ಮುದ್ದೇಬಿಹಾಳ: ಹಳ್ಳೂರ ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆಗೀಡಾದ ಯಮನಪ್ಪ ಭಜಂತ್ರಿ ಕುಟುಂಬದವರ ಮೇಲೆ ಕೊಲೆ ಮಾಡಿದ ಆರೋಪಿ ಸಾಬಣ್ಣ ಉಕ್ಕಲಿ ಕುಟುಂಬದವರು ಜೀವ ಬೆದರಿಕೆ ಹಾಕಿದ್ದೂ ಅಲ್ಲದೆ ಜಾತಿ ನಿಂದನೆ ಮಾಡಿದ್ದಾರೆ ಎಂದು ಆಪಾದಿಸಿ ಯಮನಪ್ಪನ ಪತ್ನಿ ನೀಲವ್ವ ಶುಕ್ರವಾರ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಹಾಲುಮತ ಸಮಾಜದ ಅಮೋಘಿ
ಉಕ್ಕಲಿ, ಬಸವರಾಜ ಉಕ್ಕಲಿ, ಮುತ್ತಪ್ಪ ಉಕ್ಕಲಿ, ಚಂದಪ್ಪ ಉಕ್ಕಲಿ, ಬಸವ್ವ ಉಕ್ಕಲಿ, ಲಕ್ಷ್ಮೀಬಾಯಿ ಉಕ್ಕಲಿ, ಇಂದ್ರವ್ವ ಉಕ್ಕಲಿ ವಿರುದ್ಧ ದೂರು ದಾಖಲಿಸಿದ್ದಾರೆ.
ಜಾತಿ ನಿಂದನೆ ಪ್ರಕರಣದ ತನಿಖೆ ನೇರವಾಗಿ ಡಿವೈಎಸ್ಪಿ ಅಡಿ ನಡೆಯುವುದರಿಂದ ಬಸವನಬಾಗೇವಾಡಿ ಡಿವೈಎಸ್ಪಿ ಮಹೇಶ್ವರಗೌಡ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ದೂರಿನಲ್ಲಿರುವ ಆರೋಪಿಗಳ ಬಂಧನಕ್ಕೆ ಸೂಚಿಸಿದ್ದರಿಂದ ಸ್ಥಳೀಯ ಪೊಲೀಸರು ಆರೋಪಿಗಳ ಬಂಧನಕ್ಕೆ ಜಾಲ ಬೀಸಿದ್ದಾರೆ.
ಈ ಮಧ್ಯೆ ಕೊಲೆ ಘಟನೆ ಬಗ್ಗೆ ಯಮನಪ್ಪ ಭಜಂತ್ರಿಯ ಮಗ ಬಸವರಾಜ ಭಜಂತ್ರಿ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಆರೋಪಿ ಸಾಬಣ್ಣ ಉಕ್ಕಲಿ ವಿರುದ್ಧ ದೂರು ದಾಖಲಿಸಿದ್ದು 2016ರ ಜನೆವರಿ ತಿಂಗಳಲ್ಲಿ ಕೊಲೆಯಾದ ಯಮನಪ್ಪನ 7 ವರ್ಷದ ಮೊಮ್ಮಗಳನ್ನು ಆರೋಪಿ ಸಾಬಣ್ಣನ ಅಣ್ಣನ ಮಗ ಬಸಪ್ಪ ಉಕ್ಕಲಿ (20) ರೇಪ್ ಮಾಡಿದ್ದ ಘಟನೆ ನಡೆದಿದ್ದು ಈ ಬಗ್ಗೆ ಆರೋಪಿಗೆ ಜೈಲು ಶಿಕ್ಷೆಯಾಗಿದ್ದು ಅದೇ ದ್ವೇಷದಿಂದ ಈ ಕೊಲೆ ಮಾಡಲಾಗಿದೆ ಎಂದು ತಿಳಿಸಿದ್ದಾನೆ.
