Advertisement

ನೀರಿನ ಕೊರತೆ ನೀಗಿಸಲು ತಾಕೀತು

01:43 PM May 29, 2018 | |

ವಿಜಯಪುರ: ಜಿಲ್ಲೆಯಾದ್ಯಂತ ಮುಂಬರುವ 20 ದಿನಗಳವರೆಗೆ ಜನ-ಜಾನುವಾರುಗಳಿಗೆ ಕುಡಿಯುವ ನೀರಿಗೆ ಯಾವುದೇ ರೀತಿಯಲ್ಲಿ ಕೊರತೆಯಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಜಿಪಂ ಸಿಇಒ ಸುಂದರೇಶಬಾಬು ಅಧಿಕಾರಿಗಳಿಗೆ ಸೂಚಿಸಿದರು.

Advertisement

ಸೋಮವಾರ ಕುಡಿಯುವ ನೀರು ಸಮಸ್ಯೆ ಕುರಿತಂತೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು, ಕರ್ನಾಟಕ ಗ್ರಾಮೀಣ ನೀರು ಸರಬರಾಜು ಇಲಾಖೆ ಹಾಗೂ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧಿಕಾರಿಗಳು ಮತ್ತು ಸಹಾಯಕ ಅಭಿಯಂತರರೊಂದಿಗೆ ಸಭೆ ನಡೆಸಿದ ಅವರು, ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಮುಂಬರುವ 20 ದಿನಗಳವರೆಗೆ ಇನ್ನೂ ಹೆಚ್ಚಿನ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕು. ಪೂರ್ಣ ಪ್ರಮಾಣದ ಮಳೆಗಾಲ ಆರಂಭ ಆಗುವವರೆಗೆ ಜನರಿಗೆ ಯಾವುದೇ ರೀತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಸೃಷ್ಟಿಯಾಗದಂತೆ ಮುನ್ನೆಚ್ಚರಿಕೆ ವಹಿಸಲು ಸೂಚನೆ ನೀಡಿದರು.

ಜಲ ಸಂಪನ್ಮೂಲ ಬತ್ತಿ ಹೋಗಿರುವ ಹಾಗೂ ನೀರಿನ ಸಮಸ್ಯೆ ಎದುರಿಸುತ್ತಿರುವ ಗ್ರಾಮಗಳಿಗೆ ತಕ್ಷಣ ನೀರು ಪೂರೈಸಬೇಕು. ಜಲ ಸಂಪನ್ಮೂಲ ಲಭ್ಯವಿದ್ದಲ್ಲಿ ಶುದ್ಧ ನೀರು ಪೂರೈಸಲು ಕ್ರಮ ಕೈಗೊಳ್ಳಬೇಕು. ತೀವ್ರ ನೀರಿನ ಸಮಸ್ಯೆ ಎದುರಿಸುತ್ತಿರುವ ಗ್ರಾಮಗಳಿಗೆ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಬೇಕು. ಮುಂದಿನ 20 ದಿನ ಸಮರ್ಪಕವಾಗಿ ಮಳೆಯಾಗದೇ ಇದ್ದ ಸಂದರ್ಭದಲ್ಲಿ ತೀವ್ರ ನೀರಿನ ಅಭಾವ ಎದುರಿಸುತ್ತಿರುವ ಗ್ರಾಮಗಳ ಹಾಗೂ ಮಳೆಯಾದ ಸಂದರ್ಭದಲ್ಲಿ ಅವಶ್ಯಕತೆಗೆ ಅನುಗುಣವಾಗಿ ನೀರು ಪೂರೈಸಲು ಕ್ರಮ ಕೈಗೊಳ್ಳಬೇಕು. ಕೊಳವೆ ಬಾವಿ ಪುನಶ್ಚೇತನ, ಫ್ಲಶಿಂಗ್‌, ಖಾಸಗಿ ಕೊಳವೆ ಬಾವಿಗಳ ಮಾಲೀಕರೊಂದಿಗೆ ಒಪ್ಪಂದ, ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡುವ ಕುರಿತಂತೆ ಸೂಕ್ತ ಪರಿಶೀಲನೆ ನಡೆಸಿ, ಯೋಜನಾಬದ್ಧವಾಗಿ ನೀರು ಪೂರೈಸಬೇಕು.

ಬಹುಗ್ರಾಮ ಕುಡಿಯುವ ಯೋಜನೆಗಳ ಮೂಲಕ ನೀರು ಪೂರೈಸುವ ಜೊತೆಗೆ ನದಿ ಕಾಲುವೆಗಳು, ಕೆರೆಗಳೂ, ಬತ್ತಿ ಹೋದಲ್ಲಿ ಸೂಕ್ತ ಪರಿಶೀಲನೆ ನಡೆಸಿ ಆದ್ಯತೆ ಮೇಲೆ ಟ್ಯಾಂಕರ್‌ ಮೂಲಕ ನೀರು ಪೂರೈಕೆಗೆ ಗಮನ ಹರಿಸಬೇಕು ಎಂದು ಸೂಚಿಸಿದರು.

