Advertisement

8ನೇ ಪರಿಚ್ಛೇದಕ್ಕೆ ತುಳು ಸೇರಿಸಲು ಗರಿಗೆದರಿದ ಹಕ್ಕೊತ್ತಾಯ

11:19 AM Jun 02, 2018 | Harsha Rao |

ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಿಂದ ಬಿಜೆಪಿಯಿಂದ ಆಯ್ಕೆಯಾಗಿರುವ 12 ಮಂದಿ ಶಾಸಕರು ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುವಂತೆ ಕೇಂದ್ರ ಸರಕಾರಕ್ಕೆ ಹಕ್ಕೊತ್ತಾಯ ಮಂಡಿಸಲು ಮುಂದಾಗಿದ್ದಾರೆ.

Advertisement

ಈ ಮೂಲಕ ಏಳು ದಶಕಗಳ ತುಳುವರ ಬೇಡಿಕೆಗೆ ಮತ್ತೆ ಜೀವ ಬಂದಿದೆ. ಶಾಸಕರು ಇದಕ್ಕೆ ತಮ್ಮ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಬೇಕೆಂಬ ಆಗ್ರಹವೂ ತುಳುವರಿಂದ ವ್ಯಕ್ತವಾಗಿದೆ.

ಉಭಯ ಜಿಲ್ಲೆಯ ಎಲ್ಲ ಬಿಜೆಪಿ ಶಾಸಕರು ಕ್ಷೇತ್ರ ಹಾಗೂ ಜಿಲ್ಲೆಗೆ ಸಂಬಂಧಿಸಿದ ಪ್ರಮುಖ ಬೇಡಿಕೆ-ಸಮಸ್ಯೆಗಳ ಬಗ್ಗೆ ಸಭೆ ನಡೆಸಿ ಚರ್ಚಿಸಿದರು. ಈ ಸಂದರ್ಭದಲ್ಲಿ ತುಳು ಭಾಷೆ 8ನೇ ಪರಿಚ್ಛೇದ ಸೇರ್ಪಡೆಗೆ ಪ್ರಯತ್ನಿಸುವ ಕುರಿತೂ ಸಮಾಲೋಚಿಸಲಾಗಿದೆ ಎಂದು ತಿಳಿದುಬಂದಿದೆ. 

ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರವಿದ್ದು, ಕರಾವಳಿಯಲ್ಲಿ ಈ ಬಾರಿ ಬಿಜೆಪಿ ಶಾಸಕರು ಪಾರುಪತ್ಯ ಸಾಧಿಸಿದ್ದಾರೆ. ಈ ಸದವಕಾಶವನ್ನು ಬಳಸಿ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ ಮನವರಿಕೆ ಮಾಡುವ ಉದ್ದೇಶ ಹೊಂದಲಾಗಿದೆ. ಒಂದು ವೇಳೆ ಯಶಸ್ವಿಯಾದರೆ ಲೋಕಸಭೆ ಚುನಾವಣೆಯಲ್ಲಿ ಈ ಭಾಗದಲ್ಲಿ ಟ್ರಂಪ್‌ಕಾರ್ಡ್‌ ಆಗಿ ಬಳಸುವ ಲೆಕ್ಕಾಚಾರವೂ ಇದೆ ಎನ್ನಲಾಗಿದೆ.

ಮುಂದಿನ ವರ್ಷ ಲೋಕಸಭಾ ಚುನಾವಣೆಯೂ ಬರಲಿದೆ. ಈ ಹಂತದಲ್ಲಿ ತುಳುವರ ಬೇಡಿಕೆ ಈಡೇರಿಸಿದರೆ ಕರಾವಳಿಯಲ್ಲಿ ಬಿಜೆಪಿಗೆ ಅನುಕೂಲಕರ ವಾತಾವರಣ ನಿರ್ಮಾಣವಾಗಬಹುದು. ಇದೂ ಬೇಡಿಕೆ ಈಡೇರುವ ಕನಸಿಗೆ ಪುಷ್ಟಿ ನೀಡಿದೆ. 

Advertisement

ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ. ಭಂಡಾರಿ ಒಳಗೊಂಡಂತೆ ನಿಯೋಗವೊಂದು 2016ರ ಆಗಸ್ಟ್‌ನಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತ್ತು. ಕಳೆದ ವರ್ಷ ಪ್ರಧಾನಿ ಮೋದಿ ಉಜಿರೆಗೆ ಆಗಮಿಸಿದ್ದಾಗಲೂ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ಮಾಡಿದ ಮನವಿಗೆ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿತ್ತು. ಅನೇಕ ತುಳು ಸಂಘಟನೆಗಳು ಸಾಮಾಜಿಕ ಜಾಲ ತಾಣಗಳಲ್ಲಿ ಟ್ವಿಟರ್‌ ಅಭಿಯಾನ ನಡೆಸಿದ್ದೆವು. ಈಗಾಗಲೇ ರಾಜ್ಯವಲ್ಲದೇ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ, ಅಮೆರಿಕ, ಫಿನ್‌ಲಾÂಂಡ್‌, ಜರ್ಮನಿ, ಜಪಾನ್‌ ವಿ.ವಿ.ಯಲ್ಲಿ ತುಳು ಭಾಷೆಯನ್ನು ಕಲಿಸಲಾಗುತ್ತಿದೆ. ಇಚ್ಛಾಶಕ್ತಿ ಕೊರತೆ  ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ. ಭಂಡಾರಿ ಹೇಳುವಂತೆ, ತುಳು ಭಾಷೆ ಎಂಟನೇ ಪರಿಚ್ಛೇದಕ್ಕೆ ಸೇರಿಸುವಂತೆ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಕೇಂದ್ರಕ್ಕೆ ಶಿಫಾರಸು ಮಾಡಿದ್ದರು. ಅಕಾಡೆಮಿ ಎಲ್ಲ ದಾಖಲೆಗಳನ್ನೂ ಒದಗಿಸಿದ್ದು, ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ವಿಳಂಬವಾಗಿದೆ.

