Advertisement

ಕಣ್ಣೀರು ಮಳೆನೀರಿನಲ್ಲಿ ಹರಿದು ಹೋದ ಕತೆಗಳು

09:48 PM Jun 22, 2019 | mahesh |

ಕಳೆದ ವರ್ಷದ ಕೇರಳ-ಕೊಡಗಿನ‌ ಕಣ್ಣೀರ ಕತೆ ಇನ್ನೂ ಮರೆತುಹೋಗಿಲ್ಲ. ಈ ಸಲ ಮಳೆ ಬಾರದಿದ್ದರೆ ನೀರಿಗೆ ಗತಿ ಇಲ್ಲ , ಮಳೆ ಬಂದರೆ ನೆಲ ಕುಸಿದು ನೆಲೆ ಇಲ್ಲ- ಎಂಬಂಥ‌ ಸ್ಥಿತಿ.

Advertisement

ಮಳೆಗಾಲ ಸಮೀಪಿಸುವಾಗ ಅತಿವೃಷ್ಟಿ-ಅನಾವೃಷ್ಟಿಗಳ ವರದಿಗಳು ಸಹಜ. ಎಂದಿನಂತೆಯೇ ಕಳೆದ ವರ್ಷದ ಆರಂಭದಲ್ಲಿ ನೀರಿಲ್ಲದೆ ರೈತನ ಹಾಹಾಕಾರ ಎಂಬ ವರದಿಗಳು ಬಂದವು. ಮಳೆಯ ಒಂದು ಹನಿ ಬಿದ್ದಾಕ್ಷಣ ಭೂಮಿ ತಂಪು, ರೈತನ ಮುಖದಲ್ಲಿ ನಗು ಎಂಬಂಥ ವರದಿಗಳು ಪ್ರಕಟವಾದವು. ಅನಂತರ ಮಳೆಯ ಪ್ರಕೋಪಕ್ಕೆ ಪ್ರವಾಹ, ಪ್ರವಾಹದ ಪರಿಣಾಮವಾಗಿ ಕುಸಿದ‌ ನೆಲ-ಮನೆ, ನಾಶವಾದ ಆಸ್ತಿ-ಪಾಸ್ತಿ, ಕಳೆದು ಹೋದ ಜೀವಗಳು, ಉಳಿದ ನೊಂದವರ, ಸಂತ್ರಸ್ತರ ಗೋಳು, ಪರಿಹಾರಕ್ಕಾಗಿ ಬೇಡಿಕೆ-ನೀಡಿಕೆ ಇವುಗಳ ಸಚಿತ್ರ ವರದಿಗಳು ನಾಡಿನೆಲ್ಲೆಡೆ-ದೇಶದೆಲ್ಲೆಡೆ ಪ್ರಸಾರವಾಗಿ ಕೊಡಗು ತನ್ನದಲ್ಲದ ಕಾರಣಗಳಿಗಾಗಿ ಪ್ರಸಿದ್ಧಿಯನ್ನು ಪಡೆಯಿತು. ಸರಕಾರ ಏನು ಮಾಡುತ್ತಿದೆ? ಜನಪ್ರತಿನಿಧಿಗಳು ಏನು ಮಾಡುತ್ತಿದ್ದಾರೆ? ಎಂಬ ಪ್ರಶ್ನೆಗಳು; ಪರಿಹಾರ ನೀಡುವ ಸ್ವಯಂಸೇವಾ ಮತ್ತು ಸ್ವಯಂಘೋಷಿತ ವ್ಯಕ್ತಿ ಮತ್ತು ಸಂಸ್ಥೆಗಳು ಮಾಡುವ/ನೀಡುವ ಸೇವೆಯ ಅಬ್ಬರದ ಪ್ರಚಾರಗಳು; ಅಸಹಾಯಕ ಮತ್ತು ಬೇಡುವ ಕೈಗಳನ್ನು ರಾರಾಜಿಸುವ ಫೋಟೋಗಳು; ಭೇಟಿ ನೀಡುವ ಜನನಾಯಕರು ಮತ್ತು ಅಧಿಕಾರಿಗಳು ಶೂನ್ಯದಿಂದಲೇ ಎಲ್ಲವನ್ನೂ ಸೃಷ್ಟಿಸುವ ಹಮ್ಮಿನ ಭರವಸೆಗಳು; ನೆರೆ ಹಾವಳಿಯ ಕುರಿತೂ ಕವಿತೆ ಬರೆದು ಓದಿ ಚಪ್ಪಾಳೆ ಗಿಟ್ಟಿಸುವ ಕವಿಗಳು (!); ಕೆಲವು ದಿನ-ವಾರಗಳಲ್ಲಿ ಇವೆಲ್ಲವನ್ನೂ ಮರೆತು ತಮ್ಮ ತಮ್ಮ ಪಾಡಿಗೆ ಪ್ರವಾಸಿಗರನ್ನು ಆಕರ್ಷಿಸುವ ವಿವರಣೆಗಳು; ಏನೂ ಆಗಲ್ಲ ಬಿಡಿ, ಮಾಧ್ಯಮಗಳಷ್ಟೇ ಈ ದುರಂತವನ್ನು ಹಿಗ್ಗಿಸಿವೆ ಎಂಬ ಹೋಂಸ್ಟೇ ಮತ್ತು ಹೊಟೇಲುಗಳ ಹೇಳಿಕೆಗಳು ಕಳೆದ ಒಂದು ವರ್ಷಗಳಲ್ಲಿ ಬಸಿರೊಳಗೆ ಸಮಸ್ಯೆಯ ಬ್ರಹ್ಮಾಂಡವನ್ನು ತುಂಬಿಕೊಂಡ ಕೊಡಗಿನ ಬದುಕು.