ಸರ್ಕಾರಿ ಆಸ್ಪತ್ರೆಯಲ್ಲಿ ರಂಪಾಟ: ಯಮನಪ್ಪನ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಇಲ್ಲಿನ ತಾಲೂಕು ಸರ್ಕಾರಿ ಆಸ್ಪತ್ರೆ ಶವಾಗಾರಕ್ಕೆ ಗುರುವಾರ ರಾತ್ರಿಯೇ ತಂದಿರಿಸಲಾಗಿತ್ತು. ಶುಕ್ರವಾರ ಬೆಳಗ್ಗೆ 11 ಗಂಟೆ ದಾಟಿದರೂ ಮರಣೋತ್ತರ ಪರೀಕ್ಷೆ ಕೈಗೊಂಡಿರಲಿಲ್ಲ. ಇದರಿಂದ ಆಕ್ರೋಶಗೊಂಡ ಭಜಂತ್ರಿ ಸಮಾಜದ ಧುರೀಣರು, ಮೃತನ ಕುಟುಂಬದ ಸದಸ್ಯರು ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸತೊಡಗಿದರು. ಈ ಸಂದರ್ಭ ಆಸ್ಪತ್ರೆಯಲ್ಲಿ ಕರ್ತವ್ಯದ ಮೇಲಿದ್ದ ವೈದ್ಯೆ ಡಾ| ಮಾನಸಾ ಅವರು ಮರಣೋತ್ತರ ಪರೀಕ್ಷೆ ನಡೆಸಲು ನಿರಾಕರಿಸಿದ್ದು ಭಜಂತ್ರಿ ಸಮಾಜದವ ಆಕ್ರೋಶಕ್ಕೆ ಕಾರಣವಾಯಿತು.
ಇದಲ್ಲದೆ ಡಾ| ಮಾನಸಾ ಅವರು ಅತಿರೇಕದಿಂದ ನಡೆದುಕೊಂಡದ್ದು ವಾಗ್ವಾದಕ್ಕೆ ಕಾರಣವಾಯಿತು. ಈ ಹಂತದಲ್ಲಿ ಪೊಲೀಸರು ಮಧ್ಯೆಪ್ರವೇಶಿಸಿ ವಾಗ್ವಾದ ತಣ್ಣಗಾಗಿಸಿದರು. ಆ ವೈದ್ಯೆ ತನಗೆ ಮರಣೋತ್ತರ ಪರೀಕ್ಷೆ ಅನುಭವದ ಕೊರತೆ ಇರುವುದರಿಂದ ಪರೀಕ್ಷೆ ನಡೆಸೊಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿಗೆ ತಿಳಿಸಿದ ಮೇಲೆ ಜಿಲ್ಲಾ ಆರೋಗ್ಯಾಧಿಕಾರಿಗಳು ಪರ್ಯಾಯ ವ್ಯವಸ್ಥೆ ಮಾಡಿ ಶವ ಪರೀಕ್ಷೆಗೆ ಅವಕಾಶ ಮಾಡಿಕೊಟ್ಟರು. ಈ ಸಂದರ್ಭ ಬಸವನಬಾಗೇವಾಡಿ ಡಿವೈಎಸ್ಪಿ ಮಹೇಶ್ವರಗೌಡ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ವಿಡಿಯೋ ವೈರಲ್: ಹಳ್ಳೂರ ಗ್ರಾಮದಲ್ಲಿ ಕೊಲೆ ಘಟನೆ ನಡೆದ ಮೇಲೆ ಕೊಲೆ ಮಾಡಿದ ಸಾಬಣ್ಣ ಉಕ್ಕಲಿ ಶವದ ಹತ್ತಿರವೇ ನಿಂತುಕೊಂಡು ಕೊಲೆ ಬಗ್ಗೆ ಆಡಿರುವ ಮಾತುಗಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನಾನು ಜೈಲಿಗೆ ಹೋಗಲು ತಯಾರಿದ್ದೇನೆ.
ಫೌಜಾರ್ (ಪಿಎಸೈ) ಬಂದ್ ನನಗೇನು ಮಾಡ್ತಾನ. ನಾನು ಇನ್ನೂ ಇಬ್ಬರನ್ನು ತೆಗೀಬೇಕಾಗಿದೆ. ಇಂವಾ (ಕೊಲೆಯಾದವ) ನನ್ನ ಮನೆಯನ್ನೇ ಹಾಳ ಮಾಡ್ಯಾನ. ಅದಕ್ಕೆ ಅವನನ್ನ ಕಡದೀನಿ. ಯಾರ ಬರತಾರ ಬರ್ಲಿ. ನಾನು ಎಲ್ಲಕ್ಕೂ ತಯಾರಿದ್ದೇನೆ ಮುಂತಾದ ಮಾತುಗಳನ್ನು ಆಡಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.