ಬೆಂಗಳೂರು: ಅಂತರ್ ರಾಜ್ಯ ನದಿ ನೀರು ಹಂಚಿಕೆ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ರಾಜ್ಯ ಸರ್ಕಾರದ ಪರ ವಾದ ಮಾಡುತ್ತಿರುವ ವಕೀಲರ ತಂಡದಲ್ಲಿ ಕೆಲ ಬದಲಾವಣೆಗಳನ್ನು ರಾಜ್ಯ ಸರ್ಕಾರ ಮಾಡಿದೆ.
ಸುಪ್ರೀಂಕೋರ್ಟ್‌ನ ಹಿರಿಯ ವಕೀಯ ಫಾಲಿ ಎಸ್. ನಾರಿಮನ್, ಶಾಮ್ ದಿವಾನ್ ಹಾಗೂ ಮೋಹನ್ ಕಾತರಕಿ ಅವರನ್ನು ಉಳಿಸಿಕೊಂಡು ಮೂರು ನದಿ ವಿವಾದಗಳಿಗೆ ಸಂಬಂಧಿಸಿದಂತೆ 9 ವಕೀಲರನ್ನು ರಾಜ್ಯ ಸರ್ಕಾರ ಕೈ ಬಿಟ್ಟಿದ್ದು, ಅವರ ಬದಲಿಗೆ ಇಬ್ಬರು ನ್ಯಾಯವಾದಿಗಳನ್ನು ನಾರಿಮನ್ ನೇತೃತ್ವದ ತಂಡಕ್ಕೆ ಸೇರ್ಪಡೆ ಮಾಡಲಾಗಿದೆ.
ಕೃಷ್ಣಾ ನದಿ ನೀರು ಹಂಚಿಕೆ ವಿಚಾರದಲ್ಲಿ ಆಂಧ್ರ ಪ್ರದೇಶ, ತೆಲಂಗಾಣ ರಾಜ್ಯಗಳು ಇಬ್ಭಾಗವಾದ ಮೇಲೆ ಹೆಚ್ಚುವರಿ ನೀರಿಗಾಗಿ ಬೇಡಿಕೆ ಇಟ್ಟಿವೆ. ಈ ಕುರಿತು ನ.15 ರಂದು ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ಆರಂಭವಾಗ ಲಿದೆ. ಈ ವಿವಾದದಲ್ಲಿ ರಾಜ್ಯದ ಪರ ವಾದ ಮಾಡುತ್ತಿದ್ದ ನಾಲ್ವರು ವಕೀಲರಾದ ಅಂಕೋಲೆಕರ್, ಶರತ್ ಜವಳಿ, ಅಜೀಂ ಕಾಳೆಬುಡ್ಡಿ, ರಣವೀರ್ ಸಿಂಗ್ ಅವರನ್ನು ಕೈ ಬಿಡಲಾಗಿದೆ.
ಕಾವೇರಿ ನದಿ ನೀರಿನ ಹಂಚಿಕೆ ಹಾಗೂ ಮೇಕೆದಾಟು ಯೋಜನೆ ಕೈಗೆತ್ತಿಕೊಳ್ಳುವ ವಿಚಾರದಲ್ಲಿ ತಮಿಳುನಾಡು ಸರ್ಕಾರ ಸಲ್ಲಿಸಿರುವ ಆಕ್ಷೇಪದ ವಿರುದ್ಧ ರಾಜ್ಯದ ಪರವಾಗಿ ವಾದ ಮಾಡುತ್ತಿದ್ದ ಬ್ರಿಜೇಶ್ ಕಾಳಪ್ಪ, ಶರತ್ ಜವಳಿ ಹಾಗೂ ಅಜೀಂ ಕಾಳೆಬುಡ್ಡಿ ಅವರನ್ನು ಕೈ ಬಿಡಲಾಗಿದೆ.
ಮಹದಾಯಿ ವಿವಾದದಲ್ಲಿ ವಾದ ಮಾಡುತ್ತಿರುವ ನ್ಯಾಯವಾದಿಗಳಾದ ಎಂ.ಬಿ. ಜವಳಿ,ಅನಿತಾ ಶೆಣೈ ಹಾಗೂ ಥಾಸಿ ವಿಶ್ವೇಶರ್ ಅವರನ್ನು ಕೈ ಬಿಡಲಾಗಿದೆ. ಅವರ ಬದಲಿಗೆ ಈ ಮೂರು ನದಿಗಳ ನೀರು ಹಂಚಿಕೆ ವಿಚಾರವಾಗಿ ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಾಡಲು ಫಾಲಿ ಎಸ್ ನಾರಿಮನ್ ತಂಡಕ್ಕೆ ಅಶ್ವಿನ್ ಚಿಕ್‌ಮಠ ಹಾಗೂ ರಾಜೇಶ್ವರ್ ಅವರನ್ನು ನೇಮಕ ಮಾಡಲಾಗಿದೆ.
ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಾಡಲು ರಾಜ್ಯ ಸರ್ಕಾರ ಸಮರ್ಥ ನ್ಯಾಯವಾದಿಗಳ ತಂಡ ಹೊಂದಿದೆ. ಫಾಲಿ ಎಸ್.ನಾರಿಮನ್, ಮೋಹನ್ ಕಾತರಕಿ ಹಾಗೂ ಶಾಮ್ ದಿವಾನ್ ವಕೀಲರ ತಂಡದಲ್ಲಿ ಮುಂದುವರಿಯಲಿದ್ದಾರೆ.
-ರಾಕೇಶ್ ಸಿಂಗ್, ಜಲ ಸಂಪನ್ಮೂಲ ಇಲಾಖೆ ಪ್ರ. ಕಾರ್ಯದರ್ಶಿ
ರಾಜ್ಯ ಸರ್ಕಾರದ ಈ ನಡೆ, ಭವಿಷ್ಯದಲ್ಲಿ ನೀರಿನ ಹಂಚಿಕೆಯಲ್ಲಿ ರಾಜ್ಯಕ್ಕೆ ಸಮಸ್ಯೆಯುಂಟು ಮಾಡುವಂತಿದೆ.
-ಬ್ರಿಜೇಶ್ ಕಾಳಪ್ಪ, ನ್ಯಾಯವಾದಿ