Advertisement

ತಿರುಗುಬಾಣವಾದ ಕುರಿಯಪ್ಪನ ಕುತಂತ್ರ

03:35 PM Mar 07, 2018 | Team Udayavani |

ಒಂದು ಊರಿನಲ್ಲಿ ಎಣ್ಣೆ ವ್ಯಾಪಾರಿಯೊಬ್ಬನಿದ್ದನು. ಅವನ ಬಳಿ ಕುರಿ ಹಾಗೂ ಕತ್ತೆ ಇದ್ದವು. ಅವೆರಡನ್ನೂ ಕಂಡರೆ ಅವನಿಗೆ ತುಂಬಾ ಪ್ರೀತಿ. ಅದರಲ್ಲೂ ಕತ್ತೆ ಎಂದರೆ ತುಂಬಾ ಇಷ್ಟ. ಕತ್ತೆ ಗಾಣ ಎಳೆಯುತ್ತಿತ್ತು, ಎಣ್ಣೆ ಡಬ್ಬಿಗಳನ್ನು ಸಂತೆಗೆ ಹೊತ್ತೂಯ್ಯುತ್ತಿತ್ತು. ಇವೆಲ್ಲಾ ಕಾರಣಗಳಿಂದ ವ್ಯಾಪಾರಿಗೆ ಕತ್ತೆ ಕಂಡರೆ ಹೆಚ್ಚಿನ ಪ್ರೀತಿ. ಇದನ್ನು ಕಂಡು ಕುರಿ ಒಳಗೊಳಗೇ ಅಸೂಯೆ ಪಡುತ್ತಿತ್ತು. ಹೇಗಾದರೂ ಮಾಡಿ ಮಾಲೀಕನ ಪ್ರೀತಿ ತನ್ನ ಮೇಲೆ ತಿರುಗುವಂತೆ ಮಾಡಬೇಕೆಂದು ಪ್ರಯತ್ನಿಸುತ್ತಿತ್ತು. ಕತ್ತೆಯನ್ನು ಮನೆಯಿಂದ ಹೊರಗೆ ಹಾಕಿದರೆ ಅದು ಸಾಧ್ಯವಾಗುವುದೆಂದು ಅದಕ್ಕೆ ತಿಳಿದಿತ್ತು.

Advertisement

ಅದಕ್ಕೆ ಕತ್ತೆಯ ಮನಸ್ಸು ಬದಲಾಯಿಸಲು ಕುರಿ “ಮಾಲೀಕ ನಿನ್ನನ್ನು ಗುಲಾಮನಂತೆ ಕಾಣುತ್ತಾನೆ. ನಿನ್ನಿಂದ ಎಷ್ಟೆಲ್ಲಾ ಕೆಲಸಗಳನ್ನು ಮಾಡಿಸಿಕೊಳ್ಳುತ್ತಾನೆ. ಒಂದಷ್ಟು ದಿನಗಳ ಕಾಲ ವಿಶ್ರಾಂತಿ ತೆಗೆದುಕೋ. ಇದರಿಂದ ತಾಕತ್ತು ಹೆಚ್ಚುವುದು. ಆಗ ಇನ್ನೂ ಹೆಚ್ಚಿನ ಕೆಲಸಗಳನ್ನು ಮಾಡಬಹುದು’ ಎಂದಿತು. ಕುರಿಯ ಮಾತು ಅಮಾಯಕ ಕತ್ತೆಗೆ ಸಮಂಜಸವೆಂದು ತೋರಿತು. ಕತ್ತೆ ಕೆಲಸ ಮಾಡುವುದನ್ನು ನಿಲ್ಲಿಸಿದರೆ ವ್ಯಾಪಾರಿ ಕತ್ತೆಯನ್ನು ಹೊಡೆದು ಅಟ್ಟುತ್ತಾನೆ, ಆಗ ಮಾಲೀಕ ತನ್ನನ್ನೇ ಹೆಚ್ಚು ಇಷ್ಟ ಪಡುತ್ತಾನೆ ಎನ್ನುವುದು ಕುರಿಯ ಉಪಾಯವಾಗಿತ್ತು.

ಕುರಿಯ ಕುತಂತ್ರ ಅರಿಯದ ಕತ್ತೆ ಮರುದಿನದಿಂದ ಕೆಲಸಕ್ಕೆ ಹೋಗಲೇ ಇಲ್ಲ. ಅಲ್ಲಿ ಆಗಿದ್ದೇ ಬೇರೆ. ಮಾಲೀಕ ತನ್ನ ಕತ್ತೆಗೆ ಹುಷಾರಿಲ್ಲವೆಂದು ತಪ್ಪು ತಿಳಿದನು. ವೈದ್ಯರನ್ನು ಕರೆಸಿ ಚಿಕಿತ್ಸೆ ಕೊಡಿಸಿದನು. ವೈದ್ಯರು ಕತ್ತೆಗೆ ಚಳಿಯಾಗದಂತೆ ನೋಡಿಕೊಳ್ಳಬೇಕು ಎಂದು ಹೇಳಿ ಹೋದರು. ಕತ್ತೆಗೆ ಚಳಿಯಾಗದಂತೆ ಏನು ಮಾಡುವುದು ಎಂದು ತಲೆಕೆಡಿಸಿಕೊಳ್ಳುತ್ತಿರುವಾಗ ವ್ಯಾಪಾರಿ ಕುರಿಯನ್ನು ನೋಡಿದ. ಅದರ ಮೈಮೇಲಿದ್ದ ಉಣ್ಣೆಯನ್ನೆಲ್ಲಾ ತೆಗೆದು ಚಾದರವನ್ನು ತಯಾರಿಸಿದ. ಅದನ್ನು ಕತ್ತೆಗೆ ಹೊದಿಸಿದ. ಕತ್ತೆಯನ್ನು ಮನೆಯಿಂದ ಓಡಿಸಬೇಕೆಂದು ಮಾಡಿದ ಉಪಾಯ ತನಗೇ ತಿರುಗುಬಾಣವಾಗಿದ್ದು ಕಂಡು ಕರಿ ತೆಪ್ಪಗಾಯಿತು. ಇನ್ಯಾವತ್ತೂ ಕುತಂತ್ರ ಮಾಡಲು ಹೋಗಲಿಲ್ಲ.

– ಹರೀಶ್‌

Advertisement

Udayavani is now on Telegram. Click here to join our channel and stay updated with the latest news.

Next