Advertisement

ಶತಮಾನೋತ್ಸ‌ವದ ಮುಂಬೆಳಕು

11:58 PM Aug 12, 2022 | Team Udayavani |

ಇಡೀ ಭಾರತ ಇಂದಿನಿಂದ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಸಂಭ್ರಮದಿಂದ ಆಚರಿಸುತ್ತಿದೆ. ಸಂಭ್ರಮ, ಸಡಗರದ ಬೆನ್ನಲ್ಲೇ ಭವಿಷ್ಯದ ಬಗ್ಗೆ ಚಿಂತಿಸಲೂ ಇದು ಸಕಾಲ. ಈ ನಿಟ್ಟಿನಲ್ಲಿ ಉದಯವಾಣಿ ಇಂದಿನಿಂದ “ನನ್ನ ಭಾರತ-ನನ್ನ ಕನಸು’ ಎಂಬ ಮಾಲಿಕೆಯನ್ನು ಆರಂಭಿಸುತ್ತಿದೆ. ಮುಂದಿನ 25 ವರ್ಷಗಳಲ್ಲಿ ಅಂದರೆ, ಭಾರತ ಸ್ವಾತಂತ್ರ್ಯದ ಶತಮಾನೋತ್ಸವ ಆಚರಿಸುವ ಸಂದರ್ಭದಲ್ಲಿ ಭಾರತ ಹೇಗಿರಲಿದೆ ಮತ್ತು ಹೇಗಿರಬೇಕು ಎಂಬ ಬಗ್ಗೆ ನಾಡಿನ ವಿವಿಧ ಕ್ಷೇತ್ರಗಳ ಗಣ್ಯರು ತಮ್ಮ ಅಭಿಪ್ರಾಯವನ್ನು ಇಲ್ಲಿ ಮಂಡಿಸಿದ್ದಾರೆ. ಸದೃಢ ಭಾರತದ ಕನಸು ಕಾಣುತ್ತಲೇ, ಭವಿಷ್ಯದಲ್ಲಿ ಭಾರತದ ಅಭಿವೃದ್ಧಿಯ ನೀಲನಕ್ಷೆಯನ್ನು ಈ ಗಣ್ಯರು ಹರವಿಟ್ಟಿದ್ದಾರೆ. ಇದು ಆಡಳಿತಕ್ಕೂ, ಜನಸಾಮಾನ್ಯರಿಗೂ ಶತಮಾನೋತ್ಸವದ ಮುಂಬೆಳಕು.

Advertisement

ಖುಷಿ, ಸಂತೋಷ ನೀಡಬೇಕು ಅಭಿವೃದ್ಧಿ
25 ವರ್ಷಗಳ ಹಿಂದೆ, ನಮ್ಮೆಲ್ಲರ ಕೈಯಲ್ಲಿ ಮೊಬೈಲ್‌ ಫೋನ್‌ ಇರುತ್ತೆ, ಇಂಟರ್‌ನೆಟ್‌ ಇಷ್ಟು ದೊಡ್ಡ ಮಟ್ಟದಲ್ಲಿ ಹರಡಿಕೊಂಡಿರುತ್ತದೆ ಎಂದು ಯಾರೂ ಕೂಡ ಊಹಿಸಿರಲಿಲ್ಲ. ಹಾಗಾಗಿ 25 ವರ್ಷಗಳ ಮುಂದೆ ಭಾರತ ದಲ್ಲಿ ಏನಾಗಬಹುದು ಎಂದು ಊಹಿಸುವುದು ಬಹಳ ಕಷ್ಟ. ನಾನು 25 ವರ್ಷಗಳ ಹಿಂದೆ ನೋಡಿದ ಭಾರತಕ್ಕೂ ಈಗಿನ ಭಾರತಕ್ಕೂ ಅಜಗಜಾಂ ತರವಿದೆ. ಈ ಅದ್ಭುತವಾದ ಬೆಳವಣಿಗೆಗಳ‌ನ್ನೂ ನೋಡಿದಾಗ, ಮುಂದೆ ಇನ್ನೂ ಉತ್ತಮ ದಿನಗಳಿವೆ ಎಂಬುದರಲ್ಲಿ ಸಂದೇಹವಿಲ್ಲ.