ಜಿಲ್ಲೆಯಲ್ಲಿ ಮುಂಬರುವ ಜೂನ 25ರವರೆಗೆ ಎಲ್ಲ ತಾಲೂಕು ಮಟ್ಟದಲ್ಲಿ ಆಯಾ ಸಮಿತಿಗಳ ಮೂಲಕ ಸಭೆ ನಡೆಸಿ, ನೀರಿನ ಕೊರತೆ ನಿವಾರಣೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚಿಂತನೆ ನಡೆಸಬೇಕು. ಶುದ್ಧ ಕುಡಿಯುವ ನೀರಿನ ಘಟಕಗಳ ಮೂಲಕ ಶುದ್ಧ ನೀರು ಪೂರೈಕೆಯಾಗುವಂತೆ ನೋಡಿಕೊಳ್ಳಬೇಕು. ನಿಯಮಾವಳಿಯಂತೆ ವಿವಿಧ ಗ್ರಾಮಗಳಿಗೆ ಟ್ಯಾಂಕರ್‌ ಮೂಲಕ ನೀರು ಸರಬರಾಜಿಗೆ ಅನುಮೋದನೆಯನ್ನು ನಿಗದಿತ ಸಮಯದೊಳಗೆ ಪಡೆಯಬೇಕು.

Advertisement

ಪ್ರತಿ ತಿಂಗಳಿಗೊಮ್ಮೆ ವಿವಿಧ ಬಾವಿ ಹಾಗೂ ಪ್ರಮುಖ ಜಲ ಸಂಪನ್ಮೂಲಗಳ ಶುಚಿತ್ವಕ್ಕೆ ಸೂಕ್ತ ಗಮನ ನೀಡಬೇಕು. ಆಯಾ ತಾಪಂ ಇಒಗಳು ಸಂಬಂಧಪಟ್ಟ ಪಿಡಿಒಗಳ ಮೂಲಕ ಸಾಂಕ್ರಾಮಿಕ ರೋಗ ಹರಡದಂತೆ ನೀರಿನ ಶುದ್ಧೀಕರಣ, ನೀರಿನ ಟ್ಯಾಂಕ್‌ಗಳ ಸ್ವತ್ಛತೆಗೆ ಕ್ರಮ ಕೈಗೊಳ್ಳಬೇಕು. ಯಾವುದೇ ರೀತಿಯ, ರೋಗ-ರುಜಿನಗಳೂ ಹರಡದಂತೆ ಮುಂಜಾಗ್ರತೆ ವಹಿಸುವಂತೆ ಸೂಚಿಸಿದರು. 

ಜಿಲ್ಲೆಯ ಇಂಡಿ ತಾಲೂಕಿನ 21 ಗ್ರಾಮಗಳಿಗೆ, ವಿಜಯಪುರ ತಾಲೂಕಿನ 25 ಗ್ರಾಮಗಳು, 6 ತಾಂಡಾ, 3 ಜನ ವಸತಿ ಸೇರಿದಂತೆ ಒಟ್ಟು 36 ಸ್ಥಳಗಳಿಗೆ 59 ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಲಾಗುತ್ತಿದೆ. ಸಿಂದಗಿ ತಾಲೂಕಿನ 10 ಗ್ರಾಮಗಳಿಗೆ 33 ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಲಾಗುತ್ತಿದೆ.

ಮುದ್ದೇಬಿಹಾಳ ತಾಲೂಕಿನ 27 ಗ್ರಾಮಗಳಿಗೆ 43 ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಲಾಗುತ್ತಿದೆ. ಜಿಲ್ಲೆಯಾದ್ಯಂತ ಗ್ರಾಮ, ತಾಂಡಾ, ವಸತಿ ಸೇರಿದಂತೆ ಒಟ್ಟು 88 ಜನ ವಸತಿಗಳಿಗೆ 205 ಟ್ಯಾಂಕರ್‌ಗಳ ಮೂಲಕ 601 ಟ್ರಿಪ್‌ಗ್ಳ ಮೂಲಕ ಕುಡಿಯುವ ನೀರು ಪೂರೈಸಲಾಗುತ್ತಿದೆ.
 
ಬರುವ ದಿನಗಳಲ್ಲಿ ನೀರಿನ ವಿಷಯದಲ್ಲಿ ಯಾವುದೇ ಸಮಸ್ಯೆ ಬರದಂತೆ ಎಚ್ಚರಿಕೆ ವಹಿಸಬೇಕು. ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿಗೆ ಅವಶ್ಯಕತೆ ಇರುವ ಕಡೆಗೆ ಆಯಾ ನದಿ ಮೂಲಗಳಿಂದ ನೀರು ಪಡೆಯುವ ಜೊತೆಗೆ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಕೆಯಾಗುವಂತೆ ನೋಡಿಕೊಳ್ಳಲು ಸೂಚನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next