ ವಿಚಾರವಾಗಿ ದಂಪತಿ ನಡುವೆ ವಾಗ್ವಾದ ನಡೆದಿದೆ.

ಕೆಲ ಹೊತ್ತಿನ ಬಳಿಕ ದಂಪತಿ ಊಟ ಮುಗಿಸಿ ಮಲಗಿದ್ದಾರೆ. ತಡರಾತ್ರಿ ಎಚ್ಚರಗೊಂಡ ಒಂದು ವರ್ಷದ ಗಂಡು ಮಗು ಹಸಿವಿನಿಂದ ಅಳಲು ಆರಂಭಿಸಿದೆ. ಅಳು ಕೇಳಿ ಎಚ್ಚರಗೊಂಡ ಆರೋಪಿ ವಿನಯ್‌, ಮಗುವಿಗೆ ಹಾಲುಣಿಸುವಂತೆ ಪತ್ನಿಗೆ ಹಲವು ಬಾರಿ ಹೇಳಿದ್ದಾನೆ. ಆದರೆ, ಹಾಲುಣಿಸಲು ನಿರಾಕರಿಸಿದ ಗೀತಾದೇವಿ, “ಯಾವುದೇ ಕಾರಣಕ್ಕೂ ಹಾಲು ಕುಡಿಸುವುದಿಲ್ಲ. ಬೇಕಿದ್ದರೆ ನೀನೇ ಕುಡಿಸು’ ಎಂದು ಉತ್ತರಿಸಿದ್ದಾರೆ.

ಪತ್ನಿ ಮಾತಿನಿಂದ ಕೋಪಗೊಂಡ ಆರೋಪಿ, ಆಕೆಯ ಕುತ್ತಿಗೆ ಹಿಸುಕಿ ಕೊಂದಿದ್ದಾನೆ. ಬಳಿಕ ಜ.13ರ ನಸುಕಿನ 3 ಗಂಟೆ ಸುಮಾರಿಗೆ ಯಾರಿಗೂ ಅನುಮಾನ ಬಾರದಂತೆ ಅಪಾರ್ಟ್‌ಮೆಂಟ್‌ನ ಪಾರ್ಕಿಂಗ್‌ ಸ್ಥಳಕ್ಕೆ ಶವವನ್ನು ಎಳೆದೊಯ್ದು, ಕುತ್ತಿಗೆ ಹಾಗೂ ತಲೆ ಮೇಲೆ ಕಲ್ಲು ಎತ್ತಿ ಹಾಕಿದ್ದಾನೆ. ಸುಮಾರು ಎರಡು ಗಂಟೆಗಳ ಕಾಲ ಶವದ ಬಳಿಯೇ ಕುಳಿತಿದ್ದಾನೆ.

ಮುಂಜಾನೆ 5 ಗಂಟೆ ಸುಮಾರಿಗೆ ಪತ್ನಿಯ ಸಹೋದರ ಗುಡ್ಡುಭಾಗತ್‌ ಹಾಗೂ ಪೊಲೀಸರಿಗೆ ಕರೆ ಮಾಡಿ, “ಇಬ್ಬರು ಅಪರಿಚಿತ ಮುಸುಕುಧಾರಿಗಳು ಗೀತಾಳನ್ನು ಕೊಂದಿದ್ದಾರೆ,’ ಎಂದು ಮಾಹಿತಿ ನೀಡಿದ್ದಾನೆ. ಈ ಸಂಬಂಧ ಗುಡ್ಡುಭಾಗತ್‌ ಆರೋಪಿ ಮೇಲೆ ಅನುಮಾನ ವ್ಯಕ್ತಪಡಿಸಿ ದೂರು ನೀಡಿದ್ದರು ಎಂದು ರಾಮಮೂರ್ತಿನಗರ ಪೊಲೀಸರು ಹೇಳಿದರು.

