Advertisement

ಡಾ ರಾಜ್‌ ಹುಟ್ಟುಬ್ಬಕ್ಕೆ ಟಗರು ನೋಡೋರಿಗೆ ಅರ್ಧ ರೇಟು

02:33 PM Apr 24, 2018 | Team Udayavani |

ಶಿವರಾಜಕುಮಾರ್‌ ಅಭಿನಯದ “ಟಗರು’ ಚಿತ್ರ 60ನೇ ದಿನ ಮುಗಿಸಿದೆ. ಚಿತ್ರ 50 ದಿನಗಳನ್ನು ಮುಗಿಸಿದ ಸಂದರ್ಭದಲ್ಲಿ ಚಿತ್ರತಂಡದವರು ಬೆಂಗಳೂರು, ಮೈಸೂರು, ಮಂಡ್ಯ ಮುಂತಾದ ಕಡೆ ಚಿತ್ರ ಪ್ರದರ್ಶನವಾಗುತ್ತಿರುವ ಚಿತ್ರಮಂದರಿಗಳಿಗೆ ಭೇಟಿ ಕೊಟ್ಟು ಬಂದಿದ್ದರು. ಇನ್ನು ಚಿತ್ರ 60ನೇ ದಾಟಿದ ಸಂದರ್ಭದಲ್ಲಿ ಖುಷಿಯಲ್ಲಿ, ಚಿತ್ರತಂಡವು ಚಿತ್ರ ನೋಡುವ ಪ್ರೇಕ್ಷಕರಿಗೆ ಇನ್ನೆರೆಡು ಸಿಹಿ ಸುದ್ದಿ ಕೊಡುತ್ತಿದೆ.

Advertisement

ನಾಳೆ ಡಾ ರಾಜಕುಮಾರ್‌ ಅವರ ಹುಟ್ಟುಹಬ್ಬ. ಈ ಹುಟ್ಟುಹಬ್ಬದ ಸಂದರ್ಭದಲ್ಲಿ ಚಿತ್ರತಂಡವು ಬೆಂಗಳೂರಿನ ಸಂತೋಷ್‌ ಮತ್ತು ವೀರೇಶ, ಮೈಸೂರಿನ ಶಾಂತಲ, ಮಂಡ್ಯದ ಸಂಜಯ್‌, ಹಾಸನದ ಎಸ್‌.ಪಿ.ಜಿ, ದಾವಣಗೆರೆಯ ಅಶೋಕ ಮತ್ತು ಶಿವಮೊಗ್ಗ ಮಲ್ಲಿಕಾರ್ಜುನ ಚಿತ್ರಮಂದಿರಗಳಲ್ಲಿ “ಟಗರು’ ನೋಡಬರುವ ಎಲ್ಲಾ ಪ್ರೇಕ್ಷಕರಿಗೂ ಸಿಹಿ ಹಂಚುವುದಕ್ಕೆ ತೀರ್ಮಾನಿಸಿದೆ.

ಬರೀ ಆಯ್ದ ಚಿತ್ರಮಂದಿರಗಳಲ್ಲಿ ಮಾತ್ರ ಸಿಹಿ ಹಂಚಿದರೆ, ಮಿಕ್ಕ ಊರುಗಳಲ್ಲೇನು ಎಂಬ ಪ್ರಶ್ನೆ ಬೇಡ. ಡಾ ರಾಜಕುಮಾರ್‌ ಅವರ ಹುಟ್ಟುಹಬ್ಬದ ಅಂಗವಾಗಿ “ಟಗರು’ ಚಿತ್ರ ಪ್ರದರ್ಶನಗೊಳ್ಳುತ್ತಿರುವ ಎಲ್ಲಾ ಊರುಗಳ ಎಲ್ಲಾ ಚಿತ್ರಮಂದಿರಗಳ ಟಿಕೆಟ್‌ ದರದಲ್ಲಿ ಶೇ. 50ರಷ್ಟು ವಿನಾಯ್ತಿ ನೀಡಲಾಗುತ್ತಿದೆ. ಅಂದು ಚಿತ್ರ ನೋಡುವವರು ಅರ್ಧ ದುಡ್ಡಿಗೆ ಚಿತ್ರ ನೋಡಬಹುದು.

“ಟಗರು’ ಚಿತ್ರದಲ್ಲಿ ಶಿವರಾಜಕುಮಾರ್‌ ಎದುರು ಭಾವನಾ ಮೆನನ್‌ ಮತ್ತು ಮಾನ್ವಿತಾ ಹರೀಶ್‌ ನಾಯಕಿಯರಾಗಿ ನಟಿಸಿದ್ದು, ಧನಂಜಯ್‌, ಸುಧಿ ಮತ್ತು ವಸಿಷ್ಠ ನೆಗೆಟಿವ್‌ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಕಥೆ ಬರೆದು ನಿರ್ದೇಶಿಸಿರುವುದು “ದುನಿಯಾ’ ಸೂರಿ. ಇನ್ನು ಕೆ.ಪಿ. ಶ್ರೀಕಾಂತ್‌ ಈ ಚಿತ್ರದ ನಿರ್ಮಾಪಕರು. ಚರಣ್‌ರಾಜ್‌ ಸಂಗೀತ ಮತ್ತು ಮಹೇಂದ್ರ ಸಿಂಹ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.

Advertisement

Udayavani is now on Telegram. Click here to join our channel and stay updated with the latest news.

Next