ಮಹಾನಗರ: ಅಸಹಾಯಕ ಮಕ್ಕಳು ಮತ್ತು ಮಹಿಳೆಯರಿಗೆ ಆಶ್ರಯ ನೀಡಲು ಕೇಂದ್ರ ಸರಕಾರದಿಂದ ಮಂಜೂರಾದ “ಸ್ವಾಧಾರ ಗೃಹ’ಕ್ಕೆ ಈಗ ಸರಕಾರದ ಆರ್ಥಿಕ ಆಧಾರವೇ ಇಲ್ಲದಂತಾಗಿದೆ. ಏಕೆಂದರೆ, ಎರಡೂವರೆ ವರ್ಷಗಳಿಂದ 10 ಲಕ್ಷ ರೂ. ಪಾವತಿ ಬಾಕಿಯಿದ್ದು, ಗೃಹವನ್ನು ನಿರ್ವಹಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಯೇ ಸಂಕಷ್ಟದ ಸ್ಥಿತಿಯಲ್ಲಿದೆ.
ಮಾನಸಿಕ ಸ್ತಿಮಿತ ಕಳೆದುಕೊಂಡಿರುವ, ಅಸಹಾಯಕ, ವಿಳಾಸ ಪತ್ತೆಯಾಗದ ಮಕ್ಕಳು ಮತ್ತು ಮಹಿಳೆಯರ ಆಶ್ರಯಕ್ಕಾಗಿ 2005ರಲ್ಲಿ ಮಂಗಳೂರಿಗೆ ಸ್ವಾಧಾರ ಗೃಹ ಮಂಜೂರಾಗಿದೆ. ಸರಕಾರಿ ಅನುದಾನದೊಂದಿಗೆ ಗೃಹದ ಹೊಣೆಗಾರಿಕೆಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಪ್ರಜ್ಞಾ ಸಲಹಾ ಕೇಂದ್ರಕ್ಕೆ ಹಸ್ತಾಂತರಿಸಿತ್ತು. ರೈಲ್ವೇ ಸ್ಟೇಷನ್, ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಮುಂತಾದೆಡೆಗಳಲ್ಲಿ ಅಸಹಾಯಕ ಸ್ಥಿತಿಯಲ್ಲಿ ಪತ್ತೆಯಾದ ಹಾಗೂ ಇತರ ಕಾರಣಗಳಿಂದ ಮನೆಯಿಂದ ಹೊರ ಬಂದ ಮಹಿಳೆ, ಮಕ್ಕಳಿಗೆ ವಿವಿಧ ಪ್ರಕ್ರಿಯೆಗಳ ಬಳಿಕ ಸ್ವಾಧಾರ ಕೇಂದ್ರದಲ್ಲಿ ಪುನರ್ ವಸತಿ ಸಹಿತ ಆಶ್ರಯ ಕಲ್ಪಿಸಲಾಗುತ್ತದೆ. ಅವರ ಖರ್ಚು-ವೆಚ್ಚಗಳಿಗೆ ಸರಕಾರ ನಿಗದಿಪಡಿಸಿದ ಮೊತ್ತವನ್ನು ನೀಡಬೇಕು.
ಸರಕಾರದಿಂದ ಹಣ ಪಾವತಿ ಬಾಕಿಯಿರುವುದರಿಂದ ಸ್ವಾಧಾರ ಕೇಂದ್ರ ನಿರ್ವಹಿಸುತ್ತಿರುವ ಪ್ರಜ್ಞಾ ಸಲಹಾ ಕೇಂದ್ರಕ್ಕೆ ಸಮಸ್ಯೆ ಎದುರಾಗಿದೆ. 2018-19ನೇ ಸಾಲಿನಲ್ಲಿ ಕೇವಲ 6 ಲಕ್ಷ ರೂ. ಗಳನ್ನು ಬಿಡುಗಡೆಗೊಳಿಸಿ ಸರಕಾರ ಕೈ ತೊಳೆದುಕೊಂಡಿದೆ.
