Advertisement

Karnataka ಹೈಕೋರ್ಟ್‌ನಲ್ಲಿ ಕನ್ನಡದಲ್ಲಿ ತೀರ್ಪು ಇನ್ನಾದರೂ ಸರಕಾರ ಎಚ್ಚೆತ್ತುಕೊಳ್ಳಲಿ

01:37 AM Dec 14, 2024 | Team Udayavani |

 

Advertisement

ರಾಜ್ಯ ಹೈಕೋರ್ಟ್‌ನ ವಿಭಾಗೀಯ ಪೀಠವೊಂದು ಪ್ರಕರಣವೊಂದರ ತೀರ್ಪ ನ್ನು ಇದೇ ಮೊದಲ ಬಾರಿಗೆ ಕನ್ನಡದಲ್ಲಿ ಪ್ರಕಟಿಸುವ ಮೂಲಕ ಹೈಕೋರ್ಟ್‌ ವ್ಯವಸ್ಥೆಯಲ್ಲಿ ಮಹತ್ತರ ಸುಧಾರಣ ಕ್ರಮವೊಂದಕ್ಕೆ ನಾಂದಿ ಹಾಡಿದೆ.

ಕೆಳಹಂತದ ನ್ಯಾಯಾಲಯಗಳಲ್ಲಿ ಕನ್ನಡದಲ್ಲಿ ತೀರ್ಪು ಪ್ರಕಟಿಸಲಾಗುತ್ತಿದೆಯಾದರೂ ಹೈಕೋರ್ಟ್‌ನಲ್ಲಿ 2008ರ ಏಕಸದಸ್ಯ ಪೀಠ ನೀಡಿದ್ದ ತೀರ್ಪೊಂದನ್ನು ಹೊರತುಪಡಿಸಿದಂತೆ ಇದೇ ಮೊದಲ ಬಾರಿಗೆ ದ್ವಿಸದಸ್ಯ ಪೀಠದ ನ್ಯಾಯಾಧೀಶರು ಕನ್ನಡ ಮತ್ತು ಇಂಗ್ಲಿಷ್‌ ಭಾಷೆಗಳೆರಡರಲ್ಲೂ ತೀರ್ಪು ಪ್ರಕಟಿಸಿ, ತಮ್ಮ ಕನ್ನಡ ಭಾಷಾಪ್ರೇಮವನ್ನು ಮೆರೆದಿದ್ದಾರೆ.

ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯಗಳ ಸಹಿತ ಕೆಳ ಹಂತದ ನ್ಯಾಯಾಲಯಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಕನ್ನಡ ಬಳಕೆ ಒಂದಿಷ್ಟು ಹೆಚ್ಚಿದೆ. ನ್ಯಾಯವಾದಿಗಳು ವಾದ-ಪ್ರತಿವಾದಗಳನ್ನು ಕೂಡ ಕನ್ನಡದಲ್ಲಿಯೇ ಮಂಡಿಸುತ್ತಿದ್ದಾರೆ. ಸಹಜವಾಗಿಯೇ ನ್ಯಾಯಾಧೀಶರು ಕೂಡ ತಮ್ಮ ತೀರ್ಪುಗಳನ್ನು ಕನ್ನಡದಲ್ಲಿಯೇ ನೀಡತೊಡಗಿದ್ದಾರೆ. ಆದರೆ ಸಂವಿಧಾನದ ಹಾಲಿ ನಿಯಮಾನುಸಾರ ಸುಪ್ರೀಂ ಕೋರ್ಟ್‌ ಮತ್ತು ಹೈಕೋರ್ಟ್‌ನ ತೀರ್ಪುಗಳಲ್ಲಿ ಇಂಗ್ಲಿಷ್‌ ಭಾಷೆಯನ್ನು ಬಳಸಲು ಅನುವು ಮಾಡಿಕೊಡಲಾಗಿದೆ. ಹೀಗಾಗಿ ಹೈಕೋರ್ಟ್‌ ಗಳು ತಮ್ಮ ಆದೇಶ ಅಥವಾ ತೀರ್ಪುಗಳನ್ನು ಪ್ರಾದೇಶಿಕ ಭಾಷೆಗಳಲ್ಲಿ ನೀಡುವಂತಾಗಲು ಸಂವಿಧಾನ ತಿದ್ದುಪಡಿಯನ್ನು ತರಬೇಕಿದೆ. ಈ ನಿಟ್ಟಿನಲ್ಲಿ ಸರಕಾರ ಮತ್ತು ಜನಪ್ರತಿನಿಧಿಗಳು ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಬೇಕು.ಹೈಕೋರ್ಟ್‌ಗಳಲ್ಲಿ ಪ್ರಾದೇಶಿಕ ಭಾಷೆಯಲ್ಲಿ ತೀರ್ಪು ನೀಡುವ ವಿಷಯವಾಗಿ ದಶಕಗಳಿಂದ ಚರ್ಚೆಗಳು ನಡೆಯುತ್ತಲೇ ಬಂದಿವೆಯಾದರೂ ಯಾವೊಂದು ಸರಕಾರವೂ ಇತ್ತ ಗಂಭೀರವಾಗಿ ಗಮನ ಹರಿಸಿಲ್ಲ.

