Advertisement

ಟಿಡಿಎಸ್‌ ಸಂಗ್ರಹಿಸಿ ಪಾವತಿಸದಿದ್ದರೆ ಕಠಿಣ ಕ್ರಮ

11:30 AM Aug 11, 2018 | Team Udayavani |

ಬೆಂಗಳೂರು: ಕಾರ್ಮಿಕರ ವೇತನದಿಂದ ಮೂಲದಲ್ಲೇ ತೆರಿಗೆ ಕಡಿತ (ಟಿಡಿಎಸ್‌) ಮಾಡಿದ ಮೊತ್ತವನ್ನು ಸರ್ಕಾರಕ್ಕೆ ಪಾವತಿಸದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಆದಾಯ ತೆರಿಗೆ ಆಯುಕ್ತ (ಟಿಡಿಎಸ್‌) ಸಂಜಯ್‌ ಕುಮಾರ್‌ ಹೇಳಿದರು.

Advertisement

ಕರ್ನಾಟಕ ಕೈಗಾರಿಕೆ ಮತ್ತು ವಾಣಿಜ್ಯ ಮಹಾಸಂಸ್ಥೆಯು (ಎಫ್ಕೆಸಿಸಿಐ) ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ “ಟಿಡಿಎಸ್‌ ಮತ್ತು ಟಿಸಿಎಸ್‌’ ಕುರಿತ ಸಂವಾದದಲ್ಲಿ ಮಾತನಾಡಿ ಅವರು, ಕಾರ್ಮಿಕರಿಂದ ಟಿಡಿಎಸ್‌ ಕಡಿತ ಮಾಡದಿರುವುದು ಹಾಗೂ ಕಂಪೆನಿಗಳು ತೆರಿಗೆ ಪಾವತಿಸದಿರುವುದಕ್ಕಿಂತ ಕಾರ್ಮಿಕರಿಂದ ಕಡಿತಗೊಳಿಸಿದ ಟಿಡಿಎಸ್‌ ಮೊತ್ತವನ್ನು ಸರ್ಕಾರಕ್ಕೆ ಪಾವತಿಸದಿರುವುದು ಗಂಭೀರ ಅಪರಾಧವೆನಿಸಿದೆ. ಈ ರೀತಿಯ ಕೃತ್ಯದಲ್ಲಿ ಭಾಗಿಯಾದವರು ಕಠಿಣ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ತಿಳಿಸಿದರು.

ಟಿಡಿಎಸ್‌ ಪಾವತಿಸದವರ ಪೈಕಿ ಬಹಳಷ್ಟು ಮಂದಿ ಉದ್ದೇಶಪೂರ್ವಕವಾಗಿ ನಡೆದುಕೊಂಡಿರುವುದಿಲ್ಲ. ಮಾಹಿತಿ ಕೊರತೆ, ಪ್ರಕ್ರಿಯೆಗಳ ಬಗೆಗಿನ ಅಸ್ಪಷ್ಟತೆಯೂ ಕಾರಣವಿರಬಹುದು. ಆದರೆ ಉದ್ದೇಶಪೂರ್ವಕವಾಗಿ, ಪದೇ ಪದೇ ದೀರ್ಘ‌ಕಾಲದವರೆಗೆ ತೆರಿಗೆ ಬಾಕಿ ಉಳಿಸಿಕೊಂಡವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುತ್ತದೆ ಎಂದು ಹೇಳಿದರು.

ಕಳೆದ ವರ್ಷದಲ್ಲಿ ದೇಶಾದ್ಯಂತ 10 ಲಕ್ಷ ಕೋಟಿ ರೂ. ಆದಾಯ ತೆರಿಗೆ ಸಂಗ್ರಹವಾಗಿತ್ತು. ಇದರಲ್ಲಿ ಕರ್ನಾಟಕ ಹಾಗೂ ಗೋವಾ ವ್ಯಾಪ್ತಿಯಿಂದ ಒಂದು ಲಕ್ಷ ಕೋಟಿ ರೂ. ಸಂಗ್ರಹವಾಗಿತ್ತು. ಈ ಬಾರಿ ಟಿಡಿಎಸ್‌ ಮೂಲಕವೇ 50,000 ಕೋಟಿ ರೂ. ತೆರಿಗೆ ಸಂಗ್ರಹ ಗುರಿ ಇದೆ. ಆ ಹಿನ್ನೆಲೆಯಲ್ಲಿ ವ್ಯಾಪಕ ಜಾಗೃತಿ ಮೂಡಿಸಲಾಗುತ್ತಿದೆ. ಇತ್ತೀಚೆಗೆ ಹಾಸನ, ಚಿಕ್ಕಮಗಳೂರಿನಲ್ಲೂ ಕಾರ್ಯಕ್ರಮ ನಡೆಸಿ ಅರಿವು ಮೂಡಿಸಲಾಯಿತು ಎಂದು ತಿಳಿಸಿದರು.

