Advertisement

ಸಂಕಷ್ಟದಲ್ಲಿ ತೊಗರಿ ಬೇಳೆ ಉದ್ಯಮ, 250 ಮಿಲ್‌ಗ‌ಳು ಬಂದ್‌

06:10 AM Jan 04, 2018 | |

ಕಲಬುರಗಿ: ರಾಜ್ಯವಲ್ಲದೇ ನೆರೆಯ ತಮಿಳುನಾಡು, ಕೇರಳ, ಆಂಧ್ರಪ್ರದೇಶಗಳಿಗೆ ತೊಗರಿ ಬೇಳೆ ಪೂರೈಕೆ ಮಾಡುತ್ತಿದ್ದ ಕಲಬುರಗಿಯ ತೊಗರಿ ಬೇಳೆ ಉದ್ಯಮ ತೀವ್ರ ಸಂಕಷ್ಟದಲ್ಲಿದೆ. ಜಿಲ್ಲೆಯಲ್ಲಿನ 305 ತೊಗರಿ ಬೇಳೆ ಮಿಲ್‌ಗ‌ಳ ಪೈಕಿ ಈಗಾಗಲೇ 250ಕ್ಕೂ ಹೆಚ್ಚು  ಮಿಲ್‌ (ದಾಲ್‌ಮಿಲ್‌)ಗಳಿಗೆ ಬೀಗ ಬಿದ್ದಿದೆ.

Advertisement

ತೊಗರಿ ಬೇಳೆ ಕಾರ್ಖಾನೆಗಳು ಬಂದ್‌ ಆಗಿರುವುದರಿಂದ ಮಾಲೀಕರು, ವ್ಯಾಪಾರಿಗಳು ಹಾಗೂ ಸಾವಿರಾರು ಕಾರ್ಮಿಕರು ಬೀದಿಗೆ ಬಂದಿದ್ದಾರೆ. ಈ ಬಿಸಿ ರೈತರಿಗೂ ತಟ್ಟಲಾರಂಭಿಸಿದ್ದು, ಕುಸಿದ ತೊಗರಿ ಬೇಳೆ ಬೆಲೆ ಹೆಚ್ಚಳವಾಗುತ್ತಿಲ್ಲ. ಹೀಗಾಗಿ ತೊಗರಿ ಹಾಗೂ ಅದರ ಉತ್ಪನ್ನ ಬೇಳೆಯ ಉದ್ಯಮದ ಮೇಲೆ ಪ್ರಮುಖ ಪರಿಣಾಮ ಬೀರಲಾರಂಭಿಸಿದೆ.

3 ವರ್ಷಗಳ ಹಿಂದೆ ತೊಗರಿ ಬೇಳೆ ದರ ಕೆಜಿಗೆ 170 ರೂ. ಹಾಗೂ 180 ರೂ. ಇದ್ದಾಗ, ಸರ್ಕಾರ ಬೇಳೆ ಮಿಲ್‌ಗ‌ಳ ಮೇಲೆ ದಾಳಿ ನಡೆಸಿ ತೊಗರಿ ಹಾಗೂ ತೊಗರಿ ಬೇಳೆ ದಾಸ್ತಾನು ವಶಪಡಿಸಿಕೊಂಡು 3 ತಿಂಗಳು ಯಾವುದೇ ವಹಿವಾಟಿಗೆ ಅವಕಾಶ ನೀಡಿರಲಿಲ್ಲ. ನಂತರ 110 ರೂ. ಕೆಜಿಗೆ ಮಾರಾಟ ಮಾಡುವಂತೆ ನಿರ್ದೇಶನ ನೀಡಿರುವುದು, ತದನಂತರ ಸಂಪೂರ್ಣ ಬರಗಾಲದಿಂದ  ಸಾಕಷ್ಟು ತೊಗರಿ ಬಾರದೇ ಇರುವುದರಿಂದ ಹಾಗೂ ಕೇಂದ್ರ ಸರ್ಕಾರ ಬರ್ಮಾ ಸೇರಿದಂತೆ ಇತರ ದೇಶಗಳಿಂದ ಬೇಳೆ ಆಮದು ಮಾಡಿಕೊಂಡಿದ್ದರಿಂದ ಬೇಳೆ ಬೇಡಿಕೆ ತಗ್ಗಿತ್ತು. ಸರ್ಕಾರವೇ ಮಾರುಕಟ್ಟೆ ಪ್ರವೇಶಿಸಿ  ತೊಗರಿ ಖರೀದಿ ಮಾಡುತ್ತಿರುವುದರಿಂದ ಸ್ಪರ್ಧಾತ್ಮಕವಾಗಿ ವ್ಯಾಪಾರಿಗಳು ಮಾರುಕಟ್ಟೆಯಲ್ಲಿ ತೊಗರಿ ಖರೀದಿ ಮಾಡುತ್ತಿಲ್ಲ. ಕಡಿಮೆ ಬೆಲೆಯಲ್ಲಿ 35 ರೂ.ಗೆ ಕೆಜಿಯಂತೆ ಪಡಿತರ ವಿತರಣೆಗೆ ಮುಂದಾಗಿರುವುದು ಸೇರಿದಂತೆ ಇತರ ಕಾರಣಗಳ ಹಿನ್ನೆಲೆಯಲ್ಲಿ ವಹಿವಾಟಿಗೆ ಭಾರಿ ಹೊಡೆತ ಬಿದ್ದಿದೆ.

