Advertisement

ತಾಲೂಕಿಗೆ ಶೀಘ್ರ ಭದ್ರಾ ಮೇಲ್ದಂಡೆ ನೀರು

03:37 PM Dec 03, 2018 | |

ಜಗಳೂರು: ರಾಜ್ಯ ಸರ್ಕಾರ ಬರಪೀಡಿತ ತಾಲೂಕುಗಳಿಗೆ ತಲಾ 50 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿದೆ ಎಂದು ಸಣ್ಣ ಕೈಗಾರಿಕೆ ಹಾಗೂ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಆರ್‌. ಶ್ರೀನಿವಾಸ್‌ ತಿಳಿಸಿದರು.

Advertisement

ಪಟ್ಟಣದ ಗುರುಭವನದ ಆವರಣದಲ್ಲಿ ನ್ಯೂ ಕಬಡ್ಡಿ ಫೆಡರೇಷನ್‌ ಆಫ್‌ ಇಂಡಿಯಾ, ಕರ್ನಾಟಕ ಕಬಡ್ಡಿ ಅಸೋಸಿಯೇಷನ್‌, ದಾವಣಗೆರೆ ಜಿಲ್ಲಾ ಕಬಡ್ಡಿ ಅಸೋಸಿಯೇಷನ್‌, ಜಿ.ಎಂ. ಸಿದ್ದೇಶ್ವರ ಅಭಿಮಾನಿ ಬಳಗ ಸಂಯುಕ್ತಾಶ್ರಯದಲ್ಲಿ, ಶಾಸಕ ಎಸ್‌.ವಿ. ರಾಮಚಂದ್ರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಪುರುಷ ಮತ್ತು ಮಹಿಳೆಯರ ಹೊನಲು ಬೆಳಕಿನ ಮ್ಯಾಟ್‌ ಕಬಡ್ಡಿ ಪಂದ್ಯಾವಳಿ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ವಿಧಾನಸಭೆ ಅಧಿವೇಶನ ಮುಗಿಯುತ್ತಿದ್ದಂತೆ ಜಗಳೂರಿಗೆ ಬಂದು ಇಲ್ಲಿನ ಸಮಸ್ಯೆಯನ್ನು ಅವಲೋಕಿಸುತ್ತೇನೆ. ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ತಾಲೂಕು ಕಳೆದ 100 ವರ್ಷಗಳಲ್ಲಿ 75 ವರ್ಷಕಾಲ ಬರಗಾಲದಿಂದ ನಲುಗಿದೆ ಎಂದು ಕೇಳಿದ್ದೇನೆ. ನಮ್ಮ ಸರ್ಕಾರದ ಅವಧಿಯಲ್ಲಿಯೇ ಜಗಳೂರು ತಾಲೂಕು ಭದ್ರಾ ಮೇಲ್ದಂಡೆ ಯೋಜನೆಯನ್ನು ಅನುಷ್ಠಾನಗೊಳಿಸಿ ತಾಲೂಕಿಗೆ ಭದ್ರಾ ನೀರು ಹರಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು. ಗ್ರಾಮೀಣ ಕ್ರೀಡೆಗಳು ನಶಿಸಿ ಹೋಗುತ್ತಿರುವ ಇಂದಿನ ದಿನಮಾನದಲ್ಲಿ ಅತ್ಯಂತ ಅದ್ಭುತವಾಗಿ ಕ್ರೀಡಾಕೂಟ ನಡೆದಿವೆ. ನಮ್ಮ ಕಡೆ ಖೋಖೋ ಆಟವಾಡಿಸುತ್ತೇವೆ. ಈ ಕ್ರೀಡಾಕೂಟ ನಮಗೂ ಮಾದರಿ ಎಂದರು.

ನಿಮ್ಮನ್ನು ನೀವು ರೂಪಿಸಿಕೊಳ್ಳಲು ಕ್ರೀಡೆ ಅತ್ಯಂತ ಮುಖ್ಯವಾಗಿದೆ. ದೈಹಿಕ ಶ್ರಮವಿಲ್ಲದಿದ್ದರೆ ಆಯುಸ್ಸು, ಆರೋಗ್ಯ ಇರುವುದಿಲ್ಲ. ಆರೋಗ್ಯವಂತ ಮನಸ್ಸು ಮತ್ತು ದೇಹಕ್ಕೆ ದೈಹಿಕ ಶ್ರಮ ಅತ್ಯಗತ್ಯವಾಗಿದೆ ಎಂದರು.

ಸಾನ್ನಿಧ್ಯ ವಹಿಸಿದ್ದ ಸಾಣೆಹಳ್ಳಿ ಮಠದ ಪಟ್ಟಾಧ್ಯಕ್ಷ ಡಾ| ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲಿ ಜರುಗುತ್ತವೆಯೋ ಅಲ್ಲಿ ಬದುಕು ಭವ್ಯವಾಗುತ್ತದೆ ಎಂದರು.

