ಬೆಂಗಳೂರು: ಸರ್ಕಾರ ಭದ್ರವಾಗುತ್ತಿದ್ದಂತೆ ಮೂಲ ಬಿಜೆಪಿಗರಲ್ಲಿ ಸಚಿವ ಆಕಾಂಕ್ಷಿಗಳ ಪಟ್ಟಿಯೂ ದೊಡ್ಡದಾಗುತ್ತಿದೆ. ಪಕ್ಷಕ್ಕೆ ಹೊಸದಾಗಿ ಸೇರ್ಪಡೆಯಾಗಿ ಉಪ ಚುನಾವಣೆಯಲ್ಲಿ ಜಯ ಸಾಧಿಸಿರುವ ಎಲ್ಲ ರಿಗೂ ಸಚಿವ ಸ್ಥಾನದ ಅಭಯವನ್ನು ಮುಖ್ಯ ಮಂತ್ರಿಗಳು ಈಗಾಗಲೇ ನೀಡಿದ್ದಾರೆ. ಆದರೆ, ಪಕ್ಷದಲ್ಲಿ ಇರುವ ಹಿರಿಯ ಶಾಸಕರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಎಲ್ಲಿಯೂ ಚರ್ಚೆಯೂ ಆಗಿಲ್ಲ.
ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ರಾಜ್ಯಾಧ್ಯಕ್ಷ ಸಹಿತವಾಗಿ ಯಾರೂ ಕೂಡ ಈ ಸಂಬಂಧ ಭರವಸೆ ನೀಡಿಲ್ಲ. ಇಷ್ಟಾಗಿಯೂ ಕೆಲವು ಹಿರಿಯ ಶಾಸಕರು ನಿರಂತರವಾಗಿ ಯಡಿಯೂರಪ್ಪ ಅವರನ್ನು ಪದೇಪದೆ ಭೇಟಿ ಮಾಡಿ ಸಚಿವ ಸ್ಥಾನ ನೀಡುವಂತೆ ಮನವಿ ಇಡುತ್ತಿದ್ದಾರೆ. ಶುಕ್ರ ವಾರ ಶಾಸಕ ಉಮೇಶ್ ಕತ್ತಿ ಹಾಗೂ ಮಾಜಿ ಸ್ಪೀಕರ್ ಕೆ.ಜಿ.ಬೋಪಯ್ಯ ಅವರು ಯಡಿ ಯೂರಪ್ಪ ಅವರನ್ನು ಭೇಟಿ ಮಾಡಿ ಸಚಿವ ಸ್ಥಾನದ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.
ಮಧ್ಯಕರ್ನಾಟಕ, ಕರಾವಳಿ ಕರ್ನಾಟಕ ಹಾಗೂ ಉತ್ತರ ಕರ್ನಾಟಕ ಹೀಗೆ ಎಲ್ಲ ಭಾಗ ದಿಂದಲೂ ಮೂಲ ಬಿಜೆಪಿಯ ಹಿರಿಯ ಶಾಸಕರಲ್ಲಿ ಸಚಿವ ಸ್ಥಾನದ ಆಸೆ ಹುಟ್ಟಿದ್ದು, ಯಡಿಯೂರಪ್ಪ ಅವರನ್ನು ಭೇಟಿ ಮಾಡಿ, ಸಚಿವ ಸ್ಥಾನದ ನೀಡುವ ಬಗ್ಗೆ ಕೋರಿಕೆ ಇಡುತ್ತಿದ್ದಾರೆ. ಹೊಸ ಶಾಸಕರನ್ನು ಸಚಿವರನ್ನಾಗಿ ಮಾಡುವ ಜತೆಗೆ ಸೋತಿರುವ ಇಬ್ಬರನ್ನು ಸಚಿವರನ್ನಾಗಿ ಮಾಡುವ ಸವಾಲು ಮುಖ್ಯಮಂತ್ರಿಗಳ ಮುಂದಿದೆ. ಒಟ್ಟಿನಲ್ಲಿ ಇದನ್ನೆಲ್ಲ ಹೇಗೆ ನಿಭಾಯಿಸುತ್ತಾರೆ ಎಂಬು ದನ್ನು ಸಂಪುಟ ಪುನರ್ ರಚನೆ ಅಥವಾ ವಿಸ್ತರಣೆಯ ನಂತರವೇ ನೋಡಬೇಕಿದೆ.
ಕೊಡುಗು ಜಿಲ್ಲೆಗೆ ಸಚಿವ ಸ್ಥಾನ ಬೇಕು. ಜಿಲ್ಲಾ ಪ್ರಾತಿನಿಧ್ಯಕ್ಕಾಗಿ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಮನವಿ ನೀಡಿದ್ದೇವೆ. ಮೊದಲಿನಿಂದಲೂ ಪಕ್ಷದ ನಿಷ್ಟಾವಂತ ಕಾರ್ಯಕರ್ತನಾಗಿ ಪಕ್ಷ ವಹಿಸಿದ ಎಲ್ಲ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿದ್ದೇನೆ. ಹೀಗಾಗಿ ಮುಂದೆ ಕೂಡ ಯಾವುದೇ ಸ್ಥಾನಮಾನ ನೀಡಿದರೂ ನಿಭಾಯಿಸಲು ಸಿದ್ಧನಿದ್ದೇನೆ ಎಂದು ಕೆ.ಜಿ.ಬೋಪಯ್ಯ ತಿಳಿಸಿದರು. ಮಾಜಿ ಸಂಸದ ಬಸವರಾಜ ಪಾಟೀಲ್ ಸೇಡಂ ಅವರು ಶುಕ್ರವಾರ ಬೆಳಗ್ಗೆ ನಗರದ ಡಾಲರ್ ಕಾಲೋನಿಯಲ್ಲಿರುವ ಮುಖ್ಯ ಮಂತ್ರಿ ನಿವಾಸದಲ್ಲಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು.