Advertisement

ಕೇಂದ್ರ ತಂಡದಿಂದ ಗ್ರಾಮಾಂತರದಲ್ಲಿ ಬರ ಪರಿಶೀಲನೆ

11:45 AM Feb 11, 2017 | |

ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ತಲೆದೂರಿರುವ ಬರಗಾಲದ ಪರಿಸ್ಥಿತಿಯನ್ನು ಕೇಂದ್ರ ಬರ ಅಧ್ಯಯನ ತಂಡ ಶುಕ್ರವಾರ ಪರಿಶೀಲನೆ ನಡೆಸಿತು. ತಾಲೂಕಿನ ಪೂಜನಹಳ್ಳಿ ಗೇಟ್‌ನಲ್ಲಿರುವ ಗಾಂಧಿ ಶತಮಾನ ತೋಟದಲ್ಲಿ ಜಿಲ್ಲಾಡಳಿತ ಜಾನುವಾರುಗಳಿಗೆ ವಿತರಿಸಲು ಶೇಖರಿಸಿರುವ ಮೇವನ್ನು ಪರಿಶೀಲನೆ ನಡೆಸಿದ ಸರ್ಕಾರ ಕೈಗೊಂಡಿರುವ ಮುಂಜಾಗ್ರತ ಕ್ರಮಗಳ ಬಗ್ಗೆ ವಿವರಣೆ ಪಡೆಯಿತು.

Advertisement

ನಂತರ ಪಟ್ಟಣದ 16ನೇ ವಾರ್ಡಿನಲ್ಲಿ ನೀರಿನ ಸಮಸ್ಯೆಯನ್ನು ಆಲಿಸಿದರು. ಪುರಸಭೆ ಆವರಣದಲ್ಲಿ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕವನ್ನು ವೀಕ್ಷಿಸಿದರು. ತಾಲೂಕಿನ ಬ್ಯಾಡರಹಳ್ಳಿ ಗ್ರಾಮದಲ್ಲಿ ನಾಲ್ಕು ಎಕರೆಯಲ್ಲಿ ಬೆಳೆಯುತ್ತಿರುವ ಜೋಳದ ಬೆಳೆಯನ್ನು ಪರಿಶೀಲಿಸಿ, ಅಧಿಕಾರಿಗಳಿಂದ ಹೆಚ್ಚಿನ ಮಾಹಿತಿ ಸಂಗ್ರಹಿಸಿದರು. ಬೀರಸಂದ್ರ ಗ್ರಾಮದಲ್ಲಿ ನರೇಗಾ ಯೋಜನೆಯಲ್ಲಿ ಕೈಗೊಂಡಿರುವ ಕಾಮಗಾರಿ ಪರಿಶೀಲಿಸಿದ ಕೇಂದ್ರ ತಂಡ ಅನಂತರ ದೊಡ್ಡಬಳ್ಳಾಪುರ ತಾಲೂಕಿಗೆ ಪ್ರಯಾಣ ಬೆಳೆಸಿತು.

ಕೇಂದ್ರ ಬರ ಅಧ್ಯಯನದಲ್ಲಿ ಕೇಂದ್ರ ಆಹಾರ ಇಲಾಖೆಯ ಉಪನಿರ್ದೇಶಕ ವಿಜಯ್‌ ಥಾಖರೆ, ಉಪವ್ಯವಸ್ಥಾಪಕ ಎಲ್‌.ಚತುರ್‌ನಾಯ್ಕ, ಹೈದ್ರಾಬಾದಿನ ಆಯಿಲ್‌ ಸೀಡ್ಸ್‌ ಅಭಿವೃದ್ಧಿ ಜಂಟಿ ನಿರ್ದೇಶಕ ಕೆ.ಪೊನ್ನಸ್ವಾಮಿ ಇದ್ದರು. ಜಿಲ್ಲಾಧಿಕಾರಿ ಎಸ್‌.ಪಾಲಯ್ಯ ಮಾತನಾಡಿ, ಜಾನುವಾರುಗಳಿಗೆ ಮೇವು ಒದಗಿಸಲು 4 ತಾಲೂಕುಗಳಲ್ಲಿ ಈಗಾಗಲೇ 600 ಟನ್‌ ಮೇವು ಶೇಖರಿಸಲಾಗಿದೆ. ಬೇರೆ ಜಿಲ್ಲೆ ಮತ್ತು ವಿವಿಧ ರಾಜ್ಯಗಳಿಂದ ಜೋಳದ ಮೇವು ಮತ್ತು ಭತ್ತದ ಮೇವನ್ನು ಖರೀದಿಸಲಾಗಿದೆ.