ಸದ್ಯದ ಪರಿಸ್ಥಿತಿಯಲ್ಲಿ ನೋಡಿದರೆ, ಏನೇನು ಬೆಳವಣಿಗೆ ಆಗಬೇಕು ಎನ್ನುವುದನ್ನು ಹಂಚಿಕೊಳ್ಳುತ್ತೇನೆ. ನನ್ನ ಪ್ರಕಾರ, ಆಗಲೇಬೇಕಾದ ವಿಷಯಗಳು ಇವು.

ಯಾವ ದೇಶದಲ್ಲಿ, ಯಾವ ದೇಶವಾಸಿಗಳು ಖುಷಿ ಖುಷಿಯಾಗಿದ್ದಾರೋ ಆ ದೇಶವೇ ಅತೀ ಶ್ರೇಷ್ಠ ವಾದ ದೇಶವಾಗುತ್ತೆ. ಹಾಗಾಗಿ ಪ್ರತಿಯೊಬ್ಬ ಭಾರತೀಯನೂ ಸಂತೋಷವಾಗಿದ್ದೀನಿ ಎಂದು ಹೇಳುವ ದಿನ ಭಾರತ ಜಗತ್ತಿನ ಅತೀ ಶ್ರೇಷ್ಠ ದೇಶ ವಾಗುತ್ತೆ. ಜಗತ್ತಿನ ಅತೀ ಶ್ರೇಷ್ಠವಾದ ಪಾರ್ಕ್‌ ನಮ್ಮ ಊರಿನಲ್ಲಿದೆ. ಆದರೆ ನಾನು ಪಾರ್ಕ್‌ಗೆ ವಾಕಿಂಗ್‌ ಹೋಗಲ್ಲ, ಯಾಕೆಂದರೆ, ಅದು ಸರಗಳ್ಳತನ ಆಗುವ ಪಾರ್ಕ್‌ ಎಂಬ ಭಯ ಒಬ್ಬ ಗೃಹಿಣಿಗೆ ಇದ್ದರೆ, ಅದು ಹೇಗೆ ಜಗತ್ತಿನ ಶ್ರೇಷ್ಠ ಪಾರ್ಕ್‌ ಆಗುತ್ತೆ? ಜಗತ್ತಿನ ಅತೀ ಶ್ರೇಷ್ಠವಾದ ಕಾರ್ಖಾನೆ ನಮ್ಮ ಊರಿನಲ್ಲಿದೆ. ಆದರೆ ಅದರಿಂದ ನನ್ನ ಮಕ್ಕಳ ಆರೋಗ್ಯ ಹಾಳಾಗುತ್ತಿದೆ ಅಂದರೆ ಅದು ಹೇಗೆ ಅತೀ ಶ್ರೇಷ್ಠ ಕಾರ್ಖಾ ನೆಯಾಗಲು ಸಾಧ್ಯ? ಹಾಗಾಗಿ ಮೂಲಸೌಕರ್ಯ ಬೆಳವಣಿಗೆ ಅನ್ನುವುದು ಅರ್ಥ ಪೂರ್ಣವಾದ ಬೆಳವಣಿಗೆ ಆಗಿರಬೇಕು. ಸರಿಯಾದ ದಿಕ್ಕಿನಲ್ಲಿ ಬೆಳವಣಿಗೆ ಆಗಿರಬೇಕು. ಸಂಬಂಧಪಟ್ಟ ಎಲ್ಲರಿಗೂ ನ್ಯಾಯಯುತವಾದ ಬೆಳವಣಿಗೆ ಕಾಣಬೇಕು. ಕೇವಲ ಲಾಭದ ದೃಷ್ಟಿಯಲ್ಲಿ ಬೆಳವಣಿಗೆಯನ್ನು ನೋಡದೆ, ಸಂತೋಷ, ಖುಷಿ, ಅರ್ಥಪೂರ್ಣ ಜೀವನ ಇಂಥ ಮಾನ ದಂಡದ ಮೂಲಕ ಬೆಳವಣಿಗೆಯನ್ನು ವೀಕ್ಷಿಸಬೇಕು.

