Advertisement

ಕುಂದಾಪುರ ನಗರದಲ್ಲಿ ಮತ್ತೆ ಇರಲಿದೆ ಕಸದ ಡಬ್ಬ

08:35 PM Nov 08, 2021 | Team Udayavani |

ಕುಂದಾಪುರ: ಕಸದಬುಟ್ಟಿ ರಹಿತ ಪುರಸಭೆ ವ್ಯಾಪ್ತಿಯಲ್ಲಿ ಮತ್ತೆ ಕಸದ ಬುಟ್ಟಿಗಳು ಅಲ್ಲಲ್ಲಿ ಕಾಣಿಸಿಕೊಳ್ಳಲಿವೆ.ನಗರಗಳಲ್ಲಿ ಭಾರೀ ಗಾತ್ರದ ತೊಟ್ಟಿಗಳಿದ್ದವು. ಕಾಂಕ್ರೀಟ್‌ ಹಾಗೂ ಕಬ್ಬಿಣದ ದೊಡ್ಡ ತೊಟ್ಟಿಗಳಲ್ಲಿ ತ್ಯಾಜ್ಯ, ಕಸವನ್ನು ಎಸೆಯಲಾಗುತ್ತಿತ್ತು. ತೊಟ್ಟಿ ಇದ್ದರೂ ಅದರ ಒಳಗೆ ಕಸ ಹಾಕದೇ ಅದರ ಸುತ್ತ, ಹೊರಾವರಣದಲ್ಲಿ ಕಸ ಹಾಕುವವರ ಸಂಖ್ಯೆಯೇ ಹೆಚ್ಚು. ಹೀಗಿರುವ ತೊಟ್ಟಿಗಳು ನಗರ ಸೌಂದರ್ಯದ ಮೇಲೆ ಕಪ್ಪು ಚುಕ್ಕೆ ಇದ್ದಂತೆ. ಆ ಪರಿಸರದಲ್ಲಿ ದುರ್ನಾತದಿಂದ ಹೋಗುವುದು ಕೂಡ ಕಷ್ಟವೇ. ಅಷ್ಟಲ್ಲದೇ ಸುತ್ತಮುತ್ತಲಿನ ಅಂಗಡಿಯವರಿಗೂ ಗ್ರಾಹಕರು ಬರದಂತೆ ತಡೆಯಲು ಈ ಬುಟ್ಟಿ ಹೊರತಾಗಿ ಬೇರೆ ಬೇಡ. ಅನಂತರದ ದಿನಗಳಲ್ಲಿ ಕಸ ಸಂಗ್ರಹಕ್ಕೆ ಸರಕಾರ ಪ್ರತ್ಯೇಕ ವ್ಯವಸ್ಥೆ ಮಾಡಿತು.

