ಅಫಜಲಪುರ: ಆಸ್ಪತ್ರೆಗಳಲ್ಲಿ ಬಳಸುವ ಇಂಜೆಕ್ಷನ್ ಸಿರಿಂಜ್, ಪ್ಲಾಸ್ಟಿಕ್ ಬಾಟಲಿಗಳಲ್ಲದೆ ಇನ್ನಿತರ ತ್ಯಾಜ್ಯಗಳನ್ನು ಚೆಲ್ಲಾಡುತ್ತಿರುವುದರಿಂದ ಸಮಸ್ಯೆ ಉಂಟಾಗುತ್ತಿದ್ದು, ಸಂಬಂಧಪಟ್ಟವರು ವ್ಯವಸ್ಥಿತ ವಿಲೇವಾರಿ ಮಾಡಬೇಕಾದ ಅಗತ್ಯತೆ ಇದೆ.
ಪಟ್ಟಣದಲ್ಲಿ ತಲೆ ಎತ್ತಿರುವ ಅನೇಕ ಖಾಸಗಿ ಆಸ್ಪತ್ರೆಗಳು ಬಳಸಿದ ಸಿರಿಂಜ್, ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಪಟ್ಟಣದ ಮುಖ್ಯ ರಸ್ತೆ ಪಕ್ಕದಲ್ಲಿ ಚೆಲ್ಲುತ್ತಾರೆ. ಇದರಿಂದ ಸಾಕಷ್ಟು ಸಮಸ್ಯೆ ಆಗುತ್ತಿದೆ. ಅದರಲ್ಲೂ ಸೂಜಿಗಳನ್ನು ಸೂಕ್ತ ವಿಲೇವಾರಿ ಮಾಡದೆ ಬಿಸಾಡುವುದರಿಂದ ಅವು ಎಲ್ಲೆಂದರಲ್ಲಿ ಹರಡಿಕೊಂಡು ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗುತ್ತಿದೆ.
ಸಾರ್ವಜನಿಕರು, ವೃದ್ಧರು, ಶಾಲೆ-ಕಾಲೇಜು ವಿದ್ಯಾರ್ಥಿಗಳ ಕಾಲಿಗೆ ಸೂಜಿಗಳು ಚುಚ್ಚಿ ತೊಂದರೆಯಾಗುತ್ತಿದೆ. ಸಂಬಂಧಪಟ್ಟವರು ಪಟ್ಟಣದಲ್ಲಿ ಚೆಲ್ಲಾಡುವ ಆಸ್ಪತ್ರೆಯ ತ್ಯಾಜ್ಯ ವಸ್ತುಗಳನ್ನು ಸೂಕ್ತ ವಿಲೇವಾರಿ ಮಾಡಬೇಕಾಗಿದೆ. ತ್ಯಾಜ್ಯ ವಸ್ತು ವಿಲೇವಾರಿಗಾಗಿ ವಿಶೇಷ ವಾಹನವೊಂದು ಬರುತ್ತದೆ. ಆ ವಾಹನದ ಉಪಯೋಗವನ್ನು ಆಸ್ಪತ್ರೆಗಳು ಸದುಪಯೋಗ ಮಾಡಿಕೊಳ್ಳುತ್ತಿಲ್ಲ
ಪಟ್ಟಣದಲ್ಲಿ ಸಾಕಷ್ಟು ಆಸ್ಪತ್ರೆಗಳು ತಲೆ ಎತ್ತಿವೆ. ಆಸ್ಪತ್ರೆಗಳಲ್ಲಿ ಬಳಸುವ ಸಿರಿಂಜ್, ಸೂಜಿಗಳು ಮುಖ್ಯ ರಸ್ತೆಗಳ ಪಕ್ಕದಲ್ಲಿ ಚೆಲ್ಲಾಡುವುದರಿಂದ ಸಮಸ್ಯೆಗಳಾಗುತ್ತಿವೆ. ಸಣ್ಣ ಮಕ್ಕಳು, ವೃದ್ಧರಿಗೆ ಇದರಿಂದ ಸಮಸ್ಯೆಯಾಗುತ್ತಿದೆ. ಸಂಬಂಧಪಟ್ಟವರು ಕೂಡಲೇ ಕ್ರಮ ಕೈಗೊಳ್ಳಬೇಕು.
ಬಸವರಾಜ ಚಾಂದಕವಟೆ, ಶ್ರೀಮಂತ ಬಿರಾದಾರ, ಪಟ್ಟಣದ ನಾಗರಿಕರು
ರಸ್ತೆಗಳ ಪಕ್ಕದಲ್ಲಿ ಆಸ್ಪತ್ರೆಗಳ ತ್ಯಾಜ್ಯ ಚೆಲ್ಲಿದ್ದರೆ ಸಾರ್ವಜನಿಕರು ಕೂಡಲೇ ತಾಲೂಕು ಆರೋಗ್ಯಾಧಿಕಾರಿಗಳ ಗಮನಕ್ಕೆ ತರಬೇಕು.
ಖಾಸಗಿ ಆಸ್ಪತ್ರೆಗಳ ನೋಂದಣಿ ಮಾಡಿಸಲಾಗಿರುತ್ತದೆ. ಆಸ್ಪತ್ರೆಗಳು ಅಪಾಯಕಾರಿ ಜೈವಿಕ ತ್ಯಾಜ್ಯ ವಿಲೇವಾರಿ ವಾಹನದ ಸದುಪಯೋಗ ಪಡೆದುಕೊಳ್ಳಬೇಕು. ಈ ಕುರಿತು ತಾಲೂಕು ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಸೂಚಿಸುತ್ತೇನೆ.
ಎಂ.ಕೆ. ಪಾಟೀಲ, ಜಿಲ್ಲಾ ಆರೋಗ್ಯಾಧಿಕಾರಿ ಕಲಬುರಗಿ
ಮಲ್ಲಿಕಾರ್ಜುನ ಹಿರೇಮಠ