Advertisement

ಸಂತ್ರಸ್ತರ ಖಾತೆಗೆ ಇನ್ನೂ ಬಂದಿಲ್ಲ ಪರಿಹಾರ

03:52 PM Sep 28, 2022 | Team Udayavani |

ರಾಮನಗರ: ತಂತ್ರಜ್ಞಾನ ಎಷ್ಟೇ ಬೆಳೆದರೂ ಕೂಡ ಸರ್ಕಾರದ ಯಾವುದೇ ಯೋಜನೆ ಜನಸಾಮಾನ್ಯರಿಗೆ ತಲುಪಲು ಸಾಕಷ್ಟು ಹರಸಾಹಸಪಡಬೇಕು ಎನ್ನುವುದು ಪದೇ ಪದೆ ಸಾಬೀತಾಗುತ್ತಿದೆ.

Advertisement

ಹೌದು, ಆಗಸ್ಟ್‌ ತಿಂಗಳಲ್ಲಿ ಸುರಿದ ಮಳೆಗೆ ರಾಮನಗರ ಜಿಲ್ಲೆ ಅಕ್ಷರಶಃ ನಲುಗಿ ಹೋಗಿತ್ತು. ಆ ವೇಳೆ ಮನೆಗಳಿಗೆ ನೀರು ನುಗ್ಗಿ ಸಾಕಷ್ಟು ಅವಾಂತರಗಳನ್ನೇ ಸೃಷ್ಟಿಸಿತ್ತು. ಸಾಮಾನ್ಯರ ಬದುಕು ಬೀದಿಗೆ ಬಿದ್ದಿದ್ದು ಕಂಡು, ಖುದ್ದು ರಾಜ್ಯದ ದೊರೆಯೇ ತತ್‌ ಕ್ಷಣವೇ 10 ಸಾವಿರ ರೂ. ತಾತ್ಕಾಲಿಕ ಪರಿಹಾರ ಪ್ರತಿಯೊಬ್ಬರಿಗೂ ನೀಡು ವಂತೆ ಘೋಷಿಸಿದ್ದರು. ಅದು ಎರಡು ತಿಂಗಳಾದರೂ ಖಾತೆಗೆ ಬರದೆ ಒದ್ದಾಡುತ್ತಿದೆ. ಇದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣವಾಗಿದೆ.

ತಾಲೂಕು ಕಚೇರಿಗೆ ಅಲೆದಾಟ: ನಗರದಲ್ಲಿ ಕಳೆದ ಆಗಸ್ಟ್‌ ತಿಂಗಳಲ್ಲಿ ಸುರಿದ ಮಳೆಗೆ ಭಕ್ಷಿಕೆರೆ ಹೊಡೆದು ಹೋಗಿ ಸಾವಿರಾರು ಮನೆಗಳಿಗೆ ನೀರು ನುಗ್ಗಿತ್ತು. ಅಲ್ಲದೆ, ಮನೆಯಲ್ಲಿದ್ದ ದಿನಬಳಕೆ ವಸ್ತುಗಳು, ಆಹಾರ ಸಾಮಗ್ರಿಗಳು ಕೊಚ್ಚಿ ಹೋಗಿದ್ದವು. ಬೀದಿಗೆ ಬಿದ್ದ ಬಡಜನರ ಬದುಕು ನೋಡಲು ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಸೇರಿದಂತೆ ಸಚಿವರ ದಂಡು ಆಗಮಿಸಿತ್ತು. ಆಗಿರುವ ಅವಾಂತರ ಕಂಡು ಕೂಡಲೇ ತಾತ್ಕಾಲಿಕ ಪರಿಹಾರ ಕಾರ್ಯ ಕೈಗೊಳ್ಳಬೇಕು, ನೆರೆಯಿಂದ ಹಾನಿಯಾದವರಿಗೆ ತುರ್ತು ಸೇವೆ ನೀಡಬೇಕೆಂದು ಅಧಿಕಾರಿಗಳಿಗೆ ತಾಕೀತು ಮಾಡಿದ್ದರು. ಜೊತೆಗೆ ದಾಖಲಾತಿಗಳ ತೊಂದರೆ ಇದ್ದರೂ ಕೂಡ ನೈಜ ಫಲಾನುಭವಿಗಳನ್ನು ಗುರುತಿಸುವ ಮೂಲಕ ತತ್‌ಕ್ಷಣದ ಪರಿಹಾರವಾಗಿ 10 ಸಾವಿರ ರೂ.ಗಳನ್ನು ಖಾತೆಗೆ ಜಮಾ ಮಾಡುವಂತೆ ಸೂಚಿಸಿದ್ದರು. ಗುರುತಿಸುವ ಕಾರ್ಯ ವೇಗವಾಗಿ ನಡೆಯುವ ಮಾತಾದರೂ ಪರಿಹಾರ ಮೊತ್ತ ಕಳುಹಿಸಲು ಅಧಿಕಾರಿಗಳು ತಮ್ಮ ಸಾಮಾನ್ಯ ಸ್ಥಾನಮಾನ ಬಿಟ್ಟುಕೊಡಲಿಲ್ಲ. ಖಾತೆಗೆ ಹಣ ಜಮಾವಣೆಯಾಗದೆ, ಪ್ರತಿದಿನ ಸಂತ್ರಸ್ತರು ತಾಲೂಕು ಕಚೇರಿ ಬಳಿ ಅಲೆದಾಡುವಂತಾಗಿದೆ.

