Advertisement

ಶ್ರೀಕೃಷ್ಣಮಠದಲ್ಲಿ ತಗ್ಗಿದ ನೀರಿನ ಸಮಸ್ಯೆ

11:26 PM Jun 14, 2019 | Team Udayavani |

ಉಡುಪಿ: ಶ್ರೀಕೃಷ್ಣಮಠದಲ್ಲಿ ಕಳೆದೊಂದು ತಿಂಗಳಿಂದ ಎದುರಾದ ನೀರಿನ ಸಮಸ್ಯೆ ಬಹುತೇಕ ಬಗೆ ಹರಿದಿದೆ.

Advertisement

ಬುಧವಾರ ಭಾಗೀರಥೀ ಜನ್ಮದಿನದಂದು ಶ್ರೀಕೃಷ್ಣಮಠದಲ್ಲಿ ಉತ್ಸವ ಕೊನೆಗೊಂಡಿದ್ದು ಅದೇ ದಿನ ಭಾರೀ ಮಳೆ ಬಂದು ರಥಬೀದಿಯಲ್ಲಿ ಅರ್ಧ ಅಡಿ ನೀರು ನಿಂತು ಉತ್ಸವ ನಡೆಸಲೂ ತೊಂದರೆಯಾಗಿತ್ತು. ಅದರ ಮರುದಿನವೇ ರಥಬೀದಿಯ ಸುತ್ತಮುತ್ತಲ ಬಾವಿಯಲ್ಲಿ ನೀರಾಗಿದೆ. ಈಗ ರಾಜಾಂಗಣದಲ್ಲಿರುವ ಬಾವಿಯಲ್ಲಿ ನೀರು ಆಗಿದೆ. ಶ್ರೀಕೃಷ್ಣಮಠದ ಒಳಗಿನ ಬಾವಿನಲ್ಲಿ ನೀರು ಇತ್ತು, ಈಗ ಜಾಸ್ತಿಯಾಗುತ್ತಿದೆ. ಪಾರ್ಕಿಂಗ್‌ ಪ್ರದೇಶದ ಬೋರ್ವೆಲ್ ನೀರಿನ ಬಳಕೆ ಕಡಿಮೆಯಾಗಿದೆ. ನಗರಸಭೆಯಿಂದ ಎರಡು ನೀರಿನ ಮಾರ್ಗಗಳಿದ್ದು ಒಂದು ಮಾರ್ಗದಲ್ಲಿ ನೀರು ಬರಲು ಆರಂಭವಾಗಿದೆ. ಮಧ್ವಸರೋವರದಲ್ಲಿ ಅಪ್ಪಟ ಮಳೆಗಾಲದಲ್ಲಿ ಆಗುವಷ್ಟು ನೀರಾಗದಿದ್ದರೂ ಈಜಾಡುವಷ್ಟು ನೀರಾಗಿದೆ.

ಒಂದೆರಡು ದಿನಗಳಿಂದೀಚೆ ಟ್ಯಾಂಕರ್‌ ನೀರು ತರಿಸುವುದು ಗಣನೀಯವಾಗಿ ಇಳಿದಿದೆ. ಮೂರ್‍ನಾಲ್ಕು ದಿನಗಳ ಹಿಂದೆ 12,000 ಲೀ. ಸಾಮರ್ಥ್ಯದ 15 ಟ್ಯಾಂಕರ್‌ ನೀರನ್ನು ತರಿಸಿಕೊಳ್ಳುತ್ತಿದ್ದರೆ, ಶುಕ್ರವಾರ 4 ಟ್ಯಾಂಕರ್‌ ನೀರನ್ನು ತರಿಸಿಕೊಳ್ಳಲಾಗಿದೆ. ‘ನಮಗೆ ಮುಖ್ಯವಾಗಿ ನೀರು ಬೇಕಾಗುವುದು ಕೈತೊಳೆಯಲು. ಒಂದೆರಡು ದಿನಗಳಲ್ಲಿ ಟ್ಯಾಂಕರ್‌ ನೀರನ್ನು ನಿಲ್ಲಿಸಲಾಗುವುದು’ ಎಂದು ಶ್ರೀಮಠದ ಅಧಿಕಾರಿ ಹರೀಶ್‌ ಭಟ್ ‘ಉದಯವಾಣಿ’ಗೆ ತಿಳಿಸಿದರು.

ರಾಜಾಂಗಣದ ಪಾರ್ಕಿಂಗ್‌ ಪ್ರದೇಶದ ಯಾತ್ರಾರ್ಥಿಗಳ ಶೌಚಾಲಯದಲ್ಲಿ ಎರಡು ತಿಂಗಳಿಂದ ದಿನವೂ ತಲಾ 6,000 ಲೀ. ಸಾಮರ್ಥ್ಯದ ಆರು ಟ್ಯಾಂಕರ್‌ ನೀರನ್ನು ತರಿಸಲಾಗುತ್ತಿತ್ತು. ಇದು ಶ್ರೀಕೃಷ್ಣಮಠಕ್ಕೆ ಬರುವ ಸಾವಿರಾರು ಯಾತ್ರಾರ್ಥಿಗಳ ಸ್ನಾನ, ಶೌಚಾಲಯದ ಬಳಕೆಗಾಗಿ. ಎರಡು ದಿನಗಳಿಂದ ಸ್ವಂತ ಬಾವಿಯಲ್ಲಿ ನೀರಾಗಿರುವುದರಿಂದ ಟ್ಯಾಂಕರ್‌ ನೀರನ್ನು ನಿಲ್ಲಿಸಲಾಗಿದೆ ಶ್ರೀಕೃಷ್ಣಮಠ ಪರಿಸರ ಪ್ರತಿಷ್ಠಾನದ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next