Advertisement

ಸಾರಿಗೆ ಇಲಾಖೆಯ ಚಿಂತನೆ ಆದರ್ಶಪ್ರಾಯ

11:11 PM Dec 02, 2022 | Team Udayavani |

ರೈತರ ಮಕ್ಕಳ ಉನ್ನತ ವ್ಯಾಸಂಗಕ್ಕೆ ನೆರವಾಗುವ ನಿಟ್ಟಿನಲ್ಲಿ ಆರಂಭಿಸಿದ್ದ “ವಿದ್ಯಾನಿಧಿ’ ಯೋಜನೆಯನ್ನು ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಕ್ಯಾಬ್‌ ಮತ್ತು ರೈತರ ಮಕ್ಕಳಿಗೂ ವಿಸ್ತರಿಸುವ ಘೋಷಣೆಯನ್ನು ಸರಕಾರ ಮಾಡಿತ್ತು. ಅದರಂತೆ ತಿಂಗಳ ಹಿಂದೆ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾ ನಿಸಲಾಗಿತ್ತು. ಚಾಲಕರ ಮಕ್ಕಳಿಂದ ನಿರೀಕ್ಷಿತ ಸ್ಪಂದನೆ ಲಭಿಸದಿರುವುದರಿಂದಾಗಿ ಈಗ ಸಾರಿಗೆ ಇಲಾಖೆಯೇ ಅರ್ಹ ವಿದ್ಯಾರ್ಥಿಗಳನ್ನು ಗುರುತಿಸಿ ಅವರ ಉನ್ನತ ವಿದ್ಯಾಭ್ಯಾಸಕ್ಕೆ ನೆರವು ನೀಡಲು ಚಿಂತನೆ ನಡೆಸಿದೆ.

Advertisement

ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಗೆ ಚಾಲಕ ವರ್ಗದಿಂದ ನಿರೀಕ್ಷಿತ ಪ್ರತಿಕ್ರಿಯೆ ಲಭಿಸದಿರುವುದು ತುಸು ಅಚ್ಚರಿಯೇ ಸರಿ. ಇದರ ಹೊರತಾಗಿಯೂ ಯೋಜನೆಯ ಪ್ರಯೋಜನವನ್ನು ಅರ್ಹರಿಗೆ ತಲುಪಿ ಸುವ ನಿಟ್ಟಿನಲ್ಲಿ ಸಾರಿಗೆ ಇಲಾಖೆ ಸ್ವತಃ ಮುಂದಡಿ ಇಟ್ಟಿರುವುದು ಸ್ವಾಗತಾರ್ಹ.

ಸರಕಾರ ಯಾವುದೇ ಯೋಜನೆ ರೂಪಿಸಿ, ಅನುಷ್ಠಾನಗೊಳಿಸಿದ ಸಂದರ್ಭದಲ್ಲಿ ಅದರಲ್ಲೂ ಮುಖ್ಯವಾಗಿ ಜನಕಲ್ಯಾಣ ಮತ್ತು ಜನಪ್ರಿಯ ಯೋಜನೆಗಳ ಅನುಷ್ಠಾನದ ವೇಳೆ ಅದರ ಪ್ರಯೋಜನ ಪಡೆಯಲು ಅರ್ಜಿಗಳ ಮಹಾಪೂರವೇ ಹರಿದುಬರುವುದು ಸಾಮಾನ್ಯ. ಒಂದು ವೇಳೆ ಯೋಜನೆಗೆ ಸೂಕ್ತ ಸ್ಪಂದನೆ ದೊರೆಯದೇ ಹೋದಲ್ಲಿ ಅದು ಅನುಷ್ಠಾನಕ್ಕೆ ಬಾರದೆ ಮೂಲೆಗುಂಪಾಗುವುದು ಸಹಜ.

ಈ ಯೋಜನೆಗಾಗಿ ಮೀಸಲಿಟ್ಟ ಹಣವನ್ನು ಇನ್ಯಾವುದೋ ಯೋಜನೆಗೆ ಬಳಸುವುದು ಅಥವಾ ವಾಪಸಾ ಗುವುದು ಮಾಮೂಲು ಪ್ರಕ್ರಿಯೆ. ಈ ಬಗ್ಗೆ ಆಡಳಿತ ಮತ್ತು ವಿಪಕ್ಷಗಳ ನಡುವೆ ಒಂದಿಷ್ಟು ಹಗ್ಗಜಗ್ಗಾಟ ನಡೆದು ಬಳಿಕ ಎಲ್ಲವೂ ಇತಿಹಾಸದ ಪುಟ ಸೇರುವುದು ಈವರೆಗಿನ ಸಂಪ್ರದಾಯ. ಅನಂತರದ ದಿನಗಳಲ್ಲಿ ಈ ಯೋಜನೆ ಹೊಸ ಹೆಸರು ಮತ್ತು ಹೊಸ ರೂಪದೊಂದಿಗೆ ಅವತಾರವೆತ್ತಿದ ಉದಾಹರಣೆಗಳೂ ಸಾಕಷ್ಟು ನಮ್ಮ ಮುಂದಿವೆ.
ಈ ಎಲ್ಲ ನಕಾರಾತ್ಮಕ ಬೆಳವಣಿಗೆಗಳ ನಡುವೆಯೇ ಸಾರಿಗೆ ಇಲಾಖೆ ವಿದ್ಯಾನಿಧಿ ಯೋಜನೆಯನ್ನು ಸರಕಾರ ರೂಪಿಸಿದ ಮಾನದಂಡದ ಆಧಾರ ದಲ್ಲಿ ಅರ್ಹ ಫ‌ಲಾನುಭವಿ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ವಿದ್ಯಾರ್ಥಿ ವೇತನ ನೀಡಲು ದಿಟ್ಟ ಹೆಜ್ಜೆ ಇರಿಸಿದೆ.