ಎಂಟ್ರಿಯಲ್ಲಿ ವ್ಯತ್ಯಾಸ: ಸರ್ಕಾರ ನಿಗದಿ ಮಾಡಿದ 10 ಸಾವಿರ ಹಣ ನೀಡಲು 8 ಹಂತಗಳಲ್ಲಿ 2267 ಫಲಾನುಭವಿಗಳನ್ನು ಗುರುತಿಸಿದ್ದರು. ಅವರೆಲ್ಲರ ಬ್ಯಾಂಕ್‌ ಖಾತೆಯ ಪುಸ್ತಕದ ನಕಲು ಪ್ರತಿ, ಆಧಾರ್‌ ಜೆರಾಕ್ಸ್‌ ಸೇರಿದಂತೆ ಮೊಬೈಲ್‌ ಸಂಖ್ಯೆಯನ್ನು ಪಡೆದು ದಾಖಲು ಮಾಡಲಾಗಿತ್ತು. ವಿಪರ್ಯಾಸ ಎಂದರೆ ಕೆಲವು ನೌಕರರ ಕರಾಮತ್ತಿನಿಂದಾಗಿ ಎಂಟ್ರಿ ವೇಳೆಯೇ ಉದ್ದೇಶ ಪೂರ್ವಕವಾಗಿ ವ್ಯತ್ಯಾಸ ಮಾಡಲಾಗಿದೆ. ಖಾತೆ ನಂ ಇರುವ ನಕಲು ಪ್ರತಿ ನೀಡಿದ ಮೇಲೆ ಅಕೌಂಟ್‌ ನಂ ಲೋಪವಾಗಲು ಹೇಗೆ ಸಾಧ್ಯ? ಅಲ್ಲದೆ, ಆರ್‌ಟಿಜಿಎಸ್‌ ಮುಖಾಂತರ ಹಣ ಕಳಿಸುವ ಉದ್ದೇಶಿಸಲಾಗಿದ್ದು, ಕೇವಲ ಮೊಬೆ„ಲ್‌ ನಂ ಇದ್ದರೂ ಬ್ಯಾಂಕ್‌ಗಳಲ್ಲಿ ಪತ್ತೆ ಹಚ್ಚಿ ಕಳುಹಿಸಬಹುದು. ಆದರೆ, ಅಧಿಕಾರಿ ವರ್ಗಕ್ಕೆ ಇದರ ಅವಶ್ಯವಿಲ್ಲ ಎನ್ನುವುದು ಮೇಲ್ನೋಟಕ್ಕೆ ಕಾಣಿಸುತ್ತಿದೆ.