Advertisement

ಮನೆ ಮನೆ ಸಂಗ್ರಹ
ಮನೆ ಮನೆ ಕಸ ಸಂಗ್ರಹ ಹಾಗೂ ವಾಣಿಜ್ಯ ಮಳಿಗೆಗಳಿಂದ ಕಸ ಸಂಗ್ರಹ ವ್ಯವಸ್ಥೆ ಆರಂಭವಾಯಿತು. ರಾಜ್ಯದ ಎಲ್ಲ ಸ್ಥಳೀಯಾಡಳಿತ ಸಂಸ್ಥೆಗಳೂ ಈ ವ್ಯವಸ್ಥೆ ಜಾರಿಗೆ ತಂದವು. ಅದರಂತೆ ಎಲ್ಲ ಮಳಿಗೆಗಳು, ಮನೆಗಳಿಗೆ ಸರಕಾರದಿಂದ ಕಸದ ಬುಟ್ಟಿಯನ್ನು ನೀಡಲಾಯಿತು. ಅದರಲ್ಲೇ ಕಸವನ್ನು ಹಸಿಕಸ, ಒಣಕಸ ಎಂದು ಪ್ರತ್ಯೇಕಿಸಿ ನೀಡಬೇಕೆಂದು ನಿಯಮ ಮಾಡಲಾಯಿತು. ವಾರ್ಷಿಕ ಶುಲ್ಕ ಸಂಗ್ರಹವನ್ನೂ ಮಾಡಲಾಯಿತು. ಕಸ ಸಂಗ್ರಹಕ್ಕೆ ಬೇಕಾದ ಎಲ್ಲ ವ್ಯವಸ್ಥೆ ಮಾಡಲಾಯಿತು. ಈ ವ್ಯವಸ್ಥೆ ಸುಸೂತ್ರವಾಗಿ ಒಂದು ಹಳಿಗೆ ಬರುತ್ತಿದ್ದಂತೆಯೇ ನಗರದಲ್ಲಿ ಹಾಕಿದ ದೊಡ್ಡ ಗಾತ್ರದ ಕಸದ ಬುಟ್ಟಿಗಳನ್ನು ರಾಜ್ಯದ ಎಲ್ಲೆಡೆ ಎಂಬಂತೆ ತೆಗೆದು ಹಾಕಲಾಯಿತು. ಈ ಮೂಲಕ ಸ್ವತ್ಛ ಭಾರತ ಯೋಜನೆಯ ಪರಿಣಾಮಕಾರಿ ಅನುಷ್ಠಾನ ಮಾಡಲಾಯಿತು.

ಟ್ವಿನ್‌ ಬಿನ್‌
ಈಗ ಮತ್ತೆ ಟ್ವಿನ್‌ ಬಿನ್‌ ಪದ್ಧತಿ ಜಾರಿಗೆ ತರಲಾಗುತ್ತಿದೆ. ಅದರಂತೆ ನಗರದ ವಿವಿಧೆಡೆ ಕಂಬಗಳನ್ನು ಅಳವಡಿಸಲಾಗುತ್ತಿದ್ದು ಅದರಲ್ಲಿ ಹಸಿಕಸ ಹಾಗೂ ಒಣಕಸ ಪ್ರತ್ಯೇಕಿಸಿ ಹಾಕಲು ಎರಡು ಬುಟ್ಟಿಗಳನ್ನು ಇಡಲಾಗುತ್ತದೆ. ಅದನ್ನು ದಿನದಲ್ಲಿ ಒಂದು ಬಾರಿ ಅಥವಾ ಎರಡು ಬಾರಿ ಪುರಸಭೆಯ ತ್ಯಾಜ್ಯ ಸಂಗ್ರಹ ವಾಹನಕ್ಕೆ, ಬುಟ್ಟಿಯನ್ನು ಕಂಬದಿಂದ ತೆಗೆಯದೆ ವಾಹನದೊಳಗೆ ನೇರ ಅನ್‌ಲೋಡ್‌ ಮಾಡಿ ಸಂಗ್ರಹಿಸಿ ವಿಲೇವಾರಿ ಮಾಡಲಾಗುತ್ತದೆ.

