Advertisement

ಕಾಡುತ್ತಿದೆ ನೀರಿನ ಸಮಸ್ಯೆ,ಧ್ವನಿ ಎತ್ತಿದರೂ ಸಿಕ್ಕಿಲ್ಲ ಪ್ರಯೋಜನ

12:30 AM Feb 09, 2019 | Team Udayavani |

ತೆಕ್ಕಟ್ಟೆ: ಕುಂದಾಪುರ ತಾಲೂಕಿನ ಬೇಳೂರು ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಬೇಳೂರು ದೇವಸ್ಥಾನ ಬೆಟ್ಟು, ಬಡಾಬೆಟ್ಟು, ಮೊಗೆಬೆಟ್ಟು, ಗುಳ್ಳಾಡಿ ಸೇರಿದಂತೆ ಒಟ್ಟು  ಐದು ಅಂಗನವಾಡಿ ಕೇಂದ್ರಗಳಲ್ಲಿ ಎರಡು ಅಂಗನವಾಡಿ ಕೇಂದ್ರಗಳಲ್ಲಿ ಪುಟಾಣಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಕಾಡುತ್ತಿದೆ.

Advertisement

ಲಭಿಸದ ಕುಡಿಯುವ ನೀರಿನ ಭಾಗ್ಯ 
ಇಲ್ಲಿನ ರೈಲ್ವೆ  ಬ್ರಿಜ್‌ ಸಮೀಪದ ದೇವಸ್ಥಾನಬೆಟ್ಟು ಅಂಗನವಾಡಿ ಕೇಂದ್ರ ಆರಂಭವಾಗಿ ದಶಕಗಳೇ ಕಳೆದಿವೆೆ ಆದರೆ ಇದು ವರೆಗೆ ಯಾವುದೇ ರೀತಿಯ ಕುಡಿಯುವ ನೀರಿನ ಸೌಲಭ್ಯಗಳಿಂದ ವಂಚಿತವಾಗಿದ್ದು ಈ ಬಗ್ಗೆ  ಹಲವು ಬಾರಿ ಗ್ರಾಮಸಭೆಯಲ್ಲಿ ಅಂಗನವಾಡಿ ಕಾರ್ಯಕರ್ತರು ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿದ್ದರೂ  ಪ್ರಯೋಜನವಾಗಿರಲಿಲ್ಲ. 6 ತಿಂಗಳ ಹಿಂದೆ ಕಟ್ಟಡದ ಒಂದು ಭಾಗದಲ್ಲಿ ಟ್ಯಾಂಕ್‌ ಅಳವಡಿಸುವ ನಿಟ್ಟಿನಿಂದ ಕಬ್ಬಿಣದ ಪಟ್ಟಿಯನ್ನು ಹಾಕಲಾಗಿದೆ. ಆದರೂ ಟ್ಯಾಂಕ್‌ ಅಳವಡಿಸದ್ದರ ವಿರುದ್ಧ  ಜನರಿಂದ ಅಸಮಾಧಾನ ವ್ಯಕ್ತವಾಗಿದೆ. ಕುಡಿಯುವ ನೀರಿಗಾಗಿ ಅಂಗನವಾಡಿ ಸಹಾಯಕಿಯರು ದೂರದ ಮನೆ ಬಾವಿಯಿಂದ ನೀರು ಹೊತ್ತು ತರಬೇಕಾಗಿದೆ ಪರಿಸ್ಥಿತಿ ಇದೆ. ಪ್ರಸ್ತುತ ಈ ಅಂಗನವಾಡಿ ಕೇಂದ್ರದಲ್ಲಿ ಒಟ್ಟು 13 ವಿದ್ಯಾರ್ಥಿಗಳಿದ್ದಾರೆ. 
 
ಮೊಗೆಬೆಟ್ಟು ಅಂಗನವಾಡಿ ಕೇಂದ್ರಕ್ಕೆ ಬೇಕಿದೆ ಪೈಪ್‌ಲೈನ್‌ ವ್ಯವಸ್ಥೆ 
ಇಲ್ಲಿನ ಚಿಕ್ಕು ಹಾçಗುಳಿ ಸಪರಿವಾರ ದೈವಸ್ಥಾನದ ಪ್ರಾಂಗಣದಲ್ಲಿ ಹಲವು ವರ್ಷಗಳಿಂದಲೂ ಇದ್ದ ಮೊಗೆಬೆಟ್ಟು ಅಂಗನವಾಡಿ ಕೇಂದ್ರದಲ್ಲಿ ಪರಿಸರದ ಒಟ್ಟು 26 ವಿದ್ಯಾರ್ಥಿಗಳಿದ್ದು ಸುಸಜ್ಜಿತವಾಗಿದೆ. ಸ್ವಂತ ಬಾವಿ ಇಲ್ಲದೇ ಇರುವ ಕಾರಣ ಕುಡಿಯುವ ನೀರು ಹಾಗೂ ನಿತ್ಯ ಬಳಕೆಗಾಗಿ ದೇಗುಲದ‌ ಬಾವಿಯನ್ನು ಬಳಸಬೇಕಾದ ಅನಿವಾರ್ಯ ಪರಿಸ್ಥಿತಿ ಇದೆ.ಅಂಗನವಾಡಿ ಕೇಂದ್ರಕ್ಕೆ ಸಮರ್ಪಕವಾದ ಕುಡಿಯುವ ನೀರಿನ ಬಾವಿ ನಿರ್ಮಾಣವಾಗಬೇಕಾಗಿದ್ದು ಪೈಪ್‌ ಲೈನ್‌ ಸಂಪರ್ಕ ಕಲ್ಪಿಸಬೇಕಾಗಿದೆ. 

