Advertisement

ಸಿಂಘಂ ನಡೆದ ಹಾದಿ

06:00 AM Aug 14, 2018 | |

“ಕರುನಾಡ ಸಿಂಗಂ’ ಖ್ಯಾತಿಯ ಐಪಿಎಸ್‌ ಅಧಿಕಾರಿ ರವಿ ಡಿ. ಚನ್ನಣ್ಣನವರ್‌ ದಕ್ಷತೆಗಷ್ಟೇ ಅಲ್ಲ, ನಾಡಿನ ಯುವ ಸಮುದಾಯವನ್ನು ಪ್ರಭಾವಿಸಿರುವ ವ್ಯಕ್ತಿಯೂ ಹೌದು. ಈ ಖಡಕ್‌ ಅಧಿಕಾರಿಯ ಬದುಕನ್ನು ಅಕ್ಷರಕ್ಕಿಳಿಸಿದ್ದಾರೆ ಅವರ ಬಾಲ್ಯ ಸ್ನೇಹಿತ ಎರ್ರೆಪ್ಪಗೌಡ ಚಾನಾಳ್‌. ಆ.18ರಂದು ಬೆಂಗಳೂರಿನ ಕಸಾಪದಲ್ಲಿ ಬಿಡುಗಡೆ ಕಾಣುತ್ತಿರುವ “ನಮ್ಮೊಳಗೊಬ್ಬ ರವಿ ಡಿ. ಚನ್ನಣ್ಣನವರ್‌’ ಎಂಬ ಈ ಕೃತಿಯ ಒಂದು ಕೌತುಕ ತುಣುಕು ಇಲ್ಲಿದೆ… 

Advertisement

ಹೈದರಾಬಾದ್‌ನ ರೈಲು ನಿಲ್ದಾಣದಿಂದ ಕೆಳಗಿಳಿದಾಗ ರವಿ ಚನ್ನಣ್ಣನವರ ಬಳಿ ಇದ್ದಿದ್ದು, ಜೀವನಪೂರ್ತಿ ಸಂಪಾದಿಸಿದ ಒಂದು ಕ್ವಿಂಟಾಲ್‌ನಷ್ಟು ಪುಸ್ತಕವಷ್ಟೇ. ಅತ್ಯಲ್ಪ ಹಣವಿಟ್ಟುಕೊಂಡಿದ್ದ ಅವನಿಗೆ ಅವನೇ ಕೂಲಿ. ಆ ಎಲ್ಲಾ ಪುಸ್ತಕಗಳನ್ನೆತ್ತಿಕೊಂಡು ಸಾಧಿಸುವ ಹಠದೊಂದಿಗೆ ಹೊಟ್ಟೆಗೆ ಏನನ್ನೂ ತಿನ್ನದೇ ಹೈದರಾಬಾದಿನ ಬೀದಿಗಳಲ್ಲಿ ಸುತ್ತುತ್ತಿದ್ದ. ಇದ್ದ ಹಣವನ್ನು ಖರ್ಚು ಮಾಡಿದರೆ ನಾಳಿನ ಪರಿಸ್ಥಿತಿಯನ್ನು ನೆನೆದು ಸುಸ್ತಾಗಿ, ಒಂದು ತಳ್ಳುವ ಗಾಡಿಯ ಚಿಕ್ಕ ಹೋಟೆಲ್‌ನ ಮುಂದೆ ಕುಳಿತ. ಅದರ ಮಾಲೀಕ “ಯಾಕಪ್ಪಾ! ತುಂಬಾ ಹಸಿದವನಂತೆ ಕಾಣುತ್ತೀಯಾ, ಸ್ವಲ್ಪ ತಿಂಡಿ ಕೊಡ್ತೀನಿ, ತಿಂತೀಯಾ?’ ಎಂದು ಕೇಳಿದಾಗ, “ನೀವು ನನಗೇನಾದರೂ ಕೆಲಸ ಕೊಡಬೇಕು, ಹಾಗಾದರೆ ಮಾತ್ರ ನಿಮ್ಮ ತಿಂಡಿಯನ್ನು ಸ್ವೀಕರಿಸುತ್ತೇನೆ’ ಎಂದಿದ್ದರು ರವಿ. ಕೊಟ್ಟರೆ ಹಿಂದು ಮುಂದು ನೋಡದೆ ತಿಂದು ಹೋಗುವ ಆದೆಷ್ಟೋ ಜನರನ್ನು ನೋಡಿದ್ದ ಮಾಲೀಕನಿಗೆ ಅಚ್ಚರಿಯೋ ಅಚ್ಚರಿ. “ಆಯ್ತಪ್ಪಾ, ನನ್ನ ಕೆಲಸದಲ್ಲಿ ನೀನು ಸಹಾಯ ಮಾಡುವಂತೆ ಈಗ ಊಟಮಾಡು’ ಎಂದರಂತೆ ಅವರು. ಊಟ ಮುಗಿಸಿ, ಆ ಅಂಗಡಿಯವನ ಕೆಲಸವನ್ನೂ ಮುಗಿಸಿ, “ನನ್ನ ಜೀತದ ಆಸ್ತಿಯಂತಿರುವ ಈ ನನ್ನ ಪುಸ್ತಕಗಳನ್ನು ನೋಡಿಕೊಳ್ಳಿ, ನನಗೆ ಸ್ವಲ್ಪ ಕೆಲಸವಿದೆ’ ಎಂದು ಹೇಳಿ ಹೈದರಾಬಾದ್‌ನ ಎಲ್ಲಾ ತರಬೇತಿ ಕೇಂದ್ರಗಳನ್ನೂ ರವಿ ಸುತ್ತಿದ್ದ.

