Advertisement

ಕ್ಷೇತ್ರದ ಸಮಗ್ರ ಅಭಿವೃದ್ಧಿಯೇ ಗುರಿ: ಆಂಜನೇಯ

04:57 PM May 01, 2018 | Team Udayavani |

ಚಿತ್ರದುರ್ಗ: ಹೊಳಲ್ಕೆರೆ ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳನ್ನು ಪೂರ್ಣಗೊಳಿಸಲು ಮತ್ತು ಸಮಗ್ರವಾಗಿ ಅಭಿವೃದ್ಧಿಗೊಳಿಸಿ ಮಾದರಿ ಕ್ಷೇತ್ರವನ್ನಾಗಿಸಲು ಮತ್ತೂಮ್ಮೆ ಆಶೀರ್ವಾದ ಮಾಡಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್‌. ಆಂಜನೇಯ ಮನವಿ ಮಾಡಿದರು.

Advertisement

ಹೊಳಲ್ಕೆರೆ ಕ್ಷೇತ್ರ ವ್ಯಾಪ್ತಿಯ ಕಾಗಳಗೆರೆ, ಕಾಗಳಗೆರೆ ಗೊಲ್ಲರಹಟ್ಟಿ, ಕಾಗಳಗೆರೆ ಹೊಸಹಟ್ಟಿ, ಅಂದನೂರು, ಹಿರಿಯೂರು ಮತ್ತಿತರ ಗ್ರಾಮಗಳಲ್ಲಿ ಸೋಮವಾರ ಚುನಾವಣಾ ಪ್ರಚಾರ ನಡೆಸಿ ಅವರು ಮಾತನಾಡಿದರು. ಕಳೆದ ಚುನಾವಣೆಯಲ್ಲಿ ಹೆಚ್ಚಿನ ಮತಗಳನ್ನು ನೀಡಿ ಆಯ್ಕೆ ಮಾಡಿದ್ದರಿಂದ ಸಾಕಷ್ಟು ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದೇನೆ. ಈ ಮೂಲಕ ಮತದಾರ ಪ್ರಭುಗಳ ಋಣ ತೀರಿಸುವ ಕೆಲಸ ಮಾಡಿದ್ದೇನೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಜನಪರವಾಗಿದೆ. ನಮ್ಮದು ನುಡಿದಂತೆ ನಡೆದ ಸರ್ಕಾರವಾಗಿದೆ. ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್‌ ಸರ್ಕಾರ ತರಲು ಹಾಗೂ ಹೊಳಲ್ಕೆರೆ ಕ್ಷೇತ್ರದ ಅಭಿವೃದ್ಧಿಗಾಗಿ ನನಗೆ ಮತ ನೀಡಿ ಗೆಲ್ಲಿಸಬೇಕೆಂದು ಕೋರಿದರು.

ಐದು ವರ್ಷಗಳ ನನ್ನ ಅಧಿಕಾರದ ಅವಧಿಯಲ್ಲಿ ಬಡವರು, ಸಂಕಷ್ಟದಲ್ಲಿರುವವರು, ನಿರುದ್ಯೋಗಿ ಯುವಕರು ಸ್ವಾವಲಂಬಿ ಜೀವನ ನಡೆಸಲು ನೂರಾರು ಕೋಟಿ ರೂ.ಗಳ ವೈಯಕ್ತಿಕ ಸಾಲ ಕೊಡಿಸಿದ್ದೇನೆ. ನಿರುದ್ಯೋಗಿ ಯುವಕರು ಟ್ಯಾಕ್ಸಿ ಯಿಂದ ಬದುಕು ಕೊಟ್ಟಿಕೊಳ್ಳಲು ವಾಹನಗಳನ್ನು ಕೊಡಿಸಿದ್ದೇನೆ. ಇದರಿಂದ ಇಂದು ಅವರೆಲ್ಲ ತಮ್ಮ ಕಾಲ ಮೇಲೆ ನಿಂತುಕೊಳ್ಳಲು ಸಾಧ್ಯವಾಗಿದೆ ಎಂದು ತಿಳಿಸಿದರು.