ಕಳೆದ ವರ್ಷ 450 ಟಿಡಿಎಸ್‌ ಪ್ರಕರಣಗಳನ್ನು ಸಮೀಕ್ಷೆಗೆ ಒಳಪಡಿಸಿದಾಗ ಸಾಕಷ್ಟು ಕಡೆ ಕಾರ್ಮಿಕರ ವೇತನದಿಂದ ಕಡಿತಗೊಳಿಸಿದ ಮೊತ್ತವನ್ನು ಸರ್ಕಾರಕ್ಕೆ ಪಾವತಿಸದಿರುವುದು ಕಂಡುಬಂತು. ಈ ಹಿಂದೆ 12 ತಿಂಗಳವರೆಗೆ ವಿಳಂಬ ತೆರಿಗೆ ಪಾವತಿಗೆ ಅವಕಾಶ ಕಲ್ಪಿಸಿ ಶೇ.1.5ರಷ್ಟು ಬಡ್ಡಿ ವಿಧಿಸಲಾಗುತ್ತಿತ್ತು. ಇದರಿಂದ ಬಹಳಷ್ಟು ಮಂದಿ ವಿಳಂಬವಾಗಿ ತೆರಿಗೆ ಪಾವತಿಸಲಾರಂಭಿಸಿದರು. ಆ ಹಿನ್ನೆಲೆಯಲ್ಲಿ ಕಾಲಮಿತಿ ವ್ಯವಸ್ಥೆ ರದ್ದಾಗಿದೆ ಎಂದು ಹೇಳಿದರು.

Advertisement

ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಸಂಬಂಧಪಟ್ಟಂತೆ ನಿರ್ದಿಷ್ಟ ಆರ್ಥಿಕ ಮಿತಿಯೊಳಗೆ ಕಾರ್ಯ ನಿರ್ವಹಿಸುವ ಸಣ್ಣ ಉದ್ಯಮಗಳಿಗೆ ಟಿಡಿಎಸ್‌ ವ್ಯವಸ್ಥೆಯಿಂದ ವಿನಾಯ್ತಿ ನೀಡಲು ಸಾಧ್ಯವಿಲ್ಲ. ಇಲಾಖೆಯು ಸಾಧ್ಯವಾದಷ್ಟು ತೆರಿಗೆದಾರರ ವ್ಯಾಪ್ತಿಯನ್ನು ವಿಸ್ತರಿಸಲು ಆದ್ಯತೆ ನೀಡುತ್ತದೆ ಎಂದು ತಿಳಿಸಿದರು.

ಎಫ್ಕೆಸಿಸಿಐ ಅಧ್ಯಕ್ಷ ಸುಧಾಕರ್‌ ಎಸ್‌. ಶೆಟ್ಟಿ, ಟಿಡಿಎಸ್‌ ವ್ಯವಸ್ಥೆ ಬಗ್ಗೆ ಬೆಂಗಳೂರಿನಂತಹ ನಗರದಲ್ಲಿ ಬಹುಪಾಲು ಮಂದಿಗೆ ಅರಿವಿರುತ್ತದೆ. ಹಾಗಾಗಿ ಎರಡನೇ ಹಂತದ ನಗರಗಳು, ಇತರೆ ಪ್ರದೇಶಗಳಲ್ಲಿ ಈ ಬಗ್ಗೆ ಹೆಚ್ಚಿನ ಅರಿವು ಮೂಡಿಸಬೇಕಾದ ಅಗತ್ಯವಿದೆ ಎಂದು ಹೇಳಿದರು.

ಎಫ್ಕೆಸಿಸಿಐ ಕೇಂದ್ರೀಯ ತೆರಿಗೆಗಳು, ಕಾರ್ಪೋರೇಟ್‌ ಕಾನೂನು ಹಾಗೂ ಜಿಎಸ್‌ಟಿ ಸಮಿತಿ ಅಧ್ಯಕ್ಷ ಎನ್‌. ನಿತ್ಯಾನಂದ, ನಿರ್ದಿಷ್ಟ ಆರ್ಥಿಕ ಮಿತಿ ವ್ಯಾಪ್ತಿಯೊಳಗಿನ ಎಂಎಸ್‌ಎಂಇ ಉದ್ಯಮಗಳಿಗೆ ಟಿಡಿಎಸ್‌ನಿಂದ ವಿನಾಯ್ತಿ ನೀಡಿಕೆ ಬಗ್ಗೆ ಪರಿಶೀಲಿಸಬೇಕು. ಟಿಡಿಎಸ್‌ ಪಾವತಿ ಪ್ರಕ್ರಿಯೆಯಲ್ಲಿನ ವ್ಯತ್ಯಾಸಗಳಿಗೆ ಕಠಿಣ ಶಿಕ್ಷೆ ವಿಧಿಸುವುದು ಸೂಕ್ತವಲ್ಲ. ತೆರಿಗೆದಾರರ ಬಗ್ಗೆಯೂ ವಿಶ್ವಾಸವಿರಿಸಬೇಕು ಎಂದು ತಿಳಿಸಿದರು.

ಸಹಾಯಕ ಆದಾಯ ತೆರಿಗೆ ಆಯುಕ್ತರಾದ ಶುಭಿ ಮಿಶ್ರಾ, ಚಾರ್ಟೆಡ್‌ ಅಕೌಂಟಂಟ್‌ ಶೀಲಾ ಅರವಿಂದ್‌ ಅವರು ಟಿಡಿಎಸ್‌ ಕುರಿತು ಪ್ರಾತ್ಯಕ್ಷಿಕೆ ನೀಡಿದರು. ಎಫ್ಕೆಸಿಸಿಐ ಹಿರಿಯ ಉಪಾಧ್ಯಕ್ಷ ಸಿ.ಆರ್‌.ಜನಾರ್ದನ್‌, ಉಪಾಧ್ಯಕ್ಷ ಪೆರಿಕಲ್‌ ಎಂ. ಸುಂದರ್‌, ಐಸಿಎಐ ದಕ್ಷಿಣ ಭಾರತ ಪ್ರಾದೇಶಿಕ ಪರಿಷತ್‌ನ ಬೆಂಗಳೂರು ಶಾಖೆ ಕಾರ್ಯದರ್ಶಿ ರವೀಂದ್ರ ಎಸ್‌. ಕೋರೆ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next