Advertisement

ಜಗಳೂರು ತಾಲೂಕಿನ ಎಲ್ಲಾ ಕೆರೆಗಳನ್ನು ತುಂಬಿಸಲು ಈಗಾಗಲೇ ಸರ್ಕಾರದ ಮೇಲೆ ಒತ್ತಡ ಹೇರಲಾಗಿದೆ. ಆದಷ್ಟು ಬೇಗ ಈ ಕೆಲಸ ಸರ್ಕಾರದಿಂದ ಆಗಬೇಕಿದೆ ಎಂದು ಉಪಸ್ಥಿತರಿದ್ದ ಜಿಲ್ಲಾ ಉಸ್ತುವಾರಿ ಸಚಿವರನ್ನು ಒತ್ತಾಯಿಸಿದರು. 

ಎಸ್‌.ವಿ. ರಾಮಚಂದ್ರ ಮಾತನಾಡಿ, ನಮ್ಮ ತಾಲೂಕಲ್ಲಿ ಬರವಿರಬಹುದು. ಆದರೆ ಹೃದಯ ಶ್ರೀಮಂತಿಕೆಗೆ ಬರವಿಲ್ಲ. ಬರದಲ್ಲೂ ತರಳಬಾಳು ಹುಣ್ಣಿಮೆಯಂತಹ ಕಾರ್ಯಕ್ರಮ ನಡೆಸಿಕೊಟ್ಟಿದ್ದೇವೆ. ಪ್ರತಿವರ್ಷ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತೇನೆ. ಮುಂದಿನ ದಿನಗಳಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗುವುದು ಎಂದರು.

ತಾಲೂಕಿನಲ್ಲಿ ಬರವಿದೆ ಎಂದು ರೈತರು ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು. ಇನ್ನಾರು ತಿಂಗಳು ಕಷ್ಟ ಪಡೋಣ. ಜಗಳೂರು ತಾಲೂಕಿಗೆ ಅಪ್ಪರ್‌ ಭದ್ರಾ ನೀರು ಹರಿಸುವವರೆಗೂ ನಾನು ನಿದ್ರಿಸುವುದಿಲ್ಲ ಎಂದು ಘೋಷಿಸಿದರು. ಸಂಸದ ಜಿ.ಎಂ. ಸಿದ್ದೇಶ್ವರ, ಗಾಯತ್ರಿ ಸಿದ್ದೇಶ್ವರ, ಇಂದಿರಾ ರಾಮಚಂದ್ರ, 22 ಕೆರೆ ಹೋರಾಟ ಸಮಿತಿ ಅಧ್ಯಕ್ಷ ಡಾ| ಮಂಜುನಾಥ ಗೌಡ್ರು, ಜೆಡಿಎಸ್‌
ಮುಖಂಡ ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ, ಡಿವೈಎಸ್ಪಿ  ಗೇಶ್‌ ಐತಾಳ್‌, ಎಪಿಎಂಸಿ ಸದಸ್ಯ ಎನ್‌.ಎಸ್‌. ರಾಜು, ಈಜುಪಟು ರೇವತಿ ನಾಯಕ, ನೆಟ್ಟಕಲ್‌ ಕರಿಬಸಪ್ಪ, ಜೆಡಿಎಸ್‌ ರಾಜ್ಯ ಎಸ್ಟಿ ಘಟಕದ ಅಧ್ಯಕ್ಷ ಹೊದಿಗೆರೆ ರಮೇಶ್‌, ಏಷಿಯನ್‌ ಕಬಡ್ಡಿ ಫೆಡರೇಷನ್‌ ಅಧ್ಯಕ್ಷ ಎಂ.ವಿ. ಪ್ರಸಾದ್‌ ಬಾಬು, ರಾಜ್ಯ ಕಬಡ್ಡಿ ಅಸೋಸಿಯೇಷನ್‌ನ ಎಂ.ಎಸ್‌. ವೆಂಕಟೇಶ್‌, ವೆಂಕಟೇಶ್‌, ಹೊನ್ನಪ್ಪ ಗೌಡ, ದಾವಣಗೆರೆ ಜಿಲ್ಲಾ ಕಬಡ್ಡಿ ಅಧ್ಯಕ್ಷ ದೊಡ್ಡಪ್ಪ, ಪ್ರಧಾನ ಕಾರ್ಯದರ್ಶಿ ಮಟ್ಟಿಕಲ್‌ ಕರಿಬಸಪ್ಪ, ಇತರರು ಇದ್ದರು. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ 60ಕ್ಕೂ ಹೆಚ್ಚು ಪುರುಷ ಹಾಗೂ ಮಹಿಳಾ ತಂಡಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದವು. 

Advertisement

Udayavani is now on Telegram. Click here to join our channel and stay updated with the latest news.

Next