ಕಣ್ಣು ಹಾಯಿಸಿದ ಕಡೆಯೆಲ್ಲ ಸಂತೋಷಕರ ದೃಶ್ಯಗಳು, ಹಸುರಾದ ಮರಗಳು, ಜಲಪಾತಗಳು, ನದಿಗಳು, ಆರೋಗ್ಯಕರ ಕುಟುಂಬಗಳು, ನಗುನಗುತ್ತಾ ಆಟವಾಡುತ್ತಿರುವ ಮಕ್ಕಳು, ಹಾರುತ್ತಿರುವ ಪಕ್ಷಿಗಳು, ಶೂನ್ಯ ಮಾಲಿನ್ಯ, ಸ್ವತ್ಛವಾದ ನಗರ ಮತ್ತು ಹಳ್ಳಿಗಳು, ಹಿತ ವಾದ ಆರೋಗ್ಯಕರವಾದ ಭಾರತ ಕಾಣಬೇಕು. ರಕ್ತ, ಕೂಗಾ ಟ, ಯುದ್ಧ, ಕಿರುಚಾಟ, ಜಗಳವಾಡುತ್ತಿರುವ ಜನ, ಕೋಪವಾಗಿರುವ ಪ್ರಾಣಿಗಳು, ಭ್ರಷ್ಟಾಚಾರ, ಗುಂಡಿನ ಶಬ್ದ, ಸತ್ತು ಹೋಗಿರುವ ಮೀನು, ಪ್ರಾಣಿಗಳು ಇಂಥ ದೃಶ್ಯಗಳು ನಿಜ ಜೀವನ ದಲ್ಲಿ ಮಾಯವಾಗಬೇಕು.

Advertisement

ಪ್ರತಿಯೊಬ್ಬ ಭಾರತೀಯನೂ ತನ್ನ ಒಳಗಿರುವ ಸ್ವಾಭಾವಿಕ ಪ್ರತಿಭೆಯನ್ನು ಹೊರಹಾಕಲು ಅವಕಾಶಗಳು ಸಿಗುವಂತೆ ನಮ್ಮ ಭಾರತ ದೇಶ ಆಗಬೇಕು. ಪ್ರತಿಯೊಬ್ಬ ವಿಜ್ಞಾನಿ, ಪ್ರತಿಯೊಬ್ಬ ಉದ್ಯಮಿ, ತನ್ನ ಐಡಿಯಾಗಳನ್ನು ಕಾರ್ಯರೂಪಕ್ಕೆ ತರುವಂತ ವ್ಯವ ಸ್ಥಿತ ಭಾರತ ಆಗಬೇಕು. ಭಾರತದ ಯಾವು ದೇ ಮೂಲೆ ಯಲ್ಲಿದ್ದರೂ, ಯಾವುದೇ ಯುವಕ -ಯುವತಿಗೆ ಅವಕಾಶ ವಂಚಿತ ಸ್ಥಳವಾಗದೆ ಇರುವಂತ ದೇಶ ನಮ್ಮದಾಗಬೇಕು. ಅರ್ಹತೆ ಯುಳ್ಳ ವರಿಗೆ ಸಲ್ಲಬೇಕಾದ ಸಂಭಾವನೆ, ಪ್ರಶಸ್ತಿ, ಗೌರವ, ಎಲ್ಲವೂ ಸಿಗುವಂತಾಗಬೇಕು. ಸರ್ವರೂ ತಮ್ಮೊಳಗಿರುವ ಸರ್ವಶಕ್ತಿಯನ್ನು ಹೊರತರು ವಂತ ವಾತಾವರಣ ನಿರ್ಮಾಣವಾಗಬೇಕು.

ಸಣ್ಣ ಹಳ್ಳಿಗಳಿಗೂ, ಮಹಾನಗರದಲ್ಲಿ ಸಿಗುವಂತ ನೀರು, ವಿದ್ಯುತ್‌, ವೈ-ಫೈ, ರಸ್ತೆ-ರೈಲ್ವೇ ಸಂಪರ್ಕ ಎಲ್ಲವೂ, ಎಲ್ಲರಿಗೂ ದೊರೆಯುವಂತಾಗಬೇಕು. ಸಂಭಾವನೆ, ಅವಕಾಶ, ಗೌರವದ ವಿಷಯದಲ್ಲಿ ಗಂಡು-ಹೆಣ್ಣು ಎನ್ನುವ ಭೇದ-ಭಾವ, ಇತಿಹಾಸದ ಕಸಬುಟ್ಟಿಯನ್ನು ಸೇರಬೇಕು.