ಅಲ್ಲದೆ, ಒಬ್ಬ ಕೂಲಿ ಕಾರ್ಮಿಕ ತನ್ನೆಲ್ಲಾ ಕೆಲಸ ಕಾರ್ಯ ಬಿಟ್ಟು ಪರಿಹಾರದ 10 ಸಾವಿರ ಹಣಕ್ಕಾಗಿ 10ರಿಂದ 15 ಭಾರಿ ಬರಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಸಿಗುವ 10 ಸಾವಿರಕ್ಕೆ 15 ದಿನದ ಕೆಲಸ ಕಾರ್ಯ ಬಿಟ್ಟು ಬಂದರೆ ಅಷ್ಟೇ ಪ್ರಮಾಣದ ನಷ್ಟವಾಗುತ್ತದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ನಿತ್ಯ ನೂರಾರು ಜನ ಬಡವರು ತಹಶೀಲ್ದಾರ್‌ ಕಚೇರಿ ಬಳಿ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ, ಕ್ಯೂ ನಿಂತು ಮತ್ತೂಮ್ಮೆ ದಾಖಲೆ ನೀಡಿದರೆ ಇನ್ನೂ ಹತ್ತು ದಿನ ಎಂದು ಹೇಳಿ ಕಳಿಸುತ್ತಾರೆ ಎಂಬ ಆರೋಪ ಕೇಳಿಬರುತ್ತಿದೆ.

Advertisement

ಅಧಿಕಾರಿಗಳು ಕ್ರಮವಹಿಸಿ: ಸಂತ್ರಸ್ತರು ದಾಖಲೆ ನೀಡಿದ್ದರೂ, ಪದೇ ಪದೆ ದಾಖಲೆ ಕೇಳುವ ನೆಪದಲ್ಲಿ ಕಚೇರಿ ನೌಕರರು ಸಂತ್ರಸ್ತರಲ್ಲಿ ಡಿಮ್ಯಾಂಡ್‌ ಕ್ರಿಯೇಟ್‌ ಮಾಡಿಕೊಳ್ಳುವ ಮೂಲಕ ಕದ್ದು ಮುಚ್ಚಿ, ಹಣ ಪೀಕುವ ದಂಧೆಗೆ ಮುಂದಾಗಿದ್ದಾರೆ ಎನ್ನುವ ಆರೋಪಗಳು ಹರಿದಾಡುತ್ತಿದೆ. ಅದಕ್ಕೆ ಇಂಬು ನೀಡುವಂತೆ ದಾಖಲೆ ನೋಡಿ, ಎಂಟ್ರಿ ಮಾಡುವಾಗ ಉದ್ದೇಶ ಪೂರ್ವಕವಾಗಿ ವ್ಯತ್ಯಾಸ ಮಾಡಿದ್ದಾರೆ ಎನ್ನುವುದು ಸ್ಪಷ್ಟವಾಗಿದೆ. ಬಡ ಸಂತ್ರಸ್ತರು ಪದೇ ಪದೆ ಬರಲಾಗದೆ ಇರೋದಕ್ಕೆ ಲಂಚ ಕೊಟ್ಟಾದರೂ ಸರಿ, ಪರಿಹಾರ ಹಣ ಸಿಕ್ಕರೆ ಸಾಕು ಎನ್ನುವ ತೀರ್ಮಾನಕ್ಕೆ ಬಂದಿದ್ದಾರೆ. ಇನ್ನಾದರೂ ಸರ್ಕಾರ ಸಂಬಂಧಪಟ್ಟ ಅಧಿಕಾರಿಗಳು ಕ್ರಮವಹಿಸಿ, ಫಲಾನುಭವಿಗಳ ಖಾತೆಗೆ ಹಣ ಜಮಾ ಮಾಡಬೇಕು. ಸಂತ್ರಸ್ತರ ಅಲೆದಾಟ ತಪ್ಪಿಸಬೇಕಿದೆ.

ಅಲೆದಾಟ ತಪ್ಪಿಸಲು ಜಿಲ್ಲಾಡಳಿತ ಮುಂದಾಗಲಿ : ಸರ್ಕಾರ ಎಷ್ಟೇ ಪ್ರಯತ್ನ ಮಾಡಿದ್ದರೂ ಅಧಿಕಾರಿಗಳು, ಮಧ್ಯವರ್ತಿಗಳನ್ನು ಇಟ್ಟುಕೊಂಡು ಲಂಚ ಪಡೆಯುವ ದಂಧೆ ನಿಲ್ಲುವುದಿಲ್ಲ. ಆರ್‌ಟಿಜಿಎಸ್‌ ಎಂದರೆ ಒಂದೇ ದಿನಕ್ಕೆ ಹಣ ಹೋಗಬೇಕು. ಆದರೆ, ಎರಡು ತಿಂಗಳಾದರೂ ಹೋಗದೆ ಎಲ್ಲಿ ನಿಂತೋಯ್ತು ಕೇಳ್ಳೋರ್ಯಾರು, ಬಡವರು 15 ದಿನ ಅಲೆದಾಟ ಮಾಡಿದರೆ ಅವರ ಕೂಲಿ ಕೊಡೋರು ಯಾರು? ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಕ್ರಮವಹಿಸಿ, ಸಂಪೂರ್ಣ ಫಲಾನುಭವಿಗಳ ಖಾತೆಗೆ ಹಣ ಜಮೆ ಆಗುವಂತೆ ಮಾಡಬೇಕು. ಇಲ್ಲವಾದರೆ, ಆರ್‌ ಟಿಜಿಎಸ್‌ ಬಿಟ್ಟು ಪರ್ಯಾಯ ಮಾರ್ಗ ಕಂಡುಕೊಂಡು ಅಲೆದಾಟ ತಪ್ಪಿಸುವಂತಹ ಕ್ರಮಕ್ಕೆ ಜಿಲ್ಲಾಡಳಿತ ಮುಂದಾಗಲಿ ಎಂದು ಸಾಮಾಜಿಕ ಕಾರ್ಯಕರ್ತ ಶಿವನಾಗ ಸ್ವಾಮಿ ತಿಳಿಸಿದ್ದಾರೆ.

