ಹೊಸಕೋಟೆ: ರಾಜ್ಯದಲ್ಲಿ 17 ಶಾಸಕರನ್ನು ಖರೀದಿಸಲು 100 ಕೋಟಿ ರೂ.ಗಳಿಗೂ ಹೆಚ್ಚು ಕಪ್ಪು ಹಣ ಬಳಸಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ನಗರದ ವಿಶ್ವೇಶ್ವರಯ್ಯ ಬಡಾವಣೆಯ ಗಂಗಮ್ಮಗುಡಿ ರಸ್ತೆಯ ಉದ್ಯಾನವನದಲ್ಲಿ ಏರ್ಪಡಿಸಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿದರು.
2016ರಲ್ಲಿ ನೋಟ್ ಅಮಾನೀಕರಣಗೊಳಿಸಿ ಕಪ್ಪು ಹಣವನ್ನು ನಿಯಂತ್ರಿಸಲಾಗುವುದು ಎಂದು ಹೇಳಿದ್ದ ಪ್ರಧಾನಿಯವರು ಪ್ರಸ್ತುತ ರಾಜ್ಯದಲ್ಲಿ 17 ಅನರ್ಹರನ್ನು ಖರೀದಿಸಲು ಯಾವ ಹಣ ಬಳಕೆಯಾಗಿದೆ ಎಂಬುದನ್ನು ಸ್ಪಷ್ಟಪಡಿಸಬೇಕು. ಎಂಟಿಬಿ ನಾಗರಾಜ್‌ರನ್ನು ಜನರು ಗುರುತಿಸಿದ್ದು ಕಾಂಗ್ರೆಸ್ ಪಕ್ಷದಿಂದಾಗಿಯೇ ಹೊರತು ಅವರು ಆಸ್ತಿ ಅಂತಸ್ತಿನಿಂದಲ್ಲ ಎಂದರು.
ಬಿಜೆಪಿಯಿಂದ ಸಬ್‌ಕಾ ವಿನಾಶ್: ಹಿಂದಿನ ಎಲ್ಲಾ ಚುನಾವಣೆಗಳಲ್ಲೂ ಪ್ರಚಾರ ಮಾಡಿದ್ದು ಮತದಾರರು ಮನವಿಗೆ ಸ್ಪಂದಿಸಿ ಎಂಟಿಬಿ ನಾಗರಾಜ್‌ರನ್ನು ಆಯ್ಕೆ ಮಾಡಿದ್ದಾರೆ. ಅದರೆ ಇದೀಗ ಅವರ ವಿರುದ್ಧವೇ ಮತ ಯಾಚಿಸುವಂತಹ ಪರಿಸ್ಥಿತಿ ನಿರ್ಮಾಣಗೊಂಡಿದ್ದು ಇದಕ್ಕೆ ಅವರೇ ಕಾರಣರಾಗಿದ್ದಾರೆ. ಎಂಟಿಬಿ ನಾಗರಾಜ್ ಆರ್ಥಿಕ ತಜ್ಞರಾಗಲೀ, ವಿದ್ಯಾವಂತರಲ್ಲದಿದ್ದರೂ ಸಹ ಸಚಿವ ಸ್ಥಾನ ನೀಡಲಾಗಿತ್ತು. ಪ್ರಧಾನಿ ಸಬ್‌ಕಾ ಸಾತ್ ಸಬ್‌ಕಾ ವಿಕಾಸ್ ಎಂದು ಹೇಳಿದರೆ ರಾಜ್ಯದಲ್ಲಿ ಮಾತ್ರ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿ ಸಂವಿಧಾನವನ್ನು ನಾಶಪಡಿಸಲು ಮುಂದಾಗಿರುವ ಬಿಜೆಪಿಯಿಂದ ಸಬ್‌ಕಾ ವಿನಾಶ್‌ಗೆ ಮುಂದಾಗಿದೆ ಎಂದು ಟೀಕಿಸಿದರು.