ಈ ಬಾರಿ ಮತ್ತೆ ಮಳೆ ಹುಯ್ಯುತಿದೆ.. ಎಲ್ಲ ನೆನಪಾಗುತಿದೆ ಎಂಬ ಕವಿವಾಣಿ ಕ್ರೂರವಾಗಿ ಕಣ್ಣೆದುರು ಬಂದು ನಿಂತಿದೆ. “ಸಮುದ್ರಕ್ಕೆ ಸವಾರರು'(Riders to the Sea) ಎಂಬ ಐರೋಪ್ಯ ನಾಟಕದಲ್ಲಿ ತಾಯಿಗಿರುವ ಆತಂಕ ಧುತ್ತೆಂದು ನೆನಪಿಗೆ ಬರುತ್ತದೆ. ಆದರೆ, ಈ ನಡುವೆ ಪ್ರವಾಸೋದ್ಯಮವೇ ಕೊಡಗಿನ ಜೀವನಾಡಿಯೇನೋ ಎಂಬಂತೆ ಏನೂ ಆಗುವುದಿಲ್ಲ ಬಿಡಿ, ಬನ್ನಿ ಎಂದು ಕೈಬೀಸಿ ಕರೆಯುವವರಿಗೆ ಕಳೆದ ವರ್ಷದ ಘಾತಕ್ಕೆ ನೀಡಿದ ಪ್ರಚಾರ ಹೆಚ್ಚಾಯಿತೆಂದು ಈಗ ಅನ್ನಿಸಿದೆ. ಕೊಡಗಿಗೆ ಕೊಡಗೇ ಮುಳುಗಿಹೋಯಿತೆಂದು ದೇಶಾದ್ಯಂತ ಮಾಧ್ಯಮಗಳ ಪ್ರಚಾರ ನೋಡಿದವರಿಗೆ ಈ ಮಳೆಗಾಲ ಬಂದು ಇರಲು ಭಯ-ಆತಂಕವಾಗುವುದು ಸಹಜ. ಆದರೆ, ನಿಜವಾಗಿ ಎಷ್ಟು ಗ್ರಾಮಗಳು ಮತ್ತು ಎಷ್ಟು ಜನರು ಪ್ರವಾಹದ ಭೀಕರ ಪರಿಣಾಮಕ್ಕೆ ಬಲಿಯಾಗಿದ್ದಾರೆ ಎಂಬುದರ ವಾಸ್ತವ ವಿಚಾರ ಸರಕಾರದ ಬಳಿಯೂ ಇಲ್ಲ; ಮಾಧ್ಯಮದ ಬಳಿಯೂ ಇಲ್ಲ. ಪರಿಹಾರದ ವಿವರಗಳು ಲಭ್ಯವಾಗಿವೆ. 100 ರೂಪಾಯಿಗಳಿಂದ 36,000 ರೂಪಾಯಿಗಳ ವರೆಗೂ ಪರಿಹಾರ ಪಡೆದವರಿದ್ದಾರೆ. ಸುಮಾರು 32,000ಕ್ಕೂ ಹೆಚ್ಚು ಮಂದಿ ಪರಿಹಾರ ಪಡೆದಿದ್ದಾರೆ. ಅತೀ ಹೆಚ್ಚು ಪರಿಹಾರ ಪಡೆದವರನೇಕರು ಕೋಟಿ ಹಣದ ಮೇಲೆ ಕುಳಿತ ಕುಬೇರರೇ ಆಗಿದ್ದಾರೆ ಮತ್ತು ಈ ಪೈಕಿ ಅನೇಕರ ಆಸ್ತಿ-ಪಾಸ್ತಿ ನಾಶವಾಗುವುದಿರಲಿ, ಕೂದಲೂ ಕೊಂಕಿರಲಿಲ್ಲ ಎಂಬುದು ಈ ದೇಶದ ಪ್ರಾಮಾಣಿಕತೆಯ ಮತ್ತು ವ್ಯವಸ್ಥೆಯ ಕುರಿತು ಗಂಭೀರ ಸಂದೇಹಗಳನ್ನು ಎತ್ತುತ್ತವೆ. ಆರಂಭದ ದೇಣಿಗೆಗಳನ್ನು ಪ್ರಕಟಿಸುತ್ತಿದ್ದ ಮಾಧ್ಯಮಗಳೂ ಈ ಅಂಕಿ-ಅಂಶಗಳನ್ನು ಬಿಡುಗಡೆ ಮಾಡುತ್ತಿಲ್ಲ. (ಕೊಡಗು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಈ ವಿವರಗಳಿವೆ.)

ಪ್ರವಾಸದ ದಾಳಿಗೆ ನಲುಗಿದ ಕೊಡಗು
ಜಿಲ್ಲಾಡಳಿತವು ಅನೇಕ ನಿವಾಸಿಗಳನ್ನು ಮನೆಯನ್ನು ಬಿಟ್ಟು ಬೇರೆ ಕಡೆಗೆ ವಲಸೆಹೋಗಲು ಹೇಳಿದೆ; ತಪ್ಪಿದರೆ ತಾನು ಹೊಣೆಯಲ್ಲವೆಂಬ ಹೊಣೆಗೇಡಿತನದ ಜಾರು ಹೇಳಿಕೆಯನ್ನೂ ನೀಡಿದೆ. ಮನೆ ಬಿಟ್ಟು ಹೋಗಬೇಕೆಂದವರು ಹೋಗುವುದಾದರೂ ಎಲ್ಲಿಗೆ? ಅವರಿಗೆ ತಾತ್ಕಾಲಿಕ ನಿವಾಸಗಳು ಎಲ್ಲಿವೆ? ಬಾಡಿಗೆ ಮನೆ ಹುಡುಕೋಣವೆಂದರೆ ಇರುವ ಎಲ್ಲಾ ಸ್ಥಳಾವಕಾಶಗಳು ಹೋಮ್‌ ಸ್ಟೇಗಳಿಂದ ತುಂಬಿಹೋಗಿ ಬಾಡಿಗೆ ಗಗನಕ್ಕೇರಿದೆ. ಒಂದು ಕೋಣೆಗೂ ರೂ. 6,000ದಿಂದ ರೂ. 10,000ದ ವರೆಗೆ ಬಾಡಿಗೆ ಪ್ರಚಲಿತವಿದೆ. ಅತಿಥಿ ಸತ್ಕಾರದ ಉದ್ಯಮದಲ್ಲಿ ಮನೆಯವರ ಕಷ್ಟ ಯಾರಿಗೂ ಅರ್ಥವಾಗುವುದಿಲ್ಲ.

