Advertisement

“ಅವರು ಊರಿಗೆ, ನಾನು ಸಂಸಾರಕ್ಕೆ ಹೆಗಲು ಕೊಟ್ಟೆವು’

07:30 AM Apr 04, 2018 | |

ಕುಂದಾಪುರ: ನಮ್ಮವರ ಯಾವ ಕಾರ್ಯವೂ ಸಾಂಸಾರಿಕ ಜೀವನಕ್ಕೆ ಅಡ್ಡಿಯಾಗಿಲ್ಲ. ಅವರು ಶಾಸಕರಾಗಿ ಊರಿನ ಅಭಿವೃದ್ಧಿಗೆ ಹೆಗಲು ಕೊಟ್ಟರೆ, ಅವರ ಮಡದಿಯಾಗಿ ನಾನು ಮಕ್ಕಳ, ಕುಟುಂಬದ ಜವಾಬ್ದಾರಿಯನ್ನು ನೋಡಿಕೊಳ್ಳುತ್ತಿದ್ದೆ. ಅವರು ಜನಪ್ರತಿನಿಧಿಯಾಗಿ ಜನರ ಸೇವೆ ಮಾಡಿರುವ ಬಗ್ಗೆ ತುಂಬಾ ಖುಷಿಯೂ ಇದೆ; ಹೆಮ್ಮೆಯೂ ಇದೆ. 

Advertisement

ಇದು ಬೈಂದೂರಿನ ಮಾಜಿ ಶಾಸಕ, “ಬಸ್ರೂರಿನ ಹೆಗ್ಡೆ’ ಎಂದೇ ಖ್ಯಾತಿ ಗಳಿಸಿರುವ, ಸಕ್ರಿಯ ರಾಜಕಾರಣ ದಿಂದ ಹಿಂದೆ ಸರಿದು ಬಹಳಷ್ಟು ವರ್ಷಗಳಾದರೂ ಧಾರ್ಮಿಕ, ಸಾರ್ವಜನಿಕ ರಂಗದಲ್ಲಿ ಈಗಲೂ ಸಕ್ರಿಯರಾಗಿರುವ ಬಿ. ಅಪ್ಪಣ್ಣ ಹೆಗ್ಡೆ ಅವರ ಪತ್ನಿ ನಾಗರತ್ನ ಅವರ ಅಭಿಮಾನದ ನುಡಿಗಳು. ಅವರು 1983ರಲ್ಲಿ ಜನತಾ ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗಿದ್ದು, ಆಗ ರಾಮಕೃಷ್ಣ ಹೆಗಡೆ, ಎಂ.ಪಿ.  ಪ್ರಕಾಶ್‌, ಅಬ್ದುಲ್‌ ನಾಸೀರ್‌ ಸಹಿತ ಅನೇಕ ಮಂದಿ ಪ್ರಭಾವಿ ರಾಜಕೀಯ ನಾಯಕರು ಮನೆಗೆ ಬರುತ್ತಿದ್ದರು. ಶಾಸಕರಾದ ಅನಂತರ ಮನೆಗೆ ಬರುವ ಜನರ ಸಂಖ್ಯೆಯೂ ಹೆಚ್ಚಿತ್ತು. ಬಂದವರೆಲ್ಲರನ್ನು ಆತಿಥ್ಯ ನೀಡಿ ಉಪಚರಿಸುವುದರಲ್ಲಿ ನಮಗೆ ಖುಷಿ ಸಿಗುತ್ತಿತ್ತು. 

ಕೋರ್ಟು, ಪೊಲೀಸ್‌ ಎನ್ನದೆ ಊರಿನಲ್ಲಿ ಎಲ್ಲರೂ ಒಗ್ಗಟ್ಟಾಗಿ ಯಾವುದೇ ಗೊಂದಲಗಳಿಲ್ಲದೆ ಬದುಕಬೇಕು ಎಂದು ಅವರು ಯಾವಾಗಲೂ ಹೇಳುತ್ತಿರುತ್ತಾರೆ. ಅದರಂತೆ ಮನೆಗೆ ಯಾವುದಾದರೂ ವ್ಯಾಜ್ಯಗಳನ್ನು ಹಿಡಿದುಕೊಂಡು ಬಂದ ಎರಡೂ ಕಡೆಯವರ ಮನಸ್ಸಿಗೆ ಒಪ್ಪಿಗೆ ಆಗುವಂತಹ ಪರಿಹಾರವನ್ನು ನೀಡಿ ಕಳುಹಿಸುತ್ತಿದ್ದರು. ಅವರ ನ್ಯಾಯ ಪಂಚಾಯ್ತಿಗೆ ಊರಿನಲ್ಲಿ ಎಲ್ಲರೂ ಗೌರವ ಕೊಡುತ್ತಾರೆ. ಅದೇ ರೀತಿ ಮನೆಯಲ್ಲಿ ಏನೇ ತೊಂದರೆ ಬಂದರೂ ಎಲ್ಲರಲ್ಲೂ ಧೈರ್ಯ ತುಂಬುತ್ತಿದ್ದರು. ಅವರು ಶಾಸಕರಾಗಿ ಸದನದಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ಹೋದಾಗ ನಾನು ಹೋಗುತ್ತಿರಲಿಲ್ಲ. ಮನೆಯಲ್ಲೇ ಇದ್ದು ಸಂಸಾರದ ಜವಾಬ್ದಾರಿ ನಿಭಾಯಿಸುತ್ತಿದ್ದೆ. ಆದರೆ ಅವರು ಬೈಂದೂರಿನಲ್ಲಿ ಚುನಾವಣೆಗೆ ನಿಂತಾಗ ನಾನು ಪ್ರಚಾರಕ್ಕೆ ಹೋಗಿದ್ದೆ. ಗೆದ್ದ ಬಳಿಕವೂ ಸಮಾರಂಭಗಳಿಗೆಲ್ಲ ಹೋಗುತ್ತಿದ್ದೆ ಎನ್ನುವುದನ್ನು ನೆನಪು ಮಾಡಿಕೊಳ್ಳುತ್ತಾರೆ ನಾಗರತ್ನಾ. ಅಪ್ಪಣ್ಣ ಹೆಗ್ಡೆ ದಂಪತಿಗೆ ಮೂವರು ಪುತ್ರಿಯರು, ಇಬ್ಬರು ಪುತ್ರರು, 7 ಮಂದಿ ಮೊಮ್ಮಕ್ಕಳು.