ಆಪರೇಷನ್ ಕಮಲ ಸೂತ್ರಧಾರಿ ಬಿಎಸ್‌ವೈ: ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಮಾತನಾಡಿ, ಸ್ವಹಿತಾಸಕ್ತಿಗಾಗಿ ಪಕ್ಷಕ್ಕೆ, ಮತದಾರರಿಗೆ ಮಾಡಿರುವ ದ್ರೋಹಕ್ಕಾಗಿ ಎಂಟಿಬಿ ನಾಗರಾಜ್‌ರನ್ನು ಚುನಾವಣೆಯಲ್ಲಿ ಸೋಲಿಸುವ ಮೂಲಕ ಪಾಠ ಕಲಿಸಬೇಕು. ಮುಖ್ಯಮಂತ್ರಿ ಯಡಿಯೂರಪ್ಪ ರಾಜ್ಯದಲ್ಲಿ ಸಮ್ಮಿಶ್ರ ಸರಕಾರವನ್ನು ಬೀಳಿಸುವ ಏಕೈಕ ದುರುದ್ದೇಶದಿಂದ ಆಪರೇಷನ್ ಕಮಲದ ಸೂತ್ರಧಾರಿಯಾಗಿದ್ದಾರೆ. ಒಂದೆಡೆ ತಾವು ಮುಖ್ಯಮಂತ್ರಿಯಾಗುವ ಕನಸನ್ನು ನನಸಾಗಿಸಿಕೊಳ್ಳಲು ಮತ್ತೂಂದೆಡೆ ಇಡಿ, ಐಟಿ ಯಿಂದ ರಕ್ಷಿಸಿಕೊಳ್ಳಲು ಅನರ್ಹರು ಬಿಜೆಪಿ ಹಾಕಿದ ಖೆಡ್ಡಾಕ್ಕೆ ಬಿದ್ದಿದ್ದಾರೆ ಎಂದು ಹೇಳಿದರು.
ಎಂಟಿಬಿಯಿಂದ ವಿಶ್ವಾಸ ದ್ರೋಹ: ಹಿಂದಿನ ಸಿದ್ದರಾಮಯ್ಯ ನೇತೃತ್ವದ ಸರಕಾರದ ಅವಧಿಯಲ್ಲಿ ಎಂಟಿಬಿ ನಾಗರಾಜ್ ಪ್ರಸ್ತಾಪಿಸಿದ್ದ ಎಲ್ಲಾ ಕೆಲಸಗಳನ್ನು ಮಾಡಿಕೊಟ್ಟಿರುವುದೇ ಅಲ್ಲದೆ ಸಮರ್ಪಕವಾಗಿ ಅನುದಾನಗಳನ್ನು ಸಹಬಿಡುಗಡೆ ಮಾಡಲಾಗಿದೆ. ಸಮ್ಮಿಶ್ರ ಸರಕಾರದಲ್ಲಿ ಸಚಿವ ಸ್ಥಾನ ನೀಡಿದ್ದಾಗ್ಯೂ ಸಹ ಪಕ್ಷಕ್ಕೆ, ಮತದಾರರಿಗೆ ವಿಶ್ವಾಸದ್ರೋಹ ಎಸಗಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಸಚಿವ ಕೃಷ್ಣಭೈರೇಗೌಡ ಮಾತನಾಡಿ, ಎಂಟಿಬಿ ನಾಗರಾಜ್ ಮತದಾರರಿಗೆ, ನಂಬಿಕಸ್ಥರಿಗೆ ಮೋಸ ಮಾಡುವ ಅಭ್ಯಾಸವನ್ನು ಹಿಂದಿನಿಂದಲೂ ಪಾಲಿಸುತ್ತಿದ್ದಾರೆ. ಪಕ್ಷಾಂತರ ಮಾಡುವ ಸಂದರ್ಭದಲ್ಲಿ ಮತದಾರರನ್ನು ನಿರ್ಲಕ್ಷಿಸುವ ಮೂಲಕ ಅಪಮಾನ ಮಾಡಿದ್ದಾರೆ. ಇಷ್ಟೇ ಅಲ್ಲದೆ ಕುತಂತ್ರ ನಡೆಸಿ ಸ್ವಂತ ಅಣ್ಣ ಪಿಳ್ಳಪ್ಪಗೆ ಬಿಬಿಎಂಪಿ ಟಿಕೆಟ್ ತಪ್ಪಿಸಿ ದ್ರೋಹ ಎಸಗಿದ್ದಾರೆ ಎಂದರು.
ಕಾಂಗ್ರೆಸ್ ಅಭ್ಯರ್ಥಿ ಪದ್ಮಾವತಿ ಸುರೇಶ್, ಮಾಜಿ ಸಭಾಪತಿ ಸುದರ್ಶನ್, ಶಾಸಕರಾದ ಭೈರತಿ ಸುರೇಶ್, ವೆಂಕಟರಮಣಯ್ಯ, ನಂಜೇಗೌಡ ಇತರರು ಹಾಜರಿದ್ದರು. ಇದಕ್ಕೂ ಮೊದಲು ಡ್ರಂ ಬಾರಿಸುವ ಮೂಲಕ ಚುನಾವಣಾ ಪ್ರಚಾರಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು.