Advertisement

ಸಾಹಿತ್ಯ-ಸಂಗೀತ ರಸಧಾರೆ ಮಧ್ಯೆ ಸ್ವಚ್ಛತೆಗೆ ಮಾದರಿ

10:10 AM Dec 03, 2017 | Team Udayavani |

ಮೂಡಬಿದಿರೆ (ಆಳ್ವಾಸ್‌): ಕನ್ನಡ ನಾಡು -ನುಡಿ ಆಸ್ವಾದನೆಯ ಸಾಹಿತ್ಯ ಗೋಷ್ಠಿಗಳ ಸೆಳೆತ, ಸಂಗೀತ-ನಾಟ್ಯಗಳ ಸಮ್ಮಿಲನದಿಂದ ಸಂಗೀತ ರಸಧಾರೆಯನ್ನೇ ಉಣಬಡಿಸುವ ವೈವಿಧ್ಯಮಯ ಮನರಂಜನೆಯ ನಡುವೆ, ಲಕ್ಷಾಂತರ ಸಾಹಿತ್ಯಾಸಕ್ತರು ಭಾಗವಹಿಸುತ್ತಿರುವ ಆಳ್ವಾಸ್‌ ನುಡಿಸಿರಿಯ ಸ್ವಚ್ಛತೆಯೇ ಮಾದರಿ ಎನಿಸಿದೆ.

Advertisement

ಕನ್ನಡವನ್ನೇ ಹೊದ್ದು ಕುಣಿದಾಡು ತ್ತಿರುವ ಮೂಡಬಿದಿರೆಯ ಆಳ್ವಾಸ್‌ ನುಡಿಸಿರಿಯ ಎಲ್ಲ ಹಂತದಲ್ಲೂ ಪರಿಪೂರ್ಣ ವ್ಯವಸ್ಥೆಯಿಂದ ಮೆಚ್ಚುಗೆ ಪಡೆಯುತ್ತಿದೆ. ಇಲ್ಲಿ ಎಲ್ಲವೂ ಸ್ವಚ್ಛ ಭಾರತದ ಪರಿಕಲ್ಪನೆ. ಹತ್ತಾರು ವೇದಿಕೆ, ನೂರಾರು ಕಲಾವಿದರು, ರಾಜ್ಯದೆಲ್ಲೆಡೆಯ ಲಕ್ಷಾಂತರ ಮಂದಿರ ಸೇರಿರುವ ಆಳ್ವಾಸ್‌ ಕ್ಯಾಂಪಸ್‌ನಲ್ಲಿ ಎಲ್ಲಿಯೂ ಸ್ವಚ್ಛತೆಯ ಕೊರತೆ ಅಥವಾ ಗೊಂದಲ-ಅವ್ಯವಸ್ಥೆ ಕಾಣಿಸುತ್ತಿಲ್ಲ. ಜನರು ಎಸೆಯುವ ತಿಂಡಿಗಳ ಪ್ಯಾಕೆಟ್‌, ನೀರಿನ ಖಾಲಿ ಬಾಟಲಿ, ಊಟದ ತಟ್ಟೆ ನೋಡ ನೋಡುತ್ತಿದ್ದಂತೆಯೇ ವಿಲೇವಾರಿಯಾಗುತ್ತಿರುತ್ತದೆ. ನುಡಿಸಿರಿಯ ಮೂರು ದಿನ ಟನ್‌ಗಟ್ಟಲೆ ಕಸ ಉತ್ಪತ್ತಿಯಾಗುತ್ತಿದ್ದರೂ ಅದೆಲ್ಲ ಕ್ಷಣಮಾತ್ರದಲ್ಲಿ ತ್ಯಾಜ್ಯ ಘಟಕವನ್ನು ತಲುಪಿರುತ್ತದೆ.