ಕೇಜಿಗೆ 2 ರೂ.ನಂತೆ ರೈತರಿಗೆ ವಿತರಿಸಲಾಗುತ್ತಿದೆ. ಮೇವಿಗೆ ಯಾವುದೇ ತೊಂದರೆಯಾಗದಂತೆ ಎಚ್ಚರವಹಿಸಲಾಗಿದೆ ಎಂದು ವಿವರಿಸಿದರು. ಬ್ಯಾಡರಹಳ್ಳಿ ಗ್ರಾಮದಲ್ಲಿ ನೀರಾವರಿ ಸೌಲಭ್ಯ ಒಂದಿರುವ ರೈತರೊಬ್ಬರ ನಾಲ್ಕು ಎಕರೆಯಲ್ಲಿ ಜೋಳದ ಮೇವು ಬೆಳೆಸಲಾಗಿದೆ. ಈಗಾಗಲೇ ಬರ ನಿರ್ವಹಣೆಗೆ ಜಿಲ್ಲಾಧಿಕಾರಿಗಳ ಖಾತೆಯಲ್ಲಿ 8 ಕೋಟಿ ರೂ. ಹಣವಿದೆ. ನೀರಿನ ಸಮಸ್ಯೆ ಇರುವ ಕಡೆ ಟ್ಯಾಂಕರ್‌ಗಳ ಮೂಲಕ ಪೂರೈಕೆ ಮಾಡಲಾಗುತ್ತಿದೆ.ಕೊಳವೆ ಬಾವಿ ಬಾಡಿಗೆಗೆ ಪಡೆದು ಜನರಿಗೆ ನೀರು ಒದಗಿಸಲಾಗುತ್ತದೆ. ನೀರಿಗೆ ಹಾಹಾಕಾರ ಉಂಟಾಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ತಂಡಕ್ಕೆ ಮನವರಿಕೆ ಮಾಡಿದರು.

ನೀರಿಗೆ ಹೆಚ್ಚು ಹಣ ಕೊಡಿ: ಶಾಸಕ ಪಿಳ್ಳಮುನಿಶಾಮಪ್ಪ ಮಾತನಾಡಿ, ತಾಲೂಕಿನಲ್ಲಿ ಕಳೆದ 3 ವರ್ಷಗಳಿಂದ ಬರಗಾಲ ಇದೆ. ನೀರಿಗೆ ಹಾಹಾಕಾರವಿದೆ. ಬೇಸಿಗೆಯಲ್ಲಿ ನೀರಿನ ಸಮಸ್ಯೆ ಮತ್ತಷ್ಟು ಬಿಗಡಾಯಿಸಲಿದೆ. ಕೇಂದ್ರ ಬರ ಅಧ್ಯಯನ ಸಮಿತಿ ಇದೆಲ್ಲವನ್ನು ಪರಿಶೀಲನೆ ಮಾಡಿ, ಕುಡಿಯುವ ನೀರಿಗೆ 3 ಕೋಟಿ ರೂ.ಗೂ ಹೆಚ್ಚು ಅನುದಾನ ಒದಗಿಸಿಕೊಡಬೇಕು ಎಂದು ಹೇಳಿದರು.

Advertisement

ಹೆಚ್ಚು ಪರಿಹಾರ ಕಲ್ಪಿಸಿ: ಈ ಬಾರಿ ಭೀಕರ ಬರಗಾಲ ಎದುರಾಗಿದೆ. ಸಮರ್ಪಕ ಮಳೆ, ಬೆಳೆಯಿಲ್ಲದೆ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕ್ಕಿಧಿದ್ದೇವೆ. ಅಂತರ್ಜಲ ಕುಸಿತದಿಂದ 1200 ರಿಂದ 1500 ಅಡಿ ಬೋರ್‌ವೆಲ್‌ ಕೊರೆದರೂ ನೀರು ಸಿಗದ ಸ್ಥಿತಿ ನಿರ್ಮಾಣವಾಗಿದೆ ಸಿಕ್ಕರೂ ಫ್ಲೋರೈಡ್‌ನಿಂದ ಕೂಡಿರುತ್ತದೆ ಎಂದು ಕೇಂದ್ರದ ತಂಡದ ಮುಂದೆ ರೈತರು ತಮ್ಮ ಅಳಲನ್ನು ತೋಡಿದರು.

ಮಳೆ ಇಲ್ಲದೆ ತಾವು ಬೆಳೆದಿರುವ ರಾಗಿ ಒಣಗಿ ಹೋಗಿದೆ. ಬಿತ್ತನೆ ಮಾಡಲೂ ಸಾಧ್ಯವಾಗುತ್ತಿಲ್ಲ, ಜಾನುವಾರುಗಳಿಗೆ ಕುಡಿಯುವ ನೀರು, ಮೇವು ಒದಗಿಸಲು ಪರದಾಡುವಂತಹ ಪರಿಸ್ಥಿತಿ ಇದೆ. ಸಾಲಸೋಲ ಮಾಡಿಯಾದರೂ ಪ್ರತಿ ವರ್ಷ ಬಿತ್ತನೆ ಮಾಡುತ್ತಿದ್ದೇವೆ. ಮಳೆ ಇಲ್ಲದೆ ಇಟ್ಟ ಫ‌ಸಲು ಹೊಲದಲ್ಲೇ ಒಣಗಿಹೋಗುತ್ತಿದೆ. ಕೆಲವೊಮ್ಮೆ ಮಾಡಿದ್ದ ಖರ್ಚೂ ಹುಟ್ಟುತ್ತಿಲ್ಲ. ಹೀಗಾಗಿ ಬೆಳೆ ಪರಿಹಾರ ಹೆಚ್ಚಿಸಬೇಕು ಎಂದು ರೈತರು ಮನವಿ ಮಾಡಿಕೊಂಡರು.

