ಸಿರವಾರ: ನವಲಕಲ್ಲು ಬೃಹನ್ಮಠವು ಸಾಮಾಜಿಕ ಕಾರ್ಯ ಮಾಡಿ, ಉತ್ತಮ ದಾರಿಯಲ್ಲಿ ಸಾಗುತ್ತಿದೆ ಎಂದರೆ ಅದಕ್ಕೆ ಭಕ್ತರ ಸಹಕಾರ ಕಾರಣ ಎಂದು ಹಾಸನ ಜಿಲ್ಲೆಯ ಕಾರ್ಜುವಳ್ಳಿಯ ಹಿರೇಮಠದ ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲೂಕಿನ ನವಲಕಲ್ಲು ಬೃಹನ್ಮಠದಲ್ಲಿ ಗುರುವಾರ ರಾತ್ರಿ ನಡೆದ ಲಿಂ.ಸೋಮಶೇಖರ ಶಿವಾಚಾರ್ಯರ 22ನೇ ಜಾತ್ರಾ ಮಹೋತ್ಸವ ಹಾಗೂ 7 ನೇ ಮಾಸಿಕ ಶಿವಾನುಭವಗೋಷ್ಠಿಯಲ್ಲಿ ಮಾತನಾಡಿದರು.
ಉತ್ತರ ಕರ್ನಾಟಕ ಭಾಗದಲ್ಲಿ ಮಠ ಮಾನ್ಯಗಳ ಬಗ್ಗೆ ಪ್ರತಿಯೊಬ್ಬರೂ ಅಪಾರ ಗೌರವ ಹೊಂದಿದ್ದಾರೆ. ಅದರಿಂದಾಗಿ ಮಠಗಳು ಹೆಚ್ಚಿನ ಕಾರ್ಯಗಳನ್ನು ಮಾಡಲು ಸಹಕಾರಿಯಾಗಿದೆ. ನವಲಕಲ್ಲು ಬೃಹನ್ಮಠದ ಶ್ರೀಗಳು ಇಂದಿನ ದಿನದಲ್ಲಿ ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿರುವುದಕ್ಕೆ ಪ್ರಮುಖ ಶಕ್ತಿಯೇ ಅವರ ಭಕ್ತರು ಎಂದರು.
ವೀರಗೋಟ ಸುಕ್ಷೇತ್ರದ ಅಡವಿಲಿಂಗ ಮಹಾರಾಜರು ಮಾತನಾಡಿ, ಜಗತ್ತಿನಲ್ಲಿ ನನ್ನದೆನ್ನುವುದು ಏನು ಇಲ್ಲ. ನಾನು ಎಂಬುದು ನಶ್ವರ. ಅದನ್ನರಿತು ಜೀವನ ನಡೆಸಿದರೆ ಮುಕ್ತಿ ದೊರೆಯುತ್ತದೆ. ನಾವು ಅಕ್ಕಿಗೆ ಬೆಲೆ ನೀಡಬಹುದು. ಆದರೆ ಭೂಮಿಯಲ್ಲಿ ಬೆಳೆಯುವ ಭತ್ತದ ಕಣಗಳಿಗೆ ಬೆಲೆ ಕಟ್ಟಲಾಗದು. ನಾವು ಮಾಡುವ ಕೂಲಿಗೆ ತಕ್ಕಂತೆ ಬೆಲೆ ಸಿಗುತ್ತದೆ ಎಂದರು.
ನವಲಕಲ್ಲು ಬೃಹನ್ಮಠದ ಅಭಿನವಶ್ರೀ ಸೋಮನಾಥ ಶಿವಾಚಾರ್ಯ ಸ್ವಾಮೀಜಿ, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಜ್ಯೋತಿ ಅಕ್ಕ, ಕಲ್ಲೂರು ಜಿಪಂ ಸದಸ್ಯ ಮಹಾಂತೇಶ ಪಾಟೀಲ ಅತ್ತನೂರು, ಗ್ರೀನ್ ರಾಯಚೂರು ಸಂಸ್ಥೆಯ ರಾಜೇಂದ್ರಕುಮಾರ ಇದ್ದರು.
ಅದ್ಧೂರಿಯಾಗಿ ನಡೆದ ರಥೋತ್ಸವ: ಜಾತ್ರಾ ಮಹೋತ್ಸವ ಮಯೂರ ಶಿಲೆ ನಾಡೋತ್ಸವದ ಅಂಗವಾಗಿ ಸಂಜೆ ಲಿಂ. ಸೋಮಶೇಖರ ಶಿವಾಚಾರ್ಯರ ಮಹಾ ರಥೋತ್ಸವವು ಸಾವಿರಾರು ಭಕ್ತರ ಮಧ್ಯೆ ಅದ್ಧೂರಿಯಾಗಿ ನಡೆಯಿತು. ರಥೋತ್ಸವಕ್ಕೆ ಉಜ್ಜಯಿನಿ ಪೀಠದ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಚಾಲನೆ ನೀಡಿದರು.
ನೀಲಗಲ್ಲು ಬೃಹನ್ಮಠದ ಡಾ.ಪಂಚಾಕ್ಷರಿ ಶಿವಾಚಾರ್ಯ ಸ್ವಾಮೀಜಿ, ಗಬ್ಬೂರು ಬೂದಿಬಸವೇಶ್ವರ ಸಂಸ್ಥಾನ ಮಠದ ಬೂದಿಬಸವ ಶಿವಾಚಾರ್ಯ ಸ್ವಾಮೀಜಿ, ಯರಡೋಣಿ ಸಿದ್ದರಾಮೇಶ್ವರ ಗುರುಮಠದ ಮುರುಘೇಂದ್ರ ಶಿವಯೋಗಿ ಸ್ವಾಮೀಜಿ, ನವಲಕಲ್ಲು ಬೃಹನ್ಮಠದ ಅಭಿನವಶ್ರೀ ಸೋಮನಾಥ ಶಿವಾಚಾರ್ಯ ಸ್ವಾಮೀಜಿ, ಕಾರ್ಜುವಳ್ಳಿಯ ಹಿರೇಮಠದ ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿ ರಥೋತ್ಸವದಲ್ಲಿ ಭಾಗವಹಿಸಿದ್ದರು.