Advertisement

ಕೆಂಡದ ನಡಿಗೆ ಇಲ್ಲಿ ಮೌಢ್ಯ; ಅಮೆರಿಕದಲ್ಲಿ ಬಂಡವಾಳ!

06:36 AM Mar 17, 2019 | |

ಬೆಂಗಳೂರು: ನಮ್ಮದೇ ಪರಂಪರಾಗತ ಆಚರಣೆಯಾದ ಕೆಂಡದ ಮೇಲಿನ ನಡಿಗೆ ಇಂದು ನಮಗೆ ಮೂಢನಂಬಿಕೆಯಂತೆ ಕಾಣಿಸುತ್ತಿದೆ. ಆದರೆ, ಇದೇ ಆಚರಣೆಯನ್ನು ಬಂಡವಾಳ ಮಾಡಿಕೊಂಡು ಅಮೆರಿಕದಲ್ಲೊಬ್ಬ ಹಣ ಗಳಿಸುತ್ತಿದ್ದಾನೆ. ಜತೆಗೆ ಜಾಗೃತಿಯನ್ನೂ ಮೂಡಿಸುತ್ತಿದ್ದಾನೆ! 

Advertisement

ಇಸ್ರೋ ಮಾಜಿ ಅಧ್ಯಕ್ಷ ಎ.ಎಸ್‌. ಕಿರಣ್‌ ಕುಮಾರ್‌ ಹೀಗೆ ಹೇಳಿ ಅಚ್ಚರಿ ಮೂಡಿಸಿದರು. ನಗರದ ನೆಹರು ತಾರಾಲಯದಲ್ಲಿ ಶನಿವಾರ ನವಕರ್ನಾಟಕ ಪ್ರಕಾಶನ ಹಾಗೂ ಬೆಂಗಳೂರು ಅಸೋಸಿಯೇಷನ್‌ ಫಾರ್‌ ಸೈನ್ಸ್‌ ಎಜುಕೇಷನ್‌ (ಬೇಸ್‌) ಸಂಯುಕ್ತವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಡಾ.ಬಿ.ಎಸ್‌. ಶೈಲಜಾ ಅವರ “ಆಕಾಶದಲ್ಲಿ ಏನಿದೆ? ಏಕಿದೆ?’ ಕೃತಿ ಲೋಕಾರ್ಪಣೆ ಮಾಡಿ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. 

ಭಾರತೀಯ ಪರಂಪರೆಯಲ್ಲಿನ ಎಷ್ಟೋ ಆಚರಣೆಗಳಿಗೆ ವೈಜ್ಞಾನಿಕ ತಳಹದಿ ಇದೆ. ಉದಾಹರಣೆಗೆ ಕೆಂಡದ ಮೇಲಿನ ನಡಿಗೆಯ ಉದ್ದೇಶ ನಮ್ಮಲ್ಲಿರುವ ಭಯವನ್ನು ಹೋಗಲಾಡಿಸುವುದು. ಕೆಂಡದಲ್ಲಿ ಇಳಿಯುವ ಮುನ್ನ ಅದರೊಂದಿಗೆ ನಮ್ಮ ಚರ್ಮಎಷ್ಟುಹೊತ್ತು ಸಂಪರ್ಕದಲ್ಲಿರುತ್ತದೆ?

ಆ ಅವಧಿಯಲ್ಲಿ ಚರ್ಮಕ್ಕೆ ಯಾವುದೇ ಸಮಸ್ಯೆ ಆಗದಂತೆ ಮುಲಾಮು ಹಚ್ಚಿಕೊಳ್ಳುವುದು ಸೇರಿದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಅನುಸರಿಸಬೇಕಾಗುತ್ತದೆ. ನಾವು ಇದನು ಮೂಢನಂಬಿಕೆ ಎನ್ನುತ್ತಿದ್ದೇವೆ. ಆದರೆ, ಅಮೆರಿಕದಲ್ಲಿ ಒಬ್ಬ ಇದೇ ಕೆಂಡದ ಮೇಲಿನ ನಡಿಗೆ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ಜಾಗೃತಿ ಮೂಡಿಸುವುದರ ಜತೆಗೆ ಹಣ ಗಳಿಸುತ್ತಿದ್ದಾನೆ ಎಂದು ಹೇಳಿದರು. 