ಪ್ರವಾಸಿಗರೋ ತಮ್ಮ ಅಷ್ಟೂ ಕೊಳಕನ್ನು ತಂದು ಕೊಡಗಿನಲ್ಲಿ ಸುರಿಯಲು ಸಿದ್ಧ. ಒಂದಿಷ್ಟೂ ಸಭ್ಯ ಆಸಕ್ತಿಯಿಲ್ಲದ ಪ್ರವಾಸಿಗರೇ ಹೆಚ್ಚು. ಉಮರ್‌ ಖಯ್ನಾಮ್‌ ಈಗ ಇದ್ದಿದ್ದರೆ ಹೊಸ ಒಸಗೆಯನ್ನು ಬರೆಯುತ್ತಿದ್ದನೇನೋ? ಮಡಿಕೇರಿಯಲ್ಲಿ ನಿಂತು “ಕೊಡಗು ಎಲ್ಲಿದೆ ಸಾರ್‌’ ಎಂದು ಕೇಳುವ, ಇಷ್ಟ ಬಂದಲ್ಲಿ ವಾಹನಗಳನ್ನು ನಿಲ್ಲಿಸುವ, ಯಾವ ಹೊತ್ತಿಗೂ ಟ್ರಾಫಿಕ್‌ ಜಾಮನ್ನು ಸವಿಯುವ ಕೊಡಗಿಗೆ ಮಾತ್ರವಲ್ಲ, ಭಾರತೀಯತೆಗೇ ಸಲ್ಲದ ಇಂಚುಗಾತ್ರದ ದಿರಿಸಿನ ಯುವತಿಯರು ಓಂಕಾರೇಶ್ವರ ದೇವಾಲಯಕ್ಕೆ ಭೇಟಿ ನೀಡುವುದನ್ನು ನೋಡಿದರೆ ಒಂದಲ್ಲ ಒಂದು ದಿನ, ದೇವರೆ ಅವರಲ್ಲೊಬ್ಬರ ಜೊತೆ ಓಡಿಹೋಗುತ್ತಾನೆಂಬ ದೈವಿಕ ಸಂಶಯ ನನಗಿದೆ. ಪ್ರವಾಸದ ದಾಳಿಗೆ ಕೊಡಗು ನಲುಗಿದೆ.

Advertisement

ಈ ಬಾರಿ ಮಳೆ ಬಂದರೆ ಇನ್ನೆಷ್ಟು ಮನೆಗಳು, ಆಸ್ತಿ-ಪಾಸ್ತಿ, ಜೀವ ಹಾನಿಯಾಗುತ್ತದೆಯೋ ಗೊತ್ತಿಲ್ಲ. ಇನ್ನೂ ದೊಡ್ಡ ಮಳೆ ಆರಂಭವಾಗ ದಿರುವುದನ್ನು ಮಿಶ್ರ ಪ್ರತಿಕ್ರಿಯೆಯೊಂದಿಗೆ ಸ್ವೀಕರಿಸಬೇಕು. ಬಂದರೆ ಅಪಾಯ, ಬಾರದಿದ್ದರೆ ಮುಂದಿನ ವರ್ಷಕ್ಕೆ ಅನ್ನಕ್ಕೆ ಗತಿಯಿಲ್ಲ ಎಂಬಂತಿದೆ.

