ಬೆಂಗಳೂರು: ಕಾಂಗ್ರೆಸ್ ಸರಕಾರದಲ್ಲಿ ಸಚಿವ ಸ್ಥಾನ ಸಿಗದೆ ಬೇಸರಗೊಂಡಿರುವವರಿಗೆ ಎರಡೂವರೆ ವರ್ಷಗಳ ಬಳಿಕ ಸಚಿವ ಸ್ಥಾನದ ಭರವಸೆ ನೀಡಲಾಗುತ್ತಿದ್ದು, ಈಗಿನ ಸಚಿವರ ಅಧಿಕಾರಾವಧಿ ಕೇವಲ ಎರಡೂವರೆ ವರ್ಷವೇ ಎಂಬ ಪ್ರಶ್ನೆ ಮೂಡಲಾರಂಭಿಸಿದೆ.
ಹೈಕಮಾಂಡ್ ಮಟ್ಟದಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ನಡುವೆ ಅಧಿಕಾರ ಹಂಚಿಕೆಯ ಮಾತುಕತೆ ನಡೆದಿದ್ದು, ಅದರಂತೆ ಎರಡನೇ ಅವಧಿಗೆ ಮತ್ತೂಬ್ಬರು ಮುಖ್ಯಮಂತ್ರಿಯಾದರೆ ಆಗ ಎಲ್ಲ ಸಚಿವರೂ ಬದಲಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.
ಸಿದ್ದರಾಮಯ್ಯ ಈಗ ಮುಖ್ಯಮಂತ್ರಿ ಯಾಗಿದ್ದು, ಅವರು ಬಯಸುವವರು ಸಚಿವರಾಗಿದ್ದಾರೆ. ಮುಂದಿನ ಬಾರಿ ಹೊಸ ಮುಖ್ಯಮಂತ್ರಿ ಬಯಸುವವರು ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ.
ಸಚಿವ ಸ್ಥಾನ ಸಿಗದೆ ಬೇಸರಗೊಂಡಿರುವವರಿಗೆ ಮುಂದೆ ಒಳ್ಳೆಯ ಭವಿಷ್ಯವಿದೆ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುಜೇìವಾಲ ಕೂಡ ಹೇಳಿದ್ದಾರೆ ಎನ್ನಲಾಗುತ್ತಿದೆ. ಚುನಾವಣೆ ಸಂದರ್ಭದಲ್ಲಿ ಬೇರೆ ಪಕ್ಷಗಳಿಂದ ವಲಸೆ ಬಂದು ಕಾಂಗ್ರೆಸ್ ಟಿಕೆಟ್‌ನಿಂದ ಗೆದ್ದಿರುವ ಲಕ್ಷ್ಮಣ ಸವದಿ, ಗುಬ್ಬಿಯ ಶ್ರೀನಿವಾಸ್, ಅರಸೀಕೆರೆಯ ಕೆ.ಎನ್. ಶಿವಲಿಂಗೇಗೌಡ ಅವರು ತೀವ್ರ ಅಸಮಾಧಾನಗೊಂಡಿದ್ದು, ಅವರನ್ನು ಸಮಾಧಾನ ಪಡಿಸುವ ಪ್ರಯತ್ನ ನಡೆಯುತ್ತಿವೆ.