ಸರಕಾರದ ಅನುದಾನ ಅಲಭ್ಯವಾಗುತ್ತಿರುವ ಹಿನ್ನೆಲೆಯಲ್ಲಿ ಸ್ವಾಧಾರ ಗೃಹ ವಾಸಿಗಳ ನಿರ್ವಹಣ ವೆಚ್ಚ ಭರಿಸುವ ಹೊಣೆ ಪ್ರಜ್ಞಾ ಸಲಹಾ ಕೇಂದ್ರದ ಹೆಗಲಿಗೆ ಬಿದ್ದಿದೆ. ಹಣ ಹೊಂದಿಸಲು ಸಾಧ್ಯವಾಗದೆ, ಕೇಂದ್ರದ ಸಂಸ್ಥಾಪಕಿ ಹಿಲ್ಡಾ ರಾಯಪ್ಪನ್ ತಮ್ಮ ಪಿಂಚಣಿ ಹಣವನ್ನು ಹೊಂದಿ ಸಿಕೊಂಡು ಈಗ ಈ ಗೃಹದ ಖರ್ಚು-ವೆಚ್ಚ ನಿರ್ವಹಿಸುತ್ತಿದ್ದಾರೆ. ಅಕ್ಕಿ, ಬೇಳೆಕಾಳು ಸಾಮಗ್ರಿಗಳನ್ನು ಜಿಲ್ಲಾಧಿಕಾರಿ ಕಚೇರಿಯ ಆಹಾರ ವಿಭಾಗದಿಂದ ತರಿಸಲಾಗುತ್ತದೆ. ಇನ್ನೊಂದೆಡೆ ಆರ್ಥಿಕ ನೆರವು ನೀಡುವುದಕ್ಕೆ ದಾನಿಗಳೂ ಮುಂದೆ ಬರುತ್ತಿಲ್ಲ ಎನ್ನುತ್ತಾರೆ ಹಿಲ್ಡಾ ರಾಯಪ್ಪನ್. ಸ್ವಾಧಾರ ಗೃಹದಲ್ಲಿ ತಲಾ ಓರ್ವರು ಅಡುಗೆ ಸಿಬಂದಿ, ವಾಚ್‌ಮನ್, ಸಮಾಜಸೇವಕರಿದ್ದಾರೆ. ಅವರ ತಿಂಗಳ ಸಂಬಳ ಮತ್ತು ಗೃಹವಾಸಿಗಳ ದೈನಂದಿನ ಖರ್ಚು ವೆಚ್ಚಗಳು ಸೇರಿ ತಿಂಗಳಿಗೆ ಅಂದಾಜು 1.40 ಲಕ್ಷ ರೂ. ಖರ್ಚು ತಗಲುತ್ತದೆ.
ಮಾನಸಿಕ ಅಸ್ವಸ್ಥರಿಗೆ ಪ್ರತ್ಯೇಕ ವಸತಿ ವ್ಯವಸ್ಥೆ ಮಾಡುವುದಾಗಿ ಸರಕಾರ ಹೇಳುತ್ತಲೇ ಬಂದರೂ ಇನ್ನೂ ಕಾರ್ಯ ರೂಪಕ್ಕೆ ಬಂದಿಲ್ಲ. 2005ರಿಂದ ಇಲ್ಲಿವರೆಗೆ ಕೇಂದ್ರದಲ್ಲಿದ್ದ 33 ಹೆಣ್ಣು ಮಕ್ಕಳಿಗೆ ವಿವಾಹ ಮಾಡಿಸಲಾಗಿದೆ. ಅಲ್ಲದೆ, ಕೆಲವರು ಪದವಿ ಪೂರೈಸಿ ಉದ್ಯೋಗಗಳಲ್ಲಿ ತೊಡಗಿಸಿ ಕೊಂಡಿದ್ದರೆ. ಇನ್ನು ಕೆಲವರು ಟೈಲರಿಂಗ್, ಕರ ಕುಶಲ ತರಬೇತಿ ಪಡೆದು ಸ್ವಂತ ಉದ್ಯೋಗ ನಿರ್ವಹಿಸುತ್ತಿದ್ದಾರೆ ಎನ್ನುತ್ತಾರೆ ಅವರು.
ಸರಕಾರದಿಂದ ಬಂದ ತತ್‌ಕ್ಷಣ ನೀಡಲಾಗುವುದು
ಸ್ವಾಧಾರ ಗೃಹದಲ್ಲಿ ವಾಸಿಸುತ್ತಿರುವವರ ಸಂಖ್ಯೆಯಾಧಾರಿತವಾಗಿ ವಾರ್ಷಿಕವಾಗಿ ಸರಕಾರ ಅನುದಾನ ನೀಡುತ್ತದೆ. ಸರಕಾರದಿಂದ ಕಾಲಕಾಲಕ್ಕೆ ಅನುದಾನ ಬಾರದೇ ಇರುವುದರಿಂದ ಸ್ವಾಧಾರ ಕೇಂದ್ರಕ್ಕೆ ನೀಡಲು ಆಗುತ್ತಿಲ್ಲ. ಈಗಾಗಲೇ ಸ್ವಲ್ಪ ಮೊತ್ತ ಬಿಡುಗಡೆಯಾಗಿ ಹಸ್ತಾಂತರಿಸಲಾಗಿದೆ. ಉಳಿದ ಮೊತ್ತ ಬಂದ ತತ್‌ಕ್ಷಣ ನೀಡಲಾಗುವುದು.
– ಉಸ್ಮಾನ್ ಎ., ಉಪ ನಿರ್ದೇಶಕರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
- ಧನ್ಯಾ ಬಾಳೆಕಜೆ