ಸಮರ್ಪಕ ತಡೆಗೋಡೆಗಳಿಲ್ಲ 
 ಗ್ರಾ.ಪಂ.ಅನತಿ ದೂರದಲ್ಲಿರುವ ಬೇಳೂರು ಅಂಗನವಾಡಿ ಕೇಂದ್ರದಲ್ಲಿ 14 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಸುವ್ಯವಸ್ಥಿತವಾದ ಕಟ್ಟಡಗಳಿದೆ. ಆದರೆ ಅಂಗನವಾಡಿ ಕೇಂದ್ರದ ಮೆಟ್ಟಿಲಿಗೆ ರೇಲಿಂಗ್ಸ್‌  ಇಲ್ಲ. ಕೇಂದ್ರದ ಸಮೀಪದಲ್ಲಿ ಗಿಡಗಂಟಿಗಳು ಆವರಿಸಿದೆ. ಇಲ್ಲಿ ತಡೆಗೋಡೆ ನಿರ್ಮಾಣವಾಗಬೇಕಾಗಿದೆ. ಬೇಳೂರು ಗುಳ್ಳಾಡಿ ಅಂಗನವಾಡಿ ಕೇಂದ್ರದಲ್ಲಿ ಒಟ್ಟು  22 ವಿದ್ಯಾರ್ಥಿಗಳಿದ್ದು, ಇಲ್ಲೂ ತಡೆಗೋಡೆ ನಿರ್ಮಾಣವಾಗಬೇಕಾಗಿದೆ.
  
ಶೌಚಾಲಯದ ಸಮಸ್ಯೆ

ಬಡಾಬೆಟ್ಟು ಸರಕಾರಿ ಪ್ರಾಥಮಿಕ ಶಾಲಾ ಸಮೀಪದ ಮುಂದುವರಿಕಾ ಶಿಕ್ಷಣ ಕೇಂದ್ರದಲ್ಲಿರುವ  ಅಂಗನವಾಡಿಯಲ್ಲಿ 20 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಕಳೆದ ಹಲವು ವರ್ಷಗಳಿಂದಲೂ ಶೌಚಾಲಯ ಪಿಟ್‌ ಬಂದ್‌ (ಬ್ಲಾಕ್‌) ಸಮಸ್ಯೆ ಕಾಡುತ್ತಿದೆ. ಈ ಬಗ್ಗೆ  ಗ್ರಾಮಸಭೆಯಲ್ಲಿ ಪ್ರತಿಧ್ವನಿಸಿದರೂ ಪರಿಹಾರ ಸಿಕ್ಕಿಲ್ಲ.

ಬೇಳೂರು ದೇವಸ್ಥಾನಬೆಟ್ಟು ಅಂಗನವಾಡಿ ಕೇಂದ್ರದಲ್ಲಿನ ಮೂಲಭೂತವಾಗಿರುವ ಕುಡಿಯುವ ನೀರಿನ ಸಮಸ್ಯೆಗಳ ಬಗ್ಗೆ ಮಕ್ಕಳ ಪೋಷಕರು ಹಲವು ಬಾರಿ ಆಗ್ರಹಿಸಿದ್ದಾರೆ. ಈ ಕುರಿತು ಸಂಬಂಧಪಟ್ಟ ಗ್ರಾ.ಪಂ.ಗೆ ಮನವಿ ಮಾಡಲಾಗಿದೆ. ಈಗಾಗಲೇ ಗ್ರಾ.ಪಂ.ವತಿಯಿಂದ ನೀರಿನ ಟ್ಯಾಂಕ್‌ ನಿರ್ಮಾಣಕ್ಕೆ  ಕಬ್ಬಿಣದ ಪಟ್ಟಿ ಅಳವಡಿಸಿದ್ದಾರೆ ಆದರೆ ನೀರಿನ ಟ್ಯಾಂಕ್‌ ಯಾವಾಗ ಅಳವಡಿಸುತ್ತಾರೋ ಎನ್ನುವ ಬಗ್ಗೆ ನಮಗೆ ಮಾಹಿತಿ ಇಲ್ಲ !
– ಪ್ರತಿಮಾ ,ಅಂಗನವಾಡಿ ಕಾರ್ಯಕರ್ತೆ.

ಬೇಳೂರು ದೇವಸ್ಥಾನಬೆಟ್ಟು ಅಂಗನವಾಡಿ ಕೇಂದ್ರದಲ್ಲಿನ ಕುಡಿಯುವ ನೀರಿನ ಸಮಸ್ಯೆ ನೀಗಿಸುವ ನಿಟ್ಟಿನಿಂದ ಈಗಾಗಲೇ ಕ್ರಿಯಾಯೋಜನೆ ಸಿದ್ಧಪಡಿಸಿದ್ದೇವೆ. ಅಲ್ಲದೆ ಪ್ರಮುಖ ಮಾರ್ಗದಲ್ಲಿ ಹಾದುಹೋಗಿರುವ ನೀರಿನ ಪೈಪ್‌ಲೈನ್‌ನಿಂದ ಅಂಗನವಾಡಿ ಕೇಂದ್ರಕ್ಕೆ ಪೈಪ್‌ ಸಂಪರ್ಕ ಕಲ್ಪಿಸಿ ಸಿಂಟೆಕ್ಸ್‌ ಟ್ಯಾಂಕ್‌ ಅಳವಡಿಸುತ್ತೇವೆ.
– ವೀರಶೇಖರ್‌ ಪಿಡಿಒ,ಗ್ರಾ.ಪಂ.ಬೇಳೂರು

Advertisement

– ಟಿ.ಲೋಕೇಶ್‌ ಆಚಾರ್ಯ ತೆಕ್ಕಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next