ಊಟ ಮಾಡಿದೊಡನೆ ತಟ್ಟೆ ಹಾಗೂ ತ್ಯಾಜ್ಯವನ್ನು ಸಾಗಿಸಲು 8 ಟ್ರಾಲಿ, 4 ಟ್ರ್ಯಾಕ್ಟರ್‌, 2 ಟಿಪ್ಪರ್‌ಗಳನ್ನು ಬಳಸಲಾಗುತ್ತಿದೆ. ಮಿಜಾರ್‌ನಲ್ಲಿ ಬೃಹದಾಕಾರದ ಗುಂಡಿ ಮಾಡಿ, ಊಟದ ತಟ್ಟೆ, ಕೊಳೆತ ತರಕಾರಿ ಸಹಿತ ಮಣ್ಣಾಗಬಲ್ಲ ಇತರ ಕಸಗಳನ್ನು ತುಂಬಿ, ಮಣ್ಣು ಮುಚ್ಚಲಾಗುತ್ತದೆ. ನುಡಿಸಿರಿಯ ಅಷ್ಟೂ ದಿನಗಳಲ್ಲಿ ಕಸ ವಿಲೇವಾರಿ ಅಚ್ಚುಕಟ್ಟಾಗಿ ನಡೆಯುತ್ತಿರುತ್ತದೆ. ಗುಂಡಿಗೆ ತುಂಬಿದ ಕಸ 15 ದಿನಗಳಲ್ಲಿ ಗೊಬ್ಬರವಾಗಿ ಪರಿವರ್ತನೆಯಾಗುತ್ತದೆ. ಇದನ್ನು ಕ್ಯಾಂಪಸ್‌ನ ಕೃಷಿಗೆ ಬಳಸಲಾಗುತ್ತದೆ. ಇದಕ್ಕಾಗಿ ನಿತ್ಯ 130 ಕಾರ್ಮಿಕರು ಶ್ರಮಿಸುತ್ತಿದ್ದಾರೆ ಎಂದು, ಸ್ವಚ್ಛತೆಯ ಉಸ್ತುವಾರಿ ವಹಿಸಿರುವ ಆಳ್ವಾಸ್‌ ಕಾಲೇಜಿನ ಪ್ರಾಂಶುಪಾಲ ಡಾ| ಕುರ್ಯನ್‌ ‘ಉದಯವಾಣಿ ಸುದಿನ’ಕ್ಕೆ ತಿಳಿಸಿದ್ದಾರೆ.

ನುಡಿಸಿರಿಯಲ್ಲಿ ಸ್ವತ್ಛತೆಗೆ ವಿಶೇಷ ಆದ್ಯತೆ ನೀಡಿದ್ದು, ಮೂರು ಹಂತಗಳಲ್ಲಿ ಇದನ್ನು ನಿರ್ವಹಿಸಲಾಗುತ್ತದೆ. ನುಡಿಸಿರಿ ಆರಂಭಕ್ಕೂ ಒಂದು ವಾರ ಮೊದಲು ಮೂಡಬಿದಿರೆ ಪಟ್ಟಣದಿಂದ ವಿದ್ಯಾಗಿರಿ ವರೆಗೂ ಸಂಪೂರ್ಣ ಸ್ವಚ್ಛತೆ ಮಾಡಲಾಗಿದೆ. ವಸತಿ, ವೇದಿಕೆ ಇತ್ಯಾದಿ ಕಡೆಗಳಲ್ಲಿ ಸೊಳ್ಳೆ ನಿಯಂತ್ರಣಕ್ಕೆ ಫಾಗಿಂಗ್‌ ಕೈಗೊಳ್ಳಲಾಗಿದೆ. ಎಲ್ಲೂ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಲಾಗಿದೆ. 

ಮೋದಿ, ಸಿದ್ದರಾಮಯ್ಯಗೆ ಹಕ್ಕೊತ್ತಾಯ ಪತ್ರ
ಗೋ ಹತ್ಯೆ ನಿಷೇಧಿಸುವಂತೆ ಆಗ್ರಹಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಾರತೀ ಗೋಪರಿವಾರದ ಆಶ್ರಯದಲ್ಲಿ ಸಹಿ ಸಂಗ್ರಹಿಸಲಾಯಿತು. ಕೃಷಿಸಿರಿ ಆಯೋಜಿಸತ ಪ್ರದೇಶದಲ್ಲಿ ಇದಕ್ಕಾಗಿ ಪ್ರತ್ಯೇಕ ಕೌಂಟರ್‌ ತೆರೆಯಲಾಗಿತ್ತು. ಮುಖ್ಯ ಮಂತ್ರಿಗಳಿಗೂ ಸಹಿ ಪತ್ರವನ್ನು ಕಳುಹಿಸಿ ಹಕ್ಕೊತ್ತಾಯ ಮಾಡಲು ನಿರ್ಧರಿಸಿರುವುದರಿಂದ ಸಹಿ ಸಂಗ್ರಹ ಅಭಿಯಾನ ನಡೆಯಿತು. ಗೋ ಹತ್ಯೆ ತಡೆಯುವಂತೆ ಆಗ್ರಹಿಸಿ ನೂರಾರು ಜನರು ಸ್ವಯಂಪ್ರೇರಿತರಾಗಿ ಸಹಿ ನಡೆಸಿದರು.

