Advertisement

ಮುಲ್ಲಾಮಾರಿಗೆ ನೀರು ಬಿಡಲು ಗ್ರಾಮಸ್ಥರ ಒತ್ತಾಯ

09:38 AM Feb 07, 2019 | |

ಚಿಂಚೋಳಿ: ತಾಲೂಕಿನ ರೈತರ ಹಾಗೂ ದನಕರುಗಳ ಜೀವನಾಡಿ ಆಗಿರುವ ಮುಲ್ಲಾಮಾರಿ ನದಿಗೆ ಕೆಳದಂಡೆ ಮುಲ್ಲಾಮಾರಿ ಜಲಾಶಯದಿಂದ ನೀರು ಬಿಡಬೇಕೆಂದು ನದಿ ಪಾತ್ರದ ಗ್ರಾಮಸ್ಥರು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.

Advertisement

ತಾಲೂಕಿನಲ್ಲಿ ಪ್ರಸಕ್ತ ಸಾಲಿನಲ್ಲಿ ನಿರೀಕ್ಷೆಯಂತೆ ಮುಂಗಾರು ಮತ್ತು ಹಿಂಗಾರಿನಲ್ಲಿ ಮಳೆ ಆಗದೇ ಇರುವುದರಿಂದ ತಾಲೂಕಿನ ಅನೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಪ್ರತಿ ವರ್ಷ ಮುಲ್ಲಾಮಾರಿ ನದಿಯಲ್ಲಿ ನೀರು ಹರಿಯುತ್ತಿದ್ದುದರಿಂದ ಯಾವುದೇ ಸಮಸ್ಯೆ ಎದುರಾಗಿರಲಿಲ್ಲ. ಈಗ ಡಿಸೆಂಬರ, ಜನವರಿ ತಿಂಗಳಲ್ಲಿ ನದಿ ದಿನೇ ದಿನೇ ಒಣಗುತ್ತಿರುವುದರಿಂದ ನದಿ ಪಾತ್ರದ ಕೆಳಭಾಗದ ಹಳ್ಳಿಗಳ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಕೊರತೆ ಉಂಟಾಗಿದೆ.

ಚಿಮ್ಮನಚೋಡ, ತಾಜಲಾಪುರ, ಕನಕಪುರ, ಗಾರಂಪಳ್ಳಿ, ಗೌಡನಹಳ್ಳಿ, ನಿಮಾಹೊಸಳ್ಳಿ, ಚಿಂಚೋಳಿ,ಪೋಲಕಪಳ್ಳಿ, ಅಣವಾರ, ಗಂಗನಪಳ್ಳಿ, ಗೆರಗಪಳ್ಳಿ, ಇರಗಪಳ್ಳಿ, ಕರ್ಚಖೇಡ, ಜಟ್ಟೂರ, ಹಲಕೋಡ, ಪೋತಂಗಲ್‌ ನದಿ ಪಾತ್ರದ ಕೆಳಭಾಗದ ಗ್ರಾಮಗಳಾಗಿವೆ.

ನದಿಯಲ್ಲಿ ಗಿಡ ಗಂಟಿಗಳು ಅತಿ ಹೆಚ್ಚು ಬೆಳೆದಿರುವುದರಿಂದ ನೀರು ಮುಂದಕ್ಕೆ ಹರಿದು ಹೋಗಲು ಆಗುತ್ತಿಲ್ಲ. ಹೀಗಾಗಿ ದನಕರುಗಳಿಗೆ ನೀರಿನ ಕೊರತೆ ಉಂಟಾಗಿದೆ. ಮುಲ್ಲಾಮಾರಿ ಜಲಾಶಯದ ನೀರಿನ ಮೇಲೆ ಅನೇಕ ಗ್ರಾಮಗಳು ಅವಲಂಬಿತ ಆಗಿರುವುದರಿಂದ ತರಕಾರಿ ಬೆಳೆಗಳಿಗೆ ಹಾಗೂ ಬಟ್ಟೆ ಒಗೆಯಲು ನೀರಿನ ಸಮಸ್ಯೆ ಉಂಟಾಗಿದೆ.

ತತ್ತರಿಸಿವೆ ಜಾನುವಾರು: ತಾಲೂಕಿನಲ್ಲಿ ಕುಡಿಯುವ ನೀರಿನ ಸ್ಥಿತಿ ಗಂಭೀರವಾಗಿದೆ. ಕೂಡಲೇ ಮುಲ್ಲಾಮಾರಿ ಜಲಾಶಯದಿಂದ ನೀರು ಬಿಟ್ಟರೆ ದನಕರುಗಳಿಗೆ ಹಾಗೂ ಗ್ರಾಮಗಳ ಜನರಿಗೆ ಉಪಯೋಗ ಆಗಲಿದೆ. ಬೋರವೆಲ್‌ಗ‌ಳು ಬತ್ತಿವೆ. ಸಾರ್ವಜನಿಕ ಬಾವಿಗಳಲ್ಲಿ ಅಂರ್ತಜಲ ಮಟ್ಟ ಕುಸಿಯುತ್ತಿದೆ. ಜಿಲ್ಲಾಧಿಕಾರಿಗಳು ಕೂಡಲೇ ಗಮನ ಹರಿಸಿ ನದಿಗೆ ನೀರು ಬಿಡಬೇಕೆಂದು ರೈತ ಮುಖಂಡ ಭೀಮಶೆಟ್ಟಿ ಮುಕ್ಕಾ ಮನವಿ ಮಾಡಿದ್ದಾರೆ.

Advertisement

ನೀರಿದ್ದರೂ ಪರದಾಟ: ತಾಲೂಕಿನ ಮುಲ್ಲಾಮಾರಿ ಡ್ಯಾಂನಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರಿನ ಸಂಗ್ರಹವಿದ್ದರೂ ತಾಲೂಕಿನ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ ಎಂದು ಬಿಜೆಪಿ ಮುಖಂಡ ಭೀಮಶೆಟ್ಟಿ ಜಾಬಶೆಟ್ಟಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಾಲೂಕಿನಲ್ಲಿ ಹಿಂದೆಂದಿಗೂ ಇಷ್ಟು ನೀರಿನ ಸಮಸ್ಯೆ ಎದುರಾಗಿಲ್ಲ. ಆದರೆ ಮುಲ್ಲಾಮಾರಿ ನದಿಯಲ್ಲಿ ಅಲ್ಲಲ್ಲಿ ಬೆಳೆದಿರುವ ಗಿಡಮರಗಳು, ಅಕ್ರಮ ಮರಳುಗಾರಿಕೆಯಿಂದ ತಾಲೂಕಿನಲ್ಲಿ ನೀರಿನ ಸಮಸ್ಯೆ ಉಂಟಾಗಿದೆ ಎಂದು ರೈತರು ದೂರಿದ್ದಾರೆ.

ಪ್ರತಿನಿತ್ಯ 275 ಕ್ಯೂಸೆಕ್‌ ನೀರು ನದಿಗೆ
ಚಿಂಚೋಳಿ:
ತಾಲೂಕಿನ ಕೆಳದಂಡೆ ಮುಲ್ಲಾಮಾರಿ ಜಲಾಶಯದಿಂದ (ನಾಗರಾಳ) ಫೆ.7ರಂದು 14ರ ವರೆಗೆ ಪ್ರತಿನಿತ್ಯ ಗೇಟುಗಳ ಮೂಲಕ 275 ಕ್ಯೂಸೆಕ್‌ ನೀರನ್ನು ನದಿಗೆ ಹರಿ ಬಿಡಲಾಗುವುದೆಂದು ಕೆಳದಂಡೆ ಮುಲ್ಲಾಮಾರಿ ಯೋಜನೆ ಎಇಇ ವಿಲಾಸಕುಮಾರ ಕುಲಕರ್ಣಿ ತಿಳಿಸಿದ್ದಾರೆ. ಪ್ರಾದೇಶಿಕ ಆಯುಕ್ತರು ಸೇಡಂ ಪಟ್ಟಣಕ್ಕೆ ಕುಡಿಯುವ ನೀರಿನ ವ್ಯವಸ್ಥೆಗಾಗಿ ನೀರನ್ನು ಬಿಡಲು ಸೂಚಿಸಿದ್ದರಿಂದ ಫೆ. 7ರಿಂದ 14ರ ವರೆಗೆ 275 ಕ್ಯೂಸೆಕ್‌ ನೀರನ್ನು ಪ್ರತಿನಿತ್ಯ ಮುಲ್ಲಾಮಾರಿ ನದಿಗೆ ಬಿಡಲಾಗುತ್ತಿದೆ. ನದಿಗೆ ಬಿಟ್ಟಂತ ನೀರು ಸೇಡಂ ಪಟ್ಟಣಕ್ಕೆ ಶೀಘ್ರವಾಗಿ ತಲುಪಲು ಸಣ್ಣ ನೀರಾವರಿ ಇಲಾಖೆಯವರು ತಮ್ಮ ಅಧೀನದಲ್ಲಿ ಬರುವ ಬ್ಯಾರೇಜಗಳಿಗೆ ಅಳವಡಿಸಲಾಗಿರುವ ಗೇಟ್ ಮೇಲಕ್ಕೆತ್ತಿ ನೀರು ಮುಂದಕ್ಕೆ ಹರಿದು ಹೋಗಲು ಅನುವು ಮಾಡಿಕೊಡಬೇಕೆಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next