ಉಪವಿಭಾಗಾಧಿಕಾರಿ ಜಗದೀಶ್‌, ತಹಶೀಲ್ದಾರ್‌ ಜಿ.ಎ.ನಾರಾಯಣಸ್ವಾಮಿ, ಜಿಪಂ ಸಿಇಒ ಮಂಜುಳಾ, ತಾಪಂ ಇಒ ಕೆ.ವಿ.ಶ್ರೀನಿವಾಸಮೂರ್ತಿ ಮತ್ತಿತರರು ಇದ್ದರು.

“ಕೆರೆ, ಮೇವು, ಕುಡಿವ ನೀರು ಪರಿಶೀಲನೆ’
ದೊಡ್ಡಬಳ್ಳಾಪುರ:
 ಕೇಂದ್ರದ ಬರ ಅಧ್ಯಯನ ತಂಡ ತಾಲೂಕಿನ ದೊಡ್ಡಬೆಳವಂಗಲ ಹೋಬಳಿಗೆ ಭೇಟಿ ನೀಡಿ ಕುಡಿಯುವ ನೀರು, ಮೇವು ಸಂಗ್ರಹಣೆ ಕುರಿತು ತಾಲೂಕು ಆಡಳಿತದಿಂದ ಮಾಹಿತಿ ಪಡೆಯಿತು. ದೊಡ್ಡಬಳ್ಳಾಪುರ ತಾಲೂಕಿನ ಚಿಕ್ಕಬೆಳವಂಗಲ ಗ್ರಾಮಕ್ಕೆ ಭೇಟಿ ನೀಡಿದ ತಂಡವು ಮೇವು ಸಂಗ್ರಹಣೆ ಹಾಗೂ ನರೇಗಾ ಯೋಜನೆಯಡಿ ಕೈಗೊಂಡಿರುವ ರಸ್ತೆ ಕಾಮಗಾರಿಗಳ ಪರಿಶೀಲನೆ ನಡೆಸಿತಲ್ಲದೆ 15 ವರ್ಷಗಳಿಂದ ನೀರು ಸಂಗ್ರಹವಾಗದೇ ಬತ್ತಿ ಹೋಗಿದ್ದ ಸೊಣ್ಣೇನಹಳ್ಳಿ ಕೆರೆ ವೀಕ್ಷಣೆ ಮಾಡಿದರು.

ಕೇಂದ್ರ ತಂಡದ ಡಾ.ಕೆ.ಪೊನ್ನುಸ್ವಾಮಿ, ಎಲ್‌.ಛಾತುನಾಯ್ಕ, ವಿಜಯ್‌ಠಾಕ್ರೆ ಅವರಿಗೆ ಮಾಹಿತಿ ನೀಡಿದ ಬೆಂ.ಗ್ರಾಮಾಂತರ ಜಿಲ್ಲಾಧಿಕಾರಿ ಎಸ್‌.ಪಾಲಯ್ಯ, ಜಿಲ್ಲೆಯ ಪ್ರತಿ ಹೋಬಳಿ ಕೇಂದ್ರದಲ್ಲೂ 35 ರಿಂದ 40 ಟನ್‌ಗಳಂತೆ ಮೇವು ಸಂಗ್ರಹ ಮಾಡಲಾಗಿದೆ. ಸದ್ಯಕ್ಕೆ ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ತೊಂದರೆಯಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.

ಮೇವು ವಿತರಣೆಯನ್ನು ಒಂದೆರಡು ವಾರದಲ್ಲಿ ಪ್ರಾರಂಭಿಸಲಾಗುವುದು. ಜಿಲ್ಲೆಗೆ ಇನ್ನು ಮೇವಿನ ಅಗತ್ಯ ಇದೆ. ಮಾರ್ಚ್‌ಧಿನಿಂದ ಕುಡಿಯುವ ನೀರಿನ ತೊಂದರೆ ತಲೆದೋರುವ ಸಂಭವ ಇದೆ. ಈ ಬಾರಿ ದೊಡ್ಡಬಳ್ಳಾಪುರ ಸೇರಿದಂತೆ ಜಿಲ್ಲೆಯಲ್ಲಿ ಬೆಳೆ ಸಂಪೂರ್ಣ ನಾಶವಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next