Advertisement
ಪ್ರಾಚೀನ ಗ್ರೀಕ್ ನಗರ ರಾಜ್ಯಗಳಂತೆ ಅಥವಾ ಆಧುನಿಕ ಸ್ವಿಟ್ಸರ್‌ಲ್ಯಾಂಡ್‌ನಂತೆ ನೇರ ಪ್ರಜಾಪ್ರಭುತ್ವದ ಸಾಧ್ಯತೆಯೇ ಇಲ್ಲದಾಗ, ನಮ್ಮ ಸಂವಿಧಾನ ಪರೋಕ್ಷ ಪ್ರಜಾತಂತ್ರಕ್ಕೆ ಕದ ತೆರೆಯಿತು. ತತ್ಪರಿಣಾಮವಾಗಿ ಕೇಂದ್ರದ ಸಂಸತ್‌ನಿಂದ ಗ್ರಾಮದ ಪಂಚಾಯತ್ ವರೆಗೆ “ಮತ ನೀಡಿ-ಪ್ರತಿನಿಧಿ ಆರಿಸಿ’ ಎಂಬ ತಣ್ತೀಕ್ಕೆ ಮಣೆ ಹಾಕಲಾಯಿತು. ಆದರೆ ಅದರ ಸತ್ವವನ್ನು ಅರಿತು ಮತವನ್ನು ದಾನ ಮಾಡದೆ, ಅದನ್ನು ಒಪ್ಪಂದ ಎಂಬ ಸಮೀಕರಣದೊಂದಿಗೆ ಸ್ವೀಕರಿಸಲೇಬೇಕಾದ ಮಟ್ಟಕ್ಕೆ ನಮ್ಮ ಜನತಂತ್ರ ವ್ಯವಸ್ಥೆ ಮುಟ್ಟಿದೆ. ಅಂತಹ ಮಾನಸಿಕ ಸಿದ್ಧತೆ, ಅಷ್ಟೇ ಪ್ರಬುದ್ಧತೆ ಹಾಗೂ ಬದ್ಧತೆ ಒಂದೆಡೆ ಮತದಾರರಲ್ಲಿ, ಇನ್ನೊಂದೆಡೆ ಪ್ರತಿನಿಧಿ ಸಭೆಯೊಳಗೆ ಆಸೀನರಾಗುವ ಪ್ರತಿನಿಧಿಗಳಲ್ಲಿ ಆವಿಯಾದರೆ ಆಗ? ವಿಶ್ವದ ಜನ ಸಂಖ್ಯಾತ್ಮಕವಾದ ಪ್ರಪ್ರಥಮ ಪ್ರಜಾಪ್ರಭುತ್ವ ಏರುಗತಿಯಲ್ಲಿ ಇರದೆ ಜಾರುವ ದಾರಿಯಲ್ಲಿದೆ- ಎಂದೇ ಭವಿಷ್ಯದ ಇತಿಹಾಸಕಾರರು ಈ 75ನೇ ಸಂವತ್ಸರದ ಕಾಲ ಘಟ್ಟದ ಬಗೆಗೆ ವಿಶ್ಲೇಷಿಸಲೇ ಬೇಕಾಗುತ್ತದೆ.
Related Articles
Advertisement
ಚುನಾವಣ ಪೂರ್ವದ ಮತಬೇಟೆಯ ದಿನಗಳಲ್ಲಿಯೇ ಈ ಜನಜಾಗೃತಿಯ ಪರ್ವ ಶುಭಾರಂಭಗೊಳ್ಳಬೇಕಾಗಿದೆ. ನಮ್ಮಿಂದ ಆರಿಸಿ ಹೋದ ಮೇಲೆ 1) ಶಾಸನ ಸಭೆಯ ಕುರ್ಚಿಗಳ ಮೇಲೆ ನಿಂತು ಕಿರಿಚಾಡುವುದಿಲ್ಲ.2) ಅಸಂಸದೀಯ (unparliamentary)ಶಬ್ದಗಳನ್ನು ಪ್ರಯೋಗಿಸುವುದಿಲ್ಲ. 3) ಸಭಾಘನತೆಗೆ ಅಪಚಾರ ಎಸಗುವುದಿಲ್ಲ. 4) ಜನಮನದ ಆಶಯ ಪ್ರತಿಫಲನಕ್ಕೆ ಸೂಕ್ತ ವಿಧಾನಗಳನ್ನೇ ಪ್ರತಿನಿಧಿ ಸಭೆಯೊಳಗೆ ಬಳಸುತ್ತೇವೆ. 