  ಹಣವಿಲ್ಲದೇ, ಪ್ರತಿಭೆಯನ್ನಷ್ಟೇ ಆಸ್ತಿಮಾಡಿಕೊಂಡಿರುವ ಇವನಿಗೆ ತರಬೇತಿ ನೀಡಲು ಯಾರೂ ಒಪ್ಪಿರಲಿಲ್ಲ. ಅಂತೆಯೇ ಆಗ ತಾನೇ ಶುರುವಾಗಿದ್ದ “ಟಾರ್ಗೆಟ್‌ ಐ.ಎ.ಎಸ್‌’ ಕೋಚಿಂಗ್‌ ಸೆಂಟರ್‌ನ ಮುಖ್ಯಸ್ಥರು ತಮ್ಮ ತರಬೇತಿ ಶಾಲೆಯನ್ನು ಹಗಲೂ ರಾತ್ರಿ ಕಾಯಲು ಒಬ್ಬರನ್ನು ನಿರೀಕ್ಷಿಸಿದ್ದರು. ಇವನ ಅತೀವ ಜ್ಞಾನದ ಹಸಿವನ್ನು ಕಂಡ ಅವರು ಅಲ್ಲಿ ತರಬೇತಿ ಪಡೆದುಕೊಳ್ಳುವ ಜೊತೆಗೆ ಸಂಸ್ಥೆಯ ಕೆಲಸಗಾರನಾಗಿಯೂ ನೇಮಿಸಿಕೊಂಡರು.

  ಹೈದರಾಬಾದ್‌ನ ಜೀವನ ರವಿಯನ್ನು ಒಬ್ಬ ಗಟ್ಟಿಗ‌ನನ್ನಾಗಿಸಿತ್ತು. ತನ್ನವರಾರೂ ಇಲ್ಲದ ಆ ಊರಿನಲ್ಲಿ ತನ್ನ ಹೊಟ್ಟೆ ತುಂಬಿಸಿಕೊಂಡು ತರಬೇತಿ ಪಡೆಯುವುದು ತುಂಬಾ ಕಷ್ಟಕರವಾಗಿತ್ತು. ಅಲ್ಲಿಯೂ ಹಲವಾರು ಕಡೆಗಳಲ್ಲಿ ಕೆಲಸಮಾಡಿ ಓದುತ್ತಿದ್ದ. ಪ್ರತಿದಿನ ಲೈಬ್ರರಿಗೆ ಹೋಗುವುದು, ರಾತ್ರಿಯಾಗುವವರೆಗೂ ಅಲ್ಲೇ ಇರುವುದು ಮಾಮೂಲಿಯಾಗಿತ್ತು. ಅವನ ಜೊತೆ ತರಬೇತಿ ಪಡೆಯುತ್ತಿದ್ದ ಅದೆಷ್ಟೋ ಹುಡುಗರು ಯುಪಿಎಸ್ಸಿ ಓದಲು ಬಂದು, ಸಿನಿಮಾ- ಪಾರ್ಟಿ- ಟ್ರಿಪ್‌ ಅಂತ ಸುತ್ತಾಡುವುದನ್ನು, ಚಹಾದ ನೆಪದಲ್ಲಿ ಗಂಟೆಗಟ್ಟಲೆ ಹೊರಗೆ ಹೋಗುವುದನ್ನು ಇವನು ಇಷ್ಟಪಡುತ್ತಿರಲಿಲ್ಲ.