ಕೊಡಗಿನ ಮುಖಾಂತರ ಹಾದುಹೋಗುವ ಮುಖ್ಯ ರಾಷ್ಟ್ರೀಯ-ರಾಜ್ಯ ಹೆದ್ದಾರಿಗಳು, ಗ್ರಾಮೀಣ ರಸ್ತೆಗಳು ಕುಸಿದುಹೋಗಿ (ಇನ್ನು ಕೆಲವೆಡೆ ಕೊಚ್ಚಿಹೋಗಿ) ಕೊಡಗಿಗೆ ಹೊರ ಜಿಲ್ಲೆಗಳೊಂದಿಗೆ ತಿಂಗಳಾನುಗಟ್ಟಲೆ ಸಂಪರ್ಕ ಕಡಿದೇ ಹೋಗಿತ್ತು. ಇದನ್ನು ನಿಭಾಯಿಸಲು ಆಡಳಿತವು ತೇಪೆಹಚ್ಚುವ ಕೆಲಸ ಮಾಡಿದೆಯೇ ಹೊರತು ಭರವಸೆಯ ಯಾವ ಕ್ರಮವನ್ನೂ ಕೈಗೊಂಡಿಲ್ಲ. ಈ ಬಾರಿ ಎನ್‌ಎಚ್‌ 275 (ಮಡಿಕೇರಿ-ಸಂಪಾಜೆ ಭಾಗ) ರಸ್ತೆ ಕುಸಿದರೆ ಕೊಡಗಿನ ವ್ಯವಹಾರ ಸಮಾಧಿಯಾದಂತೆಯೇ. ಎಮ್‌ಸ್ಯಾಂಡ್‌ ತುಂಬಿದ ಚೀಲಗಳು ಮಳೆಯನ್ನು ತಾಳಿಕೊಂಡರೆ ಸರಿ; ಇಲ್ಲವಾದರೆ ಅಧೋಗತಿ. ಮಡಿಕೇರಿ-ಸೋಮವಾರಪೇಟೆ ರಸ್ತೆ ಕಳೆದ ಬಾರಿಯಂತೆ ಕುಸಿದರೆ ಏನಾಗಬಹುದೆಂದು ಊಹಿಸಲೂ ಸಾಧ್ಯವಿಲ್ಲ.

ಕೊಡಗಿನಲ್ಲಿ ಆದ ಮತ್ತು ಆಗಬಹುದಾದ ನಷ್ಟಗಳು ಕೇವಲ ಸಂತ್ರಸ್ತರದ್ದಷ್ಟೇ ಅಲ್ಲ; ಅವರ ವ್ಯಾವಹಾರಿಕ ಬದುಕಿನಲ್ಲಿ ಪಾಲುದಾರರಾದ ಎಲ್ಲ ವ್ಯಾಪಾರಸ್ಥರ, ವೃತ್ತಿಪರರ ನಷ್ಟವೂ ಹೌದು. ಆಸ್ತಿ ಸಂಬಂಧ ಮೇಲ್ಮನವಿಯೊಂದನ್ನು ಸಲ್ಲಿಸಲು ಸೂಚಿಸಿ “ನಾಡಿದ್ದು ಸೋಮವಾರ ಬರುತ್ತೇನೆ’ ಎಂದವನೊಬ್ಬ ಭೂಸಮಾಧಿಯಾಗಿ ಅನೇಕ ದಿನಗಳ ಅನಂತರ ಅವನ ಶವ ಸಿಕ್ಕಿತು. ಇಂತಹ ಹಲವಾರು ಉದಾಹರಣೆಗಳಿವೆ.

ಪ್ರಕೃತಿ ಮುನಿದರೆ ಯಾವ ದೇವರೂ ರಕ್ಷಿಸಲಾರ !
ಎಂಬುದನ್ನು ಕಳೆದ ವರ್ಷ ಕೊಡಗು ಸಾಬೀತುಮಾಡಿದೆ. ನಾಡಿನ ಪ್ರಸಿದ್ಧ ದೇವಾಲಯಗಳಲ್ಲಿ ನೀರಿಲ್ಲ. ನೀರಿಲ್ಲದೇ ಇರುವುದರಿಂದ “ಇಲ್ಲಿಗೆ ಬರಬೇಡಿ’ ಎಂಬ ನೋಟೀಸು ಕೆಲವು ದೇವಸ್ಥಾನಗಳಿಂದ ಪ್ರಕಟವಾಗಿತ್ತು. ಎಲ್ಲ ದೇವಾಲಯಗಳ ಗತಿಯೂ ಇದೇ ಆಗಿದೆ. ಕೊಡಗಿನಲ್ಲೂ ನೀರಿಗೆ ಪಡುವ ಪಡಿಪಾಟಲು ಎಷ್ಟು ಮುಚ್ಚಿಟ್ಟರೂ ಹೊರಬರುತ್ತಿದೆ.  ಕೊಡಗಿನ ಸಮಸ್ಯೆಗಳ ಪರಿಹಾರಕ್ಕೆ ಅರಣ್ಯ ಹನನ ಕಾರಣವೆಂಬ ಪ್ರಮೇಯವಿದೆ. ಕಾಡುಪ್ರಾಣಿಗಳು ಕಾಡಿನೊಳಗೇ ನಾಶವಾಗುವ ಪರಿಸ್ಥಿತಿಯಿದೆ. ಕೆಲವಾದರೂ ನಾಡಿಗೆ ಬಂದು ಮನುಷ್ಯನೊಂದಿಗೆ ಕದನಕ್ಕೆ ನಿಂತಿವೆ. ಯಾರು ಉಳಿಯಬೇಕು, ಯಾರು ಅಳಿಯಬೇಕು ಎಂಬುದು ನಿರ್ಧಾರವಾಗಲಿದೆ.

