Advertisement

ಆದರ್ಶ ಗ್ರಾಮಕ್ಕೆ ಕೈ ಜೋಡಿಸುತ್ತಿರುವ ಬಳ್ಪ ಗ್ರಾಮಸ್ಥರು

11:57 PM Nov 12, 2019 | mahesh |

ಸುಬ್ರಹ್ಮಣ್ಯ: ಸರಕಾರ ಕೋಟಿ ರೂಪಾಯಿ ಖರ್ಚು ಮಾಡಿದ ಮಾತ್ರಕ್ಕೆ ಆದರ್ಶ ಗ್ರಾಮ ನಿರ್ಮಾಣವಾಗದು. ಗ್ರಾಮದ ಜನತೆ ಕೈ ಜೋಡಿಸಿದಾಗ ಮಾತ್ರ ಅದು ಸಾಧ್ಯ. ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ಸಂಸದ ನಳಿನ್‌ ಕುಮಾರ್‌ ಕಟೀಲು ಅವರ ಆದರ್ಶ ಗ್ರಾಮ ಬಳ್ಪದ ನಾಗರಿಕರು ಇದಕ್ಕೆ ಉದಾಹರಣೆಯಾಗಿದ್ದಾರೆ. ಗ್ರಾಮದಲ್ಲಿ ರಸ್ತೆ ನಿರ್ಮಾಣಕ್ಕೆ ಹಲವು ಮಂದಿ ಭೂಮಿ ನೀಡಿದ್ದಾರೆ. 6 ಕಡೆಗಳಲ್ಲಿ ಮೂಲ ಸೌಕರ್ಯ ವೃದ್ಧಿಗೆ ಜಾಗ ನೀಡಿ ಅಭಿವೃದ್ಧಿಗೆ ಕೈಜೋಡಿಸಿದ್ದಾರೆ. ಸ್ಥಳೀಯ ಜನಪ್ರತಿನಿಧಿಗಳೂ ಸಹಕರಿಸುತ್ತಿದ್ದಾರೆ. ದಶಕಗಳಿಂದ ರಸ್ತೆಗೆ ಸಂಬಂಧಿಸಿದ್ದ ಸಮಸ್ಯೆಗಳು ಪರಿಹಾರ ವಾಗುತ್ತಿವೆ.

Advertisement

ಬಗೆಹರಿದ ಸಮಸ್ಯೆ
ಗ್ರಾಮದ ಕಟ್ಟ ವೀರಪ್ಪ ಗೌಡ ಮತ್ತು ವೆಂಕಟ್ರಮಣ ಗೌಡರ ಮನೆಗಳಿಗೆ ರಸ್ತೆ ಸಂಪರ್ಕವಿರಲಿಲ್ಲ. 500 ಮೀ. ದೂರ ನಡೆದು ತೆರಳಬೇಕಿತ್ತು, ಸಾಮಗ್ರಿ ಸಾಗಿಸಲು ಅಡ್ಡಿಯಾಗುತ್ತಿತ್ತು. ರಸ್ತೆ ನಿರ್ಮಿಸಿ ಕೊಡುವಂತೆ ಕಂದಾಯ ಇಲಾಖೆಗೆ ಮನವಿ ಮಾಡಿದ್ದು, ಖಾಸಗಿ ತಕರಾರು ಇದ್ದ ಕಾರಣ ನ್ಯಾಯಾಲಯದ ಮೆಟ್ಟಿಲೇರಿತ್ತು. 35 ವರ್ಷಗಳಿಂದ ಇತ್ಯರ್ಥವಾಗದ ಸಮಸ್ಯೆಯನ್ನು ಬಳ್ಪ ಗ್ರಾ.ಪಂ. ಅಧ್ಯಕ್ಷ ಪ್ರಕಾಶ್‌ ಮುಟ್ನೂರು ಅವರ ಗಮನಕ್ಕೆ ತಂದು, ಬಗೆಹರಿಸುವಂತೆ ಮನವಿ ಮಾಡಲಾಗಿತ್ತು. ಅವರು ಗ್ರಾ.ಪಂ. ಸದಸ್ಯೆ ಬೇಬಿ ಭಾಸ್ಕರ ಕಟ್ಟ ಅವರ ಸಹಕಾರ ಪಡೆದು ಅಕ್ಕಪಕ್ಕದ ನಿವಾಸಿಗಳಾದ ಕಟ್ಟ ಮೋಹನ ಗೌಡ, ಪುರುಷೋತ್ತಮ ಗೌಡ, ಚಂದ್ರಶೇಖರ ಗೌಡ, ಗುಣಸಾಗರ ಗೌಡ, ಹೇಮಲತಾ ಲಿಂಗಪ್ಪ ಮಾಸ್ತರ್‌ ಮತ್ತು ವಸಂತ ಗೌಡ ಕಲ್ಗುಂಡಿ ಅವರ ಜತೆ ಮಾತುಕತೆ ನಡೆಸಿದರು. ಅವರು ತಮ್ಮ ಜಮೀನಿನಲ್ಲಿ ನೂತನ ರಸ್ತೆ ನಿರ್ಮಾಣಕ್ಕೆ ಒಪ್ಪಿಗೆ ಸೂಚಿಸಿದ್ದು, ಈಗ ನಿರ್ಮಾಣಗೊಂಡಿದೆ.