ಮಗಳಿಗೆ ಕಥೆ ಹೇಳಿ ಸಿಕ್ಕಿ ಬಿದ್ದ!: ಪತ್ನಿಯನ್ನು ಕೊಂದ ಬಳಿಕ ಮನೆಗೆ ಬಂದ ಆರೋಪಿ, ತನ್ನ ಐದು ವರ್ಷದ ಮಗಳಿಗೆ, “ಯಾರೋ ಇಬ್ಬರು ಮುಸುಕುಧಾರಿಗಳು ಬಂದು ನನ್ನ ಮೇಲೆ ಹಲ್ಲೆ ನಡೆಸಿ, ನಿನ್ನ ತಾಯಿಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾರೆ. ಈ ವಿಚಾರದ ಬಗ್ಗೆ ಯಾರೇ ಕೇಳಿದರೂ, ನಾನೀಗ ಹೇಳಿಕೊಟ್ಟಂತೆಯೇ ಹೇಳಬೇಕು’ ಎಂದು ಹೇಳಿಕೊಟ್ಟಿದ್ದ.

ಆದರೆ, ಸ್ಥಳಕ್ಕೆ ಬಂದ ಪೊಲೀಸರು ಕಾನೂನು ಪ್ರಕ್ರಿಯೆ ಮುಗಿಸಿ, ಐದು ವರ್ಷದ ಪುತ್ರಿಯನ್ನು ಪ್ರತ್ಯೇಕವಾಗಿ ಕರೆದೊಯ್ದು ಘಟನೆ ಬಗ್ಗೆ ಕೇಳಿದ್ದಾರೆ. ಆಗ ಮಗು, ಯಾರೋ ಇಬ್ಬರು ಬಂದು ಅಮ್ಮನನ್ನು ಹೊಡೆದು ಹೋದರು ಎಂದಷ್ಟೇ ಹೇಳಿದೆ. ಅನುಮಾನಗೊಂಡ ಪೊಲೀಸರು, ಹೀಗೆ ಹೇಳುವಂತೆ ಯಾರು ಹೇಳಿಕೊಟ್ಟರು ಎಂದು ಪ್ರಶ್ನಿಸಿದಾಗ, “ಪಪ್ಪಾ ಹೇಳಿಕೊಟ್ಟರು’ ಎಂದು ಮಗು ಅಳಲು ಆರಂಭಿಸಿದೆ.

ಅಲ್ಲದೆ, ಭದ್ರತಾ ಸಿಬ್ಬಂದಿ ಇದ್ದರೂ ಅಪಾರ್ಟ್‌ಮೆಂಟ್‌ ಒಳಗೆ ಅಪರಿಚಿತರು ಹೇಗೆ ಬರಲು ಸಾಧ್ಯ ಎಂದು ಅನುಮಾನಗೊಂಡ ಪೊಲೀಸರು, ಆರೋಪಿಯನ್ನು ವಶಕ್ಕೆ ಪಡೆದು ತೀವ್ರ ರೀತಿಯಲ್ಲಿ ವಿಚಾರಣೆ ನಡೆಸಿದಾಗ ಸತ್ಯಾಂಶ ಬಾಯಿಬಿಟ್ಟಿದ್ದಾನೆ.

ಅಕ್ರಮ ಸಂಬಂಧ ಹೊಂದಿದ್ದ ಆರೋಪಿ?: ಆರೋಪಿ ವಿನಯ್‌ಕುಮಾರ್‌, ಪರಸ್ತ್ರೀ ಸಹವಾಸ ಮಾಡಿರುವುದಾಗಿ ಗೀತಾದೇವಿ ಅಪಾರ್ಟ್‌ಮೆಂಟ್‌ನ ಕೆಲವರ ಬಳಿ ಹೇಳಿಕೊಂಡಿದ್ದರು ಎಂದು ಹೇಳಲಾಗಿದೆ. ಇತ್ತೀಚೆಗೆ ಪತಿ ನನ್ನ ಬಗ್ಗೆ ಹೆಚ್ಚು ಗಮನ ಹರಿಸುತ್ತಿಲ್ಲ. ಮನೆಗೆ ದಿನಸಿ ವಸ್ತುಗಳನ್ನು ತರುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದರು ಎಂದು ಸ್ಥಳೀಯರು ಹೇಳುತ್ತಿದ್ದಾರೆ. ತನಿಖೆ ಬಳಿಕ ಸತ್ಯಾಂಶ ತಿಳಿಯಲಿದೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next