Advertisement

ಭಾರೀ ಫೇಮಸ್ಸು ರಾವೂರ್‌ ಸೂಸಲಾ; 5ಗಂಟೆಯಲ್ಲಿ 20 ಚೀಲ ಸೂಸಲಾ ಮಾರಾಟ

05:54 PM Sep 26, 2022 | Team Udayavani |

ಕಲಬುರಗಿ: ಚಾಲಕನೊಬ್ಬ ತನ್ನ ವೃತ್ತಿ ಬಿಟ್ಟು ಹೋಟೆಲ್‌ ಉದ್ಯಮಕ್ಕಿಳಿದು ಸತತ ನಾಲ್ಕು ವರ್ಷ ಪರಿಶ್ರಮ ಪಟ್ಟ ಫಲವಾಗಿ ಈಗ ದಿನವೊಂದಕ್ಕೆ ಐದೇ ಗಂಟೆಗಳಲ್ಲಿ 20ಕ್ಕೂ ಹೆಚ್ಚು ಚೀಲಗಳ (ಒಂದು ಚೀಲ ಆರು ಕೆ.ಜಿ) ಚುರುಮುರಿ ಸೂಸಲಾ ಮಾರಾಟವಾಗುತ್ತಿದೆ.

Advertisement

ಕೇವಲ 20 ರೂ.ಗೆ ಒಂದು ಪ್ಲೇಟ್‌ ಸೂಸಲಾ ಮಾರಾಟ ಮಾಡುತ್ತಾರೆ. ತುಂಬಿದ ಕಡಾಯಿ 10ನೇ ನಿಮಿಷದಲ್ಲಿ ಖಾಲಿ ಆಗುತ್ತದೆ. ಈ ರೀತಿಯ ವ್ಯಾಪಾರ ಕೂಡಿಸಿ ಕೊಂಡಿದ್ದು ಚಿತ್ತಾಪುರ ತಾಲೂಕಿನ ರಾವೂರ್‌ ಗ್ರಾಮದ ನಾಗರಾಜ ಕಾಳಗಿ. ರಾವೂರಿನ ಪ್ರಮುಖ ವೃತ್ತದಲ್ಲಿ ಭುವನ್‌ ಎಂಬ ಹೋಟೆಲ್‌ ಇಟ್ಟುಕೊಂಡು ನವೋದ್ಯಮ ಸ್ಥಾಪಿಸಿದ ಮಾದರಿ ಇದು.

20-25 ಚೀಲ ಚುರುಮುರಿ ಬಳಕೆ: ದಿನವೊಂದಕ್ಕೆ 20ರಿಂದ 25 ಚೀಲಗಳಷ್ಟು ಚುರುಮುರಿ ಬಳಕೆಯಾಗುತ್ತಿದೆ. ಅದರೊಂದಿಗೆ ಒಂದು ಚೀಲ(25ಕೆ.ಜಿ) ಪುಟಾಣಿ ಪುಡಿ ಬಳಕೆಯಾಗುತ್ತದೆ. ಉಳ್ಳಾಗಡ್ಡಿ, ಟೋಮ್ಯಾಟೋ, ಮೆಣಸಿನಕಾಯಿ, ಕರಿಬೇವು, ಶುದ್ಧವಾದ ಎಣ್ಣೆ, ಪ್ರತ್ಯೇಕ ಮಸಾಲೆ ಬಳಕೆ ಮಾಡಿ ಸೂಸಲಾ ತಯಾರು ಮಾಡಲಾಗುತ್ತದೆ.

ಸೂಸಲಾ ಮೇಕಿಂಗ್‌ ವಿಡಿಯೋ ವೈರಲ್‌
ನಾಗರಾಜ ಕಾಳಗಿ ಸೂಸಲಾ ಮಾಡುವ ವಿಡಿಯೋ ಯುಟ್ಯೂಬ್‌ನಲ್ಲಿ ಭಾರೀ ವೈರಲ್‌ ಆಗಿದೆ. ಈ ವಿಡಿಯೋ ನೋಡಿ ಬಂದು ಸೂಸಲಾ ತಿಂದವರೆಲ್ಲ ಸೈ ಎಂದಿದ್ದಾರೆ. ಟೇಸ್ಟ್‌ ಡಿಫರೆಂಟ್‌ ಇದೆ. ಪುಟಾಣಿ(ಹುರಿಗಡಲೆ ಹಿಟ್ಟು)ಹಾಗೂ ಹಾಲಿನ ಬಳಕೆ ಮಾಡುವುದರಿಂದ ರುಚಿ ಗ್ರಾಹಕರಿಗೆ ಹಿಡಿಸುತ್ತಿದೆ.

