Advertisement

ಇಂದಿನಿಂದ ಮೂರು ದಿನಗಳ ಸಿನಿ ಸಂಭ್ರಮ

10:55 AM Aug 01, 2017 | |

ಕರ್ನಾಟಕ ಚಲನಚಿತ್ರ ಅಕಾಡೆಮಿ ಎಚ್ಚೆತ್ತುಕೊಂಡಿದೆ. ಸಾಮಾಜಿಕ ಜಾಲ ತಾಣಗಳಲ್ಲಿ ಸಾಕಷ್ಟು ಟೀಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಸಿನಿ ಸಂಭ್ರಮ ಎಂಬ ಹೊಸ ಕಾರ್ಯಕ್ರಮವನ್ನು ಆಯೋಜಿಸಿದೆ. ಈ ಮೂಲಕ, ಮೆಚ್ಚುಗೆಗೆ ವ್ಯಕ್ತವಾದ ಹೊಸ ಕನ್ನಡ ಚಿತ್ರಗಳ ಪ್ರದರ್ಶನವನ್ನು ಇಂದಿನಿಂದ ಮೂರು ದಿನಗಳ ಕಾಲ ಏರ್ಪಡಿಸಿದೆ.
ಕಳೆದ ತಿಂಗಳು ರಾಜ್‌ ಬಿ. ಶೆಟ್ಟಿ ಅಭಿನಯದ ಮತ್ತು ನಿರ್ದೇಶನದ “ಒಂದು ಮೊಟ್ಟೆಯ ಕಥೆ’ ಚಿತ್ರದ ಪ್ರದರ್ಶನ ಮತ್ತು ಸಂವಾದವನ್ನು ಕರ್ನಾಟಕ ಚಲನಚಿತ್ರ ಅಕಾಡೆಮಿಯು ಆಯೋಜಿಸಿತ್ತು.

Advertisement

ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟೀಕೆ ವ್ಯಕ್ತವಾಗಿತ್ತು. ಕನ್ನಡದಲ್ಲಿ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸಾಮಾಜಿಕ ಕಳಕಳಿಯ ಚಿತ್ರಗಳು ಬಿಡುಗಡೆಯಾಗಿ, ಜನರ ಮೆಚ್ಚುಗೆ ಪಡೆದಿರುವಾಗ, ಬರೀ “ಒಂದು ಮೊಟ್ಟೆಯ ಕಥೆ’ ಚಿತ್ರದ ಪ್ರದರ್ಶನ ಮತ್ತು ಸಂವಾದವನ್ನು ಆಯೋಜಿಸುತ್ತಿರುವುದೇಕೆ ಎಂಬ ಪ್ರಶ್ನೆ ಉದ್ಭವವಾಗಿತ್ತು. ಸಾಮಾನ್ಯವಾಗಿ ಯಾವುದಾದರೂ ಚಿತ್ರದ ಸಂವಾದ ಏರ್ಪಡಿಸಿದರೆ, ಅಂಥದ್ದೊಂದು ಚಿತ್ರವು ಸಾಮಾಜಿಕ ಕಳಕಳಿ ಮೆರೆಯಬೇಕು ಅಥವಾ ರಾಜ್ಯ ಅಥವಾ ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿ ಪಡೆದಿರಬೇಕು ಎಂಬುದು ವಾಡಿಕೆ.

