Advertisement

ವಚನಗಳಿಗಿದೆ ಸನ್ಮಾರ್ಗಕ್ಕೆ ಕೊಂಡೊಯ್ಯುವ ಶಕ್ತಿ: ಹನುಮಲಿ

08:01 AM Mar 10, 2019 | Team Udayavani |

ದಾವಣಗೆರೆ: 12ನೇ ಶತಮಾನದ ಶರಣರು ನುಡಿದಂತೆ ನಡೆದವರು-ನಡೆದಂತೆ ನುಡಿದವರು. ವಚನಕಾರರಲ್ಲಿ ನಡೆ-ನುಡಿ ಒಂದಾಗಿದ್ದವು ಎಂದು ನಗರದ ಯುಬಿಡಿಟಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಧ್ಯಾಪಕ ಬಸವರಾಜ್‌ ಹನುಮಲಿ ಹೇಳಿದ್ದಾರೆ.

Advertisement

ಶನಿವಾರ, ಬಿಇಎ ಶಿಕ್ಷಣ ಮಹಾವಿದ್ಯಾಲಯದ ಸಭಾಂಗಣದಲ್ಲಿ ದಾವಣಗೆರೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಶಾಲಾ-ಕಾಲೇಜು ಅಂಗಳದಲ್ಲಿ ಸಾಹಿತ್ಯೋತ್ಸವದ ಅಂಗವಾಗಿ ಏರ್ಪಡಿಸಿದ್ದ ದತ್ತಿ ಉಪನ್ಯಾಸ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ವಚನ ಸಾಹಿತ್ಯದಲ್ಲಿ ಜೀವನ ಮೌಲ್ಯಗಳು ವಿಷಯ ಕುರಿತು ಉಪನ್ಯಾಸ ನೀಡಿದ ಅವರು, ಕಳಬೇಡ ಕೊಲಬೇಡ ಹುಸಿಯ ನುಡಿಯಬೇಡ ಎಂಬ ಬಸವಣ್ಣನವರ ವಚನದ ವಿವರಿಸುತ್ತಾ ಇಂಥ ವಚನ ಸಾರಕ್ಕೆ ಸರ್ವರನ್ನು ಸನ್ಮಾರ್ಗದತ್ತ ಕರೆದೊಯ್ಯುವ ಶಕ್ತಿ ಇದೆ ಎಂದರು.

ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭು, ದೇವರದಾಸಿಮಯ್ಯ, ಆಯ್ದಕ್ಕಿ ಲಕ್ಕಮ್ಮ ಮುಂತಾದ ವಚನಕಾರರ ವಚನಗಳನ್ನು ಉದ್ಗರಿಸಿ, ಮೌಲ್ವಿಕ ಜೀವನದ ಮೌಲ್ಯ ಬಿತ್ತರಿಸುವ ಅನೇಕ ದೃಷ್ಟಾಂತಗಳನ್ನು ಅವರು ವಿವರಿಸಿದರು. ಕಾರ್ಯಕ್ರಮ ಉದ್ಘಾಟಿಸಿದ ಶ್ರೀ ಜಗದ್ಗುರು ಜಯವಿಭವ ವಿದ್ಯಾಸಂಸ್ಥೆಯ ಸಹ ಕಾರ್ಯದರ್ಶಿ ಎಂ.ಕೆ. ಬಕ್ಕಪ್ಪ, ವಚನ ಸಾಹಿತ್ಯದಲ್ಲಿ ಹುದುಗಿರುವ ಮೌಲ್ಯ ಜನರ ಜೀವನಕ್ಕೆ ದಾರಿ ದೀಪವಾಗಿವೆ. ಪ್ರಶಿಕರ್ಣಾರ್ಥಿಗಳು ಇಂಥ ಉಪನ್ಯಾಸ ಕಾರ್ಯಕ್ರಮಗಳಲ್ಲಿ ಕೇಳುವ ಕೆಲವು ಅಂಶಗಳನ್ನಾದರೂ ಜೀವನದಲ್ಲಿ ಪಾಲಿಸಬೇಕು ಎಂದರು.

ಸಾಹಿತ್ಯ ಪರಿಷತ್‌ನ ತಾಲ್ಲೂಕು ಅಧ್ಯಕ್ಷ ಬಿ. ವಾಮದೇವಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ದತ್ತಿ ದಾನಿ, ನಿವೃತ್ತ ಉಪನ್ಯಾಸಕ ಬಿ.ಎಂ. ಮುರುಗಯ್ಯ ಕುರ್ಕಿ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮದ ಮೆಚ್ಚುಗೆ ವ್ಯಕ್ತಪಡಿಸಿದರು. ಕನ್ನಡದಲ್ಲಿ ಹೆಚ್ಚು ಅಂಕ ಗಳಿಸಿದ ಪ್ರಶಿಕರ್ಣಾರ್ಥಿಗಳಿಗೆ
ಕಾಲೇಜಿನ ಪ್ರಾಂಶುಪಾಲೆ ಶಕೀಲಾಬಾನು ಪ್ರಶಸ್ತಿ ಮತ್ತು ಪುಸ್ತಕ ನೀಡಿ, ಗೌರವಿಸಿದರು. ಕಾಲೇಜಿನ ಹಿರಿಯ ಸಹಾಯಕ ಪ್ರಾಧ್ಯಾಪಕ ಎಸ್‌. ರಾಜಶೇಖರ ಅಧ್ಯಕ್ಷತೆ ವಹಿಸಿದ್ದರು. ಕೆ.ರಾಘವೇಂದ್ರ ನಾಯರಿ, ಎಂ. ಷಡಾಕ್ಷರಪ್ಪ ಬೇತೂರು ಕಾರ್ಯಕ್ರಮದಲ್ಲಿದ್ದರು.

ಕಾರ್ಯಕ್ರಮ ಆರಂಭಕ್ಕೂ ಮುನ್ನ ಇತ್ತೀಚೆಗೆ ನಿಧನರಾದ ದತ್ತಿ ದಾನಿ, ಬಾಪೂಜಿ ವಿದ್ಯಾಸಂಸ್ಥೆ ಖಜಾಂಚಿ ಎ.ಸಿ.ಜಯಣ್ಣನವರ ಆತ್ಮಕ್ಕೆ ಮೌನಾಚರಣೆ ಮೂಲಕ ಶಾಂತಿ ಕೋರಲಾಯಿತು. ಎಚ್‌.ಕಲ್ಲಪ್ಪ ಸ್ವಾಗತಿಸಿದರು. ಟಿ.ಎಸ್‌. ವಿನಾಯಕ ನಿರೂಪಿಸಿದರು. ಶಶಿಕಲಾ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next