ರಸ್ತೆ ನಿರ್ಮಾಣಕ್ಕೆ ಒಪ್ಪಿಗೆ
ಕಾಂಜಿ-ಪಡಿಕಲಾಯ ಭಾಗಕ್ಕೆ ರಸ್ತೆ ಇಲ್ಲದೆ ಇತ್ತೀಚೆಗೆ ಮಳೆ ಜೋರಿದ್ದಾಗ ಅನಾರೋಗ್ಯ ಪೀಡಿತ ವ್ಯಕ್ತಿಯೊಬ್ಬರನ್ನು ಸ್ಥಳೀಯರು 1 ಕಿ.ಮೀ. ಹೊತ್ತೂಯ್ದು ಆಸ್ಪತ್ರೆಗೆ ದಾಖಲಿಸಿದ್ದರು. ದಶಕಗಳಿಂದ ಈ ಭಾಗಕ್ಕೆ ರಸ್ತೆ ಇರಲಿಲ್ಲ. ಬಳಿಕ ಸುಳ್ಯ ಶಾಸಕ ಎಸ್‌. ಅಂಗಾರ ಸ್ಥಳ ಪರಿಶೀಲನೆ ನಡೆಸಿದ್ದರು. ರಸ್ತೆ ಹಾದುಹೋಗುವ ಸ್ಥಳ ಕಿಟ್ಟಣ್ಣ ಪೂಜಾರಿ ಅವರಿಗೆ ಸೇರಿದ್ದಾಗಿತ್ತು. ಶಾಸಕರು, ಸ್ಥಳೀಯರ ಮಾತುಕತೆಯ ಬಳಿಕ ಅವರು ಸಾರ್ವಜನಿಕ ರಸ್ತೆ ನಿರ್ಮಾಣಕ್ಕೆ ಜಾಗ ನೀಡಲು ಒಪ್ಪಿದ್ದರು. ಅನಂತರ ಅಧಿಕಾರಿಗಳು ಆಗಮಿಸಿ ಅಂದಾಜು ಪಟ್ಟಿ ಸಿದ್ಧಪಡಿಸಿ ಸರಕಾರದ ಅನುಮೋದನೆಗೆ ಕಳುಹಿಸಿಕೊಟ್ಟಿದ್ದಾರೆ.

ಇಷ್ಟೇ ಅಲ್ಲ; ಗ್ರಾಮದ ಸಂಪ್ಯಾಡಿ, ಕೊಪ್ಪಾಳೆ, ಪಡಿಕಲಾಯ, ಕಾಂಜಿ, ಕಟ್ಟ ಮುಂತಾದ ಆರು ಕಡೆ ಈ ರೀತಿ ರಸ್ತೆ ವ್ಯಾಜ್ಯಕ್ಕೆ ಸಂಬಂಧಿಸಿ ಮಾತುಕತೆ ನಡೆಸಿ ಪರಿಹಾರ ಕಂಡುಕೊಳ್ಳಲಾಗಿದೆ.
ರಸ್ತೆ ಸಂಪರ್ಕ ಕಲ್ಪಿಸಲು ಸ್ಥಳೀಯಾ ಡಳಿತ ಮುಂದಾದಾಗ ಖಾಸಗಿ ಜಾಗದ ತಕರಾರು ಎದುರಾಗುತ್ತಿತ್ತು. ಅಂತಹ ಸಂದರ್ಭಗಳಲ್ಲಿ ಎರಡೂ ಕಡೆಯವರ ಜತೆ ಮಾತುಕತೆ ನಡೆಸಿ ಮನವೊಲಿಸಿ ಬಗೆಹರಿಸುವ ಪ್ರಯತ್ನ ನಡೆಸಿದೆವು. ಅದು ಯಶಸ್ವಿಯಾಗುತ್ತಿದೆ. ಗ್ರಾಮಸ್ಥರು ಕೈ ಜೋಡಿಸಿದಾಗ ಆದರ್ಶ ಗ್ರಾಮದ ಕನಸು ನನಸಾಗುವುದು ಕಷ್ಟವಲ್ಲ. ಇದು ನಮಗೆ ಸ್ಫೂರ್ತಿ ತಂದಿದೆ ಎಂದು ಬಳ್ಪ ಗ್ರಾ.ಪಂ. ಅಧ್ಯಕ್ಷ ಪ್ರಕಾಶ್‌ ಮುಟ್ನೂರು ಪ್ರತಿಕ್ರಿಯಿಸಿದ್ದಾರೆ.

ಗ್ರಾಮದ ಅಭಿವೃದ್ಧಿಗೆ ಜನರು ಸ್ಪಂದಿಸುವ ಮೂಲಕ ಸಹಕಾರ ನೀಡುತ್ತಿರುವುದು ಆದರ್ಶ ಗ್ರಾಮದ ಕಲ್ಪನೆಗೆ ಪೂರಕವಾಗಿದೆ. ಜನರ ಸಹಕಾರದಿಂದ ಗ್ರಾಮ ಅಭಿವೃದ್ಧಿಯ ಕಡೆಗೆ ಹೆಜ್ಜೆ ಹಾಕುತ್ತಿದೆ.
– ನಳಿನ್‌ಕುಮಾರ್‌ ಕಟೀಲು, ಸಂಸದರು

Advertisement

ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಮೂಲ ಸೌಕರ್ಯಗಳಿಂದ ವಂಚಿತರಾಗಬಾರದು. ಎಲ್ಲರಿಗೂ ಸೌಲಭ್ಯಗಳು ಸಿಗಬೇಕು. ಗ್ರಾಮದಲ್ಲಿ ಪರಸ್ಪರ ಸಹಕಾರ ಅಗತ್ಯ. ಇದನ್ನು ಮನಗಂಡು ನಾವು ರಸ್ತೆ ನಿರ್ಮಿಸಲು ಜಾಗ ನೀಡಿದ್ದೇವೆ.
– ಅಭಿಲಾಷ್‌ ಕಟ್ಟ, ಸ್ಥಳೀಯ

– ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next