ಅಂಕೋಲಾ: ತಾಲೂಕಿನಲ್ಲಿ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ಪೂಜಗೇರಿ ನದಿಬಾಗ ಹಳ್ಳದ ಹಿನ್ನೀರು ಏರುತ್ತಿದ್ದು, ಹಿನ್ನೀರಿನ ಪ್ರದೇಶದಲ್ಲಿರುವ ಮನೆಗಳಿಗೆ ನೀರು ನುಗ್ಗುತ್ತಿರುವ ಕಾರಣ ನದಿಬಾಗ ಗ್ರಾಮಸ್ಥರೆಲ್ಲರೂ ಹಳ್ಳ ಸಮುದ್ರ ಸೇರುವ ಕೋಡಿಯನ್ನು ಕಡಿದು ಹಳ್ಳದ ಹಿನ್ನೀರನ್ನು ಸಮುದ್ರದ ಒಡಲಿಗೆ ಸೇರಲು ದಾರಿ ಮಾಡಿಕೊಟ್ಟಿದ್ದಾರೆ.
ತಾಲೂಕಿನ ನದಿಬಾಗ ಪ್ರದೇಶದಲ್ಲಿ ಬುಧವಾರ ಬೆಳಗ್ಗೆ ಗ್ರಾಮದ ಯುವಕರು, ಹಿರಿಯರು ಕೂಡಿಕೊಂಡು ಕೋಡಿ ಕಡಿಯುವ ಕಾಯಕ ಮಾಡಿದ್ದಾರೆ. ಬೇಸಿಗೆಯ ಸಂದರ್ಭದಲ್ಲಿ ಹಳ್ಳ ಹರಿದು ಸಮುದ್ರ ಸೇರುವ ಕೋಡಿಯು ಅಲೆಯ ರಭಸಕ್ಕೆ ಉಸುಕಿನಿಂದ ಮುಚ್ಚಿ ಹೋಗುತ್ತದೆ. ಅದನ್ನು ಮಳೆಗಾಲದಲ್ಲಿ ಹಳ್ಳದ ಹಿನ್ನೀರಿನ ಪ್ರದೇಶವಾದ ಕೃಷಿ ಜಮೀನು ಹಾಗೂ ತಟದಲ್ಲಿರುವ ಮನೆಗಳಿಗೆಲ್ಲ ನೀರು ಒಳನುಗ್ಗುತ್ತದೆ. ವಂದಿಗೆ, ಹೊಸಗದ್ದೆ, ಬೆಟ್ಟದ ಮೇಲಿನಿಂದ ಮಳೆಗಾಲದಲ್ಲಿ ಹರಿದು ಬರುವ ನೀರು ಇದೆ ಹಳ್ಳದಿಂದ ಸಮುದ್ರ ಸೇರಬೇಕು.
ಆರಂಭದ ಮಳೆಗೆ ಹಳ್ಳವು ತುಂಬುತ್ತಿರುವುದನ್ನು ಕಂಡು ನದಿಬಾಗ ಗ್ರಾಮದ ಗ್ರಾಮಸ್ಥರು ಇದು ಒಂದು ಹಬ್ಬದಂತೆ ನೈಸರ್ಗಿಕವಾಗಿ ಉಸುಕಿನಿಂದ ತುಂಬಿಕೊಂಡಿರುವ ಕೋಡಿ ಕಡಿಯುವ ಕಾಯಕದಲ್ಲಿ ತೊಡಗಿಕೊಳ್ಳುತ್ತಾರೆ. ಕೋಡಿಯಲ್ಲಿರುವ ಉಸುಕನ್ನು ತೆರವು ಮಾಡಲು ಸುಮಾರು ಹತ್ತು ಗಂಟೆ ಕೆಲಸವನ್ನು ಮಾಡಿ ಹಳ್ಳದ ಹಿನ್ನೀರನ್ನು ಸಮುದ್ರದ ಒಡಲಿಗೆ ಸೇರಿಸುತ್ತಾರೆ.
ಸ್ಥಳೀಯ ಬೊಬ್ರವಾಡಾ ಗ್ರಾಪಂ ಕೋಡಿ ಕಡಿಯುವುದಕ್ಕೆ ಸಹಾಯಧನವಾಗಿ ಹತ್ತು ಸಾವಿರ ರೂ. ಕೊಡುವುದು ಬಿಟ್ಟರೆ ಸರಕಾರದಿಂದ ಇನ್ನಾವುದೆ ಅನುದಾನ ಬರುತ್ತಿಲ್ಲ. ಇದು ನಾಲ್ಕು ಗ್ರಾಪಂ ಅವರಿಗೆ ಸಂಬಂಧಿಸಿದ್ದಾದರೂ ಒಂದೇ ಗ್ರಾ.ಪಂ ಮಾತ್ರ ಇದರಲ್ಲಿ ಭಾಗಿಯಾಗುತ್ತದೆ. ಕೋಡಿ ಕಡಿಯುವುದು ಒಂದು ಅಪಾಯದ ಕೆಲಸವಾದರೂ ಇಲ್ಲಿಯ ಗ್ರಾಮಸ್ಥರು ಅದನ್ನು ವರ್ಷಕ್ಕೊಮ್ಮೆ ಉತ್ಸಾಹದಿಂದ ಮಾಡಿ ಜನರ ಆತಂಕ ದೂರ ಮಾಡುತ್ತಾರೆ.