ಹೀಗಾಗಿ ಈ ವಿಷಯ ಕರ್ನಾಟಕ ರಾಜ್ಯೋತ್ಸವ ಅಥವಾ ಸಾಹಿತ್ಯ ಸಮ್ಮೇಳನಗಳ ನಿರ್ಣಯಗಳಿಗಷ್ಟೇ ಸೀಮಿತವಾಗಿಬಿಟ್ಟಿದೆ. ಹೈಕೋರ್ಟ್‌ ತೀರ್ಪುಗಳನ್ನು ಕೂಡ ಕನ್ನಡದಲ್ಲಿ ಪ್ರಕಟಿಸಿದರೆ ಜನಸಾಮಾನ್ಯರಿಗೆ ತೀರ್ಪನ್ನು ಸುಲಭವಾಗಿ ಅರ್ಥೈಸಿ ಕೊಳ್ಳಲು ಸಾಧ್ಯವಾಗಲಿದೆ. ಆದರೆ ಸರಕಾರ ಮತ್ತು ಅಧಿಕಾರಿಗಳ ನಿರ್ಲಕ್ಷ್ಯ, ನ್ಯಾಯಾಧೀಶರ ಬದ್ಧತೆಯ ಕೊರತೆಯ ಪರಿಣಾಮವಾಗಿ ಹೈಕೋರ್ಟ್‌ನಲ್ಲಿ ಕನ್ನಡ ಬಳಕೆ ಇಂದಿಗೂ ಮರೀಚಿಕೆಯಾಗಿಯೇ ಉಳಿದಿದೆ. 2008ರಲ್ಲಿ ನ್ಯಾ| ಅರಳಿ ನಾಗರಾಜ್‌ ಅವರು ಕನ್ನಡದಲ್ಲಿ ತೀರ್ಪು ನೀಡಿದಾಗ ಭಾರೀ ಪ್ರಶಂಸೆ ವ್ಯಕ್ತವಾಗಿತ್ತಾದರೂ ಅದು ಅಷ್ಟಕ್ಕೇ ಸೀಮಿತವಾಯಿತು. ಈಗ ನ್ಯಾ| ಕೃಷ್ಣ ಎಸ್‌. ದೀಕ್ಷಿತ್‌ ಮತ್ತು ನ್ಯಾ| ಸಿ.ಎಂ.ಜೋಶಿ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ಕನ್ನಡ ಭಾಷೆಯಲ್ಲಿ ತೀರ್ಪನ್ನು ಪ್ರಕಟಿಸಿ, ಈ ಕುರಿತಾಗಿನ ಚರ್ಚೆಯನ್ನು ಮತ್ತೆ ಮುನ್ನೆಲೆಗೆ ತಂದಿದೆ.ಕನ್ನಡದಲ್ಲಿಯೇ ತೀರ್ಪು ಪ್ರಕಟಿಸಿ, ಉಭಯ ನ್ಯಾಯಾಧೀಶರು ಕನ್ನಡ ಭಾಷೆಯ ಮೇಲಣ ತಮ್ಮ ಅಭಿಮಾನ ಮತ್ತು ಬದ್ಧತೆಯನ್ನು ಪ್ರದರ್ಶಿಸುವ ಜತೆ ಯಲ್ಲಿ ಹೈಕೋರ್ಟ್‌ನಲ್ಲಿ ಕನ್ನಡ ಭಾಷೆಯಲ್ಲಿ ತೀರ್ಪು ನೀಡುವ ವಿಷಯ ದಲ್ಲಿನ ಸರಕಾರದ ನಿರ್ಲಕ್ಷ್ಯ ಧೋರಣೆಯ ಬಗೆಗೂ ಅಸಮಾಧಾನ ವ್ಯಕ್ತ ಪಡಿಸಿದೆ. ಸರಕಾರ ತನ್ನ ಕರ್ತವ್ಯ ಮತ್ತು ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸದ ಹಿನ್ನೆಲೆಯಲ್ಲಿ ತಮ್ಮ ಕಾರ್ಯವ್ಯಾಪ್ತಿಗೊಳಪಟ್ಟು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ತೀರ್ಪು ಪ್ರಕಟಿಸಿದ್ದೇವೆ ಎನ್ನುವ ಮೂಲಕ ಸರಕಾರ ಮತ್ತು ಜನಪ್ರತಿನಿಧಿಗಳಿಗೆ ಪರೋಕ್ಷವಾಗಿ ಚಾಟಿ ಬೀಸಿದ್ದಾರೆ.

Advertisement

ಮುಂದಿನ ದಿನಗಳಲ್ಲಿ ಹೈಕೋರ್ಟ್‌ನ ಎಲ್ಲ ನ್ಯಾಯಾಧೀಶರು ವಿಭಾಗೀಯ ಪೀಠ ಈಗ ಹಾಕಿಕೊಟ್ಟಿರುವ ಹಾದಿಯಲ್ಲಿ ಹೆಜ್ಜೆ ಇರಿಸಲು ಮುಂದಾಗ ಬೇಕು. ಕನ್ನಡದಲ್ಲಿ ತೀರ್ಪು ಪ್ರಕಟಿಸಲು ಸಾಧ್ಯವಿರುವ ಪ್ರಕರಣ ಗಳಲ್ಲಿ ಕನ್ನಡದಲ್ಲಿಯೇ ತೀರ್ಪು ಪ್ರಕಟಿಸುವ ಮೂಲಕ ದೇಶದ ಇತರ ಹೈಕೋರ್ಟ್‌ಗಳಿಗೆ ಮಾದರಿಯಾಗಬೇಕು. ಸರಕಾರ ಎಚ್ಚೆತ್ತುಕೊಂಡು ಹೈಕೋರ್ಟ್‌ನಲ್ಲೂ ಕನ್ನಡ ಧ್ವನಿ ಅನುರಣಿಸುವಂತಾಗಲು ದಿಟ್ಟ ನಿರ್ಧಾರವನ್ನು ಕೈಗೊಳ್ಳುವಂತಾಗಲಿ.

Advertisement

Udayavani is now on Telegram. Click here to join our channel and stay updated with the latest news.