ನಮ್ಮ ನಮ್ಮ ವೈಯಕ್ತಿಕ ವಿಷಯಗಳಾದ ಧರ್ಮ, ಜಾತಿ, ಮತ, ನಂಬಿಕೆಗಳನ್ನು ಮುಂದುವರೆಸಲು ಯಾರಿಂದಲೂ ಅಡ್ಡಿ ಆಗ ಬಾರದು. ನಮ್ಮಿಂದಾನೂ ಇನ್ನೊಬ್ಬರಿಗೂ ಅಡ್ಡಿಯಾಗ ಬಾರದು. ಬದಲಾಗುತ್ತಿರುವ ದಿನಗಳಲ್ಲಿ ಬರುತ್ತಿರುವ ಹೊಸ ಸಮಸ್ಯೆಗಳು ಸೈಬರ್‌ ಕ್ರೈಂ, ಇಂಟಲೆಕುcಲ್‌ ಪ್ರಾರ್ಪಟಿ ರೈಟ್ಸ್‌ ಮುಂತಾದ ಹೊಸ ಸಮಸ್ಯೆಗಳಿಗೆ, ಪರಿಹಾರಗಳು ಸಿಗಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗುತ್ತದೆ, ಆದರೆ ಅದು ಆದಷ್ಟು ಬೇಗ ಆಗಬೇಕು. ನ್ಯಾಯವಾದ, ವೇಗವಾದ ವ್ಯವಸ್ಥೆ ಉಂಟಾಗಬೇಕು.

ಸರಕಾರವಾಗಲಿ, ವ್ಯಕ್ತಿಯಾಗಲಿ ಶಿಸ್ತಿನ ಶಿಖರವಾಗ ಬೇಕು. ಹೇಳಿದ ಸಮಯದಲ್ಲಿ, ಹೇಳಿದ ಬಜೆಟ್‌, ಹೇಳಿದ ಷರತ್ತಿನಲ್ಲಿ, ಒಪ್ಪಿಕೊಂಡ ಕೆಲಸವನ್ನು ಮುಗಿಸಬೇಕು. ಜಗತ್ತಿನ ಅತೀ ಶ್ರೇಷ್ಠವಾದ ಚಿತ್ರಗಳು ಭಾರತದಲ್ಲಿ ನಿರ್ಮಾಣವಾಗಬೇಕು. ಜಗತ್ತಿನ ಟೂರಿಸ್ಟ್‌ ಹಬ್‌ ಆಗಿ ನಮ್ಮ ದೇಶ ಬೆಳಯಬೇಕು. ಜಗತ್ತಿನ ಪ್ರತಿಯೊಬ್ಬರು ಹೆಮ್ಮೆ ಪಡುವಂತ ವ್ಯವಸ್ಥೆ, ದೇಶ ನಮ್ಮದಾಗಬೇಕು. “ವಸುದೈವ ಕುಟುಂಬಕಂ’ ಎನ್ನುವಂತೆ ಜಗತ್ತಿನ ಎಲ್ಲ ದೇಶಗಳ ಜತೆ ನಮ್ಮ ದೇಶ ಸ್ನೇಹದಿಂದಿರಬೇಕು.

-ರಮೇಶ್‌ ಅರವಿಂದ್‌, ನಟ ಮತ್ತು ನಿರ್ದೇಶಕ


ಸಾಮಾಜಿಕ ಪ್ರಗತಿ ಕಾಣುವ ಕಾಲ ಬಂದಿದೆ

ದೇಶಕ್ಕೆ ಸ್ವಾತಂತ್ರ್ಯ ಸಂದು 75 ವರ್ಷಗಳು ಕಳೆದಿವೆ. ಇಷ್ಟು ವರ್ಷಗಳಲ್ಲಿ ಬಹಳಷ್ಟು ಸಾಧಿಸಿದ್ದೇವೆ. ಅಂದಿನ ಪ್ರಧಾನಿ ನೆಹರೂ ಅವರಿಂದ ಹಿಡಿದು ಇಂದಿನ ಪ್ರಧಾನಿ ಮೋದಿ ಅವಧಿಯಲ್ಲಿ ಎಲ್ಲ ಕ್ಷೇತ್ರದಲ್ಲೂ ಹೊಸ ಹೆಜ್ಜೆ ಗಳನ್ನು ಇಟ್ಟಿದ್ದೇವೆ. ಇಂದಿನ ಸಾಫ್ಟ್ ವೇರ್‌, ಡಿಜಿಟಲ್‌, ಸಂವಹನ, ದೂರಸಂಪರ್ಕ ಇತ್ಯಾದಿ ಕ್ಷೇತ್ರದಲ್ಲಿ ಭಾರತದ್ದೇ ಮುಂದಾಳತ್ವವಿದೆ. ಆದರೂ ಮುಂದಿನ 25 ವರ್ಷಗಳಲ್ಲಿ ನಮ್ಮ ದೇಶವು ಸಾಮಾಜಿಕವಾಗಿ ದೊಡ್ಡ ಪ್ರಗತಿ ಸಾಧಿಸಬೇಕಿದೆ.

