Advertisement
ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಸಭೆ ಸೇರಿದ ಸೋಲಿಗ ಅಭಿವೃದ್ಧಿ ಸಂಘದ ಪದಾಧಿಕಾರಿಗಳು ಹೊಸ ವರ್ಷ ಆಚರಣೆಯ ಹೆಸರಿನಲ್ಲಿ ಕೆಲ ರಾಜಕೀಯ ವ್ಯಕ್ತಿಗಳು ಆದಿವಾಸಿ ಸೋಲಿಗರು ವಾಸಿಸುವ ಹೊಸಪೋಡು ಗ್ರಾಮದಲ್ಲಿ ಡಿ.31ರ ರಾತ್ರಿ ಬಾಡೂಟ, ಮದ್ಯಪಾನ, ಧ್ವನಿವರ್ಧಕಗಳ ಬಳಕೆ ಸೇರಿದಂತೆ ಕ್ಷೇತ್ರದ ವಿವಿಧ ಗ್ರಾಮಗಳ ಮುಖಂಡರನ್ನೆಲ್ಲಾ ಸೇರಿಸಿ ಭರ್ಜರಿ ಪಾರ್ಟಿ ನಡೆಸಲಾಗಿದೆ ಎಂದು ಆರೋಪಿಸಿದರು.
Related Articles
Advertisement
ಅಲ್ಲದೆ ಅರಣ್ಯ ಇಲಾಖಾ ಅಧಿಕಾರಿಗಳು ಸಂಜೆಯಾಗುತ್ತಲೇ ಅರಣ್ಯ ಪ್ರವೇಶಿಸಬೇಕಾದರೆ ಸ್ಥಳೀಯರಿಗೆ ಮಾತ್ರ ಅವಕಾಶ ನೀಡಿ, ಬೇರೆಯವರಿಗೆ ಪ್ರವೇಶ ನಿರ್ಬಂಧಿಸುತ್ತಾರೆ. ಆದರೆ ಡಿ.31ರ ದಿನ ಮಾತ್ರ ವಿವಿಧ ಗ್ರಾಮಗಳ ಮುಖಂಡರ ವಾಹನಗಳು, ಅವರಿಗೆ ಅಗತ್ಯವಾದ ಮದ್ಯಪಾನ ಪೂರೈಕೆಯಂಥ ಕಾನೂನು ಬಾಹಿರ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಿದ್ದಾದರೂ ಹೇಗೆ ಎಂದು ಕಿಡಿಕಾರಿದ್ದಾರೆ.
ಸಂಘದಿಂದ ಪ್ರತಿಭಟನೆ ಎಚ್ಚರಿಕೆ: ಪಿ.ಜಿ.ಪಾಳ್ಯ ಮತ್ತು ಹುತ್ತೂರು ಗ್ರಾಪಂ ವ್ಯಾಪ್ತಿಯ ಸೋಲಿಗರ ಪೋಡಿನಲ್ಲಿ ಆಗಿಂದಾಗ್ಗೆ ಈ ರೀತಿಯ ಘಟನೆಗಳು ಮರುಕಳಿಸುತ್ತಿದ್ದು ಘಟನೆಯಿಂದಾಗಿ ಸೋಲಿಗ ಮಹಿಳೆಯರು ಭಯಭೀತರಾಗಿದ್ದಾರೆ. ಇವರಿಗೆ ಮೋಜು ಮಸ್ತಿಗೆ ಬೇರೆ ಸ್ಥಳಾವಕಾಶಗಳು ಸಿಗುತ್ತಿಲ್ಲವೆ. ಇವರ ದುಶ್ಚಟ, ದುರಾಭ್ಯಾಸಗಳಿಗೆ ಸೋಲಿಗರನ್ನು ಬಲಿಪಶು ಮಾಡುತ್ತಿದ್ದಾರೆ ಎಂದು ದೂರಿದರು.
ಡಿ.31ರ ರಾತ್ರಿ ಜರುಗಿದ ಪಾರ್ಟಿಯಿಂದಾಗಿ ಪೋಡಿನಲ್ಲಿ ಗ್ರಾಮಸ್ಥರು ಸಮರ್ಪಕವಾಗಿ ನಿದ್ರಿಸಲು ಸಾಧ್ಯವಾಗಿಲ್ಲ, ಅತಿ ಹೆಚ್ಚು ಶಬ್ದ ಹೊರಸೂಸುವ ಧ್ವನಿವರ್ಧಕ ಹಾಕಿದ್ದರಿಂದ ವನ್ಯಜೀವಿಗಳಿಗೂ ತೊಂದರೆಯಾಗಿದೆ. ಆದ್ದರಿಂದ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಅರಣ್ಯ ಇಲಾಖಾ ಅಧಿಕಾರಿಗಳು ಘಟನೆ ಬಗ್ಗೆ ಪರಿಶೀಲನೆ ನಡೆಸಿ ಎಸ್‌ಸಿ,
ಎಸ್‌ಟಿ ದೌರ್ಜನ್ಯ ಕಾಯ್ದೆಯಡಿ ಘಟನೆಗೆ ಕಾರಣರಾದವರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮವಹಿಸಬೇಕು ಮತ್ತು ಘಟನೆಗೆ ಸಹಕರಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಸಂಬಂಧಪಟ್ಟ ಗ್ರಾಪಂ ಮುಂಭಾಗ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಸಂಘದ ಅಧ್ಯಕ್ಷ ದೊಡ್ಡಯ್ಯ ಎಚ್ಚರಿಕೆ ನೀಡಿದ್ದಾರೆ.
ಸೋಲಿಗ ಅಭಿವೃದ್ಧಿ ಸಂಘದ ಉಪಾಧ್ಯಕ್ಷೆ ಮುನಿಮಾದಮ್ಮ, ಸಂಘಟನಾ ಕಾರ್ಯದರ್ಶಿ ರಂಗೇಗೌಡ, ಕಾರ್ಯದರ್ಶಿ ಮುತ್ತಯ್ಯ ಹಾಗೂ ಬಸವರಾಜು, ಸುರೇಶ, ಗಿರೀಶ, ಭದ್ರಪ್ಪ, ಕೇತೆಗೌಡ, ಪೆರಿಸ್ವಾಮಿ ಸೇರಿದಂತೆ ಹೆಚ್ಚಿನ ಸಂಖ್ಯೆಯ ಸದಸ್ಯರು ಪಾಲ್ಗೊಂಡಿದ್ದರು.