ಮಾರುಕಟ್ಟೆಯಲ್ಲಿಂದು 50ರಿಂದ 60 ರೂ.ಗೆ ಕೆಜಿ ತೊಗರಿ ಬೇಳೆ ಸಿಗುತ್ತಿದೆ. ಇಂತದ್ದರಲ್ಲಿ ಕ್ವಿಂಟಲ್‌ಗೆ 6 ಸಾವಿರ ರೂ. ದರದಲ್ಲಿ ತೊಗರಿ ಖರೀದಿ ಮಾಡಿ ಬೇಳೆಯನ್ನಾಗಿ ಪರಿವರ್ತಿಸಬೇಕೆಂದರೆ ಕನಿಷ್ಠ 90 ರೂ.ಗೆ ಕೆಜಿ ದರವಾದಲ್ಲಿ ಮಾತ್ರ ಸಾಧ್ಯ. ಹೀಗಾಗಿ ದಾಲ್‌ಮಿಲ್‌ಗ‌ಳನ್ನು ನಡೆಸಲಿಕ್ಕಾಗುತ್ತಿಲ್ಲ ಎಂದು ದಾಲ್‌ಮಿಲ್‌ ಆಸೋಷಿಯೇಷನ್‌ ಪದಾಧಿಕಾರಿಗಳು ತಿಳಿಸುತ್ತಾರೆ.

ಇನ್ನುಳಿದಂತೆ ನೋಟು ಅಮಾನ್ಯದಿಂದ ನಾಲ್ಕು ತಿಂಗಳ ಹೊಡೆತ ಬಿದ್ದಿರುವುದು, ಜತೆಗೆ ಜಿಎಸ್‌ಟಿ ಜಾರಿಯಿಂದ ಪ್ಯಾಕ್ಡ್ ತೊಗರಿ ಬೇಳೆ ಮೇಲೆ ಶೇ.5ರಷ್ಟು ತೆರಿಗೆ ವಿಧಿಸಿರುವುದು ಹಾಗೂ ಬ್ಯಾಂಕ್‌ನವರಿಂದ ಸಾಲ ಮರುಪಾವತಿ ಕಿರಿಕಿರಿಯಿಂದ ಬೇಸತ್ತು ದಾಲ್‌ಮಿಲ್‌ಗ‌ಳಿಗೆ ಬೀಗ ಜಡಿದಿದ್ದಾರೆ. ಕೆಲವರು ದಾಲ್‌ಮಿಲ್‌ಗ‌ಳ ಸ್ಥಳದಲ್ಲಿ ಶಾಲೆ, ಕಲ್ಯಾಣ ಮಂಟಪ, ವಾಹನಗಳ ಮಾರಾಟ ಶೋ ರೂಂ, ಪ್ಲಾಸ್ಟಿಕ್‌ ಉತ್ಪಾದನಾ ಘಟಕ ಸ್ಥಾಪನೆ ಸೇರಿದಂತೆ ಇತರೆ ವಹಿವಾಟದ ಉದ್ಯಮಗಳಾಗಿ ಬದಲಾಯಿಸಿಕೊಂಡಿದ್ದಾರೆ.

Advertisement

605 ಕೋಟಿ ರೂ. ಸಾಲ: ದಾಲ್‌ಮಿಲ್‌ಗ‌ಳಿಗೆ ವಿವಿಧ ಬ್ಯಾಂಕ್‌ಗಳು 605 ಕೋಟಿ ರೂ. ಸಾಲ ನೀಡಿವೆ. ಆದರೆ ವ್ಯಾಪಾರ ನಷ್ಟದಿಂದ  ನಯಾಪೈಸೆ ಮರುಪಾವತಿಯಾಗಿಲ್ಲ. ಹೀಗಾಗಿ ದಾಲ್‌ಮಿಲ್‌ಗ‌ಳನ್ನು ಬ್ಯಾಂಕ್‌ಗಳು ಹರಾಜು ಹಾಕುತ್ತಿವೆ. 6 ತಿಂಗಳಲ್ಲಿ 20ಕ್ಕೂ ಹೆಚ್ಚು ಮಿಲ್‌ಗ‌ಳು ಹರಾಜಾಗಿವೆ. ನಾಲ್ಕು ವರ್ಷಗಳ ಹಿಂದೆ 2 ಕೋಟಿ ರೂ.ಗಿದ್ದ ಮಿಲ್‌ಗ‌ಳು ಈಗ 50 ಲಕ್ಷ ರೂ.ಗೆ ಹರಾಜು ಆಗುತ್ತಿವೆ.