ಕ್ಷೇತ್ರದ ಪ್ರತಿಯೊಂದು ಗ್ರಾಮದಲ್ಲೂ ಕನಿಷ್ಠ ಒಂದು ಕೋಟಿ ರೂ. ವೆಚ್ಚದ ಕೆಲಸವಾಗಿದೆ. ಯಾವ ಹಳ್ಳಿಯೂ ಅಭಿವೃದ್ಧಿಯಿಂದ ಹಾಗೂ ಯಾವ ಸಮುದಾಯವೂ ಸರ್ಕಾರಿ ಸೌಲಭ್ಯದಿಂದ ವಂಚಿತಗೊಂಡಿಲ್ಲ. ಎಲ್ಲ ಜಾತಿ, ಸಮುದಾಯದ ಬಡವರಿಗೆ ಗಂಗಾ ಕಲ್ಯಾಣ ಯೋಜನೆಯಡಿ ರಾಜ್ಯದಲ್ಲೇ ದಾಖಲೆ ಪ್ರಮಾಣದಲ್ಲಿ ಹೊಳಲ್ಕೆರೆ ಕ್ಷೇತ್ರದಲ್ಲಿ ಕೊಳವೆಬಾವಿಗಳನ್ನು ಕೊರೆಸಿ ರೈತರಿಗೆ ಅನುಕೂಲ ಕಲ್ಪಿಸಲಾಗಿದೆ ಎಂದರು. ನಾನು ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳಿಂದ ಇಡೀ ರಾಜ್ಯದ ಗಮನ ಇಂದು ಹೊಳಲ್ಕೆರೆಯತ್ತ ನೆಟ್ಟಿದೆ. ಪ್ರತಿಸ್ಪರ್ಧಿಗಳು ಕೇಳುವ ಪ್ರಶ್ನೆಗಳಿಗೆ ನಾನು ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳೇ ಸಾಕ್ಷಿ ಎಂದು ತಮ್ಮ ವಿರುದ್ಧದ ಟೀಕೆಗಳಿಗೆ ಸಚಿವ ಆಂಜನೇಯ ತಿರುಗೇಟು ನೀಡಿದರು.

Advertisement

ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳೇ ನಡೆದಿಲ್ಲ ಎಂದು ಹೇಳುತ್ತಿರುವವರು ಭದ್ರಾ ಮೇಲ್ದಂಡೆ ಯೋಜನೆಗೆ ಹೊಳಲ್ಕೆರೆಯನ್ನು ಸೇರ್ಪಡೆ ಮಾಡಿರುವ ಕುರಿತು ಮಾತನಾಡಲಿ. ಭರಮಸಾಗರ ಸಮೀಪದ 33 ಕೆರೆಗಳನ್ನು ತುಂಬಿಸುವ ಯೋಜನೆಗೆ ಬಜೆಟ್‌ನಲ್ಲಿ ಹಣ ಮೀಸಲಿಡಲು ಶ್ರಮಿಸಿದ್ದು ಯಾರು ಎಂಬುದನ್ನು ಜನರ ಮುಂದಿಡಲಿ ಎಂದು ಸವಾಲೆಸೆದರು.

ಬಿಜೆಪಿ ಅಭ್ಯರ್ಥಿ ಚಂದ್ರಪ್ಪ ಕ್ಷೇತ್ರದ ಜನತೆಗೆ ಸುಳ್ಳು ಹೇಳುವ ಮೂಲಕ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಜನರು ಅವರ ಮಾತುಗಳಿಗೆ ಮರುಳಾಗಬಾರದು. ಕೃಷಿ, ನೀರಾವರಿ, ಶಿಕ್ಷಣ, ಮೂಲ ಸೌಕರ್ಯ ಸೇರಿದಂತೆ ಎಲ್ಲ ವಲಯಗಳಲ್ಲೂ ಕ್ಷೇತ್ರ ಪ್ರಗತಿ ಸಾ ಧಿಸುತ್ತಿದೆ. ಹೀಗಾಗಿ ವಿರೋಧಿಗಳ ಟೀಕೆಗಳಿಗೆ ಕಿವಿಗೊಡದೆ ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳನ್ನು ಗಮನಿಸಿ ನನಗೆ ಮತ ನೀಡಬೇಕು ಎಂದರು. ಸಚಿವರು ಮತ್ತು ಅವರ ಬೆಂಬಲಿಗರು, ಪಕ್ಷದ ಕಾರ್ಯಕರ್ತರು ಹಳ್ಳಿಗಳನ್ನು ಪ್ರವೇಶಿಸುತ್ತಿದ್ದಂತೆ ಮಹಿಳೆಯರು ಆರತಿ ಬೆಳಗಿ ಸ್ವಾಗತ ಕೋರಿದರು. ತಾಪಂ ಮಾಜಿ ಉಪಾಧ್ಯಕ್ಷ ಓಂಕಾರಸ್ವಾಮಿ, ಜಿಪಂ ಮಾಜಿ ಸದಸ್ಯ ಬಸಣ್ಣ, ರುದ್ರಣ್ಣ, ಶಿವಣ್ಣ, ಗೋಡೆಮನೆ ಹನುಮಂತಪ್ಪ, ಡಾ| ಜೆ.ಆರ್‌. ಸುಜಾತಾ ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next