5) ಅಧಿವೇಶನಕ್ಕೆ ಅಡ್ಡಿ ಒಡ್ಡುವುದಿಲ್ಲ – ಹೀಗೆ ಸಾಲು ಸಾಲು ಮುಚ್ಚಳಿಕೆಯನ್ನು ಪಡೆಯಬೇಕಾದ ಘಟ್ಟ ಮುಟ್ಟಿದ್ದೇವೆ. ಇಂತಹ ವಿಚಾರಗಳು ನೂತನ ಸಂಪ್ರದಾಯ (New Conventions)ಗಳಾಗಿ ಅಥವಾ “ಸಾಂವಿಧಾನಿಕ ನಿರ್ದೇಶನ’ (Constitutional Directions)ಗಳಾಗಿ ಮೂಡಿ ಬರಲೇಬೇಕಾಗಿದೆ. ಇನ್ನು ಭೌತಿಕ ಹಾಜರಾತಿ (Physical Presence)ಅದರೊಂದಿಗೆ ನಿಗದಿಗೊಳಿಸಬಹುದು; ಆದರೆ ಮಾನಸಿಕ ಹಾಜರಾತಿ (Mental Presence) ಬಗ್ಗೆ ಯಾವುದೇ ತೆರನಾಗಿ ಕಾನೂನಿನ ಜೀವತಂತು ಹೆಣೆಯಲು ಸಾಧ್ಯವಿಲ್ಲ ತಾನೇ? ಈ ಎಲ್ಲ ವಿಚಾರಗಳಲ್ಲಿ ರಾಜಕೀಯ ಪಕ್ಷಗಳೂ ತಮ್ಮ ಪ್ರಬುದ್ಧತೆಯನ್ನು, ಅಂತೆಯೇ ಗೆರೆಗಳೊಳಗೇ ಆಟವಾಡುವ ಸತ್ ಸಂಪ್ರದಾಯವನ್ನು ಮೈಗೂಡಿಸಿ ಕೊಳ್ಳಬೇಕಾಗಿದೆ. ಚುನಾವಣೆ ಸಂದರ್ಭದಲ್ಲಿ, ಅದೇ ರೀತಿ ಆರಿಸಿ ಬಂದ ಪಕ್ಷ ಪ್ರತಿನಿಧಿಗಳಿಗೆ ಅರಿವಿನ ಕೊರತೆ ನೀಗಿಸಲು ಅಗತ್ಯವಿದ್ದಾಗ “ವಿಪ್’ ಮೂಲಕ ಎಚ್ಚರಿಸಬೇಕು. ಅಂತೆಯೇ ನೈಜ ಪ್ರತಿನಿಧೀಕರಣ ಹಾಗೂ ಜಾಹೀರಾತು ರಾಜಕಾರಣದ ಮಧ್ಯೆ ಗೆರೆಯನ್ನು ಗುರುತಿಸಲು ಪ್ರಶಿಕ್ಷಣ ನೀಡಬೇಕು. ಏಕೆಂದರೆ ಸಮಗ್ರ ಪ್ರಜಾತಂತ್ರ ವ್ಯವಸ್ಥೆಯ ಮೂಲ ತಂತುವೇ, ಜನ ಮನದ ಅರಿವು, ಜನಾಶಯದ ಪ್ರತಿಫಲನ. ಆ ಮೂಲ ಧಾತುವೇ ಆವಿಯಾಗುವ ತೆರದಲ್ಲಿ ಪ್ರತಿನಿಧಿ ಸಭಾಂಗಣ ರಣಾಂಗಣವಾಗಿ ಮಾರ್ಪಾಡಾಗಬಾರದು. ಸುದ್ದಿ ಮಾಧ್ಯಮದಲ್ಲಿ ಸುಂಟರಗಾಳಿಯಂತೆ ಈ ವಿದ್ಯಮಾನಗಳೇ ಮೇಲಿಂದ ಮೇಲೆ ಅಪ್ಪಳಿಸಿದಾಗ, ಪ್ರಾಯಶಃ ಇದೇ ಜನತಂತ್ರವೇನೋ ಎಂಬ ಭ್ರಮೆ, ನೀರಸ ಪ್ರತಿಕ್ರಿಯೆ, ಮಾಮೂಲಿತನದ ನಿರ್ಲಿಪ್ತತೆ ಪ್ರಜಾ ಸಮುದಾಯದಲ್ಲಿ ಬೇರೂರುವ ಸಾಧ್ಯತೆಯಿದೆ. ಇವೆಲ್ಲವನ್ನೂ ರಾಜಕೀಯ ಪಕ್ಷಗಳು, ಜನಪ್ರತಿನಿಧಿಗಳು ಗಂಭೀರವಾಗಿ ಯೋಚಿಸ ಬೇಕು. ದೇಶದ ಜನತಂತ್ರದ ಉಳಿವಿಗಾಗಿ ಇದು ಇಂದಿನ ಆವಶ್ಯಕತೆ ಮತ್ತು ಅನಿವಾರ್ಯತೆ. -ಡಾ| ಪಿ. ಅನಂತಕೃಷ್ಣ ಭಟ್, ಮಂಗಳೂರು