ಹಾಗಾಗಿ, ನಮ್ಮ ಪರಂಪರಾಗತ ಆಚರಣೆಗಳಿಗೂ ವೈಜ್ಞಾನಿಕ ತಳಹದಿ ಇದೆ. ಆದರೆ, ಅದನ್ನು ಸರಿಯಾಗಿ ಪ್ರತಿಪಾದಿಸದೆ ಇರುವುದರಿಂದ ಆ ಆಚರಣೆಗಳು ಮೂಢನಂಬಿಕೆಗೆ ಸೀಮಿತಗೊಳ್ಳುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಈ ಎಲ್ಲ ಆಚರಣೆಗಳನ್ನು ವೈಜ್ಞಾನಿಕವಾಗಿ ಒರೆಗೆ ಹಚ್ಚಿನೋಡುವ ಅವಶ್ಯಕತೆ ಇದೆ. ಅಲ್ಲದೆ, ಕನ್ನಡದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿಜ್ಞಾನದ ಬಗ್ಗೆ ಲೇಖನಗಳು, ಜರ್ನಲ್‌ಗ‌ಳು ಬರಬೇಕು. ಇದರಿಂದ ಸಮಾಜದಲ್ಲಿ ಹೆಚ್ಚು ಜಾಗೃತಿ ಮೂಡಿಸಲು ಸಾಧ್ಯವಾಗುತ್ತದೆ ಎಂದರು. 

Advertisement

ಇದಕ್ಕೂ ಮುನ್ನ ಕಾರ್ಯಕ್ರಮದಲ್ಲಿ ಮಾತನಾಡಿದ ಖಗೋಳ ವಿಜ್ಞಾನಿ ಡಾ.ಪಾಲಹಳ್ಳಿ ವಿಶ್ವನಾಥ್‌, ನಕ್ಷತ್ರ ಹುಡುಕುವ ವಿಧಾನ ಇಂದು ಅಟೋಮೇಟೆಡ್‌ ಆಗಿಬಿಟ್ಟಿದೆ. ಇದು ನಮ್ಮ ಮೂಲಜ್ಞಾನವನ್ನು ಕಸಿದುಕೊಂಡಿದೆ. ವಿಚಿತ್ರವೆಂದರೆ, ಎಷ್ಟೋ ವಿದ್ಯಾರ್ಥಿಗಳಿಗೆ ರಾಹು-ಕೇತುಗಳ ಬಗ್ಗೆಯೂ ಜ್ಞಾನ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.  

ಡಾ.ಶೈಲಜಾ ಅವರ “ಆಕಾಶದಲ್ಲಿ ಏನಿದೆ? ಏಕಿದೆ?’ ಕೃತಿಯು ಜ್ಞಾನದ ಜತೆಗೆ ಅನುಭವವನ್ನು ನೀಡುತ್ತದೆ. ಪಠ್ಯಪುಸ್ತಕದ ರೀತಿಯಲ್ಲಿ ಇದನ್ನು ಅಧ್ಯಯನ ಮಾಡಬಹುದಾಗಿದೆ. ಗ್ರಹಣದ ಬಗ್ಗೆ ಈಗಲೂ ಮೌಡ್ಯದಲ್ಲಿದ್ದೇವೆ. ಅದರಿಂದ ಹೊರಬರಲು ಇಂತಹ ಪುಸ್ತಕಗಳು ನೆರವಾಗಲಿವೆ ಎಂದು ತಿಳಿಸಿದರು. ಪ್ರಕಾಶನದ ನಿರ್ದೇಶಕ ಎ.ರಮೇಶ ಉಡುಪ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next