  ಆದರೆ, ರವಿಯೂ ಮನುಷ್ಯನೇ! ಇವನಿಗೂ ಆಸೆ ಆಕಾಂಕ್ಷೆಗಳಿದ್ದವು. ತಾನು ಮುಂದಿನ ವರ್ಷ ಐಎಎಸ್‌ ಅಧಿಕಾರಿಯಾದ ಮೇಲೆ ಯಾವ್ಯಾವ ಸಿನಿಮಾ ನೋಡಬೇಕು, ಯಾವ್ಯಾವ ತಿಂಡಿ ತಿನ್ನಬೇಕು, ಯಾವ್ಯಾವ ಸ್ಥಳಗಳನ್ನು ನೋಡಬೇಕು ಎಂದು ಪಟ್ಟಿ ಮಾಡಿದ್ದ. ರಿಸಲ್ಟ್ ಬಂದ ಮರುದಿನದಿಂದಲೇ ಆ ಎಲ್ಲ ಆಸೆಗಳನ್ನೂ ಈಡೇರಿಕೊಂಡ. ಎರಡೆರಡು ದಿನಗಳ ಕಾಲ ಊಟವಿಲ್ಲದೇ ಮಲಗಿದ, ಅದೆಷ್ಟೋ ಸಲ ನಿಂತುಕೊಂಡೇ ತರಬೇತಿ ಪಡೆದ ಆ ಸ್ಥಳಗಳನ್ನೆಲ್ಲಾ ತೋರಿಸಿ, ಗೋಲ್ಕಂಡಾ ಕೋಟೆಯನ್ನು ಹತ್ತಿಸಿ, ಹುಸೇನ್‌ ಸಾಗರದಲ್ಲಿ ವಿಹರಿಸಿ, ಬಾವರ್ಚಿ ಬಿರಿಯಾನಿ ತಿನ್ನಿಸಿ ತಾನು ಐಪಿಎಸ್‌ ಆದ ಕಥೆಯನ್ನು ನಮಗೆ ಹೇಳಿದ್ದ.

Advertisement

ಹಸಿದ ಹೊಟ್ಟೆಗೆ ನೀರೇ ಆಹಾರ!
ಇಂದು ದೆಹಲಿ, ಹೈದರಾಬಾದ್‌ಗಳಲ್ಲಿ ಅದೆಷ್ಟೋ ಕೋಟ್ಯಾಧೀಶರು ತಮ್ಮ ಮಕ್ಕಳಿಗೆ ಲಕ್ಷಾಂತರ ರೂ.ಗಳನ್ನು ಕೊಟ್ಟು, ಬ್ಯಾಂಕ್‌ನಲ್ಲಿ ಡೆಪಾಸಿಟ್‌ ಮಾಡಿಸಿ ಓದಲು ಕಳಿಸುತ್ತಾರೆ. ಆದರೆ, ಕೆಲವರು ಓದುವುದನ್ನು ಬಿಟ್ಟು ಇನ್ನುಳಿದಿದ್ದನ್ನೆಲ್ಲಾ ಮಾಡುತ್ತಾರೆ. ರವಿ ಮುಂಜಾನೆ ಎದ್ದು ಕಸಗುಡಿಸಿ, ಪೀಠೊಪಕರಣಗಳನ್ನು ಸಿದ್ಧಪಡಿಸಿ ಬರುವ ಎಲ್ಲಾ ಅಭ್ಯರ್ಥಿಗಳ ಯೋಗಕ್ಷೇಮವನ್ನು ನೋಡಿಕೊಳ್ಳುತ್ತಿದ್ದ. ಅವನ ಹಸಿದ ಹೊಟ್ಟೆಗೆ ಅದೆಷ್ಟೋ ಬಾರಿ ನೀರೇ ಆಹಾರವಾಗಿತ್ತು. ಎಲ್ಲರೂ ಕುಳಿತು ಪಾಠ ಕೇಳುತ್ತಿದ್ದಾಗ, ಈತ ನಿಂತೇ ಟಿಪ್ಪಣಿ ಮಾಡಿಕೊಳ್ಳುತ್ತಿದ್ದ. ಅಲ್ಲಿನ ಅದೆಷ್ಟೋ ವಿದ್ಯಾರ್ಥಿಗಳು ಓದುವ ರೀತಿಯನ್ನು ಬರೆದಿರುವ ಉತ್ತರ ಪತ್ರಿಕೆಗಳನ್ನು ಪರಿಶೀಲಿಸಿ, ಅತ್ಯುತ್ತಮ ಇರುವುದನ್ನು ಅಳವಡಿಸಿಕೊಳ್ಳುತ್ತಿದ್ದ. “ಒಂದು ವರ್ಷದೊಳಗೆ ನಾನಂದುಕೊಂಡಿದ್ದನ್ನು ಮುಗಿಸಬೇಕು. ಕಾರಣ, ನನ್ನಲ್ಲಿ ಸಮಯವೇ ಇಲ್ಲ’ ಎಂದು ಹೇಳುತ್ತಿದ್ದ.

Advertisement

Udayavani is now on Telegram. Click here to join our channel and stay updated with the latest news.

Next