ನಮ್ಮ ದೇಶದಲ್ಲಿ ಜಗತ್ತಿನ ಅತೀ ಶ್ರೀಮಂತರೂ ಇದ್ದಾರೆ. ಜತೆಯಲ್ಲಿ ಅಷ್ಟೇ ಕಡು ಬಡವರೂ ಇದ್ದಾರೆ. ಪ್ರಗತಿಯ ಹಾದಿಯನ್ನು ಬಿಟ್ಟು ಹೋಗಿರುವ, ಅಪೌಷ್ಠಿಕತೆಯಲ್ಲಿ ಬಳಲುತ್ತಿರುವ ಮಕ್ಕಳು, ತಾಯಂದಿರ ಆರೋಗ್ಯ ಹಾಗೂ ಆದಿವಾಸಿಗಳ ಬೆಳವಣಿಗೆ ಮುಂತಾದ ಸಮಸ್ಯೆಗಳ ನಿವಾರಣೆಯಲ್ಲಿ ಮಹತ್ವದ ಕೆಲಸ ಆಗಬೇಕಾಗಿದೆ. ಜಗತ್ತು ಇಂದು ನಮ್ಮ ದೇಶದ ಸಾಧನೆಯ ಜತೆಗೆ ಇಂಥ ಸಮಸ್ಯೆಗಳನ್ನು ಗುರುತಿಸುತ್ತದೆ. ಅದನ್ನೇ ಬೊಟ್ಟು ಮಾಡಿ ತೋರಿಸುತ್ತದೆ. ಹಾಗಾಗಿ “ವಸುದೈವ ಕುಟುಂಬಕಂ’ ಎನ್ನುವ ಮಾತಿನಂತೆ, ಸಾಮಾಜಿಕ‌ ವಾಗಿ, ಆರ್ಥಿಕವಾಗಿ ಎಲ್ಲ ವರ್ಗಗಳು ಸಮಾನ ವಾಗಿ ಬದುಕುವಂತಾಗಬೇಕು.

ದೇಶದ ಪ್ರತಿಯೊಬ್ಬ ನಾಗರಿಕನ ತಲಾದಾಯ ಹೆಚ್ಚಬೇಕು. ಹಿಂದುಳಿದ ವರ್ಗ, ಅನ್ಯ ಧರ್ಮ, ಎಡ, ಬಲ… ಇಂತಹ ಕಲಹಗಳನ್ನು ಬಿಟ್ಟು ಪ್ರಗತಿಯತ್ತ ಸಾಗಬೇಕಿದೆ. ರಾಷ್ಟ್ರ ಸಂಪೂರ್ಣವಾಗಿ ಬೆಳವಣಿಗೆ ಕಾಣಲು ಆ ದೇಶದ ಸಾಮಾಜಿಕ ಸ್ಥಿತಿಯೂ ಮುಖ್ಯ ಆಧಾರವಾಗಿರುತ್ತದೆ. ದೇಶದಲ್ಲಿ ಶಾಂತಿ, ಸೌಹಾರ್ದ ಇಲ್ಲವಾದರೆ, ಆರ್ಥಿಕವಾಗಿ, ವ್ಯಾವಹಾರಿಕವಾಗಿ, ಉದ್ಯ ಮ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸುವುದು ಬಹಳ ಕಷ್ಟ. ಸಮಾನ ಬೆಳವಣಿಗೆ, ಸಮಾನ ಮನಸ್ಥಿತಿ, ಸೌಹಾರ್ದ ಈ ಮೂರೂ ದೇಶದ ಜನರಲ್ಲಿ ಮೂಡಿದರೆ, ಇನ್ನು 25 ವರ್ಷದಲ್ಲಿ ಭಾರತ ಯಾವ ರಾಷ್ಟ್ರಕ್ಕೂ ಕಮ್ಮಿಯಲ್ಲ ಎಂಬಂತೆ ಪ್ರಗತಿಯ ಸಾಲಿನಲ್ಲಿ ಮೊದಲಾಗಿ ನಿಲ್ಲುತ್ತದೆ.

-ಕ್ಯಾಪ್ಟನ್‌ ಗೋಪಿನಾಥ್‌

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next