 ಸೋಲು-ಗೆಲುವು ಸಮನಾಗಿ ಸ್ವೀಕಾರ
1994-95ರಲ್ಲಿ ಅಪ್ಪಣ್ಣ ಹೆಗ್ಡೆ ಬೈಂದೂರಿನಿಂದ ಸ್ಪರ್ಧಿಸಿದ್ದರು. ಅಂದು ಫ‌ಲಿತಾಂಶದ ದಿನ. ಮತ ಎಣಿಕೆ ನಡೆಯುತ್ತಿದ್ದಾಗ ಮನೆಯಲ್ಲೇ ಕುಳಿತಿದ್ದರು. ಎಣಿಕೆ ಮುಗಿಯುತ್ತಿದ್ದಂತೆ ಸೋಲುವುದು ಖಚಿತವಾದಾಗ ಮನೆಯಲ್ಲಿದ್ದ ನಮಗೆಲ್ಲ ತುಂಬಾ ಬೇಸರವಾಯಿತು. ಆದರೆ ಆಗ ನಮ್ಮನ್ನೆಲ್ಲ ಸಮಾಧಾನ ಪಡಿಸಿದ ಹೆಗ್ಡೆಯವರು, ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಿ ಎಂದು ಕಿವಿಮಾತು ಹೇಳಿದ್ದು, ಸೋಲಿನಲ್ಲೂ ಗೆಲುವು ಕಂಡಷ್ಟು ಖುಷಿಯಾಯಿತು ಎಂದು ನೆನಪು ಮಾಡಿಕೊಳ್ಳುತ್ತಾರೆ ಅವರ ಮನೆಯವರು.

ನೆರೆ ಸಂತ್ರಸ್ತರ ರಕ್ಷಣೆಗೆ ಸ್ವತಃ ತೆರಳಿದ್ದರು …
1982ರ ಮಳೆಗಾಲದಲ್ಲಿ ನೆರೆ ಬಂದು ಹಟ್ಟಿಕುದ್ರು ಸಂಪೂರ್ಣ ಮುಳುಗಿತ್ತು. ಸಂತ್ರಸ್ತರ ರಕ್ಷಣೆ ಮಾಡಲು ಅಪ್ಪನೇ ದೋಣಿಯವರೊಂದಿಗೆ ತೆರಳಿ ಜನರನ್ನು ಈಚೆ ದಡಕ್ಕೆ ಕರೆ ತಂದಿದ್ದರು ಎಂದು ಜನಸೇವಕರಾಗಿ ತಂದೆ ಮಾಡಿ ರುವ ಕಾರ್ಯದ ಕುರಿತು ಪುತ್ರಿ ಅನುಪಮಾ ಸುಭಾಶ್ಚಂದ್ರ ಶೆಟ್ಟಿ ನೆನಪು ಮಾಡಿಕೊಳ್ಳುತ್ತಾರೆ.

Advertisement

1983ರಲ್ಲಿ ಅಪ್ಪ ಶಾಸಕರಾದ ಬಳಿಕ ಮನೆಗೆ ಬರುವ ಜನರ ಸಂಖ್ಯೆ ದಿನೇ ದಿನೇ ಹೆಚ್ಚಿತು. ಬೆಳಗ್ಗೆ 5ರಿಂದ ತಡರಾತ್ರಿಯ ವರೆಗೂ  ಕಷ್ಟ ಹೇಳಿಕೊಂಡು ಜನ ಬರುತ್ತಿದ್ದರು. ತಂದೆ ಬೆಂಗಳೂರಿಗೆ ಹೋದಾಗ ಮಾತ್ರ ಮನೆ ಬಿಕೋ ಅನ್ನುತ್ತಿತ್ತು. ಅವರು ರಾಜಕೀಯದಲ್ಲಿದ್ದಾಗ ಅನೇಕ ಮಂದಿ ಖ್ಯಾತನಾಮ ರಾಜಕಾರಣಿಗಳು ಮನೆಗೆ ಬರುತ್ತಿದ್ದುದು ಖುಷಿ ಕೊಡುತ್ತಿತ್ತು ಎನ್ನುತ್ತಾರೆ ಪುತ್ರ ರಾಮಕಿಶನ್‌ ಹೆಗ್ಡೆ.

ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next