ಆದರೆ, “ಒಂದು ಮೊಟ್ಟೆಯ ಕಥೆ’ ಅದ್ಯಾವುದೂ ಮಾಡಿರಲಿಲ್ಲ. ಜನ ಮೆಚ್ಚಿದರು ಎಂಬ ಕಾರಣಕ್ಕೆ ಪ್ರದರ್ಶನ ಮತ್ತು ಸಂವಾದವನ್ನು ಏರ್ಪಡಿಸುವುದಾದರೆ ಇನ್ನು ಹಲವು ಚಿತ್ರಗಳನ್ನು ಪ್ರದರ್ಶನ ಮಾಡಬಹುದಿತ್ತು ಎಂಬ ಮಾತು ಕೇಳಿ ಬಂದಿತ್ತು. ಎಲ್ಲಕ್ಕಿಂತ ಹೆಚ್ಚಾಗಿ, ಇತ್ತೀಚಿನ ದಿನಗಳಲ್ಲಿ “ರಾಜಕುಮಾರ’, “ಬಂಗಾರ ಸನ್‌ ಆಫ್ ಬಂಗಾರದ ಮನುಷ್ಯ’, “ಹೊಂಬಣ್ಣ’ ಮುಂತಾದ ಜನ ಮೆಚ್ಚಿದ, ಸಾಮಾಜಿಕ ಕಳಕಳಿಯಿರುವ ಚಿತ್ರಗಳು ಹಾಗೂ ಸಾಮಾಜಿಕ ಕಳಕಳಿ ಇಲ್ಲದಿದ್ದರೂ “ಕಥಾ ವಿಚಿತ್ರ’ದಂತಹ ವಿಭಿನ್ನ ಪ್ರಯತ್ನಗಳು ಬಿಡುಗಡೆಯಾಗಿರುವಾಗ, ಅವನ್ನೆಲ್ಲಾ ಕಡೆಗಣಿಸಿ “ಒಂದು ಮೊಟ್ಟೆಯ ಕಥೆ’ಯನ್ನು ಮಾತ್ರ ಪ್ರದರ್ಶಿಸಿದ್ದು ಎಷ್ಟು ಸಮಂಜಸ ಎಂಬ ಅಭಿಪ್ರಾಯ ಕೇಳಿ ಬಂದಿತ್ತು.

ಈ ವಿಷಯದಲ್ಲಿ ಎಚ್ಚೆತ್ತುಕೊಂಡಿರುವ ಅಕಾಡೆಮಿಯು, ಸಿನಿ ಸಂಭ್ರಮ ಎಂಬ ಹೊಸ ಕಾರ್ಯಕ್ರಮವನ್ನು ಶುರು ಮಾಡಿದೆ. ಈ ಕಾರ್ಯಕ್ರಮದಡಿ, ಒಂದು ಸಿನಿಮಾ ಹಿಂದಿರುವ ಕ್ರಿಯಾಶೀಲ ಮನಗಳನ್ನೆಲ್ಲಾ ಒಂದು ವೇದಿಕೆಗೆ ತಂದು ವಿತರಕ, ಪ್ರದರ್ಶಕ, ವೀಕ್ಷಕ, ಮಾಧ್ಯಮ, ಸಿನಿ ಅಭ್ಯಾಸಿ, ವಿದ್ಯಾರ್ಥಿ, ಪಂಡಿತರೊಂದಿಗೆ ಮುಕ್ತ ಸಂವಾದಕ್ಕೆ ಅನುವು ಮಾಡಿಕೊಡುವುದು “ಸಿನಿ ಸಂಭ್ರಮ’ದ ಆಶಯವಾಗಲಿದೆ.

ಈ ಕಾರ್ಯಕ್ರಮವು ಇಂದಿನಿಂದ ಮೂರು ದಿನಗಳ ಕಾಲ ನಡೆಯಲಿದ್ದು, ಪ್ರತಿ ಸಂಜೆ ನಾಲ್ಕು ಗಂಟೆಯೊಂದಿಗೆ ಮಿಲ್ಲರ್ ರಸ್ತೆಯಲ್ಲಿರುವ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಒಂದೊಂದು ಚಿತ್ರ ಪ್ರದರ್ಶನವಾಗಲಿದೆ. ಕಾರ್ಯಕ್ರಮದ ಮೊದಲ ಚಿತ್ರವಾಗಿ ಇಂದು “ಪುಟಾಣಿ ಸಫಾರಿ’ ಪ್ರದರ್ಶನವಾಗಲಿದೆ. ನಾಳೆ (ಆಗಸ್ಟ್‌ 2) ಕಥಾ ವಿಚಿತ್ರ ಮತ್ತು ಗುರುವಾರ “ಹೊಂಬಣ್ಣ’ ಚಿತ್ರಗಳು ಪ್ರದರ್ಶನವಾಗಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next