Advertisement

ಚೆಕ್‌ಡ್ಯಾಂ ನೀರು
ಆಳ್ವಾಸ್‌ ನುಡಿಸಿರಿ ಸಲುವಾಗಿ ನೀರಿನ ವ್ಯವಸ್ಥೆ ಕೈಗೊಳ್ಳಲು 20ಎಚ್‌ಪಿಯ 3 ಪಂಪ್‌ಗಳು ನಿರಂತರವಾಗಿ ಚಾಲನೆಯಲ್ಲಿವೆ. ಉಮಿಗುಂಡಿಯಲ್ಲಿ ಆಳ್ವಾಸ್‌ ವತಿಯಿಂದ ಚೆಕ್‌ಡ್ಯಾಂ ಮಾಡಿ ತೆರೆದ ಕೆರೆಯಿಂದ ನೀರನ್ನು ಆಳ್ವಾಸ್‌ನ ವಿದ್ಯಾಗಿರಿಯ ಬೃಹತ್‌ ಟ್ಯಾಂಕ್‌ಗೆ ಪೈಪ್‌ ಮೂಲಕ ತಂದು, ಅಲ್ಲಿಂದ ಇತರ ಕಡೆಗಳಿಗೆ ಸರಬರಾಜು ಮಾಡಲಾಗುತ್ತಿದೆ. ಅಗತ್ಯವಿದ್ದರೆ 8 ಬೋರ್‌ವೆಲ್‌ಗಳ ನೀರನ್ನು ಬಳಸಲಾಗುತ್ತದೆ. ಸಮ್ಮೇಳನ, ಕೃಷಿ ಸಿರಿ, ಭೋಜನ, ವಸತಿ – ಎಲ್ಲೆಡೆ ಎಸ್‌ಕೆಎಫ್‌ ಎಲಿಕ್ಸರ್‌ ವತಿಯಿಂದ ಶುದ್ಧ ಕುಡಿಯುವ
ನೀರಿನ ಯಂತ್ರ ಇರಿಸಲಾಗಿದೆ.

ಭದ್ರತೆ ಕಿರಿಕಿರಿ ಇಲ್ಲ
ಯಾವ ಕಾರ್ಯಕ್ರಮ ನಡೆಯುವುದಿದ್ದರೂ ಭದ್ರತೆಗೆ ಪೊಲೀಸರ ಸಂಖ್ಯೆಯೂ ಜಾಸ್ತಿ ಇರುತ್ತದೆ. ಆದರೆ, ಆಳ್ವಾಸ್‌ ನುಡಿಸಿರಿಯಲ್ಲಿ ಸೀಮಿತ ಸಂಖ್ಯೆಯ ಪೊಲೀಸರಿದ್ದರೂ ಎಲ್ಲೆಡೆ ಸುಸೂತ್ರವಾಗಿ ಕಾರ್ಯಕ್ರಮಗಳು ನಡೆಯುತ್ತಿವೆ. ನುಡಿಸಿರಿಗೆ ಬಂದವರಿಗೆ ಭದ್ರತೆ ಕಿರಿಕಿರಿ ಇಲ್ಲ. ಪಾರ್ಕಿಂಗ್‌ ಹಾಗೂ ಎಲ್ಲ ಹಂತದಲ್ಲೂ ಆಳ್ವಾಸ್‌ ವಿದ್ಯಾರ್ಥಿಗಳು, ಸ್ವಯಂಸೇವಕರು ತೊಡಗಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next