ಕಲಬುರಗಿಯಿಂದ ಯಾದಗಿರಿಗೆ ಹೋಗುವ ರಸ್ತೆಯಲ್ಲಿ 40ಕಿ.ಮೀದಲ್ಲಿ ಬರುವ ರಾವೂರ್‌ ಮುಖ್ಯ ರಸ್ತೆಯಲ್ಲಿದೆ. ದಿನಾಲು ನೂರಾರು ಜನರ ಓಡಾಟದ ರಸ್ತೆಯಲ್ಲಿ ಸದಾ ಗಿಜಿಗುಡುತ್ತಿರುತ್ತದೆ ಭುವನ್‌ ಹೋಟೆಲ್‌. ವಿಜಯಪುರ, ಕಲಬುರಗಿ, ಯಾದಗಿರಿಯ ಸೂಸಲಾ ಪ್ರಿಯರು ಉಪಾಹಾರಕ್ಕೆ ಇಲ್ಲಿಗೆ ಬರುತ್ತಾರೆ. ಅಲ್ಲದೆ, ಸೇಡಂ, ಚಿತ್ತಾಪುರ, ಕಲಬುರಗಿಗೆ ದಿನಾಲು 100ರಿಂದ 150 ಪ್ಲೇಟ್‌ ಪಾರ್ಸೆಲ್‌ ಆಗುತ್ತದೆ. ಇಷ್ಟು ಫೇಮಸ್‌ ಮತ್ತು ಲಾಭದಾಯಕ ಉದ್ಯೋಗ ಮಾಡುತ್ತಿರುವ ನಾಗರಾಜ ನಿರುದ್ಯೋಗಿಗಳಿಗೆ ಪ್ರೇರಣಾದಾಯಕ.

Advertisement

ನಾವು ಈ ಕಡೆಯಿಂದ ಹೋಗುತ್ತಿದ್ದರೆ ರಾವೂರ್‌ದಲ್ಲಿ ಇಳಿದು ಸೂಸಲಾ ತಿಂದು ಹೋಗುವುದು ಪಕ್ಕಾ. ಇವರ ಕೈ ರುಚಿಯೇ ಬೇರೆ. ಒಳ್ಳೆಯ ಎಣ್ಣಿ, ಚುರುಮುರಿ, ಮಸಾಲೆ ಬಳಕೆ ಮಾಡ್ತಾರೆ. ಎಷ್ಟು ತಿಂದರೂ ಸಾಲದು. ಅದರಲ್ಲೂ 20ರೂ.ಗೆ ಮಾರಾಟ ಮಾಡುವುದು ಗ್ರಾಮೀಣ ಭಾಗದಲ್ಲಿ ಎಲ್ಲರಿಗೂ ಖುಷಿ ಇದೆ.
ರಾಯಪ್ಪ, ಸೂಸಲಾ ಪ್ರಿಯ

ನಾನು ತುಂಬಾ ಪರಿಶ್ರಮದಿಂದ ಸೂಸಲಾ ಮಾಡ್ತೀನಿ. ಶುದ್ಧವಾಗಿ ತಯಾರಿಸಿ ಜನರಿಗೆ ಕೊಡುವುದೇ ನನ್ನ ಧ್ಯೇಯ. ದೇವರ ಇಚ್ಚೆ ಅದೆಷ್ಟೋ ಜನರಿಗೆ ನನ್ನ ಕೈಯಿಂದ ರುಚಿಯಾದ ಅಡುಗೆ ಮಾಡಿ ಕೊಡ್ತೀನಿ. 20ರಿಂದ 25ಚೀಲ ಚುರುಮುರಿ ಖರ್ಚಾಗುತ್ತದೆ. ಬೆಳಗ್ಗೆ 6ರಿಂದ 11ಗಂಟೆವರೆಗಷ್ಟೇ ಮಾರಾಟ ಮಾಡ್ತೀವಿ. ಎಂಪಿ, ಎಂಎಲ್‌ಎ ಅವರೆಲ್ಲ ಸೂಸಲಾ ತಿಂದು ಹೋಗ್ತಾರ.ಭಾಳ್‌ ಖುಷಿ ಇದೆ.
ನಾಗರಾಜ ಕಾಳಗಿ, ಸೂಸಲಾ ತಯಾರಕ

ಸೂರ್ಯಕಾಂತ ಎಂ.ಜಮಾದಾರ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next