ಸಂಸದರು ಪ್ರಧಾನಿಗೆ ಒತ್ತಡ ಹೇರಲು ಇದು ಸಕಾಲ. ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲ ಸಂಸದರನ್ನು ಒಟ್ಟುಗೂಡಿಸಿ ಪ್ರಧಾನಿ ಅವರನ್ನು ಒತ್ತಾಯಿಸಲಿದ್ದೇವೆ’ ಎಂದರು.

ಇದು ಸಕಾಲ
ಕರಾವಳಿಯ 12 ಬಿಜೆಪಿ ಶಾಸಕರು ಆಯ್ಕೆಯಾಗಿರುವುದು, ಕೇಂದ್ರದಲ್ಲಿ ಬಿಜೆಪಿ ಆಡಳಿತ ಹಾಗೂ ಇತ್ತೀಚೆಗೆ ಪ್ರಧಾನಿ ಮೋದಿ ಕರಾವಳಿಗೆ ಭೇಟಿ ನೀಡಿ ತುಳುವಿನಲ್ಲೇ ಭಾಷಣ ಆರಂಭಿಸಿದ್ದು- ಈಎಲ್ಲವೂ ತುಳುವರ ಬೇಡಿಕೆಯನ್ನು ಮಂಡಿಸಲಿಕ್ಕೆ ಸಕಾಲ ಎಂಬ ಅಭಿಮತ ಸಾರ್ವ ಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ. 

ಈ ಬಗ್ಗೆ ಶಾಸಕ ವೇದವ್ಯಾಸ ಕಾಮತ್‌ “ಉದಯವಾಣಿ’ಗೆ ಪ್ರತಿಕ್ರಿಯಿಸಿದ್ದು, ಬಿಜೆಪಿ ಶಾಸಕರು ಸಭೆ ನಡೆಸಿ ಏನೆಲ್ಲ  ಕ್ರಮ ಕೈಗೊಳ್ಳಬೇಕು ಎಂದು ಸಮಾಲೋಚಿಸಲಾಗಿದೆ. ತುಳುವನ್ನು 8ನೇ ಪರಿಚ್ಛೇದಕ್ಕೆ ಸೇರಿಸುವ ವಿಷಯವನ್ನೂ ಚರ್ಚಿಸಲಾಗಿದೆ. ನಾವು ಪ್ರಾಮಾಣಿಕ ಪ್ರಯತ್ನ ನಡೆಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವರಿಕೆ ಮಾಡಿಕೊಡುತ್ತೇವೆ’ಎಂದರು.

ತುಳುವಿನಲ್ಲಿಯೂ ಸಾಧನೆ
ತುಳು ಭಾಷೆಯಲ್ಲಿ ಈಗಾಗಲೇ ಅನೇಕ ಕೆಲಸಗಳಾಗಿವೆ. ತುಳು ನಿಘಂಟಿನ ಪುನಾರಚನೆ, ತುಳು ಪಾಡªನ ಸೇರಿದಂತೆ ಮತ್ತಿತರ ಸಂಗತಿಗಳು ಬೇರೆ ಭಾಷೆಗೆ ಅನುವಾದಗೊಳ್ಳುತ್ತಿದ್ದು, ಎಲ್ಲ ಅರ್ಹತೆ ಹೊಂದಿದೆ. ಪಂಚ ದ್ರಾವಿಡ ಭಾಷೆಗಳಾದ ಕನ್ನಡ, ತಮಿಳು, ಮಲೆಯಾಳಂ, ತೆಲುಗು ಭಾಷೆಯ ಜತೆ ದ್ರಾವಿಡ ಭಾಷೆಗೆ ಸೇರಿದ ತುಳುವಿಗೂ 8ನೇ ಪರಿಚ್ಛೇದದಲ್ಲಿ ಸ್ಥಾನ ನೀಡಬೇಕು ಎನ್ನುವುದು ತುಳು ಭಾಷಿಗರ ಆಗ್ರಹ. 

ತುಳು ಭಾಷೆ 8ನೇ ಪರಿಚ್ಛೇದಕ್ಕೆ ಸೇರಿಸುವಂತೆ ಈಗಾಗಲೇ ನಾನು ಲೋಕಸಭೆಯಲ್ಲಿ ಆಗ್ರಹಿಸಿದ್ದೇನೆ. ತುಳು ಭಾಷೆಯ ಜತೆ ಇನ್ನೂ, ಎರಡರಿಂದ ಮೂರು ಭಾಷೆಗಳಿಗೆ ಈ ಸ್ಥಾನಮಾನ ನೀಡುವ ಪ್ರಸ್ತಾಪ  ಕೇಂದ್ರ ಗೃಹಸಚಿವ ರಾಜನಾಥ್‌ ಸಿಂಗ್‌ ಅವರ ಬಳಿ ಇದೆ. ಈ  ವಿಷಯದಲ್ಲಿ ರಾಜ್ಯ ಸರಕಾರದ ಸಹಕಾರವೂ ಅಗತ್ಯ. 
– ನಳಿನ್‌ ಕುಮಾರ್‌ ಕಟೀಲು ದ.ಕ. ಸಂಸದ

Advertisement

Udayavani is now on Telegram. Click here to join our channel and stay updated with the latest news.

Next