ಬೆಟ್ಟಗುಡ್ಡಗಳ ಕೊಡಗಿನಲ್ಲಿ ನೆಲವನ್ನು ಸಪಾಟುಮಾಡುವ ಯಂತ್ರಗಳಿಗೆ ಸುಗ್ಗಿ. ಎಲ್ಲೆಂದರಲ್ಲಿ ಬೆಳೆದು ಬಂದ ಆಕರ್ಷಕ ಮನೆಗಳು ಪ್ರವಾಸಿಗರಿಗೆ ಖುಷಿಕೊಡಬಹುದು. ಇವೆಲ್ಲ ಅರಗಿನರಮನೆಯೋ ಮಯನಿರ್ಮಿತವೋ ಎಂಬುದು ಯಾರಿಗೂ ಗೊತ್ತಿಲ್ಲ. “ಕಡ್ಡಿ ಗೀರುವ ತನಕ ಚಿಂತೆಯಿಲ್ಲ’ ಎಂಬುದನ್ನು “ಮಳೆ ಬರುವವರೆಗೆ ಚಿಂತೆಯಿಲ್ಲ’ ಎಂದು ತಿದ್ದಿಕೊಂಡು ಹಾಡೋಣ.

ಎಲ್ಲರೂ ಯಾವುದನ್ನು ಬೇಕಾದರೂ ಮಾತನಾಡಬಹುದು ಎಂಬ ವಾತಾವರಣದಲ್ಲಿ ವಾಸ್ತವ ಮತ್ತು ಸತ್ಯ ಸತ್ತುಹೋಗುತ್ತವೆ. ಪರಿಣತರೂ ಗಾಳಿ ಬಂದೆಡೆ ತೂರಿ ಹೋಗುವ ಕ್ರಮವನ್ನು ನಮ್ಮ ಪರಿಸರತಜ್ಞರ ಮಾತುಗಳು ಸಾರಿ ಹೇಳುತ್ತವೆ. ಪರಸ್ಪರ ವಿರೋಧವುಳ್ಳ ಅಭಿಪ್ರಾಯಗಳಲ್ಲಿ ಕೊನೆಗೂ ಗೆಲ್ಲುವುದು ಯಾರು? ಯಾವುದನ್ನು/ಯಾರನ್ನು ನಂಬಬೇಕು?

ಸ್ವಾರ್ಥಪರ, ಪ್ರಚಾರಪ್ರಿಯ ಆತ್ಮಘಾತುಕರ ನಡೆನುಡಿಯ ನಡುವೆ “ರಾತ್ರಿ ಅಕ್ಕಿ ನೆನೆ ಹಾಕೋಣ. ನಾಳೆ ಬದುಕಿದರೆ ದೋಸೆಗಾಯಿತು; ಬದುಕದಿದ್ದರೆ ಅಪರಕರ್ಮದ ವಡೆಗಾಯಿತು’ ಎಂಬಂತೆ ಎದುರಾಗುತ್ತಿದೆಯೇ ಬದುಕು?
ಶ್ಮಶಾನ ಕುರುಕ್ಷೇತ್ರದ ದಿನಗಳಿವು.

ಬಾಲಸುಬ್ರಹ್ಮಣ್ಯ ಕಂಜರ್ಪಣೆ

Advertisement

Udayavani is now on Telegram. Click here to join our channel and stay updated with the latest news.

Next