ಇಲಾಖೆಯ ಸಾಫ್ಟ್ವೇರ್‌ “ಸಾರಥಿ’ಯಲ್ಲಿ ನೋಂದಣಿಯಾಗಿರುವ ಚಾಲಕರ ಲೈಸನ್ಸ್‌ನಲ್ಲಿ ನಮೂದಿಸಲಾಗಿರುವ ಆಧಾರ್‌ ಸಂಖ್ಯೆಯನ್ನು ಇ-ಆಡಳಿತ ಇಲಾಖೆಯ “ಕುಟುಂಬ’ ಸಾಫ್ಟ್ವೇರ್‌ನಲ್ಲಿ ಹಾಕಿ, ಚಾಲಕರ ಕುಟುಂಬದ ಸದಸ್ಯರ ಮಾಹಿತಿಗಳನ್ನು ಕಲೆಹಾಕಿ ಅರ್ಹ ಮಕ್ಕಳನ್ನು ಗುರುತಿಸಿ, ಪಟ್ಟಿ ಮಾಡಿ ಆ ಮಕ್ಕಳ ಖಾತೆಗೆ ನೇರವಾಗಿ “ವಿದ್ಯಾನಿಧಿ’ ಯೋಜನೆಯಡಿ ಶಿಷ್ಯವೇತನವನ್ನು ಜಮೆ ಮಾಡಲು ಉದ್ದೇಶಿಸಿದೆ. ಈ ಪ್ರಕ್ರಿಯೆಯ ಸಂದರ್ಭದಲ್ಲಿ ಚಾಲಕರ ಕುಟುಂಬದ ವೈಯಕ್ತಿಕ ದಾಖಲೆ, ಮಾಹಿತಿ ಸೋರಿಕೆಯಾಗದಂತೆ ಎಚ್ಚರಿಕೆ ವಹಿಸುವ ಹೊಣೆಗಾರಿಕೆಯೂ ಉಭಯ ಇಲಾಖೆಗಳ ಮೇಲಿದೆ.

Advertisement

ಮೇಲ್ನೋಟಕ್ಕೆ ಸಾರಿಗೆ ಇಲಾಖೆಯ ಈ ನಡೆ ಒಂದಿಷ್ಟು ಅತಿರೇಕ ಎಂದೆ ನಿಸಿದರೂ ಯೋಜನೆಯ ಬಗ್ಗೆ ಮಾಹಿತಿಯೇ ಇರದ ಮತ್ತು ತಂತ್ರಜ್ಞಾನದ ಬಗೆಗೆ ಪರಿಜ್ಞಾನ ಹೊಂದಿರದ ಬಡ ಚಾಲಕರ ಪಾಲಿಗೆ ಇಲಾಖೆಯ ಈ ಕ್ರಮ ಸಂಜೀವಿನಿಯೇ ಸರಿ. ಜನಕಲ್ಯಾಣ ಯೋಜನೆಗಳನ್ನು ನೈಜ ಫ‌ಲಾನು ಭವಿಗಳಿಗೆ ಹೇಗೆ ತಲುಪಿಸಬಹುದು ಎಂಬುದಕ್ಕೆ ಸಾರಿಗೆ ಇಲಾಖೆಯ ಈ ಕ್ರಮ ಸೂಕ್ತ ನಿದರ್ಶನವಾಗಬಲ್ಲುದು.

ಅನುಷ್ಠಾನಗೊಳಿಸುವವರಿಗೆ ಇಚ್ಛಾಶಕ್ತಿ ಮತ್ತು ಬದ್ಧತೆ ಇದ್ದದ್ದೇ ಆದಲ್ಲಿ ಸರಕಾರದ ಪ್ರತಿಯೊಂದೂ ಯೋಜನೆಯ ಉದ್ದೇಶವನ್ನು ಈಡೇರಿಸಬಹುದಲ್ಲದೆ ಗುರಿಯನ್ನೂ ತಲುಪಬಹುದಾಗಿದೆ ಮತ್ತು ಶತ ಪ್ರತಿಶತ ಯಶಸ್ಸು ಕಾಣಬಹುದು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next