ನಾವು ಈಗಾಗಲೇ 2 ಸಾವಿರಕ್ಕೂ ಹೆಚ್ಚು ಜನರ ಖಾತೆಗೆ ಹಣ ಜಮಾ ಮಾಡಿದ್ದೇವೆ. ಜೊತೆಗೆ ಪಟ್ಟಿ ಮಾಡಲಾಗಿರುವ 2267 ಮಂದಿಯ ಹಣ ಪೂರ್ಣವಾಗಿ ಬ್ಯಾಂಕ್‌ ಖಾತೆಗೆ ಜಮಾವಣೆ ಮಾಡಲಾಗಿದೆ. ದಾಖಲೆ ವ್ಯತ್ಯಾಸವಾಗಿ ಹಣ ಹೋಗಿಲ್ಲ. ಕೂಡಲೇ ಸರಿಪಡಿಸುತ್ತೇವೆ. ನಮ್ಮಲ್ಲಿ ಆಮಿಷಕ್ಕೆ ಬಲಿಯಾಗುವ ಪ್ರಶ್ನೆಯೇ ಇಲ್ಲ. ಯಾರಾದರೂ ಅಂತಹ ದೂರು ನೀಡಿದರೆ, ಕ್ರಮ ಕೈಗೊಳ್ಳುತ್ತೇನೆ. – ಎಂ.ವಿಜಯ್‌ ಕುಮಾರ್‌, ತಹಶೀಲ್ದಾರ್‌, ರಾಮನಗರ

ಮನೆಯಲ್ಲಿ ಬಾಣಂತಿ ಮಗು ಇದೆ ಸ್ವಾಮಿ, ಗಂಡ ಇಲ್ಲ. ನಾನು ಬಡವಿ. ಮನೆಗೆ ನೀರು ನುಗ್ಗಿದ ಬಳಿಕ ನಾಲ್ಕು ಭಾರಿ ಎಲ್ಲಾ ಜೆರಾಕ್ಸ್‌ ಕೊಟ್ಟಿದ್ದೇನೆ. ಫೋಟೋ ಕೊಡಿ ಎಂದು ಮತ್ತೆ ಕೇಳಿದ್ದಾರೆ. ಪ್ರತಿ ಬಾರಿಯೂ ನೂರು ರೂಪಾಯಿ ಕೊಡಬೇಕು. ಎಲ್ಲಿಂದ ತರಬೇಕು. ದಾಖಲೆ ನೀಡಿದ್ದರೂ ಪದೇ ಪದೆ ಕೇಳುತ್ತಿದ್ದಾರೆ. ಇಲ್ಲಿಗೆ ಸುತ್ತಿ ಸಾಕಾಯ್ತು. ನಮ್ಮ ಕಷ್ಟ ದೇವರಿಗೆ ಪ್ರೀತಿ. ಆ ನಡುವೆ ಇಲ್ಲಿಗೆ ಅಲೆದು ಸಾಕಾಗಿದೆ. – ಭಾಗ್ಯಮ್ಮ, ಸಂತ್ರಸ್ತೆ, ಅರ್ಕೇಶ್ವರ ಕಾಲೋನಿ

Advertisement

Udayavani is now on Telegram. Click here to join our channel and stay updated with the latest news.

Next