ಇದನ್ನೂ ಓದಿ:ಪತ್ರಕರ್ತರ ರಾಜ್ಯ ಸಮ್ಮೇಳನದ ಲಾಂಚನ ಬಿಡುಗಡೆ ಮಾಡಿದ ಸಿಎಂ

ಅಸಮಾಧಾನ
ಕಸದ ಬುಟ್ಟಿಗಳನ್ನು ತೆಗೆದು ಮಳಿಗೆಗಳು, ಅಂಗಡಿಗಳು ಹಾಗೂ ಮನೆಗಳಿಂದ ಕಸ ಸಂಗ್ರಹ ಶುಲ್ಕ ವಸೂಲಿ ಮಾಡಲಾಗುತ್ತಿದೆ. ನಿತ್ಯ ಕಸವೇ ಇಲ್ಲದ ಚಿನ್ನದ ಮಳಿಗೆಯಂತಹ ಅಂಗಡಿಗಳಿಂದಲೂ ಶುಲ್ಕ ವಸೂಲಿಯಂತೂ ನಿತ್ಯದ ಬಾಬತ್ತೇ ನಡೆಯುತ್ತದೆ. ದೊಡ್ಡ ತೊಟ್ಟಿಗಳನ್ನು ತೆಗೆಯುವುದು ಎಂದು ತೀರ್ಮಾನಿಸಿ ಈಗ ಮತ್ತೆ ಬುಟ್ಟಿಗಳನ್ನು ಇಡುವ ನಿರ್ಧಾರ ಸರಿ ಅಲ್ಲ ಎಂಬ ಅಪಸ್ವರದ ಮಾತುಗಳೂ ಸಾರ್ವಜನಿಕರಿಂದ ಕೇಳಿ ಬರುತ್ತಿವೆ. ಅಷ್ಟಲ್ಲದೆ ಕಸದ ಬುಟ್ಟಿ ಇಟ್ಟರೆ ಬಹುತೇಕ ಸಾರ್ವಜನಿಕರು ಬುಟ್ಟಿಯೊಳಗೆ ಕಸ ಹಾಕದೇ ಅದರ ಸುತ್ತಮುತ್ತವೇ ಹಾಕುವ ಕಾರಣ ಮತ್ತೂಮ್ಮೆ ಕಸಸಂಗ್ರಹ ತಾಣವಾಗುವ ಅಪಾಯವೂ ಇದೆ ಎಂಬ ಮಾತಿದೆ. ಲಕ್ಷಾಂತರ ರೂ. ಖರ್ಚು ಮಾಡಿ ರಸ್ತೆ ಬದಿ ಇಂಟರ್‌ಲಾಕ್‌ ಅಳವಡಿಸಿ ಅದನ್ನು ತೆಗೆದು ಅಸಮರ್ಪಕವಾಗಿ ಜೋಡಿಸಿ ಲಿಟ್ಟರ್‌ ಕಂಬ ಹಾಕಲಾಗುತ್ತಿದೆ. ಪ್ರತೀ ಸಲ ಕಾಂಕ್ರೀಟ್‌ ರಸ್ತೆ, ಇಂಟರ್‌ಲಾಕ್‌ ಅಳವಡಿಕೆಯಾದ ಕೂಡಲೇ ಇಂತಹ ಹೊಸ ಕಾಮಗಾರಿ ಮಾಡುವ ವಿಧಾನ ಕೈಬಿಡಬೇಕು ಎಂಬ ಆಗ್ರಹವೂ ಇದೆ.

