ಚೇಳೂರು: ಮೊಬೈಲ್ ಕ್ಯಾಮೆರಾದಲ್ಲಿ ಸೆಲ್ಫಿ ತೆಗೆದುಕೊಳ್ಳಲು ಹೋದ ಯುವಕ ನದಿ ನೀರಿನಲ್ಲಿ ಕೊಚ್ಚಿ ಹೋದ ಘಟನೆ ಗಡಿಗವಾರಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಖಾದರ್(20) ಕೊಚ್ಚಿ ಹೋದ ಯುವಕ. ಶುಕ್ರವಾರ ಬೆಳಗ್ಗೆ ದೇಶಂವಾರಪಲ್ಲಿ ಗ್ರಾಮದ ಮಧ್ಯೆ ಹಾದು ಹೋಗಿರುವ ಪಾಪಾಗ್ನಿ ನದಿ ನೀರು ನೋಡಲು ಹೋಗಿದ್ದ ಯುವಕ, ನದಿ ದಡದಲ್ಲಿ ನಿಂತು ಮೊಬೈಲ್ ಕ್ಯಾಮೆರಾದಲ್ಲಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದಾಗ, ರಭಸವಾಗಿ ಬಂದ ನೀರು ಎಳೆದುಕೊಂಡು ಹೋಗಿದೆ.
ಜನರು ನೋಡುತ್ತಿರುವಾಗಲೇ ಕ್ಷಣಾರ್ಧದಲ್ಲಿ ಯುವಕ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ. ವಿಷಯ ತಿಳಿದು, ಪೋಷಕರು, ಕೆಂಚಾರ‌್ಲಹಳ್ಳಿ ಪೊಲೀಸರು ಬುಧವಾರ – ಗುರುವಾರ ಸಂಜೆವರೆಗೆ ಹುಡುಕಾಡಿದರೂ ಯುವಕ ಪತ್ತೆ ಆಗಲಿಲ್ಲ.
ನದಿ ದಡದಲ್ಲಿ ನಿದ್ದೆ ಮಾಡಿದ ದಂಪತಿ: ಪಾಪಾಗ್ನಿ ನದಿ ದಡದಲ್ಲಿ ಇರುವ ಜಮೀನಿನಲ್ಲಿ ಚೇಳೂರು ಗ್ರಾಮದ ವೆಂಕಟೇಶ್ ಅವರ ಪತ್ನಿ ಸಾವಿತ್ರಮ್ಮ ಮಂಗಳವಾರ ರಾತ್ರಿ ಕೋಳಿ, ಕುರಿ ಸಮೇತ ತಾರಸಿ ಶೆಡ್‌ನಲ್ಲಿ ರಾತ್ರಿ ಮಲಗಿದ್ದರು. ನಡುರಾತ್ರಿಯಲ್ಲಿ ಪಾಪಾಗ್ನಿ ನದಿಯಲ್ಲಿ ರಭಸವಾಗಿ ಹರಿಯುವ ನೀರಿನ ಶಬ್ಧ ಕೇಳಿದ್ದು, ನಿದ್ರೆಯಿಂದ ಎದ್ದು ನೋಡಿದಾಗ ಶೆಡ್ ಮುಳುಗಿತ್ತು.
ತಕ್ಷಣವೇ ಎತ್ತರದ ಕಲ್ಲಿನ ಮೇಲೆ ನಿಂತು ಇಡೀ ರಾತ್ರಿ ಜಾಗರಣೆ ಮಾಡಿ ತಮ್ಮ ಪ್ರಾಣ ಕಾಪಾಡಿಕೊಂಡಿದ್ದಾರೆ. ಬುಧವಾರ ತನಕ ಅಲ್ಲೇ ಇದ್ದು, ವೆಂಕಟೇಶ್ ಮಗ ಗಂಗರಾಜು, ಐವರು ಯುವಕರು ಹಗ್ಗಗಳನ್ನು ಸೊಂಟಕ್ಕೆ ಕಟ್ಟಿಕೊಂಡು ಸುರಕ್ಷಿತವಾಗಿ ತಮ್ಮ ಪೋಷಕರನ್ನು ನದಿ ದಾಟಿಸಿಕೊಂಡು ಬಂದಿದ್ದಾನೆ. ಈ ಯುವಕರ ಧೈರ್ಯವನ್ನು ಪೊಲೀಸ್, ಕಂದಾಯ ಇಲಾಖಾಧಿಕಾರಿಗಳು ಶ್ಲಾಸಿದರು.
ಇದನ್ನೂ ಓದಿ;- ರೈತ ಪ್ರತಿಭಟನೆಯಲ್ಲಿ ಕ್ರಿಮಿನಲ್ ಗಳು ಸೇರಿ ತಾಲಿಬಾನ್ ವರ್ತನೆ: ಬಿಜೆಪಿ
ಪೊಲೀಸರ ಭದ್ರತೆ: ಇತ್ತೀಚಿಗೆ ತುಮಕೂರು ಜಿಲ್ಲೆಯ ಅಂಕಸಂದ್ರ ನದಿಯಲ್ಲಿ ಅಶೋಕ(18), ಚಿಕ್ಕಬಳ್ಳಾಪುರ ಜಿಲ್ಲೆಯ ಹಂಪಸಂದ್ರ ಗ್ರಾಮದ ಸಂತೋಶ್(24) ಎಂಬಾತ ನದಿ ನೀರಲ್ಲಿ ಕೊಚ್ಚಿ ಹೋಗಿದ್ದ ಘಟನೆ ಹಿನ್ನೆಲೆ ಯಲ್ಲಿ ನದಿ ದಡಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಚೇಳೂರು ಸರ್ಕಲ್ ಇನ್ಸ್‌ಪೆಕ್ಟರ್ ಜಿ.ಪಿ.ರಾಜು, ಪಿಎಸ್‌ಐ ವೆಂಕಟರವಣಪ್ಪ, ಎಎಸ್‌ಐ ಡಿ.ಜಿ. ನಾಗರಾಜು, ಮುಖ್ಯ ಪೇದೆ ಕೆ.ಎನ್.ಇನಾಯತ್, ಜನ ನೋಡಲು ಮುಂದೆ ಹೋಗದೆ ಫೆನ್ಸಿಂಗ್ ಬೇಲಿ ಹಾಕಿದ್ದಾರೆ. ಗ್ರಾಮದ ಮುಂದೆ ಉಕ್ಕಿ ಹರಿಯುತ್ತಿರುವ ಪಾಪಾಗ್ನಿ ನದಿ ನೋಡಲು ಜನ ಜಾತ್ರೆ ಸೇರುತ್ತಿದೆ. ಚೇಳೂರು ಪೊಲೀಸರ ಮುಂಜಾಗ್ರತೆ ಕ್ರಮ ವಹಿಸಿರುವುದನ್ನು ಚೇಳೂರು ಜನತೆ, ಕರವೇ, ಗ್ರಾಪಂ ಆಡಳಿತ ಮಂಡಳಿ, ಬಲಿಜ ಸಂಘಗಳ ಪ್ರತಿನಿಧಿಗಳು ಪ್ರಶಂಸಿದ್ದಾರೆ.