ಪುನಶ್ಚೇತನ ವರದಿಗೆ ಸೂಚನೆ: ಉದ್ಯಮ ಪುನಶ್ಚೇತನಗೊಳಿಸುವಂತೆ ಹಾಗೂ ಕೆಲವು ರಿಯಾಯಿತಿ ಜತೆಗೆ ಸೌಲಭ್ಯಗಳನ್ನು ಕಾರ್ಯರೂಪಕ್ಕೆ ತನ್ನಿ ಎಂಬುದಾಗಿ ಗುಲಬರ್ಗಾ ದಾಲ್‌ಮಿಲ್‌ ಸಂಘದವರು ಮುಖ್ಯಮಂತ್ರಿ ಹಾಗೂ ಕೈಗಾರಿಕಾ ಸಚಿವರಿಗೆ ಹಲವು ಸಲ ಮನವಿ ಸಲ್ಲಿಸಿದ್ದಾರೆ. ಇದರ ಪರಿಣಾಮ ಪುನಶ್ಚೇತನ ವರದಿ ರೂಪಿಸುವಂತೆ ಸರ್ಕಾರ ಕಲಬುರಗಿ ಜಿಲ್ಲಾಧಿಕಾರಿಗೆ ಸೂಚನೆ ನೀಡಿದೆ.

ದಾಲ್‌ಮಿಲ್‌ ಸಂಘದವರು ಸಲ್ಲಿಸಿದ ಮನವಿ ಮೇರೆಗೆ ಜತೆಗೆ ಮಿಲ್‌ಗ‌ಳನ್ನು ಪುನಶ್ಚೇತನಗೊಳ್ಳುವ ನಿಟ್ಟಿನಲ್ಲಿ ವಿದ್ಯುತ್‌ಗೆ ಸಬ್ಸಿಡಿ ನೀಡುವುದು, ಮಾರುಕಟ್ಟೆ ತೆರಿಗೆ ಶೂನ್ಯಗೊಳಿಸುವುದು ಸೇರಿದಂತೆ ಇತರ ರಿಯಾಯ್ತಿ ನೀಡುವ ನಿಟ್ಟಿನಲ್ಲಿ ವರದಿ ರೂಪಿಸಲಾಗುತ್ತಿದೆ. ವಾರದೊಳಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು.
– ಆರ್‌.ವೆಂಕಟೇಶಕುಮಾರ, ಜಿಲ್ಲಾಧಿಕಾರಿ, ಕಲಬುರಗಿ

ತೊಗರಿ ಬೇಳೆ ಪುನಶ್ಚೇತನಗೊಳ್ಳಬೇಕೆಂದರೆ ಸಕ್ಕರೆ ಕಾರ್ಖಾನೆಗಳಿಗೆ ನೀಡಿದಂತೆ ವಿಶೇಷ ರಿಯಾಯ್ತಿಯನ್ನು ಸರ್ಕಾರ ನೀಡಬೇಕು. ಸಾಲದ ಮೇಲಿನ ಬಡ್ಡಿ ಕಡಿಮೆಯಾಗಬೇಕು. ರಿಯಾಯ್ತಿ ದರದ ವಿದ್ಯುತ್‌ ದೊರೆಯಬೇಕು. ಪ್ರಮುಖವಾಗಿ ವಿಶೇಷ ಪ್ಯಾಕೇಜ್‌ ನೀಡಬೇಕು. ಹೀಗಾದಲ್ಲಿ ಮಾತ್ರ ಕಾರ್ಖಾನೆಗಳು ಪುನಾರಂಭವಾಗಿ ಉದ್ಯಮ ಬೆಳೆಯಲು ಸಾಧ್ಯ.
– ಚಿದಂಬರಾವ ಪಾಟೀಲ ಮರಗುತ್ತಿ, ಅಧ್ಯಕ್ಷರು, ಗುಲಬರ್ಗಾ ದಾಲ್‌ ಮಿಲ್‌ ಅಸೋಷಿಯೇಷನ್‌

– ಹಣಮಂತರಾವ ಭೈರಾಮಡಗಿ

Advertisement

Udayavani is now on Telegram. Click here to join our channel and stay updated with the latest news.

Next