Advertisement

ನಗರ ಸ್ವಚ್ಛತೆಗಾಗಿ
ನಗರದಲ್ಲಿ ಓಡಾಡುವ ಸಾರ್ವಜನಿಕರು, ವಿದ್ಯಾರ್ಥಿಗಳಿಗೆ, ಪ್ರವಾಸಿಗರಿಗೆ ಎಂದು ಈ ವ್ಯವಸ್ಥೆ ಮಾಡಲಾಗುತ್ತಿದೆ ಎನ್ನುತ್ತಾರೆ ಪುರಸಭೆಯವರು. ದಿನವೊಂದಕ್ಕೆ 10 ಸಾವಿರದಷ್ಟು ವಿದ್ಯಾರ್ಥಿಗಳು ಬರುವ ನಗರದಲ್ಲಿ ಎಲ್ಲೆಂದರಲ್ಲಿ ಕಸ ಹಾಕುವ ಪ್ರವೃತ್ತಿ ಇದೆ. ಸಣ್ಣಪುಟ್ಟ ಕಾಗದ ಚೂರು, ಪ್ಲಾಸ್ಟಿಕ್‌ ಕಸ, ಜೂಸ್‌ ಪ್ಯಾಕೆಟ್‌ಗಳು, ತಿಂಡಿ ಖಾಲಿ ಪೊಟ್ಟಣಗಳು ಹೀಗೆ ಬೇರೆ ಬೇರೆ ವಿಧದ ಕಸಗಳನ್ನು ಸಾರ್ವಜನಿಕರು ಎಲ್ಲಿ ಹಾಕುವುದು ಎಂದು ತಿಳಿಯದೇ ರಸ್ತೆ ಬದಿ ಎಸೆದು ಹೋಗುತ್ತಾರೆ. ಇದು ಸುಂದರ ಕುಂದಾಪುರ ಕಲ್ಪನೆಗೆ ವಿರೋಧವಾಗಿದೆ. ನಗರ ಸೌಂದರ್ಯವನ್ನು ಹಾಳು ಮಾಡುತ್ತದೆ. ಈ ಕಾರಣದಿಂದ ಅತೀ ಹೆಚ್ಚು ಪ್ರವಾಸಿಗರು ಬರುವ ಕೋಡಿ ಸಮುದ್ರ ಕಿನಾರೆಯಲ್ಲಿ 10ರಿಂದ 15 ಬುಟ್ಟಿಗಳು, ಕುಂದಾಪುರ ನಗರದಲ್ಲಿ 35ರಿಂದ 40 ಬುಟ್ಟಿಗಳನ್ನು ಅಳವಡಿಸಲಾಗುತ್ತದೆ. ಅದಕ್ಕಾಗಿ ಕಬ್ಬಿಣದ ಕಂಬ ಹಾಕುವ ಕಾರ್ಯ ನಡೆಯುತ್ತಿದೆ. ಬುಟ್ಟಿಗಳ ಅಳವಡಿಕೆ ಇನ್ನಷ್ಟೇ ನಡೆಯಬೇಕಿದೆ. ಈ ಕಾರ್ಯಕ್ಕಾಗಿ 4 ಲಕ್ಷ ರೂ. ವ್ಯಯಿಸಲಾಗುತ್ತಿದೆ.

ಸರಿಯಲ್ಲ
ಕಸದಬುಟ್ಟಿಗಳನ್ನು ತೆಗೆಯುವ ನಿರ್ಣಯ ಮಾಡಿ, ಮನೆಮನೆ ಕಸ ಸಂಗ್ರಹಕ್ಕೆ ಕಡ್ಡಾಯಶುಲ್ಕ ಸಂಗ್ರಹಿಸುವಾಗ ಮತ್ತೆ ಕಸದ ಬುಟ್ಟಿ ಅಳವಡಿಸುವುದು ಸರಿಯಲ್ಲ.
-ರಾಜೇಶ್‌ ಕಾವೇರಿ,
ಮಾಜಿ ಉಪಾಧ್ಯಕ್ಷರು, ಪುರಸಭೆ

ಪ್ರವಾಸಿಗರಿಗಾಗಿ
ಸಾವಿರಾರು ಸಂಖ್ಯೆಯಲ್ಲಿ ಬರುವ ಪ್ರವಾಸಿಗರು, ವಿದ್ಯಾರ್ಥಿಗಳು, ಬೇರೆ ಬೇರೆ ಊರುಗಳಿಂದ ನಗರಕ್ಕೆ ವಿವಿಧ ಕಾರ್ಯಗಳಿಗೆ ಬರುವವರು ಸಣ್ಣಪುಟ್ಟ ಕಸವನ್ನು ಎಲ್ಲೆಂದರಲ್ಲಿ ಎಸೆಯುತ್ತಿದ್ದಾರೆ. ಈ ಕಾರಣಕ್ಕೆ ಸಣ್ಣ ಗಾತ್ರದ ಬುಟ್ಟಿಗಳನ್ನು ಇಡಲಾಗುತ್ತಿದೆ. ದಿನಕ್ಕೆ ಎರಡು ಬಾರಿ ಅದರಿಂದ ಕಸ ಸಂಗ್ರಹಿಸಲಾಗುತ್ತದೆ.
ಗೋಪಾಲಕೃಷ್ಣ ಶೆಟ್ಟಿ,
ಮುಖ್ಯಾಧಿಕಾರಿ, ಪುರಸಭೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next